ಮಂಗಳವಾರ, ಆಗಸ್ಟ್ 14, 2012

ನೆಟ್ ಬ್ಯಾಂಕಿಂಗ್ ನೋಟ

ಟಿ. ಜಿ. ಶ್ರೀನಿಧಿ

ಕಳೆದ ವಾರ ಕಂಪ್ಯೂಟರ್ ಸುರಕ್ಷತಾ ಸಂಸ್ಥೆ ಕಾಸ್ಪರ್‌ಸ್ಕೀ ಲ್ಯಾಬ್ಸ್ ಕಡೆಯಿಂದ ಒಂದು ಸುದ್ದಿ ಬಂತು; 'ಗಾಸ್' ಎಂಬ ಹೊಸ ಕುತಂತ್ರಾಂಶ ಪತ್ತೆಯಾಗಿದೆ ಎನ್ನುವುದು ಈ ಸುದ್ದಿಯ ಸಾರಾಂಶ. ಈ ಹಿಂದೆ ಪತ್ತೆಯಾಗಿದ್ದ, ಸೈಬರ್ ಯುದ್ಧದ ಅಸ್ತ್ರ ಎಂದು ಪರಿಗಣಿಸಲಾಗಿದ್ದ 'ಫ್ಲೇಮ್'ನಂತೆಯೇ ಈ ಹೊಸ ಕುತಂತ್ರಾಂಶವೂ ಯಾವುದೋ ಸರಕಾರದ ಬೆಂಬಲದಿಂದಲೇ ರೂಪುಗೊಂಡಿರಬೇಕು ಎಂಬ ಸಂಶಯವನ್ನು ಕಾಸ್ಪರ್‌ಸ್ಕೀ ಸಂಸ್ಥೆಯ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಸ್ಟಕ್ಸ್‌ನೆಟ್ ಹೋಗಿ ಫ್ಲೇಮ್ ಬಂತು ಎನ್ನುವಷ್ಟರಲ್ಲಿ ಇದೇನಪ್ಪ ಇದು ಇನ್ನೊಂದು ತಾಪತ್ರಯ ವಕ್ಕರಿಸಿಕೊಂಡಿತಲ್ಲ ಎಂದುಕೊಳ್ಳುತ್ತಿರುವಂತೆಯೇ ಈ ಹೊಸ ಕುತಂತ್ರಾಂಶದ ಒಂದು ಅಂಶ ಗಮನಸೆಳೆಯಿತು: ಆನ್‌ಲೈನ್ ಬ್ಯಾಂಕಿಂಗ್ ಖಾತೆಯ ವಿವರಗಳನ್ನು ಕದಿಯುವುದು ಇದರ ವೈಶಿಷ್ಟ್ಯಗಳಲ್ಲೊಂದಂತೆ!

ನನಗಿನ್ನೂ ನೆನಪಿದೆ. ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ ಬ್ಯಾಂಕ್ ವ್ಯವಹಾರ ಎಂದರೆ ಅದಕ್ಕೆಂದೇ ಒಂದಷ್ಟು ಪುರುಸೊತ್ತು ಮಾಡಿಕೊಂಡು ಬ್ಯಾಂಕಿಗೆ ಹೋಗಿ ಸರತಿಯಲ್ಲಿ ನಿಂತು ನಮ್ಮ ಕೆಲಸ ಮುಗಿಸಿಕೊಂಡು ಬರಬೇಕಾದ ದೊಡ್ಡ ಪ್ರೋಗ್ರಾಮೇ ಆಗಿತ್ತು. ಆದರೆ ಈಗ, ಕೇವಲ ಒಂದು ದಶಕದ ಅವಧಿಯಲ್ಲಿ, ಬ್ಯಾಂಕಿಂಗ್ ವ್ಯವಹಾರ ಸೈಬರ್ ಯುದ್ಧದ ಒಂದು ಮುಖವಾಗಿ ಬೆಳೆಯುವಷ್ಟು ಬದಲಾಗಿಬಿಟ್ಟಿದೆಯಲ್ಲ!

ನಮ್ಮ ಬ್ಯಾಂಕಿನ ವ್ಯವಹಾರಗಳಿಗಿದ್ದ ಸಮಯ-ಸ್ಥಳದ ನಿರ್ಬಂಧಗಳನ್ನೆಲ್ಲ ಕಿತ್ತೊಗೆದದ್ದು ಆನ್‌ಲೈನ್ ಬ್ಯಾಂಕಿಂಗ್ ಎಂಬ ಕ್ರಾಂತಿಕಾರಿ ಪರಿಕಲ್ಪನೆ.

ಆನ್‌ಲೈನ್ ಬ್ಯಾಂಕಿಂಗ್
ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸುವುದು, ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಕೊಂಡ ವಸ್ತುವಿಗಾಗಿ ಹಣ ಪಾವತಿಸುವುದು, ಹೊಸ ಚೆಕ್ ಪುಸ್ತಕಕ್ಕಾಗಿ ಕೋರಿಕೆ ಸಲ್ಲಿಸುವುದು, ಆರ್‌ಡಿ-ಎಫ್‌ಡಿ ಮಾಡುವುದು, ದೂರವಾಣಿ ಬಿಲ್ಲು ಜೀವವಿಮೆ ಕಂತು ಕಟ್ಟುವುದು ಇತ್ಯಾದಿಗಳನ್ನೆಲ್ಲ ನಮ್ಮ ಕಂಪ್ಯೂಟರಿನ ಮುಂದೆ ಕುಳಿತೇ ಮಾಡುವ ಸೌಲಭ್ಯವನ್ನು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ನಮಗೆ ಒದಗಿಸಿಕೊಟ್ಟಿದೆ. ಹಗಲು-ರಾತ್ರಿಗಳ ಗೊಡವೆಯಿಲ್ಲದೆ, ರಜಾದಿನಗಳ ಪರಿವೆಯಿಲ್ಲದೆ ವರ್ಷದ ಮುನ್ನೂರ ಅರವತ್ತೈದು ದಿನಗಳೂ ನಮಗೆ ಬೇಕಾದ ಬ್ಯಾಂಕಿಂಗ್ ಸೇವೆ ಪಡೆಯುವುದು ಇದರಿಂದಾಗಿ ಸಾಧ್ಯವಾಗಿದೆ. ಹಗಲು ರಾತ್ರಿಯೆನ್ನದೆ ನಮ್ಮ ಹಣವನ್ನು ನಮಗೆ ಬೇಕಾದಾಗ ಒದಗಿಸುವ ಎಟಿಎಂಗಳೂ ಈ ವ್ಯವಸ್ಥೆಯ ಜೊತೆಗೆ ಸೇರಿ ಬ್ಯಾಂಕಿಂಗ್‌ನ ಸಮಯ ನಿರ್ದಿಷ್ಟತೆಯನ್ನೇ ಬದಲಿಸಿಬಿಟ್ಟಿವೆ ಎಂದರೂ ತಪ್ಪಾಗಲಾರದು.

೧೯೮೦ರ ದಶಕದ ಪ್ರಾರಂಭದಿಂದಲೇ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಕುರಿತ ಆಲೋಚನೆಗಳು ಕೇಳಿಬರುತ್ತಿದ್ದವಾದರೂ ಮೊದಲ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಶುರುವಾಗಲು ೧೯೯೫ರವರೆಗೆ ಕಾಯಬೇಕಾಯಿತು. ಆ ವರ್ಷದ ಅಕ್ಟೋಬರಿನಲ್ಲಿ ಅಮೆರಿಕಾದ ಪ್ರೆಸಿಡೆನ್ಷಿಯಲ್ ಸೇವಿಂಗ್ಸ್ ಬ್ಯಾಂಕು ವಿಶ್ವದ ಮೊತ್ತಮೊದಲ ಆನ್‌ಲೈನ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿತು.

ನಮ್ಮೂರ ಬ್ಯಾಂಕುಗಳಲ್ಲಿ
ನಮ್ಮ ದೇಶದ ಬ್ಯಾಂಕುಗಳಲ್ಲೂ ಕಂಪ್ಯೂಟರೀಕರಣದ ಪ್ರಕ್ರಿಯೆ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿಹಾಡಿತು. ಕಂಪ್ಯೂಟರ್ ಜಾಲಗಳ ನೆರವಿನಿಂದ ಪ್ರತಿಯೊಂದು ಬ್ಯಾಂಕಿನ ಎಲ್ಲ ಶಾಖೆಗಳನ್ನೂ ಸಂಪರ್ಕಿಸಿದ ಕೋರ್ ಬ್ಯಾಂಕಿಂಗ್ ಪರಿಕಲ್ಪನೆ ಈ ಬದಲಾವಣೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಇದರಿಂದಾಗಿ ಯಾವುದೇ ಬ್ಯಾಂಕಿನ ಯಾವುದೇ ಶಾಖೆಯ ಗ್ರಾಹಕ ತನ್ನ ಖಾತೆಯನ್ನು ಆ ಬ್ಯಾಂಕಿನ ಇನ್ನಾವುದೇ ಶಾಖೆಯಿಂದ ನಿರ್ವಹಿಸುವುದು ಸಾಧ್ಯವಾಯಿತು.

ಇದರ ಜೊತೆಗೆ ಬಹುತೇಕ ಎಲ್ಲ ಬ್ಯಾಂಕುಗಳೂ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಪರಿಚಯಿಸಿದವು. ಬರಿಯ ಕಂಪ್ಯೂಟರಿನಿಂದಷ್ಟೇ ಏಕೆ, ಮೊಬೈಲ್ ಮೂಲಕವೂ ಬ್ಯಾಂಕಿಂಗ್ ವ್ಯವಹಾರ ಸಾಧ್ಯವಾಗಿ ಬ್ಯಾಂಕು ನಮ್ಮ ಅಂಗೈಗೇ ಬಂತು; ಆನ್‌ಲೈನ್ ಅಂಗಡಿಯಲ್ಲಿ ಕೊಂಡ ಪುಸ್ತಕಕ್ಕೆ ದುಡ್ಡು ಪಾವತಿಸುವುದರಿಂದ ಹಿಡಿದು ಮೊಬೈಲ್ ರೀಚಾರ್ಜ್ ಮಾಡಿಸುವವರೆಗೆ ಪ್ರತಿಯೊಂದು ಕೆಲಸವೂ ಸುಲಭವಾಯಿತು!

ಈಚಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ಹಾಗೂ ರಿಯಲ್ ಟೈಮ್ ಗ್ರಾಸ್ ಸೆಟ್ಲ್‌ಮೆಂಟ್ (ಆರ್‌ಟಿಜಿಎಸ್) ವ್ಯವಸ್ಥೆಗಳು ಕೂಡ ಕಂಪ್ಯೂಟರೀಕರಣದ ಕೊಡುಗೆಗಳೇ. ದೇಶದ ಯಾವುದೇ ಮೂಲೆಯಿಂದ ಮತ್ತೊಂದು ಕಡೆಗೆ ಬಹಳ ಕ್ಷಿಪ್ರಗತಿಯಲ್ಲಿ, ಯಾವುದೇ ಪತ್ರವ್ಯವಹಾರದ ಅಗತ್ಯವಿಲ್ಲದೆ, ಹಣ ವರ್ಗಾಯಿಸಲು ಈ ವ್ಯವಸ್ಥೆಗಳು ನೆರವಾಗುತ್ತವೆ.

ಇವುಗಳ ಪೈಕಿ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ ಅಥವಾ ಎನ್‌ಇಎಫ್‌ಟಿ ಎನ್ನುವುದು ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ವರ್ಗಾವಣೆಗೆ ಸೂಕ್ತವಾದ ವಿಧಾನ. ಇದರ ಅನ್ವಯ ನಿರ್ದಿಷ್ಟ ಅವಧಿಯಲ್ಲಿ ಸ್ವೀಕರಿಸಲಾದ ಹಣ ವರ್ಗಾವಣೆ ಮನವಿಗಳನ್ನು ಗುಂಪುಗಳಲ್ಲಿ ಪೂರೈಸಲಾಗುತ್ತದೆ. ಹಾಗಾಗಿ ಹಣ ವರ್ಗಾವಣೆಯಾಗಲು ಒಂದು ದಿನದವರೆಗಿನ ಅವಧಿ ಬೇಕಾಗುತ್ತದೆ.

ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲು ರಿಯಲ್ ಟೈಮ್ ಗ್ರಾಸ್ ಸೆಟ್ಲ್‌ಮೆಂಟ್ ಅಥವಾ ಆರ್‌ಟಿಜಿಎಸ್ ಸೂಕ್ತವಾದ ವಿಧಾನ. ಈ ವ್ಯವಸ್ಥೆ ಕಾರ್ಯನಿರ್ವಹಿಸುವ ಅವಧಿಯಲ್ಲಿ ಬಂದ ಮನವಿಗಳನ್ನು ಆಗಿಂದಾಗ್ಗೆಯೇ ಪೂರೈಸಲಾಗುವುದರಿಂದ ಹಣದ ವರ್ಗಾವಣೆ ಎನ್‌ಇಎಫ್‌ಟಿಗಿಂತ ಬೇಗ ಆಗುತ್ತದೆ.

ಬಿಲ್ ಪಾವತಿ
ಬಹುತೇಕ ಆನ್‌ಲೈನ್ ಬ್ಯಾಂಕಿಂಗ್ ತಾಣಗಳ ಮೂಲಕ ನಮ್ಮ ಬಿಲ್ಲುಗಳನ್ನು ಸುಲಭವಾಗಿ ಪಾವತಿಸಬಹುದು. ದೂರವಾಣಿ, ಜೀವವಿಮೆ, ನೀರು, ವಿದ್ಯುತ್ - ಹೀಗೆ ನಮ್ಮ ಸಂಪರ್ಕದ ವಿವರಗಳನ್ನು ಅಲ್ಲಿ ದಾಖಲಿಸಿ ನೋಂದಾಯಿಸಿಕೊಂಡರೆ ಕೆಲವೇ ಸಮಯದ ನಂತರ ನಮ್ಮ ಬಿಲ್ ವಿವರಗಳು ಆ ತಾಣದಲ್ಲೇ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಅಷ್ಟೇ ಅಲ್ಲ, ಹೊಸ ಬಿಲ್ ಬಂದ ಬಗ್ಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಬರುವಂತೆಯೂ ಮಾಡಿಕೊಳ್ಳಬಹುದು. ಹೀಗೆ ಬಿಲ್ ಬಂದಾಗ ನಿಗದಿತ ಅವಧಿಯೊಳಗೆ ನಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಆನ್‌ಲೈನ್ ಬ್ಯಾಂಕ್ ಖಾತೆಯನ್ನು ಬಳಸಿ ಅದನ್ನು ಸುಲಭವಾಗಿ ಪಾವತಿಸಬಹುದು. ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗಲೂ ಇದೇ ವ್ಯವಸ್ಥೆ ಬಳಸಿ ನಮ್ಮ ಖಾತೆಯಿಂದ ಹಣ ಪಾವತಿಸಬಹುದು!

ಬಹಳಷ್ಟು ಸಂಸ್ಥೆಗಳು ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವುದಿಲ್ಲ ಎನ್ನುವುದು ವಿಶೇಷ. ಅಷ್ಟೇ ಏಕೆ, ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು (ಹಾಗೂ ಕೆಲ ಬ್ಯಾಂಕುಗಳು) ತಮ್ಮ ಸೇವೆ ಬಳಸಿ ಬಿಲ್ ಪಾವತಿಸುವವರಿಗೆ ಆಗಿಂದಾಗ್ಗೆ ವಿಶೇಷ ಆಫರ್‌ಗಳನ್ನು ನೀಡುವುದೂ ಉಂಟು.

ಸುರಕ್ಷತೆಯ ಬಗ್ಗೆ ಎಚ್ಚರವಿರಲಿ
ಶಾಪಿಂಗ್ ಇರಲಿ, ಬ್ಯಾಂಕಿನ ವ್ಯವಹಾರವೇ ಇರಲಿ, ವಿಶ್ವವ್ಯಾಪಿ ಜಾಲದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆಸುವಾಗ ನಿಮ್ಮ ಖಾಸಗಿ ಮಾಹಿತಿಯ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ.

ನಿಮ್ಮ ಕ್ರೆಡಿಟ್-ಡೆಬಿಟ್ ಕಾರ್ಡುಗಳು, ಆನ್‌ಲೈನ್ ಬ್ಯಾಂಕಿಂಗ್ ಅಥವಾ ಟ್ರೇಡಿಂಗ್ ಖಾತೆಯ ವಿವರಗಳು ಹಾಗೂ ಅವೆಲ್ಲದರ ಪಾಸ್‌ವರ್ಡ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳದಿದ್ದರೆ ಅವನ್ನು ಬಲ್ಲ ಯಾವುದೇ ವ್ಯಕ್ತಿ ನಿಮ್ಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ಈ ವಿವರಗಳನ್ನು ಬೇರೆಯವರಿಗೆ (ಬ್ಯಾಂಕ್ ಸಿಬ್ಬಂದಿಯೂ ಸೇರಿದಂತೆ) ಕೊಡದಿರುವುದು ಒಳ್ಳೆಯದು. ಈ ವಿವರಗಳನ್ನೆಲ್ಲ ಕೇಳುವ, ಅಥವಾ ಯಾವುದೋ ಲಿಂಕ್ ಮೇಲೆ ಕ್ಲಿಕ್ಕಿಸಿ ನಿಮ್ಮ ಬ್ಯಾಂಕ್ ವಿವರಗಳನ್ನೆಲ್ಲ ತುಂಬಿ ಎನ್ನುವಂತಹ ಯಾವ ಇಮೇಲ್ ಬಂದರೂ ಅದನ್ನು ಮುಲಾಜಿಲ್ಲದೆ ಅಳಿಸಿಹಾಕುವುದು ಉತ್ತಮ.

ಅಪರಿಚಿತ ಕಂಪ್ಯೂಟರುಗಳಲ್ಲಿ (ಉದಾ: ಸೈಬರ್ ಕೆಫೆ) ಹಣಕಾಸಿನ ವ್ಯವಹಾರ ಬೇಡವೇ ಬೇಡ. ಹಣಕಾಸು ವ್ಯವಹಾರ ಮಾಡುವ ತಾಣ ಸೆಕ್ಯೂರ್ಡ್ ಆಗಿದೆಯೋ ಇಲ್ಲವೋ ಎಂದು ಪರಿಶೀಲಿಸುವುದೂ ಒಳ್ಳೆಯದು. ನಿಮ್ಮ ಖಾತೆಯ ವಿವರಗಳನ್ನು ದಾಖಲಿಸಬೇಕಾದ ವೆಬ್‌ಪುಟದ ವಿಳಾಸ 'https://'ನಿಂದ ಶುರುವಾಗದಿದ್ದರೆ ಆ ವ್ಯವಹಾರ ಸುರಕ್ಷಿತವಾಗಿಲ್ಲದಿರಬಹುದು!

ಆಗಸ್ಟ್ ೧೪, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge