ಗುರುವಾರ, ಅಕ್ಟೋಬರ್ 25, 2012

ಡಿಜಿಟಲ್ ವೀಡಿಯೋ ಬಗ್ಗೆ ಒಂದಷ್ಟು...

ಡಿಜಿಟಲ್ ಛಾಯಾಗ್ರಹಣದ ಕುರಿತು ಒಂದಷ್ಟು ಮಾಹಿತಿ ನೀಡಿದ ಲೇಖನಗಳನ್ನು ಹಿಂದಿನ ವಾರಗಳಲ್ಲಿ  ಓದಿದ್ದೀರಿ. ಡಿಜಿಟಲ್ ಛಾಯಾಗ್ರಹಣ ಅಂದಕೂಡಲೆ ಅದು ಫೋಟೋ ಅಷ್ಟೇ ಆಗಿರಬೇಕಿಲ್ಲವಲ್ಲ! ಹಾಗಾಗಿಯೇ ಇಂದಿನ ಮತ್ತು ಮುಂದಿನ ಇನ್ನೊಂದು ಲೇಖನ ಡಿಜಿಟಲ್ ವೀಡಿಯೋ ಪರಿಚಯಕ್ಕಾಗಿ ಮೀಸಲು.
ಟಿ. ಜಿ. ಶ್ರೀನಿಧಿ

ಡಿಜಿಟಲ್ ಯುಗಕ್ಕಿಂತ ಕೊಂಚ ಹಿಂದಿನ ಕಾಲ ನೆನಪಿಸಿಕೊಳ್ಳಿ. ವೀಡಿಯೋ ಎಂದತಕ್ಷಣ ಅಂದಿನ ಕ್ಯಾಸೆಟ್ಟುಗಳೇ ನೆನಪಿಗೆ ಬರುತ್ತವಲ್ಲ! ರಜಾದಿನಗಳಲ್ಲಿ ಸಿನಿಮಾ ವೀಕ್ಷಣೆ ಎಂದರೆ ಈಗೇನೋ ಯೂಟ್ಯೂಬ್ ಮೂಲಕವೂ ಆಗಬಹುದು; ಆದರೆ ಆಗ ಪಕ್ಕದ ರಸ್ತೆಯ ವೀಡಿಯೋ ಲೈಬ್ರರಿಯೊಂದೇ ನಮ್ಮ ಸಿನಿಮಾ ಬೇಡಿಕೆಗಳನ್ನು ಪೂರೈಸುವ ಮೂಲವಾಗಿತ್ತು. ವಿಸಿಪಿ/ವಿಸಿಆರ್ ಇಲ್ಲವೆಂದರೆ ಅದೂ ಬಾಡಿಗೆಗೆ ಸಿಗುತ್ತಿತ್ತಲ್ಲ!

ಅಂದಿನ ವೀಡಿಯೋ ರೆಕಾರ್ಡಿಂಗ್ ಕೂಡ ಹಾಗೆಯೇ ಇತ್ತು; ಮದುವೆ ಮನೆ ವೀಡಿಯೋ ತೆಗೆಯುವ ವೀಡಿಯೋಗ್ರಾಫರ್ ಕ್ಯಾಮೆರಾ ಇರಲಿ, ಅಮೆರಿಕಾ ರಿಟರ್ನ್ಡ್ ಭಾವ ತಂದ ಪುಟ್ಟ ಕ್ಯಾಮ್‌ಕಾರ್ಡರ್ ಇರಲಿ - ಎಲ್ಲ ಕಡೆಯೂ ಕ್ಯಾಸೆಟ್ಟುಗಳದೇ ಭರಾಟೆ. ಟೇಪ್ ರೆಕಾರ್ಡರಿನ ಕ್ಯಾಸೆಟ್ಟಿನಂತೆ ಈ ತಂತ್ರಜ್ಞಾನವೂ ಅನಲಾಗ್ ಆಗಿತ್ತು.

ಪ್ರಪಂಚವೆಲ್ಲ ಡಿಜಿಟಲ್ ಆದಮೇಲೆ ವೀಡಿಯೋ ಮಾತ್ರ ಸುಮ್ಮನಿರಲು ಸಾಧ್ಯವೇ? ಬೇರೆಲ್ಲ ಕಡೆಗಳಲ್ಲೂ ಆದಂತೆ ಇಲ್ಲೂ ಡಿಜಿಟಲ್ ವೀಡಿಯೋ ಎಂಬ ಹೊಸ ಅವತಾರ ಸೃಷ್ಟಿಯಾಯಿತು; ವೀಡಿಯೋ ಚಿತ್ರೀಕರಣದ ಗುಣಮಟ್ಟ ಒಟ್ಟಾರೆಯಾಗಿ ಜಾಸ್ತಿಯಾಯಿತು. ಅಷ್ಟೇ ಅಲ್ಲ, ಕ್ಯಾಸೆಟ್ಟು ಹಳೆಯದಾದಂತೆ ಅಥವಾ ಒಂದರಿಂದ ಒಂದು ಕಾಪಿ ಮಾಡಿಕೊಂಡಂತೆ ವೀಡಿಯೋ ಗುಣಮಟ್ಟ ಕಡಿಮೆಯಾಗುತ್ತಿದ್ದ ಸಮಸ್ಯೆ ಕೂಡ ಇದರಿಂದಾಗಿ ನಿವಾರಣೆಯಾಯಿತು. ಎಷ್ಟು ಕಾಪಿ ಮಾಡಿಕೊಂಡರೂ ಪರವಾಗಿಲ್ಲ, ಎಷ್ಟು ಸಾರಿ ನೋಡಿದರೂ ಪರವಾಗಿಲ್ಲ, ವೀಡಿಯೋ ಗುಣಮಟ್ಟದಲ್ಲಿ ಮಾತ್ರ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳುವ ಆತ್ಮವಿಶ್ವಾಸವನ್ನು ಡಿಜಿಟಲ್ ವೀಡಿಯೋ ನಮಗೆ ತಂದುಕೊಟ್ಟಿತು (ಸಿ.ಡಿ./ಡಿವಿಡಿಯ ಮೇಲ್ಮೈ ಹಾಳಾದರೆ ವೀಡಿಯೋ ಪ್ರದರ್ಶನದಲ್ಲಿ ಅಡಚಣೆ ಬರುತ್ತದೆ ನಿಜ, ಆದರೆ ಅದು ಮಾಧ್ಯಮದ ತೊಂದರೆಯೇ ವಿನಃ ಡಿಜಿಟಲ್ ವೀಡಿಯೋದ ಸಮಸ್ಯೆಯಲ್ಲ).

ಮದುವೆ ಕ್ಯಾಸೆಟ್ಟುಗಳನ್ನು ಸಿ.ಡಿ.ಗೋ ಡಿವಿಡಿಗೋ ಪರಿವರ್ತಿಸಿಕೊಳ್ಳುವ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಇದು ಅನಲಾಗ್ ರೂಪದಲ್ಲಿರುವ ಮೂಲವನ್ನು ಡಿಜಿಟಲ್ ವೀಡಿಯೋಗೆ ಪರಿವರ್ತಿಸುವ ಉದಾಹರಣೆ ಅಷ್ಟೆ. ಹಾಗಾದರೆ ವೀಡಿಯೋಗಳನ್ನು ಡಿಜಿಟಲ್ ರೂಪದಲ್ಲೇ ಚಿತ್ರೀಕರಿಸಿಕೊಳ್ಳುವುದು ಹೇಗೆ?

ಈ ಪ್ರಶ್ನೆಗೆ ಉತ್ತರ ನೀಡಿದ್ದು ಡಿಜಿಟಲ್ ವಿಡಿಯೋ ಕ್ಯಾಮೆರಾಗಳು.

ಅನಲಾಗ್ ವೀಡಿಯೋ ಕಾಲದಲ್ಲಿ ಕ್ಯಾಸೆಟ್ಟುಗಳೇ ಬಳಕೆಯಾಗುತ್ತಿದ್ದವಲ್ಲ, ಡಿಜಿಟಲ್ ವೀಡಿಯೋ ಪರಿಚಯವಾದ ಸಂದರ್ಭದಲ್ಲೂ ಟೇಪುಗಳೇ ಹೊಸ ರೂಪದಲ್ಲಿ ಮರಳಿಬಂದವು. ಡಿಜಿಟಲ್ ವೀಡಿಯೋ ಅಥವಾ ಡಿವಿ ಎಂಬ ಹೆಸರಿನಿಂದಲೇ ಗುರುತಿಸಿಕೊಂಡ ಕ್ಯಾಮೆರಾಗಳು ತಾವು ಚಿತ್ರೀಕರಿಸಿದ ವೀಡಿಯೋಗಳನ್ನು ಈ ಟೇಪುಗಳಲ್ಲೇ ದಾಖಲಿಸುತ್ತಿದ್ದವು, ಆದರೆ ಡಿಜಿಟಲ್ ರೂಪದಲ್ಲಿ.ಅಷ್ಟೇ ಅಲ್ಲ, ಚಿತ್ರೀಕರಿಸಿದ ವೀಡಿಯೋವನ್ನು ಕ್ಯಾಮೆರಾದಿಂದ ನೇರವಾಗಿ ಕಂಪ್ಯೂಟರಿಗೆ ವರ್ಗಾಯಿಸುವುದೂ ಸಾಧ್ಯವಿತ್ತು.

ವೀಡಿಯೋ ಚಿತ್ರೀಕರಿಸಿ, ಅದನ್ನು ಕ್ಯಾಮೆರಾದಿಂದ ಕಂಪ್ಯೂಟರಿಗೆ ವರ್ಗಾಯಿಸಿ ಆಮೇಲೆ ಸಿ.ಡಿ.ಗೋ ಡಿವಿಡಿಗೋ ಕಾಪಿಮಾಡುವ ಬದಲು ಚಿತ್ರೀಕರಿಸಿದ ವೀಡಿಯೋ ನೇರವಾಗಿ ಡಿವಿಡಿಯಲ್ಲೇ ದಾಖಲಾಗುವಂತಿದ್ದರೆ? ಡಿವಿ ಕ್ಯಾಸೆಟ್ ಬಳಸುತ್ತಿದ್ದ ಕ್ಯಾಮೆರಾಗಳ ನಂತರ ಬಂದ ಡಿವಿಡಿ ವೀಡಿಯೋ ಕ್ಯಾಮೆರಾಗಳು ಈ ಸೌಲಭ್ಯವನ್ನು ಪರಿಚಯಿಸಿದವು. ಈ ಕ್ಯಾಮೆರಾಗಳು ಪುಟ್ಟ ಡಿವಿಡಿಗಳಲ್ಲಿ ದಾಖಲಿಸುತ್ತಿದ್ದ ವೀಡಿಯೋವನ್ನು ನೇರವಾಗಿ ಕಂಪ್ಯೂಟರಿನಲ್ಲೋ ಡಿವಿಡಿ ಪ್ಲೇಯರ್ ಬಳಸಿ ಟೀವಿಯಲ್ಲೋ ನೋಡುವುದು ಸಾಧ್ಯವಾಯಿತು.

ಚಿತ್ರೀಕರಿಸಬಹುದಾದ ವೀಡಿಯೋ ಗುಣಮಟ್ಟ ಜಾಸ್ತಿಯಾಗುತ್ತ ಹೋದ ಸಮಯದಲ್ಲೇ ಕಂಪ್ಯೂಟರಿನ ಶೇಖರಣಾ ಸಾಮರ್ಥ್ಯದಲ್ಲೂ ಗಮನಾರ್ಹ ಬದಲಾವಣೆಗಳು ಕಂಡುಬಂದವು. ಆಗಿಂದಾಗ್ಗೆ ಕ್ಯಾಸೆಟ್ಟುಗಳನ್ನೋ ಡಿವಿಡಿಗಳನ್ನೋ ಬದಲಿಸುವುದು ಕೂಡ ಕಿರಿಕಿರಿ ಎನಿಸಲು ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಹಾರ್ಡ್ ಡಿಸ್ಕ್ ಬಳಸುವ ಡಿಜಿಟಲ್ ವೀಡಿಯೋ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದವು. ಕ್ಯಾಸೆಟ್ಟಿನಲ್ಲಿ ಜಾಗವಿದೆಯೋ ಇಲ್ಲವೋ, ಈ ಡಿವಿಡಿ ಮುಗಿದ ಮೇಲೆ ಇನ್ನೊಂದು ಡಿವಿಡಿ ಎಲ್ಲಿಂದ ತರುವುದು ಎಂಬಂತಹ ಯೋಚನೆಗಳನ್ನೆಲ್ಲ ಬಿಟ್ಟು ಗಂಟೆಗಟ್ಟಲೆ ವೀಡಿಯೋ ಚಿತ್ರೀಕರಣದಲ್ಲಿ ತೊಡಗುವುದು ಈ ಬೆಳೆವಣಿಗೆಯಿಂದಾಗಿ ಸಾಧ್ಯವಾಯಿತು. ಈಗಂತೂ ಮೆಮೊರಿ ಕಾರ್ಡುಗಳನ್ನು ಬಳಸುವ ವೀಡಿಯೋ ಕ್ಯಾಮೆರಾಗಳೂ ಬಂದಿರುವುದರಿಂದ ಗಿಗಾಬೈಟ್‌ಗಟ್ಟಲೆ ವೀಡಿಯೋ ಚಿತ್ರೀಕರಿಸಿಕೊಳ್ಳುವುದು ಇನ್ನಷ್ಟು ಸುಲಭವಾಗಿದೆ. ಜಾಹೀರಾತುಗಳ ಪ್ರಕಾರ ಮೂವತ್ತೆರಡು ಜಿಬಿಯ ಎಸ್‌ಡಿ ಕಾರ್ಡಿನಲ್ಲಿ ಎಂಟು ಗಂಟೆಗಳಷ್ಟು ಸುದೀರ್ಘ ಕಾಲದ, ಅತ್ಯುತ್ತಮ ಗುಣಮಟ್ಟದ ವೀಡಿಯೋ ದಾಖಲಿಸಿಕೊಳ್ಳುವುದು ಸಾಧ್ಯವಂತೆ!

ವೆಬ್ ಕ್ಯಾಮೆರಾವೀಡಿಯೋ ಚಾಟಿಂಗ್ ಇರಲಿ, ವಾಹನದ ಎಮಿಶನ್ ಟೆಸ್ಟ್ ಇರಲಿ, ಹೊಸ ರೇಶನ್ ಕಾರ್ಡಿಗೆ ಬೇಕಾದ ಛಾಯಾಚಿತ್ರವೇ ಇರಲಿ - ಇವೆಲ್ಲದಕ್ಕೂ ವೆಬ್ ಕ್ಯಾಮೆರಾ ಬೇಕೇ ಬೇಕು. ಅದು ಲ್ಯಾಪ್‌ಟಾಪ್‌ಗಳ ಅವಿಭಾಜ್ಯ ಅಂಗವೇ ಆಗಿಹೋಗಿರುವ ಈ ದಿನಗಳಲ್ಲಿ ವೆಬ್ ಕ್ಯಾಮೆರಾವನ್ನು ಪ್ರತ್ಯೇಕವಾಗಿ ಕೊಳ್ಳುವ ಅಭ್ಯಾಸ ಮರೆತೇ ಹೋದಂತಾಗಿದೆ.
ವೆಬ್ ಕ್ಯಾಮೆರಾಗಳೂ ಮೂಲತಃ ಡಿಜಿಟಲ್ ಕ್ಯಾಮೆರಾಗಳೇ. ಆದರೆ ಅವುಗಳನ್ನು ಬಳಸಿ ಮಾಡಲಾಗುವ ಛಾಯಾಗ್ರಹಣದ ಗುಣಮಟ್ಟ ಕಡಿಮೆಯಿರುತ್ತದೆ, ಹಾಗೂ ಇತರ ಡಿಜಿಟಲ್ ಕ್ಯಾಮೆರಾಗಳಲ್ಲಿರುವಂತೆ ಅವುಗಳಲ್ಲಿ ಚಿತ್ರಗಳನ್ನು ಉಳಿಸಿಟ್ಟುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಛಾಯಾಚಿತ್ರವಾಗಲಿ, ವೀಡಿಯೋ ಆಗಲಿ, ತಕ್ಷಣವೇ ಕಂಪ್ಯೂಟರಿಗೆ ವರ್ಗಾವಣೆಯಾಗಬೇಕಾದ್ದು ಇಲ್ಲಿ ಅನಿವಾರ್ಯ.
ವೆಬ್ ಕ್ಯಾಮೆರಾಗಳ ಮೂಲಕ ಸೆರೆಹಿಡಿಯುವ ವೀಡಿಯೋ ಗುಣಮಟ್ಟ ಕಡಿಮೆಯಾದ್ದರಿಂದ ಅದರ ಗಾತ್ರವೂ ಕಡಿಮೆಯಿರುತ್ತದೆ. ಹೀಗಾಗಿಯೇ ತಕ್ಷಣದ ಪ್ರಸಾರ (ಸ್ಟ್ರೀಮಿಂಗ್) ಅಪೇಕ್ಷಿಸುವ ವೀಡಿಯೋ ಚಾಟಿಂಗ್‌ನಂತಹ ಸನ್ನಿವೇಶಗಳಲ್ಲಿ ಅವು ಬಹಳ ಉಪಯುಕ್ತವಾಗಿವೆ. ರೇಶನ್ ಕಾರ್ಡಿಗಾಗಿಯೋ ಅಥವಾ ದೊಡ್ಡದೊಡ್ಡ ಕಚೇರಿಗಳಲ್ಲಿ ಸಂದರ್ಶಕರ ಪಾಸುಗಳಿಗಾಗಿಯೋ ಭಾವಚಿತ್ರಗಳನ್ನು ಕ್ಲಿಕ್ಕಿಸುವಾಗ ಅತ್ಯುತ್ತಮ ಗುಣಮಟ್ಟದ ಚಿತ್ರವೇನೂ ಬೇಕಾಗುವುದಿಲ್ಲವಲ್ಲ, ಹಾಗಾಗಿ ಅಲ್ಲೆಲ್ಲ ವೆಬ್‌ಕ್ಯಾಮೆರಾಗಳು ಬಳಕೆಯಾಗುತ್ತವೆ. ಎಮಿಶನ್ ಟೆಸ್ಟ್ ಸಂದರ್ಭದಲ್ಲಿ ವಾಹನದ ನಂಬರ್ ಪ್ಲೇಟ್ ಚಿತ್ರ ಕ್ಲಿಕ್ಕಿಸುವುದೂ ವೆಬ್‌ಕ್ಯಾಮೆರಾದ ಕೆಲಸವೇ!

ಅಕ್ಟೋಬರ್ ೨೩, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge