ಮಂಗಳವಾರ, ಆಗಸ್ಟ್ 7, 2012

ಒಲಿಂಪಿಕ್ಸ್‌ಗೆ ಟ್ವಿಟ್ಟರ್ ಕಾಟ!

ಟಿ. ಜಿ. ಶ್ರೀನಿಧಿ

ಕಳೆದ ವಾರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸೈಕ್ಲಿಂಗ್ ಸ್ಪರ್ಧೆ ಇತ್ತಲ್ಲ, ನಗರದ ಹೊರವಲಯದಲ್ಲೂ ಸಾಗಿದ ಈ ಸೈಕಲ್ ರೇಸ್ ವೀಕ್ಷಿಸಲು ಲಕ್ಷಾಂತರ ಜನ ರಸ್ತೆಯ ಇಕ್ಕೆಲಗಳಲ್ಲೂ ನೆರೆದದ್ದು ಟೀವಿ ಪ್ರಸಾರದಲ್ಲಿ ಕಂಡುಬಂತು. ದಾರಿಯುದ್ದಕ್ಕೂ ಎಲ್ಲರೂ ಫೋಟೋ ಕ್ಲಿಕ್ಕಿಸುವವರೇ ಇದ್ದಂತಿತ್ತು.

ರೇಸ್ ನೋಡಿ, ಫೋಟೋ ತೆಗೆದು ಸುಮ್ಮನಿದ್ದರೆ ಆದೀತೆ? ನಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಯಾವ ಫೋಟೋ ತೆಗೆದಿದ್ದೇವೆ, ತೆಗೆದ ಫೋಟೋ ಹೇಗಿದೆ ಎಂಬುದನ್ನೆಲ್ಲ ಅವರು ಫೇಸ್‌ಬುಕ್‌ನಲ್ಲಿ-ಟ್ವಿಟ್ಟರಿನಲ್ಲಿ ಪ್ರಕಟಿಸಲು ಪ್ರಾರಂಭಿಸಿದರು.

ಮೊದಲೇ ನಗರದ ಹೊರವಲಯ, ಅಲ್ಲಿನ ನೆಟ್‌ವರ್ಕ್ ಹೇಗಿತ್ತೋ ಏನೋ. ಇಷ್ಟೆಲ್ಲ ಮಾಹಿತಿಯ ಪ್ರವಾಹ ಒಂದೇ ಬಾರಿಗೆ ದೂರವಾಣಿ ಜಾಲದತ್ತ ನುಗ್ಗುತ್ತಿದ್ದಂತೆ ನೆಟ್‌ವರ್ಕ್ ಪೂರ್ತಿ ಸುಸ್ತುಹೊಡೆದುಬಿಟ್ಟಿತಂತೆ.

ಇದರ ಅನಿರೀಕ್ಷಿತ ಪರಿಣಾಮವಾದದ್ದು ಪಂದ್ಯದ ನೇರಪ್ರಸಾರದ ಮೇಲೆ. ಯಾವ ಸ್ಪರ್ಧಿಗಳು ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಪುಟಾಣಿ ಜಿಪಿಎಸ್ ಟ್ರಾನ್ಸ್‌ಮಿಟರುಗಳಿಂದ ಹೊರಟು ಮೊಬೈಲ್ ದೂರವಾಣಿ ಜಾಲದ ಮೂಲಕ ಒಲಿಂಪಿಕ್ಸ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್‌ಗೆ ತಲುಪಬೇಕಿತ್ತು. ಆದರೆ ಮಾಹಿತಿಯ ಈ ಸಣ್ಣ ಹರಿವು ಟ್ವಿಟ್ಟರ್-ಫೇಸ್‌ಬುಕ್‌ನತ್ತ ಹರಿಯುತ್ತಿದ್ದ ಮಹಾಪೂರದಲ್ಲಿ ಕೊಚ್ಚಿಹೋಗಿ ಟೀವಿ ಪ್ರಸಾರಕ್ಕೆ ಪಂದ್ಯದ ಅಂಕಿಅಂಶಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು.

ಸೋಶಿಯಲ್ ನೆಟ್‌ವರ್ಕ್‌ಗಳು ನಮ್ಮ ದೈನಂದಿನ ಬದುಕಿನ ಅಂಗವೇ ಆಗಿಹೋಗಿರುವ ಪರಿಗೆ ಇದೊಂದು ಸಣ್ಣ ಉದಾಹರಣೆಯಷ್ಟೆ.

ಸೋಶಿಯಲ್ ನೆಟ್‌ವರ್ಕ್
ಭೌಗೋಳಿಕವಾಗಿ ದೂರದೂರದಲ್ಲಿರುವವರ ನಡುವೆ ಸಂವಹನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ. ಅಂಚೆ ವ್ಯವಸ್ಥೆ, ದೂರವಾಣಿ ಇವೆಲ್ಲ ರೂಪಗೊಂಡಿದ್ದು ಹೀಗೆಯೇ ತಾನೆ!

ಸಂವಹನ ಮಾಧ್ಯಮಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಅಂತರಜಾಲದ ಅದ್ಭುತ ಸಾಧನೆಗಳಲ್ಲೊಂದು. ಇಮೇಲ್, ಚಾಟಿಂಗ್ ಮುಂತಾದ ಅನೇಕ ಮಾಧ್ಯಮಗಳ ಮೂಲಕ ವಿಶ್ವದ ಮೂಲೆಮೂಲೆಗಳಲ್ಲಿರುವವರ ನಡುವೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧ್ಯವಾಗಿಸಿದ್ದು ಅದು ನಮಗೆ ಕೊಟ್ಟ ಅತ್ಯಂತ ದೊಡ್ಡ ಕೊಡುಗೆ.

ಇದೇ ನಿಟ್ಟಿನಲ್ಲಿ ಅಂತರಜಾಲ ನಮಗೆ ನೀಡಿರುವ ಇನ್ನೊಂದು ದೊಡ್ಡ ಕೊಡುಗೆಯ ಹೆಸರೇ ಸೋಶಿಯಲ್ ನೆಟ್‌ವರ್ಕ್. ಈಚಿನ ವರ್ಷಗಳಲ್ಲಿ ಸಮಾಜ ಜಾಲಗಳ ಜನಪ್ರಿಯತೆ ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಅವರ ಅಜ್ಜ-ಅಜ್ಜಿಯರವರೆಗೆ ಎಲ್ಲ ವಯಸ್ಸಿನವರೂ ಸಮಾಜ ಜಾಲಗಳಲ್ಲಿ ಕಾಣಸಿಗುತ್ತಿದ್ದಾರೆ.

ಗೆಳೆಯರೊಂದಿಗೆ ಸದಾಕಾಲ ಸಂಪರ್ಕದಲ್ಲಿರಲು, ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು, ಪಠ್ಯ-ಧ್ವನಿ-ವೀಡಿಯೋ ರೂಪದಲ್ಲಿ ಚಾಟ್ ಮಾಡಲು ಈ ತಾಣಗಳು ನೆರವಾಗುತ್ತವೆ. ನಾವು ಪದೇ ಪದೇ ಕೇಳುವ ಹೆಸರುಗಳಾದ ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್, ಲಿಂಕ್ಡ್‌ಇನ್ ಇತ್ಯಾದಿಗಳೆಲ್ಲ ಸೋಶಿಯಲ್ ನೆಟ್‌ವರ್ಕುಗಳೇ.

ಫೇಸ್‌ಬುಕ್ ಫಸ್ಟ್
ಜನಪ್ರಿಯತೆಯ ದೃಷ್ಟಿಯಿಂದ ನೋಡಿದರೆ ಫೇಸ್‌ಬುಕ್ ತಾಣವನ್ನು ಸಮಾಜ ಜಾಲಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಸಬಹುದು. ೨೦೦೪ರಲ್ಲಿ ಪ್ರಾರಂಭವಾದ ಈ ತಾಣದಲ್ಲಿ ಇದೀಗ ಕೋಟ್ಯಂತರ ಬಳಕೆದಾರರಿದ್ದಾರೆ. ವೈಯಕ್ತಿಕ ಬಳಕೆದಾರರಷ್ಟೇ ಅಲ್ಲ, ವ್ಯಾಪಾರಿ ಸಂಸ್ಥೆಗಳೂ ಫೇಸ್‌ಬುಕ್ ಅನ್ನು ಜಾಹೀರಾತು ಮಾಧ್ಯಮವಾಗಿ ಬಳಸುತ್ತಿವೆ. ಫೇಸ್‌ಬುಕ್ ಅನ್ನು ಒಂದು ದೇಶ ಎಂದು ಭಾವಿಸುವುದಾದರೆ ಜನಸಂಖ್ಯೆಯ ದೃಷ್ಟಿಯಿಂದ ಅದು ವಿಶ್ವದ ಮೂರನೇ ಅತಿದೊಡ್ಡ ದೇಶವಾಗುತ್ತದಂತೆ!

ಫೇಸ್‌ಬುಕ್ ಸಂಸ್ಥೆ ತನ್ನ ತಾಣದ ಮೂಲಕ ಒದಗಿಸುವ ಸೌಲಭ್ಯಗಳಷ್ಟೇ ಅಲ್ಲದೆ ಇತರ ವ್ಯಕ್ತಿ-ಸಂಸ್ಥೆಗಳು ಕೂಡ ಆ ತಾಣವನ್ನು ಬಳಸಿಕೊಂಡು ತಮ್ಮಿಷ್ಟದ ಸೌಲಭ್ಯಗಳನ್ನು ಒದಗಿಸಬಹುದು. ಅಂತಹ ಸೌಲಭ್ಯಗಳನ್ನು ಅಪ್ಲಿಕೇಶನ್ಸ್ ಅಥವಾ 'ಆಪ್ಸ್' ಎಂದು ಕರೆಯುತ್ತಾರೆ. ಅನೇಕ ಬಗೆಯ ಆಟಗಳು, ಚಿತ್ರ-ಸಂಗೀತ-ಇಬುಕ್ ಇತ್ಯಾದಿಗಳನ್ನು ಹಂಚಿಕೊಳ್ಳಲು ಸಹಾಯಮಾಡುವ ತಂತ್ರಾಂಶಗಳು, ವ್ಯಾಪಾರ ಸಂಬಂಧಿತ ಸೇವೆಗಳು, ಕುತಂತ್ರಾಂಶಗಳನ್ನು ತಡೆಯಲು ಸಹಾಯಮಾಡುವ ಸುರಕ್ಷತಾ ತಂತ್ರಾಂಶಗಳು - ಹೀಗೆ ಅನೇಕ ಸೌಲಭ್ಯಗಳು ಫೇಸ್‌ಬುಕ್ ಆಪ್‌ಗಳ ರೂಪದಲ್ಲಿ ದೊರಕುತ್ತವೆ. ಸಾಮಾಜಿಕ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಕಾರ್ಯಕ್ರಮಗಳನ್ನು ಸಂಘಟಿಸುವವರಿಗೆ ನೆರವಾಗುವ ಆಪ್‌ಗಳೂ ಇವೆ.

ಬಗೆಬಗೆ ಜಾಲ
ವಿಶ್ವವ್ಯಾಪಿ ಜಾಲದಲ್ಲಿ ಬೇಕಾದಷ್ಟು ಸೋಶಿಯಲ್ ನೆಟ್‌ವರ್ಕುಗಳಿವೆ ಎಂದಮಾತ್ರಕ್ಕೆ ಅವೆಲ್ಲ ಒಂದೇ ರೀತಿಯವು ಎಂದೇನೂ ಇಲ್ಲ. ಡೇಟಿಂಗ್‌ನಿಂದ ಬಿಸಿನೆಸ್‌ವರೆಗೆ, ಶೈಕ್ಷಣಿಕ ಉಪಯೋಗಗಳಿಂದ ಟೈಮ್‌ಪಾಸ್‌ವರೆಗೆ ಸಮಾಜ ಜಾಲಗಳಲ್ಲೂ ಬೇಕಾದಷ್ಟು ವಿಧಗಳಿವೆ.

ಮೈಕ್ರೋಬ್ಲಾಗಿಂಗ್ ತಾಣಗಳದ್ದು ಇಂತಹುದೊಂದು ವಿಧ. ಸಾಂಪ್ರದಾಯಿಕ ರೂಪದ ಬ್ಲಾಗುಗಳಲ್ಲಿ ಕಂಡುಬರುವ ಉದ್ದುದ್ದನೆಯ ಪೋಸ್ಟುಗಳಂತಿರದ ಮೈಕ್ರೋಬ್ಲಾಗಿಂಗ್ ಸಂದೇಶಗಳು ಕೇವಲ ೧೪೦ ಪದಗಳಿಗಷ್ಟೆ ಸೀಮಿತವಾಗಿರುತ್ತವೆ. ಈ ಬಗೆಯ ಸೇವೆಗಳಿಗೆ ಜನಪ್ರಿಯ ಸಮಾಜಜಾಲವಾದ ಟಿಟ್ಟರ್ ಒಂದು ಉದಾಹರಣೆ.

ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟ ಸಮಾಜಜಾಲಗಳಿಗೆ ಲಿಂಕ್ಡ್‌ಇನ್ ಒಂದು ಉದಾಹರಣೆ. ತನ್ನ ಬಳಕೆದಾರರು ತಮ್ಮ ವೃತ್ತಿಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಲು ಈ ತಾಣ ಅನುವುಮಾಡಿಕೊಡುತ್ತದೆ. ತಾಣದ ಇತರ ಬಳಕೆದಾರರೊಡನೆ ವಿಚಾರವಿನಿಮಯ ಮಾಡಿಕೊಳ್ಳುವುದು ಹಾಗೂ ಹೊಸ ಉದ್ಯೋಗಾವಕಾಶಗಳಿಗಾಗಿ ಪ್ರಯತ್ನಿಸುವುದೂ ಸಾಧ್ಯ.

ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಬೇರೆಬೇರೆ ತಾಣಗಳಲ್ಲಿ ನೋಡಿ, ಓದಿ, ಮೆಚ್ಚಿದ ಮಾಹಿತಿಯನ್ನು ಇತರರೊಡನೆ ಹಂಚಿಕೊಳ್ಳಲು ಸಹಾಯಮಾಡುವ ಸೋಶಿಯಲ್ ನ್ಯೂಸ್ ತಾಣಗಳೂ ಇವೆ. ಸ್ಲಾಶ್‌ಡಾಟ್, ಡಿಗ್, ರೆಡಿಟ್ ಮೊದಲಾದವು ಇಂತಹ ತಾಣಗಳಿಗೆ ಕೆಲ ಉದಾಹರಣೆಗಳು.

ಸರ್ವಾಂತರ್ಯಾಮಿ
ಸಮಾಜ ಜಾಲಗಳ ವ್ಯಾಪ್ತಿ ಅದೆಷ್ಟು ವಿಶಾಲವಾಗಿ ಹರಡಿದೆಯೆಂದರೆ ಈಗ ಅಂತರಿಕ್ಷದಿಂದಲೂ ಟ್ವಿಟ್ಟರ್ ಸಂದೇಶ ಕಳುಹಿಸುವುದು ಸಾಧ್ಯ. ನಾಸಾದ ತಂತ್ರಜ್ಞರೊಬ್ಬರು ೨೦೧೦ರಷ್ಟು ಹಿಂದೆಯೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಟ್ವಿಟ್ಟರ್ ಸಂದೇಶ ಕಳುಹಿಸಿ ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭೂಮಿಯ ಮೇಲೂ ಅಷ್ಟೆ, ಅತ್ಯಂತ ಕಠಿಣ ಪರಿಸ್ಥಿತಿಯಿರುವ ಪ್ರದೇಶಗಳೂ ಸೋಶಿಯಲ್ ನೆಟ್‌ವರ್ಕ್ ವ್ಯಾಪ್ತಿಯಲ್ಲಿವೆ. ಈಚಿನ ವರ್ಷಗಳಲ್ಲಿ ವಿಶ್ವದ ವಿವಿಧೆಡೆ ನಡೆದ ಪ್ರತಿಭಟನೆ-ಕ್ರಾಂತಿಗಳಲ್ಲಿ ಸಮಾಜ ಜಾಲಗಳು ವಹಿಸಿದ ಪಾತ್ರ ನಮಗೆ ಗೊತ್ತೇ ಇದೆಯಲ್ಲ!

ಇನ್ನು ಮನುಷ್ಯ ದರ್ಶನವೇ ಅಪರೂಪವಾದ ಅಂಟಾರ್ಕ್‌ಟಿಕಾದಂತಹ ಹಿಮದ ಸಾಮ್ರಾಜ್ಯದಲ್ಲೂ ಸಮಾಜ ಜಾಲಗಳು ತಮ್ಮ ಪ್ರಭಾವ ಬೀರಿವೆ. ವಿಜ್ಞಾನಿಗಳು ತಮ್ಮ ಆಪ್ತರಿಂದ ದೂರವಾಗಿ ಅಲ್ಲಿನ ಕಠಿಣ ಪರಿಸ್ಥಿತಿಯಲ್ಲಿ ಸುದೀರ್ಘ ಅವಧಿಗಳವರೆಗೆ ನೆಲೆಸುತ್ತಾರಲ್ಲ, ವರ್ಚುಯಲ್ ರೂಪದಲ್ಲಾದರೂ ಸಮಾಜದೊಡನೆ ಸಂಪರ್ಕದಲ್ಲಿರಲು ಫೇಸ್‌ಬುಕ್-ಟ್ವಿಟ್ಟರುಗಳು ಅವರಿಗೆ ಸಹಾಯಮಾಡುತ್ತವಂತೆ.

ಆಗಸ್ಟ್ ೭, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge