ಮಂಗಳವಾರ, ಸೆಪ್ಟೆಂಬರ್ 25, 2012

ಸೂಪರ್‌ಕಂಪ್ಯೂಟರ್ ಬಗ್ಗೆ ಇನ್ನಷ್ಟು

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಕುಟುಂಬದ ಸದಸ್ಯರ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ, ಹಾಗೂ ಅತ್ಯಂತ ದುಬಾರಿಯಾಗಿರುವ ಹೆಚ್ಚುಗಾರಿಕೆ ಸೂಪರ್‌ಕಂಪ್ಯೂಟರುಗಳದು. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಸೂಪರ್‌ಕಂಪ್ಯೂಟರುಗಳು ಬಳಕೆಯಾಗುತ್ತವೆ.

ಇವುಗಳ ಸಂಸ್ಕರಣಾ ಸಾಮರ್ಥ್ಯ ತೀರಾ ಉನ್ನತಮಟ್ಟದ್ದಾಗಿರುವುದರಿಂದಲೇ ಅದನ್ನು ಅಳೆಯಲು 'ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್', ಅಂದರೆ FLOPS ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಗುಣಾಕಾರ, ಭಾಗಾಕಾರ, ವರ್ಗಮೂಲ ಮುಂತಾದ ಎಷ್ಟು ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲದು ಎನ್ನುವುದನ್ನು ಈ ಮಾಪನ ತಿಳಿಸುತ್ತದೆ.

ನಮಗೆಲ್ಲ ಪರಿಚಿತವಿರುವ ಕ್ಯಾಲ್‌ಕ್ಯುಲೇಟರುಗಳ ಸಾಮರ್ಥ್ಯ FLOPS ಏಕಮಾನದಲ್ಲಿ ಸುಮಾರು ಹತ್ತು ಇರಬಹುದು. ೧೯೬೦ರ ಸುಮಾರಿಗೆ ಬಂದ ಸೂಪರ್‌ಕಂಪ್ಯೂಟರುಗಳಲ್ಲಿ ಇದಕ್ಕಿಂತ ಕೆಲವೇ ನೂರು ಪಟ್ಟು ಹೆಚ್ಚಿನ, ಅಂದರೆ ಕೆಲವು ಸಾವಿರ ಫ್ಲಾಪ್ಸ್‌ನಷ್ಟು ಸಂಸ್ಕರಣಾ ಸಾಮರ್ಥ್ಯ ಇರುತ್ತಿತ್ತೆಂದು ತೋರುತ್ತದೆ. ಅದೇ ಇಂದಿನ ಸ್ಮಾರ್ಟ್‌ಫೋನುಗಳ ವಿಷಯಕ್ಕೆ ಬಂದರೆ ಅವುಗಳ ಸಾಮರ್ಥ್ಯ ಒಂದೆರಡು ಕೋಟಿ ಫ್ಲಾಪ್ಸ್ ಇರಬಹುದು. ಇನ್ನು ಟ್ಯಾಬ್ಲೆಟ್ ಗಣಕಗಳ ವಿಷಯಕ್ಕೆ ಬಂದರಂತೂ ಅವುಗಳಲ್ಲಿ ಇನ್ನೂ ಎಂಟು-ಹತ್ತು ಪಟ್ಟು ಜಾಸ್ತಿ ಸಂಸ್ಕರಣಾ ಸಾಮರ್ಥ್ಯ ಇರುತ್ತದೆ.

ಮೇಲ್ನೋಟಕ್ಕೆ ಭಲೇ ಎನ್ನಿಸಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಇದೆಲ್ಲ ಏನೇನೂ ಅಲ್ಲ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಪೆಟಾಫ್ಲಾಪ್ಸ್‌ಗಳಲ್ಲಿದೆ! ಕಿಲೋ ಅಂದರೆ ಸಾವಿರ, ಮೆಗಾ ಅಂದರೇನೇ ಹತ್ತು ಲಕ್ಷ, ಇನ್ನು ಪೆಟಾ ಅಂದರೆ?
ಅದು ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ!

ಟಾಪ್ ೫೦೦ ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ವಿಶ್ವದಲ್ಲಿರುವ ಐದುನೂರು ಅಗ್ರಗಣ್ಯ ಸೂಪರ್‌ಕಂಪ್ಯೂಟರುಗಳನ್ನು ಟಾಪ್೫೦೦ ಎಂಬ ಜಾಲತಾಣ ಪಟ್ಟಿಮಾಡುತ್ತದೆ. ಆ ತಾಣದಲ್ಲಿರುವ ಜೂನ್ ೨೦೧೨ರ ಮಾಹಿತಿಯ ಪ್ರಕಾರ ನಂಬರ್ ಒನ್ ಸ್ಥಾನದಲ್ಲಿರುವುದು ಅಮೆರಿಕಾದಲ್ಲಿರುವ ಸೆಕೋಯಾ ಎನ್ನುವ ಸೂಪರ್‌ಕಂಪ್ಯೂಟರ್. ಈ ದೈತ್ಯನ ಸಂಸ್ಕರಣಾ ಸಾಮರ್ಥ್ಯ ೧೬.೩೨ ಪೆಟಾಫ್ಲಾಪ್ಸ್‌ಗಳಂತೆ!

ಎರಡನೇ ಸ್ಥಾನದಲ್ಲಿರುವ ಜಪಾನಿನ ಕೆ ಕಂಪ್ಯೂಟರ್‌ನ ಸಾಮರ್ಥ್ಯ ೧೦.೫೧ ಪೆಟಾಫ್ಲಾಪ್ಸ್. ಮೊದಲ ಸ್ಥಾನದಲ್ಲಿರುವ ಸೆಕೋಯಾಗಿಂತ ಹೆಚ್ಚಿನ ವಿದ್ಯುತ್ ಕಬಳಿಸುವ ಈ ಸೂಪರ್‌ಕಂಪ್ಯೂಟರ್‌ನದು ಬಕಾಸುರನ ಹೊಟ್ಟೆ. ಪ್ರತಿ ಗಂಟೆಗೆ ಅದು ಬಳಸುವ ಹನ್ನೆರಡೂವರೆಸಾವಿರ ಕಿಲೋವಾಟ್‌ನಷ್ಟು ವಿದ್ಯುತ್ತಿನಲ್ಲಿ ತಲಾ ನೂರು ವ್ಯಾಟಿನ ಹೆಚ್ಚೂಕಡಿಮೆ ಒಂದೂಕಾಲು ಕ್ಷ ಬಲ್ಬುಗಳನ್ನು ಉರಿಸಬಹುದಂತೆ. ಮೈಸೂರು ಅರಮನೆಯಲ್ಲೂ ಇಷ್ಟು ಬಲ್ಬುಗಳಿಲ್ಲ!

ಭಾರತದ ಸವಾಲು ನಂಬರ್ ಒನ್ ಸ್ಥಾನದಲ್ಲಿರುವ ಸೆಕೋಯಾ ಸೂಪರ್‌ಕಂಪ್ಯೂಟರಿಗೇ ಸಡ್ಡುಹೊಡೆಯಲು ನಮ್ಮ ದೇಶದ ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ ಎನ್ನುವುದು ಈ ಕ್ಷೇತ್ರದಲ್ಲಿ ಇತ್ತೀಚೆಗೆ ಕೇಳಿಬಂದಿರುವ ಬಿಸಿ ಸುದ್ದಿ. ಮುಂದಿನ ಐದು ವರ್ಷಗಳಲ್ಲಿ ಉನ್ನತ ಸಾಮರ್ಥ್ಯದ ಸೂಪರ್‌ಕಂಪ್ಯೂಟರುಗಳನ್ನು ರೂಪಿಸುವ ೪೭೦೦ ಕೋಟಿ ರೂಪಾಯಿಗಳ ಯೋಜನೆಯೊಂದು ತಯಾರಾಗಿದೆ ಎಂದು ಇತ್ತೀಚಿನ ಪತ್ರಿಕಾವರದಿಗಳು ಹೇಳಿವೆ.

ಸಿದ್ಧವಾಗಲಿರುವುದು ಪೆಟಾಫ್ಲಾಪ್ಸ್ ಸಾಮರ್ಥ್ಯದ ಸೂಪರ್‌ಕಂಪ್ಯೂಟರುಗಳಷ್ಟೆ ಅಲ್ಲವಂತೆ, ಈ ಯೋಜನೆಯನ್ನು ಕಾರ್ಯಗತಗೊಳಿಸಲಿರುವ ಸಿ-ಡ್ಯಾಕ್ ತಂತ್ರಜ್ಞರು ಎಕ್ಸಾಫ್ಲಾಪ್ಸ್ ಸಾಮರ್ಥ್ಯದ ಸೂಪರ್‌ಕಂಪ್ಯೂಟರುಗಳನ್ನೂ ನಿರ್ಮಿಸಲು ಸಜ್ಜಾಗಿದ್ದಾರೆ. ಎಕ್ಸಾಫ್ಲಾಪ್ಸ್ ಅಂದರೆ ಪೆಟಾಫ್ಲಾಪ್ಸ್‌ಗಿಂತ ಸಾವಿರ ಪಟ್ಟು ದೊಡ್ಡದು!

ಸೂಪರ್‌ಕಂಪ್ಯೂಟರ್ ಕ್ಷೇತ್ರ ಭಾರತಕ್ಕೆ ಹೊಸದೇನೂ ಅಲ್ಲ. ಬೆಂಗಳೂರಿನ 'ಸಿಎಸ್‌ಐಆರ್ ಸೆಂಟರ್ ಫಾರ್ ಮ್ಯಾಥೆಮ್ಯಾಟಿಕಲ್ ಮಾಡೆಲಿಂಗ್ ಆಂಡ್ ಕಂಪ್ಯೂಟರ್ ಸಿಮುಲೇಷನ್' ಸಂಸ್ಥೆಯಲ್ಲಿರುವ ಸೂಪರ್‌ಕಂಪ್ಯೂಟರ್ ಟಾಪ್ ೫೦೦ ಪಟ್ಟಿಯಲ್ಲಿ ೫೮ನೇ ಸ್ಥಾನದಲ್ಲಿದೆ.

ಎಲ್ಲೆಲ್ಲೂ ಸೂಪರ್‌ಕಂಪ್ಯೂಟರ್ ಮನೆಯಲ್ಲಿ ಕೂತು ಲೇಖನ ಬರೆಯಲು, ಕಂಪ್ಯೂಟರಿನಲ್ಲಿ ಆಟವಾಡಲು ಸೂಪರ್‌ಕಂಪ್ಯೂಟರ್ ಬೇಡ ನಿಜ. ಆದರೆ ಅಷ್ಟೆಲ್ಲ ದೊಡ್ಡ ಪ್ರಮಾಣದ ಸಂಸ್ಕರಣಾ ಸಾಮರ್ಥ್ಯ ಸಿಕ್ಕರೆ ಅದೆಷ್ಟೋ ವೈಜ್ಞಾನಿಕ ಸಂಶೋಧನೆಗಳಿಗೆ, ದತ್ತಾಂಶ ಸಂಸ್ಕರಣೆಗೆ ಬಹಳ ಸಹಾಯವಾಗುತ್ತದೆ. ಹೀಗಿರುವಾಗ ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಸೂಪರ್‌ಕಂಪ್ಯೂಟರುಗಳನ್ನೇ ಏಕೆ ಉಪಯೋಗಿಸಬಾರದು?

ಈ ನಿಟ್ಟಿನಲ್ಲಿ ಆಲೋಚಿಸುವವರಿಗೆ ಎದುರಾಗುವ ಮೊದಲನೆಯ ಅಡಚಣೆ ಸೂಪರ್‌ಕಂಪ್ಯೂಟರುಗಳನ್ನು ನಿಭಾಯಿಸುವ ಖರ್ಚಿನದು. ಒಂದೇ ಕೇಂದ್ರದಲ್ಲಿರುವ ಸೂಪರ್‌ಕಂಪ್ಯೂಟರ್ ಅಂದರಂತೂ ಅದನ್ನು ಸ್ಥಾಪಿಸಲು ಹಾಗೂ ನಿರ್ವಹಿಸಲು ಸಾಕಷ್ಟು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಇದರ ಬದಲಿಗೆ ಸಾವಿರಾರು ಸಾಮಾನ್ಯ ಕಂಪ್ಯೂಟರುಗಳನ್ನು ಅಂತರಜಾಲದ ಮೂಲಕ ಒಗ್ಗೂಡಿಸಿ ಅವೆಲ್ಲವುಗಳ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟಾಗಿ ಬಳಸಿದರೆ? ಸಾಮಾನ್ಯ ಕಂಪ್ಯೂಟರುಗಳನ್ನೇ ಒಟ್ಟಾಗಿ ಸೂಪರ್‌ಕಂಪ್ಯೂಟರಿನಂತೆ ಬಳಸುವ ಈ ಕಲ್ಪನೆಯನ್ನು 'ಗ್ರಿಡ್ ಕಂಪ್ಯೂಟಿಂಗ್'ನ ಹೆಸರಿನಲ್ಲಿ ಅನೇಕ ಸಂಶೋಧನೆ-ಅಧ್ಯಯನಗಳಲ್ಲಿ ಬಳಸಲಾಗುತ್ತಿದೆ.

ಬ್ರಿಟನ್ನಿನ ಸೌತ್‌ಹಾಂಪ್ಟನ್ ವಿವಿಯ ಕೆಲ ತಜ್ಞರು 'ಕೈಗೆಟುಕುವ' ಸೂಪರ್‌ಕಂಪ್ಯೂಟರ್ ರೂಪಿಸುವ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ವಿಜ್ಞಾನದ ಬಗೆಗೆ ಆಸಕ್ತಿಮೂಡಿಸುವ ಉದ್ದೇಶದಿಂದ ಸೃಷ್ಟಿಯಾದ ಪುಟಾಣಿ ರಾಸ್ಬೆರಿ ಪೈ ಕಂಪ್ಯೂಟರುಗಳು ಹಾಗೂ ಮಕ್ಕಳಾಟಿಕೆಯ ಲೆಗೋ ಬಿಲ್ಡಿಂಬ್ ಬ್ಲಾಕುಗಳ ವಿಶಿಷ್ಟ ಜೋಡಿಯಿಂದ ಅವರೊಂದು ಸೂಪರ್‌ಕಂಪ್ಯೂಟರ್ ರೂಪಿಸಿ ತೋರಿಸಿದ್ದಾರೆ! ಸುಮಾರು ಎರಡು ಲಕ್ಷ ರೂಪಾಯಿಗಳ ಒಟ್ಟು ವೆಚ್ಚದಲ್ಲಿ ತಯಾರಾದ ಈ ಸೂಪರ್‌ಕಂಪ್ಯೂಟರನ್ನು ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಬಹುದೆನ್ನುವ ಅನಿಸಿಕೆ ಅವರದು.

ಸೆಪ್ಟೆಂಬರ್ ೨೫, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge