ಮಂಗಳವಾರ, ಸೆಪ್ಟೆಂಬರ್ 18, 2012

ಕೀಬೋರ್ಡ್ ಕತೆ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕಂಪ್ಯೂಟರಿಗೆ ನಾವು ನೀಡಬೇಕಾದ ಆದೇಶಗಳಿರಲಿ, ಮುದ್ರಣಕ್ಕೆ ಸಿದ್ಧಪಡಿಸಬೇಕಿರುವ ಕಡತವಿರಲಿ, ಎಲ್ಲವುದಕ್ಕೂ ಕೀಬೋರ್ಡ್ ಬೇಕು. ಕೀಬೋರ್ಡಿನ ಕೀಲಿಗಳನ್ನು ಒತ್ತಿದರೆ ಸಾಕು, ನಾವು ಹೇಳಬೇಕಿರುವುದು ಕಂಪ್ಯೂಟರಿಗೆ ತಿಳಿದುಬಿಡುತ್ತದೆ! ಎಂದು ಈಗಷ್ಟೆ ಕಂಪ್ಯೂಟರ್ ಬಳಕೆ ಕಲಿತವರೂ ಹೇಳಬಲ್ಲರು.

ಕೇಳಲು, ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಕೆಲಸಮಾಡುವ ವಿಧಾನ ಸಾಕಷ್ಟು ಸಂಕೀರ್ಣವಾದದ್ದೇ. ಹಾಗೆ ನೋಡಿದರೆ ಅದನ್ನೊಂದು ಸಣ್ಣ ಕಂಪ್ಯೂಟರ್ ಎಂದೇ ಕರೆಯಬಹುದು. ಬಳಕೆದಾರರು ಯಾವ ಕೀಲಿಯನ್ನು ಒತ್ತಿದ್ದಾರೆ ಎಂದು ಪತ್ತೆಮಾಡಿ ಸೂಕ್ತ ಸಂಕೇತದ ಮೂಲಕ ಆ ಮಾಹಿತಿಯನ್ನು ಕಂಪ್ಯೂಟರಿಗೆ ತಿಳಿಸಲು ಬೇಕಾದ ವ್ಯವಸ್ಥೆಯೆಲ್ಲ ಕೀಬೋರ್ಡಿನಲ್ಲಿರುತ್ತದೆ.


ಈ ವ್ಯವಸ್ಥೆಯ ಮುಖ್ಯ ಅಂಗವೇ ಕೀ ಮ್ಯಾಟ್ರಿಕ್ಸ್. ಕೀಬೋರ್ಡಿನ ಕೀಲಿಗಳಡಿಯಲ್ಲಿ ಅಡಗಿಕೊಂಡಿರುವ ಸರ್ಕ್ಯೂಟುಗಳ ಜಾಲ ಇದು. ಯಾವುದೇ ಕೀಲಿ ಒತ್ತಿದಾಗ ಈ ಸರ್ಕ್ಯೂಟು ಪೂರ್ಣವಾಗಿ ಅದರ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ ಪ್ರವಹಿಸುತ್ತದೆ. ಕಾಲಿಂಗ್ ಬೆಲ್ಲಿನ ಸ್ವಿಚ್ ಒತ್ತಿದಾಗ ವಿದ್ಯುತ್ ಪ್ರವಹಿಸಿ ಕರೆಗಂಟೆ ಕೇಳುತ್ತದಲ್ಲ, ಇದೂ ಹಾಗೆಯೇ. ಆದರೆ ಕರೆಗಂಟೆ ಕೇಳುವ ಬದಲು ಇಲ್ಲಿ ಯಾವ ಕೀಲಿಯನ್ನು ಒತ್ತುವ ಮೂಲಕ ಸರ್ಕ್ಯೂಟ್ ಪೂರ್ಣವಾಯಿತೆಂಬುದರ ಬಗೆಗೆ ಕಂಪ್ಯೂಟರಿಗೆ ಸಂಕೇತ ಹೋಗುತ್ತದೆ ಅಷ್ಟೆ.

ಕೀಬೋರ್ಡಿನಲ್ಲಿರುವ 'A' ಅಕ್ಷರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕೇವಲ ಅದೊಂದೇ ಕೀಲಿ ಒತ್ತಿದರೆ ಸಣ್ಣಕ್ಷರ, ಶಿಫ್ಟ್ ಕೀಲಿಯ ಜೊತೆಗೋ ಕ್ಯಾಪ್ಸ್‌ಲಾಕ್ ಚಾಲೂ ಇರುವಾಗಲೋ ಒತ್ತಿದರೆ ದೊಡ್ಡಕ್ಷರ ಮೂಡುವುದನ್ನು ನಾವು ನೋಡಿದ್ದೇವೆ. ಇನ್ನು ಕಂಟ್ರೋಲ್ ಅಥವಾ ಆಲ್ಟ್ ಕೀಲಿಯ ಜೊತೆಗೆ ಇದನ್ನು ಒತ್ತಿದರಂತೂ ಅದಕ್ಕೆ ನಾವು ಬಳಸುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ಬೇರೆಬೇರೆ ಅರ್ಥಗಳಿರುತ್ತವೆ. ಇನ್ನು ಬರಹ ಅಥವಾ ನುಡಿ ತಂತ್ರಾಂಶ ಚಾಲೂ ಇರುವಾಗ ಈ ಕೀಲಿ ಒತ್ತಿದರೆ ಕನ್ನಡದ 'ಅ' ಮೂಡುತ್ತದೆ!

ಹೀಗಿರುವಾಗ ಕೀಬೋರ್ಡಿನಿಂದ ಕಂಪ್ಯೂಟರಿಗೆ ಹೋಗುವ ಸಂಕೇತ ಏನಿರಬೇಕು ಎಂದು ತೀರ್ಮಾನಿಸುವುದು ಕಷ್ಟದ ಕೆಲಸವೇ. ಇದಕ್ಕಾಗಿಯೇ ಬಹುತೇಕ ಕೀಬೋರ್ಡುಗಳು ಇಂತಹ ಅಕ್ಷರವನ್ನು ಟೈಪಿಸಲಾಗಿದೆ ಎಂದು ಹೇಳುವ ಬದಲು ಈ ಸ್ಥಾನದಲ್ಲಿರುವ ಕೀಲಿ ಅಥವಾ ಕೀಲಿಗಳನ್ನು ಒತ್ತಲಾಗಿದೆ ಎಂದು ಸೂಚಿಸುವ ಸ್ಕ್ಯಾನ್‌ಕೋಡ್ ಅನ್ನು ಕಂಪ್ಯೂಟರಿಗೆ ಕಳುಹಿಸಿ ಸುಮ್ಮನಾಗುತ್ತವೆ. ಅಂದರೆ, 'A' ಕೀಲಿ ಒತ್ತಿದ್ದೀರಿ ಎಂದು ಹೇಳುವ ಬದಲು ಮೂರನೇ ಸಾಲಿನ ಎರಡನೇ ಕೀಲಿ ಒತ್ತಿದ್ದೀರಿ ಎಂದು ಹೇಳುವ ಸಂಕೇತ ಕಂಪ್ಯೂಟರಿಗೆ ತಲುಪುತ್ತದೆ.

ಈ ಸಂಕೇತವನ್ನು ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಕಂಪ್ಯೂಟರಿನ ಕೆಲಸ. ಪರದೆಯ ಮೇಲೆ ಪಠ್ಯ ಮೂಡಿಸಬೇಕೋ, ಒತ್ತಿದ ಕೀಲಿಯನ್ನು ಆದೇಶವನ್ನಾಗಿ ಸ್ವೀಕರಿಸಿ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಬೇಕೋ ಎನ್ನುವುದೆಲ್ಲ ಬಳಕೆಯಾಗುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ತೀರ್ಮಾನವಾಗುತ್ತದೆ. ನೋಟ್‌ಪ್ಯಾಡ್ ತಂತ್ರಾಂಶದ ಉದಾಹರಣೆಯನ್ನೇ ನೋಡಿ - 'S' ಕೀಲಿ ಒತ್ತಿದಾಗ ಕಡತದಲ್ಲಿ ಆ ಅಕ್ಷರ ಮೂಡುತ್ತದೆ; ಅದೇ ಕಂಟ್ರೋಲ್ ಕೀಲಿಯ ಜೊತೆಗೆ 'S' ಒತ್ತಿದರೆ ಕಡತ ಸೇವ್ ಆಗುತ್ತದೆ!

ಬರಿಯ ಇಂಗ್ಲಿಷ್ ಅಕ್ಷರಗಳ ಉದಾಹರಣೆಗಳನ್ನೇ ನೀಡಿದ ಮಾತ್ರಕ್ಕೆ ಇದೆಲ್ಲ ಇಂಗ್ಲಿಷಿಗೆ ಮಾತ್ರ ಸೀಮಿತ ಎಂದೇನೂ ಇಲ್ಲ. ಬರಹ-ನುಡಿಯಂತಹ ತಂತ್ರಾಂಶಗಳನ್ನು ಬಳಸಿ ಕನ್ನಡ ಅಕ್ಷರಗಳನ್ನೂ ಮೂಡಿಸುವುದು ನಮಗೆಲ್ಲ ಗೊತ್ತೇ ಇದೆಯಲ್ಲ!

ಕೀಬೋರ್ಡಿನಲ್ಲಿರುವುದು ಇಂಗ್ಲಿಷ್ ಅಕ್ಷರಗಳೇ ಆದರೂ ಅದರಲ್ಲಿ ಕನ್ನಡವನ್ನೂ ಟೈಪಿಸಬಹುದು, ಜರ್ಮನ್ ಭಾಷೆ ಬೇಕಿದ್ದರೂ ಟೈಪಿಸಬಹುದು. ನೋಟ್‌ಪ್ಯಾಡ್ ತೆರೆದು 'A' ಕೀಲಿ ಒತ್ತಿದಾಗ ಇಂಗ್ಲಿಷಿನ ಎ ಅಕ್ಷರ ಮೂಡಿದ ಹಾಗೆಯೇ ಬರಹ ತಂತ್ರಾಂಶದಲ್ಲಿ 'A' ಕೀಲಿ ಒತ್ತಿದಾಗ ಕನ್ನಡದ ಅ ಮೂಡುತ್ತದೆ. ಅಂದರೆ, ಕೀಬೋರ್ಡಿನಲ್ಲಿ ಯಾವ ಅಕ್ಷರ ಒತ್ತಿದಾಗ ಕಂಪ್ಯೂಟರಿನಲ್ಲಿ ಯಾವ ಭಾಷೆಯ ಯಾವ ಅಕ್ಷರ ಮೂಡಿಸಬೇಕು ಎಂದು ಕಂಪ್ಯೂಟರಿಗೆ ಹೇಳುವ ಕೆಲಸವನ್ನು ಇಂತಹ ತಂತ್ರಾಂಶಗಳು ಮಾಡುತ್ತವೆ. ಕೀಬೋರ್ಡಿನ ಕೀಲಿಗಳಿಗೂ ಪರದೆಯ ಮೇಲೆ ಮೂಡುವ ಅಕ್ಷರಗಳಿಗೂ ಹೊಂದಾಣಿಕೆ ಮಾಡಿಕೊಡುವ ವ್ಯವಸ್ಥೆಯನ್ನು ಕೀಬೋರ್ಡ್ ಲೇಔಟ್, ಅಂದರೆ ಕೀಲಿಮಣೆ ವಿನ್ಯಾಸವೆಂದು ಕರೆಯುತ್ತಾರೆ.

ಅಂದಹಾಗೆ ಕೀಬೋರ್ಡ್ ಅವಲಂಬನೆ ಡೆಸ್ಕ್‌ಟಾಪ್-ಲ್ಯಾಪ್‌ಟಾಪ್ ಕಂಪ್ಯೂಟರುಗಳಿಗಷ್ಟೇ ಸೀಮಿತವೇನಲ್ಲ. ಒಂದೇ ಫಲಕದೊಳಗೆ ಅಡಕವಾಗಿರುವ ಕಂಪ್ಯೂಟರುಗಳಾದ ಟ್ಯಾಬ್ಲೆಟ್ಟುಗಳಲ್ಲೂ ಕೀಬೋರ್ಡ್ ಬಳಕೆಯಾಗುತ್ತದೆ. ಯುಎಸ್‌ಬಿ ಮೂಲಕ ಜೋಡಿಸಲಾಗುವ ಕೀಬೋರ್ಡ್ ಯಂತ್ರಾಂಶವಷ್ಟೇ ಅಲ್ಲ, ಪರದೆಯ ಮೇಲೆ ಮೂಡಿಬರುವ ವರ್ಚುಯಲ್ ಕೀಬೋರ್ಡ್‌ಗಳೂ ಟ್ಯಾಬ್ಲೆಟ್ಟುಗಳಲ್ಲಿರುತ್ತವೆ. ಕೀಬೋರ್ಡ್ ಯಂತ್ರಾಂಶದಲ್ಲಿರುವ ಕೀಲಿಗಳನ್ನು ಕುಟ್ಟುವ ಬದಲು ಪರದೆಯ ಮೇಲೆ ಮೂಡಿಬರುವ ಕೀಲಿಗಳನ್ನು ಮುಟ್ಟುವ ಮೂಲಕ ನಮಗೆ ಬೇಕಾದ ಪಠ್ಯವನ್ನು ಕಂಪ್ಯೂಟರಿನಲ್ಲಿ ಟೈಪಿಸುವುದು ಸಾಧ್ಯ.
ವರ್ಚುಯಲ್ ಕೀಬೋರ್ಡಿನ ಬಳಕೆ ವಿಶ್ವವ್ಯಾಪಿ ಜಾಲದಲ್ಲೂ ಇದೆ. ಕಂಪ್ಯೂಟರಿನಲ್ಲಿ ಕೀಲಾಗರ್‌ನಂತಹ ಯಾವುದಾದರೂ ಕುತಂತ್ರಾಂಶವಿದ್ದರೆ ಅದು ನಾವು ಒತ್ತುವ ಕೀಲಿಗಳನ್ನು ಗಮನಿಸಿಕೊಂಡು ನಮ್ಮ ಬ್ಯಾಂಕ್ ಖಾತೆಯ ವಿವರ, ಪಾಸ್‌ವರ್ಡ್ ಮುಂತಾದ ಖಾಸಗಿ ಮಾಹಿತಿಯನ್ನು ಕದ್ದುಬಿಡಬಲ್ಲದು. ಇದನ್ನು ತಪ್ಪಿಸಲೆಂದೇ ಹಲವು ಬ್ಯಾಂಕುಗಳ ಜಾಲತಾಣದಲ್ಲಿ ಪಾಸ್‌ವರ್ಡ್ ದಾಖಲಿಸಲು ವರ್ಚುಯಲ್ ಕೀಬೋರ್ಡ್ ಬಳಸಬಹುದು. ಇಲ್ಲಿ ಕೀಬೋರ್ಡಿನ ಕೀಲಿ ಒತ್ತುವ ಬದಲಿಗೆ ಪರದೆಯ ಮೇಲೆ ಚಿತ್ರದಲ್ಲಿರುವ ಕೀಲಿಯನ್ನು ಕ್ಲಿಕ್ ಮಾಡಿದರೆ ಆಯಿತು; ನಾವು ಏನು ಮಾಹಿತಿ ದಾಖಲಿಸಿದ್ದೇವೆಂದು ಕುತಂತ್ರಾಂಶಗಳಿಗೆ ಸುಲಭಕ್ಕೆ ಗೊತ್ತಾಗುವುದೂ ಇಲ್ಲ.
ಸೆಪ್ಟೆಂಬರ್ ೧೮, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge