ಬುಧವಾರ, ಅಕ್ಟೋಬರ್ 3, 2012

ಕ್ಯಾಮೆರಾ ಕಾಗುಣಿತ: ಭಾಗ ೧


ಟಿ. ಜಿ. ಶ್ರೀನಿಧಿ
ಅಪರ್ಚರ್, ಎಕ್ಸ್‌ಪೋಶರ್, ಶಟರ್ ಸ್ಪೀಡ್, ಫೋಕಲ್ ಲೆಂತ್ - ಕ್ಯಾಮೆರಾ ಪ್ರಪಂಚವನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಇಂತಹ ಪದಗಳ ಸಾಲುಸಾಲೇ ನಮ್ಮ ಕಿವಿಗೆ ಬೀಳುತ್ತವೆ. ಹೀಗೆ ಕೇಳಸಿಗುವ ಕೆಲ ಪದಗಳ ಪರಿಚಯ ಇಲ್ಲಿದೆ. ಇಂತಹವೇ ಇನ್ನಷ್ಟು ಪದಗಳ ಪರಿಚಯ, ಮುಂದಿನ ವಾರ!
ಅಪರ್ಚರ್: ಕ್ಯಾಮೆರಾದ ಲೆನ್ಸಿನ ಮೂಲಕ ಒಂದಷ್ಟು ಬೆಳಕು ಸೆನ್ಸರಿನ ಮೇಲೆ ಬಿದ್ದಾಗ ಛಾಯಾಚಿತ್ರ ಅದರಲ್ಲಿ ಸೆರೆಯಾಗುತ್ತದೆ. ಹೀಗೆ ಬೆಳಕನ್ನು ಒಳಗೆ ಬಿಟ್ಟುಕೊಳ್ಳಲು ಲೆನ್ಸು ಎಷ್ಟು ದೊಡ್ಡದಾಗಿ ತೆರೆದುಕೊಳ್ಳುತ್ತದೆ ಎನ್ನುವುದನ್ನು 'ಅಪರ್ಚರ್' ಸೂಚಿಸುತ್ತದೆ. ಸುತ್ತಲಿನ ಬೆಳಕಿನ ಪ್ರಮಾಣಕ್ಕೆ ಅನುಗುಣವಾಗಿ ಹಿಗ್ಗುವ ಅಥವಾ ಕುಗ್ಗುವ ಮೂಲಕ ಕಣ್ಣಿನ ಅಕ್ಷಿಪಟಲದ (ರೆಟಿನಾ) ಮೇಲೆ ಬೀಳುವ ಬೆಳಕನ್ನು ಪಾಪೆ (ಪ್ಯೂಪಿಲ್) ನಿಯಂತ್ರಿಸುತ್ತದಲ್ಲ, ಕ್ಯಾಮೆರಾದ ಅಪರ್ಚರ್ ಕೂಡ ಇದೇ ಕೆಲಸ ಮಾಡುತ್ತದೆ.
ಹೊರಗೆ ಕಡಿಮೆ ಬೆಳಕಿದ್ದಾಗ ಅಪರ್ಚರ್ ಹೆಚ್ಚು ದೊಡ್ಡದಾಗಿ ತೆರೆದುಕೊಳ್ಳುವಂತೆ ಹಾಗೂ ಬೆಳಕು ತೀರಾ ಪ್ರಖರವಾಗಿದ್ದಾಗ ಚಿಕ್ಕದಾಗಿ ತೆರೆದುಕೊಳ್ಳುವಂತೆ ಮಾಡಿದರೆ ಒಳ್ಳೆಯ ಛಾಯಾಚಿತ್ರಗಳನ್ನು ಪಡೆಯುವುದು ಸಾಧ್ಯ. ಅಪರ್ಚರ್ ಅನ್ನು ಹೀಗೆ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವ ಸೌಲಭ್ಯ ಅನೇಕ ಕ್ಯಾಮೆರಾಗಳಲ್ಲಿರುತ್ತದೆ; ಇದಕ್ಕಾಗಿ 'ಅಪರ್ಚರ್ ಪ್ರಯಾರಿಟಿ' ಮೋಡ್ ಅನ್ನು ಬಳಸಬಹುದು.

ಅಪರ್ಚರ್ ಅನ್ನು 'ಎಫ್-ಸ್ಟಾಪ್'ಗಳಲ್ಲಿ ಅಳೆಯಲಾಗುತ್ತದೆ. ಈ ಅಳತೆಯನ್ನು f/೨.೮, f/೪, f/೫.೬, f/೮, f/೨೨ ಎಂದೆಲ್ಲ ನಮೂದಿಸಿರುವುದನ್ನು ನಾವು ನೋಡಬಹುದು. ಇದರಲ್ಲಿರುವ ಸಂಖ್ಯೆ ಸಣ್ಣದಾದಷ್ಟೂ ಅಪರ್ಚರ್ ದೊಡ್ಡದಿರುತ್ತದೆ. ಉದಾಹರಣೆಗೆ f/೨.೮ನಲ್ಲಿ ಕ್ಯಾಮೆರಾ ಪ್ರವೇಶಿಸುವ ಬೆಳಕಿನ ಪ್ರಮಾಣ f/೨೨ನಲ್ಲಿ ಪ್ರವೇಶಿಸುವುದಕ್ಕಿಂತ ಹೆಚ್ಚು. ಅದೇ ರೀತಿ f/೨೨ ಅಪರ್ಚರ್‌ನೊಡನೆ ಕ್ಲಿಕ್ಕಿಸಿದ ಚಿತ್ರದಲ್ಲಿ f/೨.೮ನಲ್ಲಿ ತೆಗೆದ ಚಿತ್ರಕ್ಕಿಂತ ಹೆಚ್ಚಿನ ವಿವರಗಳು ಫೋಕಸ್ ಆಗಿರುತ್ತವೆ. ಹಾಗಾಗಿಯೇ ಬಾಲ್ಕನಿಯ ಹೂಕುಂಡದಲ್ಲಿರುವ ಹೂವು ಮಾತ್ರ ಫೋಕಸ್ ಆಗಿ ಅದರ ಹಿನ್ನೆಲೆಯೆಲ್ಲ ಮಬ್ಬುಮಬ್ಬಾಗಿ ಕಾಣಿಸಿಕೊಳ್ಳಬೇಕು ಎಂದರೆ ದೊಡ್ಡ ಅಪರ್ಚರ್ (ಸಣ್ಣ ಎಫ್-ಸ್ಟಾಪ್ ಸಂಖ್ಯೆ) ಬಳಸಬೇಕಾಗುತ್ತದೆ.

ಆಸ್ಪೆಕ್ಟ್ ರೇಶಿಯೋ: ಡಿಜಿಟಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸುವ ಚಿತ್ರದ ಉದ್ದ ಮತ್ತು ಅಗಲ ಎಷ್ಟಿರುತ್ತದೆ ಎನ್ನುವುದನ್ನು ಅದರ ಆಸ್ಪೆಕ್ಟ್ ರೇಶಿಯೋ ಸೂಚಿಸುತ್ತದೆ. ಉದಾಹರಣೆಗೆ ಒಂದು ಚಿತ್ರದ ಅಗಲವನ್ನು ಎತ್ತರದಿಂದ ಭಾಗಿಸಿದಾಗ ೧.೫ ಎಂಬ ಉತ್ತರ ಸಿಗುತ್ತದೆ ಎನ್ನುವುದಾದರೆ ಅದರ ಆಸ್ಪೆಕ್ಟ್ ರೇಶಿಯೋ ೩:೨ ಆಗಿರುತ್ತದೆ. ಚಿತ್ರಗಳನ್ನು ಮುದ್ರಿಸುವಾಗ ಹಾಗೂ ಬೇರೆಬೇರೆ ಗಾತ್ರದ ಪರದೆಗಳ ಮೇಲೆ ಪ್ರದರ್ಶಿಸುವಾಗ ಅದರ ಆಸ್ಪೆಕ್ಟ್ ರೇಶಿಯೋ ಕಡೆಗೆ ಗಮನಹರಿಸಬೇಕಾದ್ದು ಅನಿವಾರ್ಯ.

ಉದಾಹರಣೆಗೆ ೪:೩ ಆಸ್ಪೆಕ್ಟ್ ರೇಶಿಯೋದಲ್ಲಿ ತೆಗೆದ ಚಿತ್ರವನ್ನು ನೀವು ೬"x೪" ಗಾತ್ರದಲ್ಲಿ ಮುದ್ರಿಸಹೊರಟರೆ ಚಿತ್ರದ ಸ್ವಲ್ಪ ಭಾಗ ಕತ್ತರಿಸಿಹೋಗುತ್ತದೆ. ಅದೇ ೩:೨ ಆಸ್ಪೆಕ್ಟ್ ರೇಶಿಯೋದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ೬"x೪" ಗಾತ್ರದಲ್ಲಿ ಪೂರ್ಣವಾಗಿ ಮುದ್ರಿಸಿಕೊಳ್ಳಬಹುದು. ೪:೩ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರ ೬"x೪.೫" ಗಾತ್ರದಲ್ಲಿ ಸರಿಯಾಗಿ ಮುದ್ರಣವಾಗುತ್ತದೆ. ಬಹುತೇಕ ಕ್ಯಾಮೆರಾಗಳಲ್ಲಿ ಸೂಕ್ತ ಆಯ್ಕೆಗಳ ಮೂಲಕ ನಮಗೆ ಬೇಕಾದ ಆಸ್ಪೆಕ್ಟ್ ರೇಶಿಯೋ ಹೊಂದಿಸಿಕೊಳ್ಳುವುದು ಸಾಧ್ಯ.

ಇಮೇಜ್ ಸ್ಟೆಬಿಲೈಸೇಶನ್: ಕ್ಯಾಮೆರಾ ಹಿಡಿದಾಗ ಕೈ ಕೊಂಚವೇ ಅಲುಗಾಡಿದರೂ ಚಿತ್ರ 'ಶೇಕ್' ಆಗುವುದು ನಮಗೆಲ್ಲ ಗೊತ್ತೇ ಇದೆ. ಹೆಚ್ಚು ಜೂಮ್ ಬಳಸಿ ಚಿತ್ರಗಳನ್ನು ಕ್ಲಿಕ್ಕಿಸುವಾಗಲಂತೂ ಶೇಕ್ ಹಾವಳಿ ಇನ್ನಷ್ಟು ಜಾಸ್ತಿ. ಈ ತೊಂದರೆಯನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಿ ಚಿತ್ರಗಳ 'ಅಲುಗಾಟವನ್ನು' ಕಡಿಮೆಮಾಡಲು ಕೆಲವು ಕ್ಯಾಮೆರಾಗಳಲ್ಲಿ 'ಇಮೇಜ್ ಸ್ಟೆಬಿಲೈಸೇಶನ್' ಎಂಬ ಸೌಲಭ್ಯ ಇರುತ್ತದೆ.

ಕೈಯ ಅಲುಗಾಟಕ್ಕೆ ತಕ್ಕಂತೆ ಕ್ಯಾಮೆರಾದ ಆಂತರಿಕ ಭಾಗಗಳೂ ಅಲುಗಾಡಿ ಶೇಕ್‌ನ ಒಟ್ಟಾರೆ ಪರಿಣಾಮವನ್ನು ಕಡಿಮೆಮಾಡುವ 'ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್' ಸೌಲಭ್ಯ ಅನೇಕ ಡಿಜಿಟಲ್ ಕ್ಯಾಮೆರಾಗಳಲ್ಲಿ ಕಾಣಸಿಗುತ್ತದೆ. ದೃಶ್ಯಗಳನ್ನು ಚಿತ್ರೀಕರಿಸಿದ ನಂತರ ಪಿಕ್ಸೆಲ್‌ಗಳ ಸ್ಥಾನವನ್ನು ಅಷ್ಟಿಷ್ಟು ಬದಲಿಸುವ ಮೂಲಕ ಒಟ್ಟಾರೆ ಗುಣಮಟ್ಟವನ್ನು ಕೊಂಚಮಟ್ಟಿಗೆ ಉತ್ತಮಪಡಿಸುವ 'ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್' ಸೌಲಭ್ಯ ಹೆಚ್ಚಾಗಿ ವೀಡಿಯೋ ಕ್ಯಾಮೆರಾಗಳಲ್ಲಿ ಮಾತ್ರವೇ ಇರುತ್ತದೆ.

ಡೆಪ್ತ್ ಆಫ್ ಫೀಲ್ಡ್: ಫೋಟೋ ಕ್ಲಿಕ್ಕಿಸುವಾಗ ಕ್ಯಾಮೆರಾ ಮುಂದಿನ ದೃಶ್ಯದ ಎಷ್ಟು ಭಾಗ ಫೋಕಸ್ ಆಗಿರುತ್ತದೆ ಎನ್ನುವುದನ್ನು ಡೆಪ್ತ್ ಆಫ್ ಫೀಲ್ಡ್ ಸೂಚಿಸುತ್ತದೆ. ಇದು ನಾವು ಬಳಸುವ ಅಪರ್ಚರ್ ಆಯ್ಕೆಯ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ - ದೊಡ್ಡ ಅಪರ್ಚರ್ (ಸಣ್ಣ ಎಫ್-ಸ್ಟಾಪ್ ಸಂಖ್ಯೆ) ಬಳಸಿದರೆ ಡೆಪ್ತ್ ಆಫ್ ಫೀಲ್ಡ್ ಕಡಿಮೆಯಾಗುತ್ತದೆ; ಸಣ್ಣ ಅಪರ್ಚರ್ ಬಳಸಿದರೆ ಅದು ಜಾಸ್ತಿಯಾಗುತ್ತದೆ.

ಉದಾಹರಣೆಗೆ ಪರಸ್ಪರ ಕೊಂಚ ದೂರದಲ್ಲಿ ಒಂದರ ಹಿಂದೆ ಇನ್ನೊಂದು ಇರುವಂತೆ ಯಾವುದೋ ಮೂರು ವಸ್ತುಗಳು ಕ್ಯಾಮೆರಾ ಎದುರಿಗಿವೆ ಎಂದುಕೊಳ್ಳೋಣ. ದೊಡ್ಡ ಅಪರ್ಚರ್ ಬಳಸಿ ಈ ದೃಶ್ಯವನ್ನು ಕ್ಲಿಕ್ಕಿಸಿದರೆ ಫೋಟೋದಲ್ಲಿ ಮೊದಲ ವಸ್ತುವಷ್ಟೆ ಸ್ಪಷ್ಟವಾಗಿ ಫೋಕಸ್ ಆಗಿರುತ್ತದೆ, ಹಿಂದಿನವು ಅಸ್ಪಷ್ಟವಾಗಿ ಮೂಡಿಬಂದಿರುತ್ತವೆ. ಇದೇ ದೃಶ್ಯವನ್ನು ಸಣ್ಣ ಅಪರ್ಚರ್ ಬಳಸಿ ಕ್ಲಿಕ್ಕಿಸಿದರೆ ಮುಂದಿನ ವಸ್ತುವಷ್ಟೇ ಅಲ್ಲದೆ ಅದರ ಹಿಂದಿರುವವು ಕೂಡ ಫೋಕಸ್ ಆಗುತ್ತವೆ. ಇದಲ್ಲದೆ ಮ್ಯಾಕ್ರೋ ಮೋಡ್ ಬಳಸಿದಾಗ ಕೂಡ ಡೆಪ್ತ್ ಆಫ್ ಫೀಲ್ಡ್ ಕಡಿಮೆ ಇರುವ ಚಿತ್ರಗಳು ಮೂಡಿಬರುವುದನ್ನು ಗಮನಿಸಬಹುದು.

ಬರ್ಸ್ಟ್: ಹಾರುತ್ತಿರುವ ಹಕ್ಕಿಯದೋ ಏರುತ್ತಿರುವ ವಿಮಾನದ್ದೋ ಫೋಟೋ ಕ್ಲಿಕ್ಕಿಸುವುದು ಸವಾಲಿನ ಕೆಲಸವೇ ಸರಿ. ಒಂದುವೇಳೆ ಅದರ ಚಲನೆಯ ವೇಗಕ್ಕೆ ಹೊಂದಿಕೊಂಡು ಫೋಕಸ್ ಮಾಡಿದೆವೆಂದೇ ಇಟ್ಟುಕೊಂಡರೂ ಒಳ್ಳೆಯ ಫೋಟೋ ಸಿಗುವ ಗ್ಯಾರಂಟಿಯೇನೂ ಇರುವುದಿಲ್ಲ. ಹಕ್ಕಿ ತನ್ನ ರೆಕ್ಕೆಗಳನ್ನು ಮಡಿಸಿದಾಗಲೋ ವಿಮಾನದ ಬಾಲ ಚಿತ್ರದ ಚೌಕಟ್ಟಿನಿಂದ ಆಚೆಯಿರುವಾಗಲೋ ಚಿತ್ರ ಕ್ಲಿಕ್ಕಿಸಿದೆವೆಂದರೆ ಆವರೆಗೆ ಪಟ್ಟ ಶ್ರಮವೆಲ್ಲ ವ್ಯರ್ಥ. ಇದಕ್ಕೆ ಪರಿಹಾರವೇನು ಎಂದು ಯೋಚಿಸಿದವರಿಗೆ ಹೊಳೆದದ್ದೇ ಬರ್ಸ್ಟ್ ಎಂಬ ಪರಿಕಲ್ಪನೆ.

ಈ ಸೌಲಭ್ಯವನ್ನು ಬಳಸಿಕೊಂಡು ಒಂದರ ಹಿಂದೊಂದರಂತೆ ಹಲವು ಚಿತ್ರಗಳನ್ನು ಪಟಪಟನೆ ಕ್ಲಿಕ್ಕಿಸುವುದು ಸಾಧ್ಯ. ಹಾಗೆ ಮಾಡುವ ಮೂಲಕ ಕೆಲವೇ ಸೆಕೆಂಡುಗಳ ಅಂತರದಲ್ಲಿ ಒಂದೇ ವಿಷಯದ ಹಲವು ಚಿತ್ರಗಳನ್ನು ಕ್ಲಿಕ್ಕಿಸಿ ಅವುಗಳಲ್ಲಿ ಅತ್ಯುತ್ತಮವೆನಿಸಿದ್ದನ್ನು ಆಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಡಿಎಸ್‌ಎಲ್‌ಆರ್‌ಗಳಲ್ಲಿ ಸಾಮಾನ್ಯವಾಗಿ ದೊರಕುವ ಈ ಸೌಲಭ್ಯ ಕೆಲವು ಸಾಮಾನ್ಯ ಕ್ಯಾಮೆರಾಗಳಲ್ಲೂ ಇರುವುದುಂಟು.

ವಿಗ್ನೆಟಿಂಗ್: ಲೆನ್ಸಿನ ಹೊದಿಕೆಯ ಒಳಭಾಗ ಚಿತ್ರದಲ್ಲಿ ಕಾಣಿಸಿಕೊಂಡು ಅದರ ಅಂಚುಗಳೆಲ್ಲ ಕಪ್ಪಾಗಿ ಕಾಣಿಸುವ ಪರಿಸ್ಥಿತಿಯನ್ನು ವಿಗ್ನೆಟಿಂಗ್ ಎಂದು ಕರೆಯುತ್ತಾರೆ. ಒಳ್ಳೆಯ ಕ್ಯಾಮೆರಾ ಹಾಗೂ ಲೆನ್ಸುಗಳನ್ನು ಬಳಸಿವಾಗ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಡಿಎಸ್‌ಎಲ್‌ಆರ್‌ನಲ್ಲಿ ವೈಡ್ ಆಂಗಲ್, ಮ್ಯಾಕ್ರೋ ಮುಂತಾದ ಚಿತ್ರಗಳನ್ನು ಕ್ಲಿಕ್ಕಿಸಲೆಂದೇ ವಿಶೇಷ ಲೆನ್ಸುಗಳು ದೊರಕುತ್ತವೆ; ಅದಕ್ಕಾಗಿ ದುಬಾರಿ ಮೊತ್ತ ನೀಡಲು ಇಷ್ಟವಿಲ್ಲದವರು ಸಾಮಾನ್ಯ ಲೆನ್ಸಿನ ಜೊತೆಗೆ ಕಡಿಮೆ ಬೆಲೆಯ ಕನ್ವರ್ಟರ್‌ಗಳನ್ನು ಬಳಸಿಕೊಂಡು ಕೆಲಸ ಸಾಧಿಸಿಕೊಳ್ಳುವ ಅಭ್ಯಾಸ ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಕನ್ವರ್ಟರ್‌ಗಳನ್ನು ಬಳಸುವಾಗ ವಿಗ್ನೆಟಿಂಗ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಯಾವುದೇ ಸಮಸ್ಯೆಯೂ ಇಲ್ಲದ ಚಿತ್ರಗಳಿಗೂ ಸ್ಪೆಶಲ್ ಇಫೆಕ್ಟ್ ನೀಡಲು ಕೃತಕವಾಗಿ ವಿಗ್ನೆಟಿಂಗ್ ಪರಿಣಾಮ ಸೇರಿಸುವ ಸೌಲಭ್ಯ ಅನೇಕ ಫೋಟೋ ಎಡಿಟಿಂಗ್ ತಂತ್ರಾಂಶಗಳಲ್ಲಿ ಕಾಣಸಿಗುತ್ತದೆ.

ಅಕ್ಟೋಬರ್ ೨, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

prasanna ಹೇಳಿದರು...

ಅತ್ಯುಪಯುಕ್ತ ಮಾಹಿತಿ

prasanna ಹೇಳಿದರು...

ಅತ್ಯುಪಯುಕ್ತ ಮಾಹಿತಿ

badge