ಮಂಗಳವಾರ, ಅಕ್ಟೋಬರ್ 30, 2012

ಇನ್ನಷ್ಟು ವೀಡಿಯೋ ವಿಷಯ

ಡಿಜಿಟಲ್ ಛಾಯಾಗ್ರಹಣ ಅಂದಕೂಡಲೆ ಅದು ಫೋಟೋ ಅಷ್ಟೇ ಆಗಿರಬೇಕಿಲ್ಲವಲ್ಲ! ಹಾಗಾಗಿಯೇ ಕಳೆದವಾರದ ಲೇಖನದಲ್ಲಿ ಡಿಜಿಟಲ್ ವೀಡಿಯೋ ಕುರಿತ ಮಾಹಿತಿ ಹಂಚಿಕೊಳ್ಳಲಾಗಿತ್ತು. ಅದೇ ವಿಷಯದ ಕುರಿತ ಇನ್ನಷ್ಟು ಮಾಹಿತಿ ಇಂದಿನ ಸಂಚಿಕೆಯಲ್ಲೂ ಇದೆ.
ಟಿ. ಜಿ. ಶ್ರೀನಿಧಿ

ಈಚೆಗೆ ಉತ್ತಮ ಗುಣಮಟ್ಟದ ವೀಡಿಯೋ ಕುರಿತ ಪ್ರಸ್ತಾಪ ಬಂದಾಗಲೆಲ್ಲ 'ಎಚ್‌ಡಿ' ಎಂಬ ಎರಡಕ್ಷರದ ಹೆಸರು ಈಚೆಗೆ ವ್ಯಾಪಕವಾಗಿ ಕೇಳಸಿಗುತ್ತಿದೆ. ಎಲ್‌ಸಿಡಿ-ಎಲ್‌ಇಡಿ ಟೀವಿಗಳಿರಲಿ, ಡಿಜಿಟಲ್ ಕ್ಯಾಮೆರಾ ಇರಲಿ, ಟ್ಯಾಬ್ಲೆಟ್ಟು-ಮೊಬೈಲ್ ಫೋನುಗಳೇ ಇರಲಿ - ಎಲ್ಲೆಲ್ಲೂ ಎಚ್‌ಡಿಯದೇ ಭರಾಟೆ. ಇಷ್ಟಕ್ಕೂ ಈ ಎಚ್‌ಡಿ ಎಂದರೇನು?

ಹೈ ಡೆಫನಿಷನ್ ಕಪ್ಪು ಬಿಳುಪಿನ ಚಲನಚಿತ್ರಗಳಿರಲಿ, 'ಬ್ಲ್ಯಾಕ್ ಆಂಡ್ ವೈಟ್' ಟೀವಿಗಳಿರಲಿ, ಅವೆಲ್ಲ ನಿಧಾನಕ್ಕೆ ತೆರೆಮರೆಗೆ ಸರಿದು ವೀಡಿಯೋಗಳು ವರ್ಣಮಯವಾಗಿ ಕಾಣಿಸಿಕೊಳ್ಳಲು ಶುರುವಾದ ಕಾಲವೊಂದಿತ್ತಲ್ಲ? ಮನೆಯಲ್ಲಿ ಕಲರ್ ಟೀವಿ ಇದೆಯಂತೆ ಎನ್ನುವುದೇ ಆಗ ಹೆಮ್ಮೆಯ-ಪ್ರತಿಷ್ಠೆಯ ವಿಷಯವಾಗಿತ್ತು. ವೀಡಿಯೋ ಪ್ರಪಂಚದಲ್ಲಿ ಅಂತಹುದೇ ಇನ್ನೊಂದು ಕ್ರಾಂತಿಕಾರಕ ಬದಲಾವಣೆ ತಂದಿದ್ದು ಎಚ್‌ಡಿ ತಂತ್ರಜ್ಞಾನದ ಹಿರಿಮೆ. 'ಎಚ್‌ಡಿ' ಎನ್ನುವುದು 'ಹೈ ಡೆಫನಿಷನ್' ಎಂಬ ಹೆಸರಿನ ಹ್ರಸ್ವರೂಪ.

ಎಚ್‌ಡಿ ವೀಡಿಯೋ ಎಂದಕೂಡಲೆ ಅದು ಉತ್ತಮ ಗುಣಮಟ್ಟದ, ಹೆಚ್ಚು ಸ್ಪಷ್ಟವಾದ ವೀಡಿಯೋ ಎನ್ನುವುದು ನಮಗೆ ಗೊತ್ತು. ಆದರೆ ಯಾವುದೇ ವೀಡಿಯೋ 'ಎಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕಿರಬೇಕಾದ ಅರ್ಹತೆಗಳೇನು ಎನ್ನುವುದು ಕೊಂಚ ಹೆಚ್ಚಿನ ವಿವರಣೆ ಬೇಡುವ ವಿಷಯ. ಹಳೆಯ ಅನಲಾಗ್ ತಂತ್ರಜ್ಞಾನಕ್ಕೂ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನಕ್ಕೂ ಇರುವ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಮೂರು ಪರಿಕಲ್ಪನೆಗಳ ಪರಿಚಯ ಇರಬೇಕಾಗುತ್ತದೆ.

ಅವುಗಳಲ್ಲಿ ಮೊದಲನೆಯದು ರೆಸಲ್ಯೂಶನ್. ಯಾವುದೇ ವೀಡಿಯೋದ ಉದಾಹರಣೆ ತೆಗೆದುಕೊಂಡರೆ ಅದರ ಪ್ರತಿ ಫ್ರೇಮಿನಲ್ಲೂ ಒಂದಷ್ಟು 'ಪಿಕ್ಚರ್ ಎಲಿಮೆಂಟ್'ಗಳಿರುತ್ತವೆ; ಡಿಜಿಟಲ್ ಛಾಯಾಚಿತ್ರಗಳಲ್ಲಿ ಪಿಕ್ಸೆಲ್‌ಗಳಿರುತ್ತವಲ್ಲ, ಹಾಗೆಯೇ ಇಲ್ಲಿಯೂ ಪಿಕ್ಸೆಲ್‌ಗಳು ಅಥವಾ ಸಾಲುಗಳು ('ಲೈನ್') ವೀಡಿಯೋದ ಸ್ಪಷ್ಟತೆಯನ್ನು ತೀರ್ಮಾನಿಸುತ್ತವೆ. ಸಾಧಾರಣ ವೀಡಿಯೋಗಳಲ್ಲಿ ಪ್ರತಿ ಪರದೆಗೆ ೪೮೦ ಸಾಲುಗಳಿರುತ್ತವೆ ಎಂದಿಟ್ಟುಕೊಂಡರೆ ಎಚ್‌ಡಿ ವೀಡಿಯೋಗಳಲ್ಲಿ ೧೦೮೦ ಸಾಲುಗಳಿರುವುದೂ ಉಂಟು. ಹಾಗಾಗಿಯೇ ಎಚ್‌ಡಿ ವೀಡಿಯೋ ಹೆಚ್ಚು ಸ್ಪಷ್ಟವಾಗಿರುತ್ತದೆ.

ಇನ್ನೊಂದು ಅಂಶ ವೀಡಿಯೋದ ಆಸ್ಪೆಕ್ಟ್ ರೇಶಿಯೋ. ಸಾಮಾನ್ಯ ವೀಡಿಯೋಗಳ ಆಸ್ಪೆಕ್ಟ್ ರೇಶಿಯೋ ೪:೩ ಇದ್ದರೆ ಬಹಳಷ್ಟು ಎಚ್‌ಡಿ ವೀಡಿಯೋಗಳಲ್ಲಿ ೧೬:೯ ಆಸ್ಪೆಕ್ಟ್ ರೇಶಿಯೋ ಇರುತ್ತದೆ. ಎಚ್‌ಡಿ ಟೀವಿಗಳು ಸಾಮಾನ್ಯ ಟೀವಿಗಳಿಗಿಂತ ಹೆಚ್ಚು ಅಗಲವಿರುವುದು ಇದೇ ಕಾರಣಕ್ಕಾಗಿ.

ಎಚ್‌ಡಿ ಟೀವಿಗಳ ವಿಷಯಕ್ಕೆ ಬಂದಾಗ ಗಮನಿಸಬೇಕಾದ ಮೂರನೆಯ ಅಂಶ ಸ್ಕ್ಯಾನ್ ಟೈಪ್. ಸಾಮಾನ್ಯ ಟೀವಿಗಳಲ್ಲಿ ಚಿತ್ರಗಳು ಮೂಡುವಾಗ ಪರದೆಯ ಎಲ್ಲ ಸಾಲುಗಳೂ ಒಮ್ಮೆಗೇ ಬೆಳಗುವುದಿಲ್ಲ. ಪಕ್ಕಪಕ್ಕದ ಸಾಲುಗಳು ಬಹಳ ಕ್ಷಿಪ್ರವಾಗಿ ಒಂದಾದಮೇಲೆ ಮತ್ತೊಂದರಂತೆ ಬೆಳಗುವ ಮೂಲಕ ಟೀವಿ ಪರದೆಯಲ್ಲಿ ಚಿತ್ರಗಳು ಮೂಡುತ್ತವೆ. ಇದಕ್ಕೆ 'ಇಂಟರ್‌ಲೇಸ್ಡ್ ಸ್ಕ್ಯಾನ್' ಎಂದು ಹೆಸರು (ಸಾಲುಗಳು ಪರಸ್ಪರ ಹೆಣೆದುಕೊಳ್ಳುವುದರ ಮೂಲಕ ಚಿತ್ರ ಮೂಡುತ್ತದಲ್ಲ, ಇಂಟರ್‌ಲೇಸ್ ಎಂಬ ಹೆಸರು ಅದನ್ನೇ ಸೂಚಿಸುತ್ತದೆ). ಆದರೆ ಎಚ್‌ಡಿ ಟೀವಿಯಲ್ಲಿ ಹಾಗಲ್ಲ, ಎಲ್ಲ ಸಾಲುಗಳೂ ಒಮ್ಮೆಗೇ ಬೆಳಗಿ ಪರದೆಯ ಮೇಲೆ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ಮೂಡಿಸುತ್ತವೆ. ಇದಕ್ಕೆ 'ಪ್ರೋಗ್ರೆಸಿವ್ ಸ್ಕ್ಯಾನ್' ಎಂದು ಹೆಸರು.

ಈ ಮೂರು ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಯಾವುದನ್ನು ಎಚ್‌ಡಿ ಟೀವಿ ಎಂದು ಕರೆಯಬೇಕು ಎನ್ನುವ ಬಗ್ಗೆ ಕೆಲ ಮಾನದಂಡಗಳಿವೆ. ಅವುಗಳಲ್ಲಿ ಮೊದಲನೆಯದು ೭೨೦ಪಿ. ಇದರ ಪ್ರಕಾರ ಕನಿಷ್ಟ ೭೨೦ ಸಾಲುಗಳ ರೆಸಲ್ಯೂಶನ್ ಹಾಗೂ ಪ್ರೋಗ್ರೆಸಿವ್ ಸ್ಕ್ಯಾನ್ ಸಾಮರ್ಥ್ಯ ಹೊಂದಿರುವ ಪ್ರದರ್ಶಕಗಳಷ್ಟೆ ಎಚ್‌ಡಿ ಎನ್ನುವ ವಿಶೇಷಣ ಬಳಸಬಲ್ಲವು. ಮಾರುಕಟ್ಟೆಯಲ್ಲಿ 'ಎಚ್‌ಡಿ ರೆಡಿ' ಟೀವಿಗಳು ಸಿಗುತ್ತವಲ್ಲ, ಅವೆಲ್ಲ ೭೨೦ಪಿ ಮಾನದಂಡವನ್ನು ಅನುಸರಿಸಿರುತ್ತವೆ. 'ಫುಲ್ ಹೆಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಆ ಪ್ರದರ್ಶಕ ಕನಿಷ್ಠಪಕ್ಷ ೧೦೮೦ಐ ಮಾನದಂಡವನ್ನು ಅನುಸರಿಸಿರಬೇಕು. ಈ ಮಾನದಂಡದ ಪ್ರಕಾರ ೧೦೮೦ ಸಾಲುಗಳ ರೆಸಲ್ಯೂಶನ್ ಹಾಗೂ ಇಂಟರ್‌ಲೇಸ್ಡ್ ಸ್ಕ್ಯಾನ್ ಸಾಮರ್ಥ್ಯ ಇರಬೇಕಾದ್ದು ಕಡ್ಡಾಯ. ೧೦೮೦ ಸಾಲುಗಳ ರೆಸಲ್ಯೂಶನ್ ಜೊತೆಗೆ ಪ್ರೋಗ್ರೆಸಿವ್ ಸ್ಕ್ಯಾನ್ ಬಳಸುವ ೧೦೮೦ಪಿ ಎಂಬ ಮಾನದಂಡವೂ ಇದೆ. ವಿವರಣೆಯೇ ಹೇಳುವಂತೆ ೧೦೮೦ಐ, ಅಥವಾ ೧೦೮೦ಪಿ ಮಾನದಂಡ ಅನುಸರಿಸುವ ಪ್ರದರ್ಶಕಗಳಲ್ಲಿ ಕಾಣಿಸುವ ಚಿತ್ರಗಳ ಗುಣಮಟ್ಟ ೭೨೦ಪಿ ಮಾನದಂಡ ಬಳಸುವ ಪ್ರದರ್ಶಕಗಳಲ್ಲಿ ಕಾಣಿಸುವ ಚಿತ್ರಗಳಿಗಿಂತ ಉತ್ತಮವಾಗಿರುತ್ತದೆ.

ಎಚ್‌ಡಿ ಕ್ಯಾಮೆರಾ ಈಗ ಮಾರುಕಟ್ಟೆಯಲ್ಲಿರುವ ಹಲವಾರು ಡಿಜಿಟಲ್ ಕ್ಯಾಮೆರಾಗಳಲ್ಲಿ ಎಚ್‌ಡಿ ವೀಡಿಯೋ ಚಿತ್ರೀಕರಿಸುವ ಸಾಮರ್ಥ್ಯ ಇರುತ್ತದೆ. ಇವುಗಳಲ್ಲಿ ಬಹುತೇಕ ಎಚ್‌ಡಿ ಕ್ಯಾಮೆರಾಗಳು ೭೨೦ಪಿ ಅಥವಾ ೧೦೮೦ಐ ಮಾನದಂಡವನ್ನು ಅನುಸರಿಸುವುದು ಸಾಮಾನ್ಯ.

ಎಚ್‌ಡಿ ಕ್ಯಾಮೆರಾ ಬಳಸಿದಾಗ ಅತ್ಯುತ್ತಮ ಗುಣಮಟ್ಟದ ವೀಡಿಯೋ ಚಿತ್ರೀಕರಣ ಸಾಧ್ಯವಾಗುತ್ತದೆ, ನಿಜ. ಆದರೆ ಗುಣಮಟ್ಟದ ಜೊತೆಜೊತೆಗೆ ಕಡತದ ಗಾತ್ರವೂ ಹೆಚ್ಚುವುದರಿಂದ ಚಿತ್ರೀಕರಿಸಿದ ವೀಡಿಯೋ ಶೇಖರಿಸಲು ಹೆಚ್ಚುಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಸಾಮಾನ್ಯ ವೀಡಿಯೋಗಳಿಗೆ ಹೋಲಿಸಿದಾಗ ಅಷ್ಟೇ ಸಮಯದ ಎಚ್‌ಡಿ ವೀಡಿಯೋ ಮೆಮೊರಿ ಕಾರ್ಡ್, ಹಾರ್ಡ್ ಡಿಸ್ಕ್, ಡಿವಿಡಿ ಇತ್ಯಾದಿಗಳಲ್ಲಿ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ.

ಬ್ಲೂ-ರೇ ಡಿಸ್ಕ್ ಹೆಚ್ಚಿನ ಶೇಖರಣಾ ಸಾಮರ್ಥ್ಯವಿರುವ ಮಾಧ್ಯಮಗಳಲ್ಲಿ ಇತ್ತೀಚೆಗೆ ಜನಪ್ರಿಯತೆ ಗಳಿಸಿಕೊಂಡಿರುವ ಹೆಸರು ಬ್ಲೂ-ರೇ ಡಿಸ್ಕ್‌ಗಳದು,

ಹೆಚ್ಚು ಸ್ಪಷ್ಟವಾದ, ಹಾಗಾಗಿಯೇ ಹೆಚ್ಚು ದೊಡ್ಡದಾದ ವೀಡಿಯೋಗಳನ್ನು ಶೇಖರಿಸಿಡಲು ಸೋನಿ ಸಂಸ್ಥೆ ರೂಪಿಸಿದ ತಂತ್ರಜ್ಞಾನದ ಫಲವೇ ಬ್ಲೂ-ರೇ ಡಿಸ್ಕ್‌ಗಳ ಸೃಷ್ಟಿ. ಇವುಗಳಲ್ಲಿ ಸಾಮಾನ್ಯ ಡಿವಿಡಿಗಳಿಗಿಂತ ಐದಾರು ಪಟ್ಟು ಹೆಚ್ಚು ಪ್ರಮಾಣದ ಮಾಹಿತಿಯನ್ನು ಶೇಖರಿಸುವುದು ಸಾಧ್ಯ. ಸಿ.ಡಿ., ಡಿವಿಡಿಗಳಲ್ಲಿರುವ ಮಾಹಿತಿಯನ್ನು ಓದಲು ಕೆಂಪು ಲೇಸರ್ ಕಿರಣ ಬಳಕೆಯಾಗುತ್ತದಲ್ಲ, ಬ್ಲ್ಯೂ-ರೇ ಡಿಸ್ಕುಗಳು ನೀಲಿ ಲೇಸರ್ ಕಿರಣಗಳನ್ನು ಬಳಸುತ್ತವೆ; ಇದರಿಂದಾಗಿ ಡಿಸ್ಕ್ ಮೇಲ್ಮೈಯಲ್ಲಿ ಕಡಿಮೆ ಸ್ಥಳ ಬಳಸಿಕೊಂಡು ಹೆಚ್ಚು ಮಾಹಿತಿಯನ್ನು ಶೇಖರಿಸುವುದು ಹಾಗೂ ಅದನ್ನು ಮತ್ತೆ ಸುಲಭವಾಗಿ ಓದುವುದು ಸಾಧ್ಯವಾಗುತ್ತದೆ. ಅವುಗಳ ನಾಮಕಾರಣವೂ ಈ ನೀಲಿ ಕಿರಣಗಳೇ!

ಎಚ್‌ಡಿಎಂಐ ಎಚ್‌ಡಿ ವೀಡಿಯೋ ಚಿತ್ರೀಕರಿಸಿ ಅದನ್ನು ಎಲ್ಲೋ ಒಂದು ಕಡೆ ಶೇಖರಿಸಿಟ್ಟುಬಿಟ್ಟರೆ ಆಯಿತೆ, ಅದನ್ನು ಅಷ್ಟೇ ಒಳ್ಳೆಯ ಗುಣಮಟ್ಟದಲ್ಲಿ ನೋಡಲೂಬೇಕಲ್ಲ? ಇದಕ್ಕೆ ನೆರವಾಗುವ ತಂತ್ರಜ್ಞಾನದ ಹೆಸರೇ ಎಚ್‌ಡಿಎಂಐ, ಅಂದರೆ ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್. ಎಚ್‌ಡಿ ಟೀವಿಗಳಲ್ಲಿ, ಡಿವಿಡಿ/ಬ್ಲೂ-ರೇ ಪ್ಲೇಯರುಗಳಲ್ಲಿ, ಸೆಟ್ ಟಾಪ್ ಬಾಕ್ಸುಗಳಲ್ಲಿ, ಕಂಪ್ಯೂಟರುಗಳಲ್ಲಿ, ಕಡೆಗೆ ಕೆಲವು ಡಿಜಿಟಲ್ ಕ್ಯಾಮೆರಾ, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಕಾಣಿಸಿಕೊಂಡಿರುವ ಹೊಸ ಸೌಲಭ್ಯ ಇದು. ಅತ್ಯುತ್ತಮ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅತ್ಯಂತ ಕ್ಷಿಪ್ರವಾಗಿ ವರ್ಗಾಯಿಸುವ ಸಾಮರ್ಥ್ಯ ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯ. ಎಚ್‌ಡಿಎಂಐ ಸೌಲಭ್ಯವಿರುವ ಉಪಕರಣಗಳನ್ನು ಸಂಪರ್ಕಿಸಲು ಎಚ್‌ಡಿಎಂಐ ಕೇಬಲ್ಲುಗಳನ್ನೇ ಬಳಸಬೇಕಾದ್ದು ಕಡ್ಡಾಯ.

ಅಕ್ಟೋಬರ್ ೩೦, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge