ಮಂಗಳವಾರ, ಜುಲೈ 3, 2012

ಫೋಟೋ ತೆಗೆದಾಯ್ತು, ಈಗ ಮೇಕಪ್ ಮಾಡುವ ಸಮಯ!

ಟಿ. ಜಿ. ಶ್ರೀನಿಧಿ

ಎಲ್ಲರ ಕೈಗೂ, ಎಲ್ಲ ಮೊಬೈಲಿಗೂ ಒಂದೊಂದು ಡಿಜಿಟಲ್ ಕ್ಯಾಮೆರಾ ಸೇರಿಕೊಂಡಮೇಲೆ ಫೋಟೋ ಕ್ಲಿಕ್ಕಿಸುವುದು ಬಲು ಸುಲಭದ ಕೆಲಸವಾಗಿಬಿಟ್ಟಿದೆ. ಮೆಮೊರಿ ಕಾರ್ಡುಗಳಲ್ಲಿ ಗಿಗಾಬೈಟ್‌ಗಟ್ಟಲೆ ಜಾಗ ನಮ್ಮ ಒಡೆತನದಲ್ಲೇ ಇರುವಾಗ ರೀಲಿದ್ದಷ್ಟೇ ಫೋಟೋ ತೆಗೆಯುವ ಅನಿವಾರ್ಯತೆಯೂ ಇಲ್ಲ. ಫೋಟೋ ತೆಗೆಯುವ ಉತ್ಸಾಹವೊಂದಿದ್ದರೆ ಸಾಕು, ಬ್ಯಾಟರಿಯಲ್ಲಿ ಜೀವ - ಕಾರ್ಡಿನಲ್ಲಿ ಜಾಗ ಇರುವ ತನಕ ನಿರಾತಂಕವಾಗಿ ಕ್ಲಿಕ್ಕಿಸುತ್ತಲೇ ಇರಬಹುದು. ಪ್ರವಾಸಕ್ಕೇನಾದರೂ ಹೋದರಂತೂ ಕ್ಯಾಮೆರಾಗೆ ಬಿಡುವೇ ಇಲ್ಲದಷ್ಟು ಕೆಲಸವಿರುತ್ತದೆ.

ಅಂತಹುದೊಂದು ಪ್ರವಾಸ ಮುಗಿಸಿಕೊಂಡು ಬಂದಮೇಲೆ ನೋಡಿದರೆ ನೂರಾರು ಚಿತ್ರಗಳು ಮೆಮೊರಿ ಕಾರ್ಡಿನಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಅವನ್ನೆಲ್ಲ ಕಂಪ್ಯೂಟರಿಗೆ ವರ್ಗಾಯಿಸಿಕೊಂಡು ಮನೆಮಂದಿಯೆಲ್ಲ ನೋಡಲು ಕುಳಿತೆವೆಂದರೆ ತಕ್ಷಣ ಶುರುವಾಗುತ್ತದೆ ವಿಮರ್ಶೆಯ ಧಾರೆ - "ಅಯ್ಯೋ ಈ ಚಿತ್ರ ಯಾಕಿಷ್ಟು ಡಾರ್ಕ್ ಆಗಿ ಬಂದಿದೆ?", "ಗಂಡ ಹೆಂಡತಿ ತೆಗೆಸಿಕೊಂಡಿರುವ ಚಿತ್ರದಲ್ಲಿ ಇದ್ಯಾರೋ ಇದು ಅಂಕಲ್ ಬಂದುಬಿಟ್ಟಿದ್ದಾರೆ!", "ಈ ಕಾರಿನ ಚಿತ್ರ ಅದ್ಯಾಕೆ ಸೊಟ್ಟಗಿದೆ?" "ನಿನ್ನ ಕಣ್ಣು ಯಾಕೆ ಹೀಗೆ ಕೆಂಪು ಕೆಂಪಾಗಿ ಕಾಣ್ತಿದೆ?"... ಪ್ರಶ್ನೆಗಳಿಗೆ, ಉದ್ಗಾರಗಳಿಗೆ ಕೊನೆಯೇ ಇಲ್ಲ!

ಡಿಜಿಟಲ್ ಛಾಯಾಚಿತ್ರಗಳಲ್ಲಿ ಇರಬಹುದಾದ ಇವೆಲ್ಲ ಕೊರತೆಗಳನ್ನು ಸರಿಪಡಿಸುವುದು ಫೋಟೋ ಕ್ಲಿಕ್ಕಿಸಿದಷ್ಟೇ ಸುಲಭ. ಇದಕ್ಕಾಗಿ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ, ಸುಲಭವಾಗಿ ಬಳಸಬಹುದಾದ ಅನೇಕ ತಂತ್ರಾಂಶಗಳಿವೆ.

ಇಂತಹ ತಂತ್ರಾಂಶಗಳ ಕಾರ್ಯವ್ಯಾಪ್ತಿ ಬಹಳ ದೊಡ್ಡದು. ಡಿಜಿಟಲ್ ಛಾಯಾಚಿತ್ರಗಳಿಗೆ ಸಾಮಾನ್ಯವಾಗಿ ಬೇಕಾಗುವ ಉಪಚಾರ, ಹಾಗೂ ಅದರಲ್ಲಿ ತಂತ್ರಾಂಶಗಳ ಪಾತ್ರದ ಕುರಿತ ಸಣ್ಣದೊಂದು ಪರಿಚಯ ಇಲ್ಲಿದೆ.

* * *

ಕ್ಯಾಮೆರಾದಿಂದಲೋ ಮೊಬೈಲಿನಿಂದಲೋ ಚಿತ್ರಗಳನ್ನು ಕಂಪ್ಯೂಟರಿಗೆ ವರ್ಗಾಯಿಸುತ್ತಿದ್ದಂತೆ ಕೆಲವು ಚಿತ್ರಗಳು ಪಕ್ಕಕ್ಕೆ ತಿರುಗಿಕೊಂಡಿರುವುದು ನಮ್ಮ ಗಮನಕ್ಕೆ ಬರುತ್ತದೆ. ಕ್ಯಾಮೆರಾ ಮುಂದಿನ ದೃಶ್ಯವನ್ನು ಅತ್ಯಂತ ಸಮರ್ಪಕವಾಗಿ ಸೆರೆಹಿಡಿಯುವ ಪ್ರಯತ್ನದಲ್ಲಿ ನಾವು ಕ್ಯಾಮೆರಾವನ್ನು ಅಡ್ಡಕ್ಕೋ ಉದ್ದಕ್ಕೋ ತಿರುಗಿಸಿಕೊಂಡಿರುತ್ತೇವಲ್ಲ, ಚಿತ್ರಗಳು ತಿರುಗಿರುವುದಕ್ಕೂ ಇದೇ ಕಾರಣ. ಹೊಸ ಡ್ರೆಸ್ಸಿನಲ್ಲಿ ಮಿಂಚುತ್ತಿರುವ ಗೆಳತಿ ನಿಂತಿರುವ ಭಂಗಿಯನ್ನು ಕ್ಲಿಕ್ಕಿಸಲು ಕ್ಯಾಮೆರಾವನ್ನು ತೊಂಬತ್ತು ಡಿಗ್ರಿ ಬಲಕ್ಕೆ ತಿರುಗಿಸಿ ಚಿತ್ರ ಕ್ಲಿಕ್ಕಿಸುತ್ತೇವಲ್ಲ, ಕಂಪ್ಯೂಟರ್ ಪರದೆಯ ಮೇಲೆ ನೋಡಿದಾಗ ಆ ಚಿತ್ರವೂ ತೊಂಬತ್ತು ಡಿಗ್ರಿ ಬಲಕ್ಕೆ ತಿರುಗಿರುತ್ತದೆ!

ಇದನ್ನು ಸರಿಪಡಿಸುವುದು, ಅರ್ಥಾತ್ ಆ ಚಿತ್ರವನ್ನು 'ರೊಟೇಟ್' ಮಾಡುವುದು ಬಹಳ ಸುಲಭ.

ಚಿತ್ರಗಳನ್ನು ವೀಕ್ಷಿಸಲು ಬೇಕಾದ ತಂತ್ರಾಂಶ ಸಾಮಾನ್ಯವಾಗಿ ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯಲ್ಲೇ (ಆಪರೇಟಿಂಗ್ ಸಿಸ್ಟಂ) ಅಡಕವಾಗಿರುತ್ತದೆ - ವಿಂಡೋಸ್ ೭ ಉದಾಹರಣೆ ತೆಗೆದುಕೊಂಡರೆ 'ವಿಂಡೋಸ್ ಫೋಟೋ ವ್ಯೂವರ್' ತಂತ್ರಾಂಶ ಈ ಕೆಲಸ ಮಾಡುತ್ತದೆ. ಇಂತಹ ಯಾವುದೇ ಸರಳ ತಂತ್ರಾಂಶವನ್ನು ಬಳಸಿ ಚಿತ್ರಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಲಕ್ಕೋ ಎಡಕ್ಕೋ ತಿರುಗಿಸಿಕೊಳ್ಳಬಹುದು. ಚಿತ್ರವನ್ನು ದೊಡ್ಡದಾಗಿ ಅಥವಾ ಚಿಕ್ಕದಾಗಿ ನೋಡುವ ಸೌಲಭ್ಯವೂ ಇಂತಹ ತಂತ್ರಾಂಶಗಳಲ್ಲಿರುತ್ತವೆ.

ಚಿತ್ರವನ್ನು ತಿರುಗಿಸುವುದಷ್ಟೆ ಕೆಲಸ ಅಂದರೆ ಅದಕ್ಕೆ ಪ್ರತ್ಯೇಕ ತಂತ್ರಾಂಶವೇ ಬೇಡ. ಮತ್ತೆ ವಿಂಡೋಸ್ ಉದಾಹರಣೆ ತೆಗೆದುಕೊಳ್ಳುವುದಾದರೆ ಚಿತ್ರದ ಕಡತದ ಮೇಲೆ ರೈಟ್ ಕ್ಲಿಕ್ ಮಾಡಿ 'ರೊಟೇಟ್ ಕ್ಲಾಕ್‌ವೈಸ್' ಅಥವಾ 'ರೊಟೇಟ್ ಆಂಟಿಕ್ಲಾಕ್‌ವೈಸ್' ಎಂದು ಆಯ್ದುಕೊಂಡರೆ ಸಾಕು, ಚಿತ್ರ ನಮಗೆ ಬೇಕಾದಂತೆ ತಿರುಗುತ್ತದೆ. ನಮಗೆ ಬೇಕಾದ ಎಲ್ಲ ಚಿತ್ರಗಳನ್ನೂ ಒಂದೇ ಏಟಿಗೆ ತಿರುಗಿಸಿಬಿಡಲು ಈ ಆಯ್ಕೆ ಉಪಯುಕ್ತ.

ಚಿತ್ರ ತೀರಾ ತೊಂಬತ್ತು ಡಿಗ್ರಿ ತಿರುಗಿಲ್ಲ, ಕ್ಯಾಮೆರಾ ನೆಟ್ಟಗೆ ಹಿಡಿದುಕೊಂಡಿಲ್ಲದ್ದರಿಂದ ಚಿತ್ರ ಕೊಂಚವೇ ತಿರುಗಿದೆ ಎಂದರೆ? ಅದನ್ನು ಸರಿಪಡಿಸಲೂ ತಂತ್ರಾಂಶಗಳ ಮೊರೆಹೋಗಬಹುದು. ಈ ಕೆಲಸಕ್ಕೆ ಉಪಯುಕ್ತವಾಗಬಲ್ಲ ತಂತ್ರಾಂಶಗಳಿಗೆ ಗೂಗಲ್‌ನ 'ಪಿಕಾಸಾ' ಒಂದು ಉದಾಹರಣೆ. ಈ ತಂತ್ರಾಂಶವನ್ನು http://picasa.google.com/ ತಾಣದಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಚಿತ್ರವನ್ನು ಈ ತಂತ್ರಾಂಶದಲ್ಲಿ ತೆರೆದು 'ಸ್ಟ್ರೇಟನ್' ಆಯ್ಕೆ ಬಳಸುವ ಮೂಲಕ ಸೊಟ್ಟಗಿರುವ ಚಿತ್ರವನ್ನು ನೆಟ್ಟಗೆ ಮಾಡಬಹುದು.

ಪಿಕಾಸಾದಲ್ಲಿ ಇನ್ನೂ ಅನೇಕ ಸೌಲಭ್ಯಗಳಿವೆ. ಚಿತ್ರದಲ್ಲಿ ನಮಗೆಷ್ಟು ಬೇಕೋ ಅಷ್ಟು ಭಾಗವನ್ನು ಮಾತ್ರ ಉಳಿಸಿಕೊಂಡು ಮಿಕ್ಕಿದ್ದನ್ನು ಕತ್ತರಿಸಿಹಾಕುವ ('ಕ್ರಾಪ್' ಮಾಡುವ) ಕೆಲಸ ಇಲ್ಲಿ ಬಹಳ ಸುಲಭ. ಹಾಗೆಯೇ ಚಿತ್ರದ ಬಣ್ಣಗಳು ಹಾಗೂ ಕಾಂಟ್ರಾಸ್ಟ್‌ನಲ್ಲಿರಬಹುದಾದ ಕುಂದುಕೊರತೆಗಳನ್ನು ಸ್ವಯಂಚಾಲಿತವಾಗಿ ಸರಿಪಡಿಸುವಂತೆಯೂ ಈ ತಂತ್ರಾಂಶವನ್ನು ಕೇಳಬಹುದು. ಬಣ್ಣ ಹೀಗೆಯೇ ಬದಲಾಗಬೇಕು, ಬೆಳಕು ನಾನು ಹೇಳಿದಷ್ಟೇ ಪ್ರಮಾಣದಲ್ಲಿ ಜಾಸ್ತಿಯಾಗಬೇಕು ಎನ್ನುವವರಿಗೂ ಇದು ಉಪಯುಕ್ತ. ಬಣ್ಣದ ಚಿತ್ರವನ್ನು ಕಪ್ಪು-ಬಿಳುಪಿಗೋ, ಹಳೆಯ ಫೋಟೋಗಳ ಕಂದು ಬಣ್ಣಕ್ಕೋ (ಸೇಪಿಯಾ) ಬದಲಿಸಲು ಒಂದೇ ಕ್ಲಿಕ್ ಸಾಕು. ಇನ್ನೂ ಹೆಚ್ಚಿನ ಸೌಲಭ್ಯ ಬೇಕು, ಚಿತ್ರಕ್ಕೆ ಬೇರೆಬೇರೆ ರೀತಿಯಲ್ಲಿ ಮೇಕಪ್ ಮಾಡಬೇಕು ಎನ್ನುವುದಾದರೆ ಪಿಕಾಸಾದಲ್ಲಿ ಸಾಕಷ್ಟು ಅಡ್ವಾನ್ಸ್‌ಡ್ ಆಯ್ಕೆಗಳು ಕೂಡ ಲಭ್ಯವಿವೆ.

ಚಿತ್ರಗಳನ್ನು ಕ್ಲಿಕ್ಕಿಸಿದ್ದಾಯಿತು, ಕಂಪ್ಯೂಟರಿಗೆ ಸೇರಿಸಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ್ದೂ ಆಯಿತು. ಇಷ್ಟೆಲ್ಲ ಆದಮೇಲೆ ಅದನ್ನು ನಮ್ಮ ಆಪ್ತರೊಡನೆ ಹಂಚಿಕೊಳ್ಳದಿದ್ದರೆ ಆದೀತೆ?

ಕನಿಷ್ಠಪಕ್ಷ ನಾಲ್ಕಾರು ಚಿತ್ರಗಳನ್ನಾದರೂ ಅವರಿಗೆ ಇಮೇಲ್ ಮಾಡಲೇಬೇಕು ಎನ್ನುತ್ತೀರಾ? ಇಲ್ಲೊಂದು ಸಣ್ಣ ಸಮಸ್ಯೆಯಿದೆ. ಹತ್ತೋ ಹನ್ನೆರಡೋ ಮೆಗಾಪಿಕ್ಸೆಲ್‌ನಲ್ಲಿ ತೆಗೆದ ಒಂದು ಚಿತ್ರದ ಗಾತ್ರವೇ ೩-೪ ಎಂಬಿಗಿಂತ ಹೆಚ್ಚಿರುತ್ತದೆ. ಹೀಗಿರುವಾಗ ನೀವು ನಾಲ್ಕೇ ಚಿತ್ರ ಇಮೇಲ್ ಮಾಡಲು ಹೊರಟರೂ ಅಟ್ಯಾಚ್‌ಮೆಂಟ್ ಗಾತ್ರ ತೀರಾ ದೊಡ್ಡದಾಗಿಬಿಡುತ್ತದೆ.

ಈ ಸಮಸ್ಯೆ ನಿವಾರಿಸಿಕೊಳ್ಳುವುದು ಕೂಡ ಸುಲಭ. ನಿಮ್ಮ ಕಂಪ್ಯೂಟರಿನಲ್ಲಿ 'ಮೈಕ್ರೋಸಾಫ್ಟ್ ಆಫೀಸ್ ಪಿಕ್ಚರ್ ಮ್ಯಾನೇಜರ್' ಇದ್ದರೆ ಆ ತಂತ್ರಾಂಶದ ಸಹಾಯ ಪಡೆದು ಚಿತ್ರದ ಗಾತ್ರವನ್ನು ಕಡಿಮೆಮಾಡಿಕೊಳ್ಳಬಹುದು (ಇದಕ್ಕಾಗಿ 'ರೀಸೈಜ್ ಪಿಕ್ಚರ್' ಆಯ್ಕೆಯನ್ನು ಬಳಸಬೇಕು). ಒಂದೇಸಲಕ್ಕೆ ಹೆಚ್ಚಿನ ಸಂಖ್ಯೆಯ ಚಿತ್ರಗಳ ಗಾತ್ರ ಕಡಿಮೆಮಾಡಬೇಕೆಂದರೆ ಅದಕ್ಕೂ ಉಪಾಯ ಇದೆ. ಪಿಕಾಸಾ ತಂತ್ರಾಂಶದಲ್ಲಿ ಅವೆಲ್ಲ ಚಿತ್ರಗಳನ್ನೂ ಒಟ್ಟಿಗೆ ಆಯ್ದುಕೊಂಡು ನಮಗೆ ಬೇಕಾದ ಗಾತ್ರದಲ್ಲಿ 'ಎಕ್ಸ್‌ಪೋರ್ಟ್' ಮಾಡಿಕೊಳ್ಳುವುದು ಸಾಧ್ಯ.

ಹೀಗೆ ಮಾಡಿದಾಗ ಮೂಲ ಚಿತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ; ಆಪ್ತರೊಡನೆ ಹಂಚಿಕೊಳ್ಳಲು ಸಣ್ಣಗಾತ್ರದ ಪ್ರತಿ ದೊರಕುತ್ತದೆ ಅಷ್ಟೆ. ಎಕ್ಸ್‌ಪೋರ್ಟ್ ಮಾಡಿದ ಎಲ್ಲ ಚಿತ್ರಗಳ ಕೆಳಭಾಗದ ಮೂಲೆಯಲ್ಲೂ ನಮ್ಮ ಹೆಸರು ಮೂಡಿಬರುವಂತೆ ಕೂಡ ಮಾಡಿಕೊಳ್ಳಬಹುದು.

ಹೀಗೆ ಸಣ್ಣಗಾತ್ರಕ್ಕೆ ಬದಲಾಯಿಸಿಕೊಂಡ ಚಿತ್ರವನ್ನು ಇಮೇಲ್ ಮಾಡಬಹುದು, ಆನ್‌ಲೈನ್ ಆಲ್ಬಮ್‌ಗಳಿಗೆ ಸೇರಿಸಬಹುದು ಅಥವಾ ಸಮಾಜಜಾಲಗಳಲ್ಲಿ ಹಂಚಿಕೊಳ್ಳಬಹುದು. ಪಿಕಾಸಾ ತಂತ್ರಾಂಶ ಬಳಸುವವರು ತಮ್ಮ ಚಿತ್ರಗಳನ್ನು ಅಲ್ಲಿಂದ ನೇರವಾಗಿ ಗೂಗಲ್ ಪ್ಲಸ್ ಸಮಾಜಜಾಲಕ್ಕೆ ಸೇರಿಸುವುದೂ ಸಾಧ್ಯ.
ಫೋಟೋ ಮೇಕಪ್ ಬಗೆಗಿನ ವಿವರಣೆ ಇಷ್ಟಕ್ಕೇ ಮುಗಿಯುವುದಿಲ್ಲ. ಚೆಂದವಾಗಿ ಕ್ಲಿಕ್ಕಿಸಿದ ಚಿತ್ರಗಳನ್ನು ಇನ್ನಷ್ಟು ಚೆಂದಗಾಣಿಸುವ ಬಗ್ಗೆ ಮತ್ತಷ್ಟು ಮಾಹಿತಿ ಮುಂದಿನ ವಾರದ ವಿಜ್ಞಾಪನೆಯಲ್ಲಿ ಮೂಡಿಬರಲಿದೆ.
ಜುಲೈ ೩, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge