ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಮಂಗಳವಾರ, ಆಗಸ್ಟ್ 28, 2012

ಫಾಂಟ್ ಫಂಡಾ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಮುಂದೆ ಕುಳಿತಿದ್ದಷ್ಟೂ ಹೊತ್ತು ನಮ್ಮ ಸುತ್ತ ಮಾಹಿತಿಯ ಮಹಾಸಾಗರವೇ ಹರಡಿಕೊಂಡಿರುತ್ತದೆ, ಮತ್ತು ಅದರಲ್ಲಿ ಬಹುಪಾಲು ಪಠ್ಯರೂಪದಲ್ಲೇ ಇರುತ್ತದೆ. ಕಂಪ್ಯೂಟರ್ ಬಿಟ್ಟು ಎದ್ದಮೇಲೂ ಅಷ್ಟೆ: ಮೇಜಿನ ಮೇಲಿನ ಪತ್ರಿಕೆ, ಪಕ್ಕದ ರಸ್ತೆಯ ಲೈಬ್ರರಿಯಿಂದ ತಂದಿರುವ ಪುಸ್ತಕ, ಬೆಳಿಗ್ಗೆ ಪೇಪರಿನ ಜೊತೆ ಬಂದ ಪಾಂಪ್ಲೆಟ್ಟು, ಪೋಸ್ಟಿನಲ್ಲಿ ಬಂದಿರುವ ಟೆಲಿಫೋನ್ ಬಿಲ್ಲು - ಹೀಗೆ ಅಲ್ಲೂ ಭಾರೀ ಪ್ರಮಾಣದ ಮಾಹಿತಿ ಕಂಪ್ಯೂಟರಿನ ಸಹಾಯದಿಂದಲೇ ಮುದ್ರಿತವಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ.

ಇಷ್ಟೆಲ್ಲ ಮಾಹಿತಿಯನ್ನು ನಮಗೆ ತಲುಪಿಸುವ ಮಹತ್ವದ ಜವಾಬ್ದಾರಿ ಅಕ್ಷರಗಳದು. ಈ ಅಕ್ಷರಗಳ ಅನನ್ಯಲೋಕ ಕಂಪ್ಯೂಟರ್‌ನಲ್ಲಿ ತೆರೆದುಕೊಳ್ಳುವ ಬಗೆಯತ್ತ ಒಂದು ನೋಟ ಇಲ್ಲಿದೆ.

ಮಂಗಳವಾರ, ಆಗಸ್ಟ್ 21, 2012

ಪಿಕ್ಚರ್ ವಿಷಯ!

ಟಿ. ಜಿ. ಶ್ರೀನಿಧಿ

ಒಂದು ಚಿತ್ರ ಸಾವಿರ ಪದಗಳಿಗೆ ಸಮವಂತೆ. ಸುದೀರ್ಘ ವಿವರಣೆ ಸೇರಿಸಿ ಪೇಜುಗಟ್ಟಲೆ ಬರೆದರೂ ಪರಿಣಾಮಕಾರಿಯಾಗಿ ಹೇಳಲಾಗದ್ದನ್ನು ಒಂದೇ ಒಂದು ಚಿತ್ರ ಹೇಳಬಲ್ಲದು ಎನ್ನುವುದು ಈ ಮಾತಿನ ಅಭಿಪ್ರಾಯ; ಅದು ಅಕ್ಷರಶಃ ನಿಜವೂ ಹೌದು.

ಸಾವಿರ ಪದಗಳಿಗೆ ಪರ್ಯಾಯವಾದ ಇಂತಹ ಅದೆಷ್ಟೋ ಚಿತ್ರಗಳು ಕಂಪ್ಯೂಟರಿನೊಳಗೆ ಕಡತಗಳಾಗಿ ಕುಳಿತಿರುತ್ತವಲ್ಲ, ಅಂತಹುದೊಂದು ಕಡತದ ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ನೋಡಿಯೇ ಆ ಚಿತ್ರದ ಬಗೆಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳಬಹುದು. ಚಿತ್ರದ ಹೆಸರಿನ ಬಗೆಗೆ ಅದರ ಬಾಲಂಗೋಚಿ ತೆರೆದಿಡುವ ಈ ವಿವರಗಳನ್ನು ಸಾವಿರ ಪದಗಳೊಳಗೇ ವಿವರಿಸುವ ಪ್ರಯತ್ನ ಈ ಲೇಖನದಲ್ಲಿದೆ.

ಸೋಮವಾರ, ಆಗಸ್ಟ್ 20, 2012

ಪಶ್ಚಿಮ ಘಟ್ಟ - ನಮಗೆಷ್ಟು ಗೊತ್ತು?

'ಪಶ್ಚಿಮ ಘಟ್ಟ - ನಮಗೆಷ್ಟು ಗೊತ್ತು?' ವಿಷಯದ ಕುರಿತು ಭಾಷಣ-ಪ್ರಶ್ನೋತ್ತರ ಕಾರ್ಯಕ್ರಮ ಇಂದು (ಆಗಸ್ಟ್ ೨೦) ಸಂಜೆ ೪ ಗಂಟೆಗೆ ಬೆಂಗಳೂರಿನ ಆರ್ ವಿ ರಸ್ತೆಯಲ್ಲಿರುವ ಆರ್ ವಿ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಅದಮ್ಯ ಚೇತನ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ ಶ್ರೀ ಪ್ರವೀಣ್ ಭಾರ್ಗವ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಆಮಂತ್ರಣ ಪತ್ರವನ್ನು ದೊಡ್ಡ ಗಾತ್ರದಲ್ಲಿ ನೋಡಲು ಪಕ್ಕದಲ್ಲಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಮಂಗಳವಾರ, ಆಗಸ್ಟ್ 14, 2012

ನೆಟ್ ಬ್ಯಾಂಕಿಂಗ್ ನೋಟ

ಟಿ. ಜಿ. ಶ್ರೀನಿಧಿ

ಕಳೆದ ವಾರ ಕಂಪ್ಯೂಟರ್ ಸುರಕ್ಷತಾ ಸಂಸ್ಥೆ ಕಾಸ್ಪರ್‌ಸ್ಕೀ ಲ್ಯಾಬ್ಸ್ ಕಡೆಯಿಂದ ಒಂದು ಸುದ್ದಿ ಬಂತು; 'ಗಾಸ್' ಎಂಬ ಹೊಸ ಕುತಂತ್ರಾಂಶ ಪತ್ತೆಯಾಗಿದೆ ಎನ್ನುವುದು ಈ ಸುದ್ದಿಯ ಸಾರಾಂಶ. ಈ ಹಿಂದೆ ಪತ್ತೆಯಾಗಿದ್ದ, ಸೈಬರ್ ಯುದ್ಧದ ಅಸ್ತ್ರ ಎಂದು ಪರಿಗಣಿಸಲಾಗಿದ್ದ 'ಫ್ಲೇಮ್'ನಂತೆಯೇ ಈ ಹೊಸ ಕುತಂತ್ರಾಂಶವೂ ಯಾವುದೋ ಸರಕಾರದ ಬೆಂಬಲದಿಂದಲೇ ರೂಪುಗೊಂಡಿರಬೇಕು ಎಂಬ ಸಂಶಯವನ್ನು ಕಾಸ್ಪರ್‌ಸ್ಕೀ ಸಂಸ್ಥೆಯ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಸ್ಟಕ್ಸ್‌ನೆಟ್ ಹೋಗಿ ಫ್ಲೇಮ್ ಬಂತು ಎನ್ನುವಷ್ಟರಲ್ಲಿ ಇದೇನಪ್ಪ ಇದು ಇನ್ನೊಂದು ತಾಪತ್ರಯ ವಕ್ಕರಿಸಿಕೊಂಡಿತಲ್ಲ ಎಂದುಕೊಳ್ಳುತ್ತಿರುವಂತೆಯೇ ಈ ಹೊಸ ಕುತಂತ್ರಾಂಶದ ಒಂದು ಅಂಶ ಗಮನಸೆಳೆಯಿತು: ಆನ್‌ಲೈನ್ ಬ್ಯಾಂಕಿಂಗ್ ಖಾತೆಯ ವಿವರಗಳನ್ನು ಕದಿಯುವುದು ಇದರ ವೈಶಿಷ್ಟ್ಯಗಳಲ್ಲೊಂದಂತೆ!

ಶುಕ್ರವಾರ, ಆಗಸ್ಟ್ 10, 2012

ಜೈವಿಕ ಇಂಧನ ಕ್ರಾಂತಿ: ಮಲ್ಲಿಗೆವಾಳು ಮೊದಲುಗೊಂಡು..

ಇವತ್ತು (ಆಗಸ್ಟ್ ೧೦) ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನ. ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 'ಜೈವಿಕ ಇಂಧನ ಮೇಳ' ನಡೆಯುತ್ತಿದೆ. ಈ ಸಂದರ್ಭದಲ್ಲೊಂದು ವಿಶೇಷ ಲೇಖನ ಪ್ರಕಟಿಸಲು ಇಜ್ಞಾನ ಡಾಟ್ ಕಾಮ್ ಸಂತೋಷಿಸುತ್ತದೆ. ಜೈವಿಕ ಇಂಧನ ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿಕೊಡಬಹುದು.

ಟಿ. ಎಸ್. ಗೋಪಾಲ್

ಹಾಸನದಿಂದ ಸಕಲೇಶಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ಆರೇಳು ಕಿ.ಮೀ. ದೂರ ಹೋದರೆ ಅಲ್ಲೇ ಎಡಕ್ಕೆ ಶೆಟ್ಟಿಹಳ್ಳಿಗೆ ಹೋಗುವ ರಸ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಶಂಕರನಹಳ್ಳಿ ದಾಟಿದರೆ, ಬಲಕ್ಕೆ ಮಲ್ಲಿಗೆವಾಳು ಗ್ರಾಮಕ್ಕೆ ಎರಡೇ ಕಿಲೋಮೀಟರು ಎಂಬ ಬೋರ್ಡು ಕಾಣಸಿಗುತ್ತದೆ. ಹಾಸನದಿಂದ ಹನ್ನೆರಡು ಕಿ.ಮೀ. ದೂರದ ಈ ಹಳ್ಳಿಯಲ್ಲಿ ಹೆಚ್ಚೆಂದರೆ ಒಂದು ನೂರು ಕುಟುಂಬಗಳಿವೆ.

ಶಾಲೆಯ ಮುಂದಿನ ಮಣ್ಣುರಸ್ತೆಯಲ್ಲಿ ನಮ್ಮ ವಾಹನ ನಿಲ್ಲುವಾಗ, ಹೊರಗೆ ಆಡುತ್ತಿದ್ದ ಮಕ್ಕಳು, ಆಗಾಗ ಬರುವ ಪ್ರೀತಿಯ ನೆಂಟರನ್ನು ಸ್ವಾಗತಿಸುವಷ್ಟೇ ಸಲಿಗೆಯಿಂದ ಸುತ್ತ ಬಂದು ನಿಂತವು. ಕಚ್ಚಾ ರಸ್ತೆಯಲ್ಲಿ ವಾಹನ ತಮ್ಮನ್ನು ದಾಟಿ ಬರುವಾಗಲೇ ಕೈಬೀಸಿ ನಗುಮುಖ ತೋರಿದ್ದ ನಾಲ್ಕಾರು ಜನ ಶಾಲೆಯತ್ತಲೇ ಬಂದರು.

ಮಂಗಳವಾರ, ಆಗಸ್ಟ್ 7, 2012

ಒಲಿಂಪಿಕ್ಸ್‌ಗೆ ಟ್ವಿಟ್ಟರ್ ಕಾಟ!

ಟಿ. ಜಿ. ಶ್ರೀನಿಧಿ

ಕಳೆದ ವಾರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸೈಕ್ಲಿಂಗ್ ಸ್ಪರ್ಧೆ ಇತ್ತಲ್ಲ, ನಗರದ ಹೊರವಲಯದಲ್ಲೂ ಸಾಗಿದ ಈ ಸೈಕಲ್ ರೇಸ್ ವೀಕ್ಷಿಸಲು ಲಕ್ಷಾಂತರ ಜನ ರಸ್ತೆಯ ಇಕ್ಕೆಲಗಳಲ್ಲೂ ನೆರೆದದ್ದು ಟೀವಿ ಪ್ರಸಾರದಲ್ಲಿ ಕಂಡುಬಂತು. ದಾರಿಯುದ್ದಕ್ಕೂ ಎಲ್ಲರೂ ಫೋಟೋ ಕ್ಲಿಕ್ಕಿಸುವವರೇ ಇದ್ದಂತಿತ್ತು.

ರೇಸ್ ನೋಡಿ, ಫೋಟೋ ತೆಗೆದು ಸುಮ್ಮನಿದ್ದರೆ ಆದೀತೆ? ನಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಯಾವ ಫೋಟೋ ತೆಗೆದಿದ್ದೇವೆ, ತೆಗೆದ ಫೋಟೋ ಹೇಗಿದೆ ಎಂಬುದನ್ನೆಲ್ಲ ಅವರು ಫೇಸ್‌ಬುಕ್‌ನಲ್ಲಿ-ಟ್ವಿಟ್ಟರಿನಲ್ಲಿ ಪ್ರಕಟಿಸಲು ಪ್ರಾರಂಭಿಸಿದರು.

ಮೊದಲೇ ನಗರದ ಹೊರವಲಯ, ಅಲ್ಲಿನ ನೆಟ್‌ವರ್ಕ್ ಹೇಗಿತ್ತೋ ಏನೋ. ಇಷ್ಟೆಲ್ಲ ಮಾಹಿತಿಯ ಪ್ರವಾಹ ಒಂದೇ ಬಾರಿಗೆ ದೂರವಾಣಿ ಜಾಲದತ್ತ ನುಗ್ಗುತ್ತಿದ್ದಂತೆ ನೆಟ್‌ವರ್ಕ್ ಪೂರ್ತಿ ಸುಸ್ತುಹೊಡೆದುಬಿಟ್ಟಿತಂತೆ.

ಇದರ ಅನಿರೀಕ್ಷಿತ ಪರಿಣಾಮವಾದದ್ದು ಪಂದ್ಯದ ನೇರಪ್ರಸಾರದ ಮೇಲೆ. ಯಾವ ಸ್ಪರ್ಧಿಗಳು ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಪುಟಾಣಿ ಜಿಪಿಎಸ್ ಟ್ರಾನ್ಸ್‌ಮಿಟರುಗಳಿಂದ ಹೊರಟು ಮೊಬೈಲ್ ದೂರವಾಣಿ ಜಾಲದ ಮೂಲಕ ಒಲಿಂಪಿಕ್ಸ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್‌ಗೆ ತಲುಪಬೇಕಿತ್ತು. ಆದರೆ ಮಾಹಿತಿಯ ಈ ಸಣ್ಣ ಹರಿವು ಟ್ವಿಟ್ಟರ್-ಫೇಸ್‌ಬುಕ್‌ನತ್ತ ಹರಿಯುತ್ತಿದ್ದ ಮಹಾಪೂರದಲ್ಲಿ ಕೊಚ್ಚಿಹೋಗಿ ಟೀವಿ ಪ್ರಸಾರಕ್ಕೆ ಪಂದ್ಯದ ಅಂಕಿಅಂಶಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು.

ಸೋಶಿಯಲ್ ನೆಟ್‌ವರ್ಕ್‌ಗಳು ನಮ್ಮ ದೈನಂದಿನ ಬದುಕಿನ ಅಂಗವೇ ಆಗಿಹೋಗಿರುವ ಪರಿಗೆ ಇದೊಂದು ಸಣ್ಣ ಉದಾಹರಣೆಯಷ್ಟೆ.

ಭಾನುವಾರ, ಆಗಸ್ಟ್ 5, 2012

ಬುಕ್ ಆಫ್ ಟೀ

ಪತ್ರಕರ್ತ ಮಿತ್ರ ಕುಮಾರ್ ಒಂದು ವಿಶಿಷ್ಟ ಪುಸ್ತಕ ಬರೆದಿದ್ದಾರೆ. ಚಹಾದ ಬಗೆಗಿನ 'ಬುಕ್ ಆಫ್ ಟೀ' ಇದು. ಚಹಾದ ವಿಧಗಳು, ಇತಿಹಾಸ ಇತ್ಯಾದಿಗಳಿಂದ ಟೀ ಕುರಿತಾದ ಕತೆ-ಕವನಗಳವರೆಗೆ ಸಾಕಷ್ಟು ಕುತೂಹಲಕರ ಮಾಹಿತಿ ಇಲ್ಲಿದೆ. ಬಗೆಬಗೆಯ ಚಹಾ ಮಾಡುವ ವಿಧಾನವೂ ಇದೆ!

ಕನ್ನಡದ ಮಟ್ಟಿಗೆ ಈ ಪ್ರಯತ್ನ ನಿಜಕ್ಕೂ ವಿನೂತನ. ಇಂತಹುದೊಂದು ಪ್ರಯತ್ನ ಮಾಡಿರುವ ಕುಮಾರ್‌ ಅವರನ್ನು ಇಜ್ಞಾನ ಡಾಟ್ ಕಾಮ್ ಅಭಿನಂದಿಸುತ್ತದೆ.
ಬುಕ್ ಆಫ್ ಟೀ
ಲೇಖಕರು: ಕುಮಾರ್ ಎಸ್.
೧೦೬ ಪುಟಗಳು, ಬೆಲೆ ರೂ. ೧೦೦/-
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ
badge