ಶುಕ್ರವಾರ, ಜುಲೈ 6, 2012

ಟೊರೆಂಟ್ ಪ್ರಪಂಚ

ಯಶಸ್ವಿನಿ, ಟಿ. ಜಿ. ಶ್ರೀನಿಧಿ

ಇತ್ತೀಚಿನ ಸೂಪರ್‌ಹಿಟ್ ಸಿನಿಮಾ ನೋಡಬೇಕು ಅಂತಲೋ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾದ ತಂತ್ರಾಂಶ ಬಳಸಬೇಕು ಅಂತಲೋ ಹೇಳಿದಾಗ ಟೊರೆಂಟ್ಸ್‌ನಲ್ಲಿ ಉಚಿತವಾಗಿ ಸಿಗುತ್ತೆ ನೋಡಿ ಎನ್ನುವ ಸಲಹೆ ನಿಮಗೆ ದೊರೆತಿರಬಹುದು. ಏನಿದು ಟೊರೆಂಟ್ ಅಂದರೆ?

ಬಿಟ್‌ಟೊರೆಂಟ್ ಎನ್ನುವುದು ಅಂತರಜಾಲದಲ್ಲಿ ಕಡತಗಳನ್ನು ಹಂಚಿಕೊಳ್ಳಲಿಕ್ಕೆಂದೇ ರೂಪಿಸಲಾಗಿರುವ ಶಿಷ್ಟಾಚಾರ (ಪ್ರೋಟೋಕಾಲ್). ನಮಗೆ ಬೇಕಾದ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಶಿಷ್ಟಾಚಾರದ ಪ್ರಕಾರ ಯಾವುದೇ ಒಂದು ಸರ್ವರ್ ಅನ್ನು ಅವಲಂಬಿಸುವ ಅಗತ್ಯವಿಲ್ಲ; ಹಾಗಾಗಿ ದೊಡ್ಡಗಾತ್ರದ ಕಡತಗಳನ್ನು ಕ್ಷಿಪ್ರವಾಗಿ ಪಡೆದುಕೊಳ್ಳಲು ಈ ಶಿಷ್ಟಾಚಾರ ಬಹಳ ಉಪಯುಕ್ತ.

ವ್ಯಕ್ತಿಯಿಂದ ವ್ಯಕ್ತಿಗೆ (ಪರ್ಸನ್ ಟು ಪರ್ಸನ್, ಪಿ೨ಪಿ) ನಡೆಯುವ ಮಾಹಿತಿ ವಿನಿಮಯದಲ್ಲಿ ಇದೊಂದು ಬಹುಮುಖ್ಯ ಮಾಧ್ಯಮವೆಂದೇ ಹೇಳಬೇಕು. ಜನವರಿ ೨೦೧೨ರ ಅಂಕಿಅಂಶಗಳ ಪ್ರಕಾರ ಸುಮಾರು ಹದಿನೈದು ಕೋಟಿ ಜನ ಕಂಪ್ಯೂಟರ್ ಬಳಕೆದಾರರು ಬಿಟ್‌ಟೊರೆಂಟ್ ಶಿಷ್ಟಾಚಾರವನ್ನು ಬಳಸುತ್ತಿದ್ದಾರಂತೆ!


ಬಿಟ್‌ಟೊರೆಂಟ್ ಶಿಷ್ಟಾಚಾರ ಕೆಲಸಮಾಡುವ ವಿಧಾನ ಬಹಳ ವಿಶಿಷ್ಟವಾದದ್ದು. ಇದನ್ನು ಬಳಸಿ ಸಿನಿಮಾವನ್ನೋ ತಂತ್ರಾಂಶವನ್ನೋ ಅಥವಾ ಇನ್ನೇನನ್ನೋ ಹಂಚಲು ಹೊರಟವರು ಮೊದಲಿಗೆ ಅದರ ವಿವರಗಳುಳ್ಳ ಪುಟ್ಟದೊಂದು ಕಡತವನ್ನು (ಟಾರೆಂಟ್ ಡಿಸ್ಕ್ರಿಪ್ಟರ್) ಇಮೇಲ್ ಬಳಸಿಯೋ ಜಾಲತಾಣದ ಮೂಲಕವೋ ಹಂಚುತ್ತಾರೆ. ಆನಂತರ ಬಿಟ್‍ಟೊರೆಂಟ್ ಕ್ಲೈಂಟ್ ತಂತ್ರಾಂಶ ಬಳಸಿಕೊಂಡು ತಾವು ಹಂಚಲುಹೊರಟಿರುವ ಕಡತವನ್ನು ಯಾರು ಬೇಕಾದರೂ ಪಡೆದುಕೊಳ್ಳುವಂತೆ ತೆರೆದಿಡುತ್ತಾರೆ.

ಆ ಸಿನಿಮಾವನ್ನೋ ತಂತ್ರಾಂಶವನ್ನೋ ಪಡೆದುಕೊಳ್ಳಲು ನಮಗೆ ಆಸಕ್ತಿಯಿದೆ ಎನ್ನುವುದಾದರೆ ಮೊದಲಿಗೆ ಟೊರೆಂಟ್ ಡಿಸ್ಕ್ರಿಪ್ಟರ್ ಕಡತವನ್ನು ಡೌನ್‌ಲೋಡ್ ಮಾಡಿಕೊಂಡು ನಮ್ಮ ಕಂಪ್ಯೂಟರಿನಲ್ಲಿರುವ ಬಿಟ್‍ಟೊರೆಂಟ್ ಕ್ಲೈಂಟ್ ತಂತ್ರಾಂಶಕ್ಕೆ ಒಪ್ಪಿಸಿಕೊಡಬೇಕಾಗುತ್ತದೆ. ನಮಗೆ ಬೇಕಾದ ಕಡತ ಎಲ್ಲಿ ಸಿಗುತ್ತದೆ ಎನ್ನುವುದನ್ನು ಗುರುತಿಸುವ ಈ ತಂತ್ರಾಂಶ ಅಲ್ಲಿಂದ ಅದನ್ನು ತುಣುಕುಗಳ ರೂಪದಲ್ಲಿ ಪಡೆದುಕೊಳ್ಳಲು ಪ್ರಾರಂಭಿಸುತ್ತದೆ. ಬೇರೆ ಯಾರಾದರೂ ನಮಗಿಂತ ಮೊದಲೇ ಆ ಕಡತವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎನ್ನುವುದಾದರೆ ಅವರ ಕಂಪ್ಯೂಟರ್‌ನಿಂದಲೂ ತುಣುಕುಗಳು ಬಂದು ನಮ್ಮ ಡೌನ್‌ಲೋಡ್ ಬೇಗನೆ ಮುಗಿಯುತ್ತದೆ. ಡೌನ್‌ಲೋಡ್ ಮುಗಿದ ಮೇಲೆ ಬೇಕಿದ್ದರೆ ನಮ್ಮ ಕಂಪ್ಯೂಟರ್ ಕೂಡ ಇತರ ಆಸಕ್ತ ಬಳಕೆದಾರರಿಗೆ ಆ ಕಡತದ ತುಣುಕುಗಳನ್ನು ಕಳುಹಿಸಿಕೊಡುವಂತೆ ಮಾಡಬಹುದು.

ಹೀಗೆ ಕಡತವನ್ನು ಹಂಚುವ ಬಳಕೆದಾರ/ಕಂಪ್ಯೂಟರುಗಳನ್ನು ಸೀಡ್‌ಗಳೆಂದು ಕರೆಯುತ್ತಾರೆ. ಒಂದೇ ಕಡತವನ್ನು ತುಂಬಾ ಜನ ಡೌನ್‌ಲೋಡ್ ಮಾಡಿಕೊಂಡಿದ್ದರೆ ಸಹಜವಾಗಿಯೇ ಸೀಡ್‌ಗಳ ಸಂಖ್ಯೆ ಜಾಸ್ತಿಯಾಗಿ ಹೊಸದಾಗಿ ಡೌನ್‌ಲೋಡ್ ಮಾಡಲು ಹೊರಟವರು ಬಹಳ ಕ್ಷಿಪ್ರವಾಗಿ ಆ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಬಿಟ್‌ಟೊರೆಂಟ್ ಶಿಷ್ಟಾಚಾರದ ಹಿಂದಿರುವ ತಂತ್ರಜ್ಞಾನವೇನೋ ಉನ್ನತವಾದದ್ದೇ. ಆದರೆ ಅದರ ಬಳಕೆ ಪೈರಸಿಯಂತಹ ಅಕ್ರಮ ಕೆಲಸಗಳಲ್ಲೇ ಹೆಚ್ಚಾಗಿ ಆಗುತ್ತಿದೆ. ಹೊಚ್ಚಹೊಸ ಚಲನಚಿತ್ರ, ಜನಪ್ರಿಯವಾಗಿರುವ ಸಿನಿಮಾಹಾಡು, ಬೆಸ್ಟ್‌ಸೆಲ್ಲರ್ ಪುಸ್ತಕ, ಹೈಟೆಕ್ ತಂತ್ರಾಂಶ - ಹೀಗೆ ಬೇರೆಯವರ ಸ್ವಾಮ್ಯದ ಅನೇಕ ಬಗೆಯ ಮಾಹಿತಿ ಬಿಟ್‌ಟೊರೆಂಟ್ ಮೂಲಕ ಎಲ್ಲರಿಗೂ ದೊರಕುತ್ತಿದೆ. ಹಕ್ಕುಸ್ವಾಮ್ಯ ಹೊಂದಿರುವವರ ಅನುಮತಿಯಿಲ್ಲದೆ ಆ ಕಡತಗಳನ್ನು ಹೀಗೆ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾದ್ದರಿಂದಲೇ ಅನೇಕ ಕಡೆಗಳಲ್ಲಿ ಟೊರೆಂಟ್ ಬಳಕೆ ನಿಷಿದ್ಧವಾಗಿರುತ್ತದೆ. ಬೇರೆಯವರ ಹಕ್ಕುಸ್ವಾಮ್ಯದ ಕಡತಗಳನ್ನು ಟೊರೆಂಟ್ ಮೂಲಕ ಅಕ್ರಮವಾಗಿ ಹಂಚಿಕೊಂಡ ಆರೋಪದ ಮೇಲೆ ಈಚಿನ ವರ್ಷಗಳಲ್ಲಿ ಸಾವಿರಾರು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ವಿಕಿಪೀಡಿಯಾದಲ್ಲಿರುವ ಮಾಹಿತಿ ಹೇಳುತ್ತದೆ. ಪೈರಸಿ ವಿರುದ್ಧದ ಕ್ರಮಗಳ ಅಂಗವಾಗಿ ನಮ್ಮ ದೇಶದಲ್ಲೂ ಟೊರೆಂಟ್ ತಾಣಗಳನ್ನು ನಿರ್ಬಂಧಿಸಿದ ಘಟನೆ ತೀರಾ ಈಚೆಗೆ ನಡೆದದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಇವೆಲ್ಲ ಕಾರಣಗಳಿಂದಾಗಿ ಬಿಟ್‌ಟೊರೆಂಟ್ ಇರುವುದೇ ಪೈರಸಿಗಾಗಿ ಎನ್ನುವಂತಹ ಅಭಿಪ್ರಾಯ ವ್ಯಾಪಕವಾಗಿದೆ. ಆದರೆ ಮುಕ್ತ ಮಾಹಿತಿಯ ಹಂಚಿಕೆಗೂ ಟೊರೆಂಟ್‌ಗಳು ಒಳ್ಳೆಯ ಮಾಧ್ಯಮವಾಗಬಲ್ಲವು. ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಈಗಾಗಲೇ ನಡೆದಿರುವುದು ಗಮನಾರ್ಹ.

ಜುಲೈ ೪, ೨೦೧೨ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

A Cup Of Coffee.... ಹೇಳಿದರು...

Nice article sir..:-) thanks for this information..

badge