ಮಂಗಳವಾರ, ಜುಲೈ 31, 2012

ಎಲ್ ನೋಡಿ ಕಾರ್ಡ್!

ಟಿ. ಜಿ. ಶ್ರೀನಿಧಿ

ಆಗತಾನೆ ಹುಟ್ಟಿದ ಮಗು ಜೊತೆಗಿನ ಆಸ್ಪತ್ರೆವಾಸ ಒಂದು ಅದ್ಭುತ ಅನುಭವ. ಊಟ-ನಿದ್ದೆ-ಓಡಾಟದ ಅಭ್ಯಾಸಗಳೆಲ್ಲ ದಿಢೀರನೆ ಬದಲಾಗಿ ನಮ್ಮ ಪ್ರತಿಯೊಂದು ಕೆಲಸವೂ ಪುಟ್ಟಮಗುವಿನ ಮೇಲೆ ಅವಲಂಬಿತವಾಗಲು ಶುರುವಾಗುವ ಸಮಯ ಅದು; ಎಂಟುಗಂಟೆ ನಿದ್ದೆಯ ನಂತರವೂ ಆಫೀಸಿನಲ್ಲಿ ತೂಕಡಿಸುತ್ತಿದ್ದವನು ಮೂರ್ನಾಲ್ಕು ಗಂಟೆಯ ಅರ್ಧಂಬರ್ಧ ನಿದ್ದೆ ಮಾಡಿಯೂ ಖುಷಿಯಾಗಿರುವ ಅಪರೂಪದ ಸನ್ನಿವೇಶ!

ಈ ಸಮಯದಲ್ಲಿ ಕ್ಯಾಮೆರಾಗಳಿಗೂ ಬಿಡುವಿಲ್ಲದ ಕೆಲಸ. ಪುಟ್ಟಮಕ್ಕಳ ಫೋಟೋ ತೆಗೆಯಬಹುದೋ ಇಲ್ಲವೋ ಎಂಬ ಹಿರಿಯರ ಜಿಜ್ಞಾಸೆಯ ನಡುವೆಯೇ ಮಗುವಿನ ಸಾಲುಸಾಲು ಛಾಯಾಚಿತ್ರಗಳು ಕ್ಯಾಮೆರಾಗಳಲ್ಲಿ ದಾಖಲಾಗಲು ಶುರುವಾಗುತ್ತವೆ. ಅತ್ತೆಯ ಮೊಬೈಲು, ತಾತನ ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾ, ಅಪ್ಪನ ಡಿಎಸ್‌ಎಲ್‌ಆರ್ - ಹೀಗೆ ಪಾಪು ಫೋಟೋಗಾಗಿ ಸಾಲುಗಟ್ಟಿ ನಿಲ್ಲುವ ಕ್ಯಾಮೆರಾಗಳು ಒಂದೆರಡಲ್ಲ.

ಹೀಗೆ ತೆಗೆದ ಚಿತ್ರಗಳನ್ನು ಕ್ಯಾಮೆರಾಗಳು ಉಳಿಸಿಡುವುದು ಮೆಮೊರಿ ಕಾರ್ಡಿನಲ್ಲಿ.
ಅವು ಕ್ಯಾಮೆರಾಗಳ ಜ್ಞಾಪಕ ಶಕ್ತಿ ಎಂದರೂ ಸರಿಯೇ.

ಕ್ಯಾಮೆರಾಗಳು ಹೇಗೆ ಬೇರೆಬೇರೆ ಬಗೆಯವೋ ಅವುಗಳಲ್ಲಿ ಬಳಕೆಯಾಗುವ ಮೆಮೊರಿ ಕಾರ್ಡುಗಳೂ ಬೇರೆಬೇರೆ ರೀತಿಯವು: ಮೊಬೈಲಿನಲ್ಲೊಂದು ಬಗೆಯ ಕಾರ್ಡಾದರೆ ಕ್ಯಾಮೆರಾದಲ್ಲಿರುವ ಕಾರ್ಡೇ ಬೇರೆ ಬಗೆಯದು. ಕೆಲವೊಮ್ಮೆ ಬೇರೆಬೇರೆ ಸಂಸ್ಥೆಯ ಮೊಬೈಲು-ಕ್ಯಾಮೆರಾಗಳಲ್ಲಿ ಪೂರ್ತಿ ಬೇರೆಯದೇ ಆದ ರೀತಿಯ ಕಾರ್ಡುಗಳ ಬಳಕೆಯನ್ನೂ ನೋಡಬಹುದು. ಬರಿಯ ಕ್ಯಾಮೆರಾಗಳಲ್ಲಷ್ಟೆ ಏಕೆ, ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿಥ್ರೀ ಪ್ಲೇಯರುಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ. ಕೆಲ ಕಾರ್ ಸ್ಟೀರಿಯೋಗಳಲ್ಲೂ ಮೆಮೊರಿ ಕಾರ್ಡ್ ಬಳಕೆ ಸಾಧ್ಯ.

ಮೆಮೊರಿ ಕಾರ್ಡುಗಳಲ್ಲಿ ಅನೇಕ ವಿಧಗಳಿವೆ. ಅವುಗಳ ಗಾತ್ರ-ಆಕಾರಗಳನ್ನು ಆಧಾರವಾಗಿಟ್ಟುಕೊಂಡು ಅವನ್ನು ಯಾವುದೇ ನಿರ್ದಿಷ್ಟ ಉಪಕರಣದಲ್ಲಿ ಬಳಸಲು ಸಾಧ್ಯವೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು.

ಮೆಮೊರಿ ಸ್ಟಿಕ್, ಮಲ್ಟಿಮೀಡಿಯಾ ಕಾರ್ಡ್ (ಎಂಎಂಸಿ), ಎಕ್ಸ್‌ಡಿ ಕಾರ್ಡ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು. ಸೋನಿ ಸಂಸ್ಥೆ ತಯಾರಿಸುವ ಉಪಕರಣಗಳ ಬಳಕೆದಾರರಿಗೆ ಮೆಮೊರಿ ಸ್ಟಿಕ್‌ನ ಪರಿಚಯವಿರುತ್ತದೆ (ಈ ಕಾರ್ಡು ಈಚೆಗೆ ಸೋನಿ ಉಪಕರಣಗಳಿಂದಲೂ ಮಾಯವಾಗುತ್ತಿದೆ). ಅದೇ ರೀತಿ ಎಕ್ಸ್‌ಡಿ ಕಾರ್ಡ್ ಕೂಡ; ಈ ಬಗೆಯ ಕಾರ್ಡು ಬಳಸುತ್ತಿದ್ದ ಉಪಕರಣಗಳಿಗೆ ಉದಾಹರಣೆಯಾಗಿ ಒಲಿಂಪಸ್ ಕ್ಯಾಮೆರಾಗಳನ್ನು ಹೆಸರಿಸಬಹುದು. ಹತ್ತು ಹನ್ನೆರಡು ವರ್ಷಗಳ ಹಿಂದೆ ಡಿಜಿಟಲ್ ಕ್ಯಾಮೆರಾ ಬಳಸಲು ಶುರುಮಾಡಿದವರಿಗೆ ಎಂಎಂಸಿಯ ಪರಿಚಯವೂ ಇದ್ದೀತು.

ಆದರೆ ಒಂದೊಂದು ಉಪಕರಣಕ್ಕೆ ಒಂದೊಂದು ಕಾರ್ಡು ಎನ್ನುವಂತಹ ಪರಿಸ್ಥಿತಿ ಅಷ್ಟೇನೂ ಸೂಕ್ತವಾದದ್ದಲ್ಲ ಎನ್ನುವ ಅಭಿಪ್ರಾಯ ಬಹುಬೇಗ ವ್ಯಾಪಕವಾಯಿತು. ಕೆಲ ವರ್ಷಗಳ ಹಿಂದೆ ಸೋನಿ ಎರಿಕ್ಸನ್ ಮೊಬೈಲು, ಒಲಿಂಪಸ್ ಕ್ಯಾಮೆರಾ ಇಟ್ಟುಕೊಂಡಿದ್ದ ವ್ಯಕ್ತಿ ಹೊಸದಾಗಿ ಕೆನಾನ್ ಸಂಸ್ಥೆಯ ಕ್ಯಾಮೆರಾ ತಂದರೆ ಅದರ ಜೊತೆಗೆ ಮನೆಯಲ್ಲಿರುವ ಮೆಮೊರಿ ಕಾರ್ಡ್ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಹೋಗಲಾಡಿಸಿ ಎಲ್ಲ ಬಗೆಯ ಉಪಕರಣಗಳಲ್ಲೂ ಒಂದೇ ರೀತಿಯ ಮೆಮೊರಿ ಕಾರ್ಡ್ ಬಳಕೆ ಸಾಧ್ಯವಾಗಿಸಬೇಕು ಎನ್ನುವ ಉದ್ದೇಶದಿಂದ ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಕಾರ್ಡುಗಳ ಬಳಕೆಯಲ್ಲಿ ಹೆಚ್ಚಳ ಕಂಡುಬಂತು.

ಈಗ ಮೆಮೊರಿ ಕಾರ್ಡ್ ಪ್ರಪಂಚದಲ್ಲಿ ಎಸ್‌ಡಿ ಕಾರ್ಡುಗಳದೇ ಕಾರುಬಾರು. ಬಹುತೇಕ ಎಲ್ಲ ಸಂಸ್ಥೆಯ ಕ್ಯಾಮೆರಾಗಳಲ್ಲೂ (ಈ ಹಿಂದೆ ಬೇರೆ ಬಗೆಯ ಕಾರ್ಡ್ ಬಳಸುತ್ತಿದ್ದ ಸೋನಿ, ಒಲಿಂಪಸ್ ಕೂಡ ಸೇರಿದಂತೆ) ಇದೀಗ ಎಸ್‌ಡಿ ಕಾರ್ಡುಗಳು ಬಳಕೆಯಾಗುತ್ತವೆ. ಒಂದಕ್ಕಿಂತ ಹೆಚ್ಚು ಕ್ಯಾಮೆರಾ ಇರುವವರು ಒಂದೇ ಬಗೆಯ ಕಾರ್ಡುಗಳನ್ನು ತಮ್ಮ ಎಲ್ಲ ಕ್ಯಾಮೆರಾಗಳಲ್ಲೂ ಬಳಸುವುದು ಇದರಿಂದಾಗಿ ಸಾಧ್ಯವಾಗಿದೆ. ಇದೇ ಎಸ್‌ಡಿ ಕಾರ್ಡಿನ ಪುಟಾಣಿ ಆವೃತ್ತಿ ಮೈಕ್ರೋ ಎಸ್‌ಡಿ ಎಂಬ ಹೆಸರಿನಲ್ಲಿ ಮೊಬೈಲ್ ದೂರವಾಣಿ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ ಬಳಕೆಯಾಗುತ್ತಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಬಳಸುವ ಕ್ಯಾಮೆರಾಗಳೂ ಇವೆ. ಸಾಮಾನ್ಯ ಎಸ್‌ಡಿ ಕಾರ್ಡಿಗೂ ಮೈಕ್ರೋ ಎಸ್‌ಡಿ ಕಾರ್ಡಿಗೂ ಮಧ್ಯದ ಗಾತ್ರದ ಮಿನಿ ಎಸ್‌ಡಿ ಕಾರ್ಡ್ ಕೂಡ ಒಂದಷ್ಟು ಸಮಯ ಬಳಕೆಯಲ್ಲಿದ್ದದ್ದು ಈಗ ನೇಪಥ್ಯಕ್ಕೆ ಸರಿಯುತ್ತಿದೆ.

ಮೆಮೊರಿ ಕಾರ್ಡುಗಳು ಕೆಲಸಮಾಡುವ ವಿಧಾನ ನಮಗೆಲ್ಲ ಚಿರಪರಿಚಿತವಾದ ಪೆನ್ ಡ್ರೈವ್‌ಗಳ ಕಾರ್ಯವೈಖರಿಯನ್ನೇ ಹೋಲುತ್ತದೆ. ಆದರೆ ಮೆಮೊರಿ ಕಾರ್ಡನ್ನು ಪೆನ್ ಡ್ರೈವ್‌ಗಳ ಹಾಗೆ ನೇರವಾಗಿ ಯುಎಸ್‌ಬಿ ಮೂಲಕ ಜೋಡಿಸಲಾಗುವುದಿಲ್ಲ ಎನ್ನುವುದೇ ದೊಡ್ಡ ವ್ಯತ್ಯಾಸ. ಮೆಮೊರಿ ಕಾರ್ಡುಗಳನ್ನು ಕಂಪ್ಯೂಟರಿಗೆ ಸಂಪರ್ಕಿಸಲು ಮಧ್ಯವರ್ತಿಯೊಂದು ಬೇಕೇ ಬೇಕು. ಇದಕ್ಕಾಗಿ ಕೇಬಲ್‌ಗಳು, ಕಾರ್ಡ್ ರೀಡರ್‌ಗಳು ಬಳಕೆಯಾಗುತ್ತವೆ. ಮೊಬೈಲುಗಳೊಡನೆ ಕೇಬಲ್ ಬಳಕೆ ನಮಗೆಲ್ಲ ಗೊತ್ತೇ ಇದೆಯಲ್ಲ! ಈ ಹಿಂದೆ ಎಲ್ಲ ಕ್ಯಾಮೆರಾಗಳ ಜೊತೆಗೂ ಒಂದೊಂದು ಕೇಬಲ್ ಬರುತ್ತಿತ್ತು, ಮತ್ತು ಕ್ಯಾಮೆರಾದಲ್ಲಿದ್ದ ಚಿತ್ರಗಳನ್ನು ಕಂಪ್ಯೂಟರಿಗೆ ವರ್ಗಾಯಿಸಲು ಕಂಪ್ಯೂಟರಿಗೂ ಕ್ಯಾಮೆರಾಗೂ ನಡುವೆ ಆ ಕೇಬಲ್ಲನ್ನು ಜೋಡಿಸಬೇಕಾಗಿತ್ತು; ಆದರೆ ಈ ಅಭ್ಯಾಸ ಈಚೆಗೆ ಕಡಿಮೆಯಾಗುತ್ತಿದೆ. ಮೆಮೊರಿ ಕಾರ್ಡ್ ರೀಡರುಗಳು ನಲವತ್ತು-ಐವತ್ತು ರೂಪಾಯಿಗಳಿಗೇ ಸಿಗುತ್ತಿರುವುದರಿಂದ ಹಾಗೂ ಹೆಚ್ಚೂಕಡಿಮೆ ಎಲ್ಲ ಲ್ಯಾಪ್‌ಟಾಪುಗಳಲ್ಲೂ ಕಾರ್ಡ್ ರೀಡರ್ ಇರುವುದರಿಂದ ಅವುಗಳ ಬಳಕೆಯೇ ಅನುಕೂಲಕರ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಮೆಮೊರಿ ಕಾರ್ಡ್ ರೀಡರುಗಳಲ್ಲಿ ಬಹುತೇಕ ಎಲ್ಲ ಬಗೆಯ ಕಾರ್ಡುಗಳನ್ನೂ ಬಳಸುವುದು ಸಾಧ್ಯ. ಕ್ಯಾಮೆರಾದಿಂದಲೋ ಮೊಬೈಲಿನಿಂದಲೋ ಟ್ಯಾಬ್ಲೆಟ್ ಕಂಪ್ಯೂಟರಿನಿಂದಲೋ ಕಾರ್ಡನ್ನು ಹೊರತೆಗೆದು ಕಾರ್ಡ್ ರೀಡರಿನೊಳಕ್ಕೆ ತೂರಿಸಿದರೆ ಅದನ್ನು ಪೆನ್ ಡ್ರೈವ್‌ನಂತೆಯೇ ಬಳಸಬಹುದು. ಲ್ಯಾಪ್‌ಟಾಪ್‌ಗಳಲ್ಲಿರುವ ಕಾರ್ಡ್ ರೀಡರಿನಲ್ಲಿ ಸಾಮಾನ್ಯವಾಗಿ ಎಸ್‌ಡಿ ಕಾರ್ಡುಗಳಿಗಷ್ಟೆ ಸ್ಥಳಾವಕಾಶವಿರುತ್ತದೆ. ಅಡಾಪ್ಟರುಗಳ ಸಹಾಯ ಪಡೆದು ಅದರಲ್ಲಿ ಮೈಕ್ರೋ ಎಸ್‌ಡಿ ಕಾರ್ಡುಗಳನ್ನೂ ಬಳಸಬಹುದು.

ಕಂಪ್ಯೂಟರ್ ಮೆಮೊರಿ ಪ್ರಪಂಚದಲ್ಲಿ ಮೆಮೊರಿ ಕಾರ್ಡುಗಳ ಸ್ಥಾನ ರ್‍ಯಾಮ್ ಹಾಗೂ ಡಿಸ್ಕ್ ಸ್ಟೋರೇಜ್‌ನ ನಡುವಿನದು. ಈ ಸ್ಥಳವನ್ನು ಅವು ಪೆನ್‌ಡ್ರೈವ್‌ನಂತಹ ಇನ್ನಿತರ ಫ್ಲ್ಯಾಷ್ ಮೆಮೊರಿ ಮಾಧ್ಯಮಗಳೊಡನೆ ಹಂಚಿಕೊಳ್ಳುತ್ತವೆ. ಇವುಗಳಲ್ಲಿ ಹಾರ್ಡ್‌ಡಿಸ್ಕ್‌ನಷ್ಟು ಭಾರೀ ಸಾಮರ್ಥ್ಯವೂ ಇರುವುದಿಲ್ಲ, ಅಲ್ಲದೆ ಅವುಗಳ ಕಾರ್ಯಾಚರಣೆ ರ್‍ಯಾಮ್‌ನಷ್ಟು ಕ್ಷಿಪ್ರವಾಗಿಯೂ ಇರುವುದಿಲ್ಲ. ಹೀಗಿದ್ದರೂ ಕೂಡ ಕೈಗೆಟುಕುವ ಬೆಲೆ, ಬಳಕೆಯ ಸರಳತೆ ಹಾಗೂ ಅನುಕೂಲತೆಗಳ ದೃಷ್ಟಿಯಿಂದ ಮೆಮೊರಿ ಕಾರ್ಡುಗಳು ಅತ್ಯಂತ ಜನಪ್ರಿಯವಾಗಿವೆ; ನಾಗತಿಹಳ್ಳಿ ಚಂದ್ರಶೇಖರರ ಸಿನಿಮಾದಲ್ಲಿ ಎಲ್ಲಿ ನೋಡಿದರೂ ಕಾರು ಕಂಡಂತೆ ಈಗ ನಾವು ಎಲ್ಲಿ ನೋಡಿದರೂ ಕಾರ್ಡುಗಳು ಕಾಣಸಿಗುತ್ತಿವೆ!

ಜುಲೈ ೩೧, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

- - -
ಮೈಕ್ರೋ ಎಸ್‌ಡಿ ಕಾರ್ಡ್ ಬಳಸುವ ಕ್ಯಾಮೆರಾಗಳ ಬಗೆಗೆ ಗಮನ ಸೆಳೆದ ವಿಕಾಸ ಹೆಗಡೆಯವರಿಗೆ ಧನ್ಯವಾದಗಳು.

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಮೈಕ್ರೋ ಎಸ್.ಡಿ. ಕಾರ್ಡುಗಳನ್ನು ಕ್ಯಾಮೆರಾಗಳಿಗೂ ಹಾಕಬಹುದಲ್ಲವೇ?

ವಿ.ರಾ.ಹೆ. ಹೇಳಿದರು...

microSD ಕಾರ್ಡ್ ಬಳಸುವ ಕ್ಯಾಮೆರಾ ಉದಾಹರಣೆ
http://www.sony.co.in/product/dsc-h90/specs

badge