ಮಂಗಳವಾರ, ಜೂನ್ 26, 2012

ವೆಬ್ ಯುದ್ಧಕ್ಕೆ ಫ್ಲೇಮ್ ಕಿಚ್ಚು

ಟಿ. ಜಿ. ಶ್ರೀನಿಧಿಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? "ಅಣುಬಾಂಬುಗಳು ಸಿಡಿದು ಭೂಮಿಯೇ ನರಕವಾಗಬಹುದು, ಅಳಿವು-ಉಳಿವಿನ ಮಧ್ಯೆ ನಾವು ಸುದೀರ್ಘ ಸೆಣಸಾಟ ನಡೆಸಬೇಕಾಗಬಹುದು" ಎನ್ನುತ್ತೀರಾ?

ಇದು ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಅವರ ಮಾತನ್ನು ಕೇಳುವುದಾದರೆ ಈಗ ವಿಶ್ವಸಮರದ ಪರಿಕಲ್ಪನೆಯೇ ಬದಲಾಗಿಬಿಟ್ಟಿದೆ.
ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲವಂತೆ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲವಂತೆ.

ಆದರೂ ಯುದ್ಧ ನಡೆಯುತ್ತದೆ. ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ!

ಕಂಪ್ಯೂಟರ್ ಜಗತ್ತಿಗೆ ಭಯೋತ್ಪಾದನೆ ಹೊಸ ವಿಷಯವೇನಲ್ಲ. ಇಂಟರ್‌ನೆಟ್ ಲೋಕದ ಅಗಾಧ ಸಾಧ್ಯತೆಗಳನ್ನು ದುರುದ್ದೇಶಗಳಿಗಾಗಿ ಬಳಸಿಕೊಳ್ಳುವ ಬೇಕಾದಷ್ಟು ಜನರಿದ್ದಾರೆ. ಯಾರದೋ ಕ್ರೆಡಿಟ್ ಕಾರ್ಡ್ ಮಾಹಿತಿ, ಇಮೇಲ್ ಪಾಸ್‌ವರ್ಡ್ ಇತ್ಯಾದಿಗಳನ್ನೆಲ್ಲ ಕದ್ದು ದುರ್ಬಳಕೆ ಮಾಡಿಕೊಳ್ಳುವ ಕಳ್ಳರಿಂದ ಪ್ರಾರಂಭಿಸಿ ವಿದೇಶಗಳ ರಹಸ್ಯ ಮಾಹಿತಿ ಕದಿಯುವ, ವೆಬ್‌ಸೈಟುಗಳ ಮೇಲೆ ದಾಳಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಹೈಟೆಕ್ ಪಾತಕಿಗಳವರೆಗೆ ಅದೆಷ್ಟೋ ಬಗೆಯ ಕ್ರಿಮಿನಲ್‌ಗಳು ಜಾಲಲೋಕದಲ್ಲಿದ್ದಾರೆ. ಸರ್ವರ್‌ಗಳತ್ತ ಭಾರೀ ಪ್ರಮಾಣದ ಮಾಹಿತಿ ಹರಿಬಿಟ್ಟು ಅದರ ಕಾರ್ಯಾಚರಣೆಗೆ ಅಡ್ಡಿಮಾಡುವ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿಯಂತೂ ಬಹಳ ಸಾಮಾನ್ಯವೇ ಆಗಿಬಿಟ್ಟಿದೆ.

ಮೊದಲನೇ ವೆಬ್ ಯುದ್ಧ

ಸಾಮಾನ್ಯವಾಗಿ ಯಾವುದೋ ಸಂಸ್ಥೆ ಅಥವಾ ನಿರ್ದಿಷ್ಟ ಜಾಲತಾಣದ ವಿರುದ್ಧ ನಡೆಯುತ್ತಿದ್ದ ಇಂತಹ ದಾಳಿಗಳು ಒಂದು ದೇಶ ಅಥವಾ ಸರಕಾರದ ವಿರುದ್ಧ ತಿರುಗಿದ ಉದಾಹರಣೆ ೨೦೦೭ರಲ್ಲಿ ಕೇಳಿಬಂತು. ಸೋವಿಯತ್ ಯುಗದ ಸ್ಮಾರಕವೊಂದನ್ನು ಸ್ಥಳಾಂತರಿಸಿತು ಎಂಬ ಕಾರಣಕ್ಕಾಗಿ ಎಸ್ಟೋನಿಯಾ ದೇಶದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ರಷ್ಯಾದ ಕುತಂತ್ರಿಗಳು ನಡೆಸಿದ ಈ ದಾಳಿ ಎಸ್ಟೋನಿಯಾದ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿತ್ತು. ದೇಶದೇಶಗಳ ನಡುವಿನ ಸಮರದ ಹೊಸ ಮುಖವನ್ನು ಜಗತ್ತಿಗೆ ಪರಿಚಯಿಸಿದ ಈ ಘಟನೆಯನ್ನು ಮೊದಲನೇ ವೆಬ್ ಯುದ್ಧ ಎಂದೂ ಗುರುತಿಸಲಾಗುತ್ತದೆ.

ಆದರೆ ಈ ಬಗೆಯ ಯುದ್ಧ ಎಷ್ಟೇ ಗಂಭೀರವಾದರೂ ಅದರಿಂದ ಆಗುವ ಹಾನಿಯ ಬಹುಪಾಲು ಡಿಜಿಟಲ್ ಪ್ರಪಂಚಕ್ಕಷ್ಟೆ ಸೀಮಿತವಾಗಿತ್ತು. ಹಾಗಾಗಿ ನಮಗೂ ಕಂಪ್ಯೂಟರಿಗೂ ಸಂಬಂಧವಿಲ್ಲ ಎನ್ನುವವರು ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳದಿದ್ದರೂ ಪರವಾಗಿರಲಿಲ್ಲ; ದೈನಂದಿನ ಬದುಕಿನ ಪ್ರತಿ ಹಂತದಲ್ಲೂ ಕಂಪ್ಯೂಟರ್ ಬಳಸುವ, ಇಂಟರ್‌ನೆಟ್ ಮೂಲಕವೇ ಮತದಾನ ಮಾಡುವ ಎಸ್ಟೋನಿಯಾದಂತಹ ದೇಶಕ್ಕೆ ಇದು ತೊಂದರೆಮಾಡಬಹುದು, ಆದರೆ ಕಂಪ್ಯೂಟರಿನ ಕಡತವೂ ಕೆಂಪುಪಟ್ಟಿಯೊಳಗೆ ಸೇರಿ ಟೇಬಲ್ಲಿನಿಂದ ಟೇಬಲ್ಲಿಗೆ ಅಲೆಯುವ ನಮ್ಮ, ಹಾಗೂ ನಮ್ಮಂತಹ ಇನ್ನೆಷ್ಟೋ ದೇಶಗಳಿಗೆ ವೆಬ್ ಯುದ್ಧ ಏನು ತಾನೆ ಮಾಡಬಲ್ಲದು ಎಂಬ ಭಾವನೆ ವ್ಯಾಪಕವಾಗಿತ್ತು.

ಆದರೆ ಈಚಿನ ಕೆಲ ಘಟನೆಗಳನ್ನು ಗಮನಿಸಿದರೆ ಇಂತಹ ಉದಾಸೀನ ಮನೋಭಾವ ಬಹಳ ಸಮಯ ಉಳಿಯುವಂತಿಲ್ಲವೇನೋ ಎನ್ನಿಸುತ್ತಿದೆ.

ಮತ್ತೆ ಬಂದ ಗುಮ್ಮ
ಕಂಪ್ಯೂಟರಿಗೆ ಕನ್ನಹಾಕಿ ದೇಶದ ರಹಸ್ಯಗಳನ್ನೆಲ್ಲ ಯಾರಾದರೂ ಕದಿಯುವುದು ಸಣ್ಣ ವಿಷಯವೇನಲ್ಲ, ನಿಜ. ಆದರೆ ಒಂದು ದೇಶದ ಸಂಚಾರ ವ್ಯವಸ್ಥೆಯನ್ನೋ ವಿದ್ಯುತ್ ಜಾಲವನ್ನೋ ಅಣುಶಕ್ತಿ ಕೇಂದ್ರಗಳನ್ನೋ ನಿಯಂತ್ರಿಸುವ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಶತ್ರುಗಳು ದಾಳಿಮಾಡಿದರೆ ನಮ್ಮ ನಿಮ್ಮಂತಹ ಜನಸಾಮಾನ್ಯರ ಕತೆಯೇನಾಗಬಹುದು?

ಕಂಪ್ಯೂಟರ್ ಸುರಕ್ಷತಾ ತಜ್ಞರು ಭಯಪಡುತ್ತಿರುವ ಎರಡನೇ ವೆಬ್‌ಯುದ್ಧವೇನಾದರೂ ನಡೆದರೆ ಕಲ್ಪಿಸಿಕೊಳ್ಳಲೂ ಭಯವಾಗುವ ಇಂತಹ ಪರಿಸ್ಥಿತಿ ನಿಜಕ್ಕೂ ಸೃಷ್ಟಿಯಾಗಲಿದೆಯಂತೆ. ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಪ್ರಾರಂಭಿಸಿ ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯವರೆಗೆ ಆಧುನಿಕ ತಂತ್ರಜ್ಞಾನ ಬಳಸುವ ಯಾವುದೇ ಕ್ಷೇತ್ರದ ಮೇಲೂ ಇಂತಹ ದಾಳಿ ನಡೆಯಬಹುದು ಎಂದು ಅವರು ಹೇಳುತ್ತಾರೆ. ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಕಂಪ್ಯೂಟರುಗಳ ಬಳಕೆ ವ್ಯಾಪಕವಾಗುತ್ತಿರುವುದು ಅವರ ಈ ಭೀತಿಗೆ ಕಾರಣ.

ಇಂತಹ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿಕೊಳ್ಳಲು ಕಂಪ್ಯೂಟರ್ ಜಾಲಗಳ ಬಳಕೆಯಾಗುತ್ತದಲ್ಲ, ತೊಂದರೆ ಶುರುವಾಗುವುದೇ ಅಲ್ಲಿ. ಅಂತರಜಾಲದ ಮೂಲಕ ಯಾರಾದರೂ ಕುತಂತ್ರಿಗಳು ಇಂತಹ ಜಾಲದೊಳಕ್ಕೆ ತಲೆಹಾಕಿದರೆಂದರೆ ಅಲ್ಲಿ ಸಮಸ್ಯೆ ಕಾಣಿಸಿಕೊಂಡಿತೆಂದೇ ಅರ್ಥ!

ಸ್ಟಕ್ಸ್‌ನೆಟ್ ಆಯ್ತು, ಈಗ ಫ್ಲೇಮ್ ಬಂತು!
ಸಿದ್ಧಾಂತಗಳಿಗೆ, ಹೆಚ್ಚೆಂದರೆ ಪ್ರಯೋಗಾಲಯಕ್ಕಷ್ಟೆ ಸೀಮಿತವಾಗಿದ್ದ ಇಂತಹುದೊಂದು ಸಾಧ್ಯತೆ ನಿಜಜೀವನದಲ್ಲಿ ಕಾಣಿಸಿಕೊಂಡಿದ್ದು, ಜಗತ್ತನ್ನು ಬೆಚ್ಚಿಬೀಳಿಸಿದ್ದು ೨೦೧೦ರಲ್ಲಿ. ಆ ವರ್ಷದಲ್ಲಿ ಪತ್ತೆಯಾದ ಸ್ಟಕ್ಸ್‌ನೆಟ್ ಎಂಬ ಕುತಂತ್ರಾಂಶದ ಗುರಿಯಾಗಿದ್ದದ್ದು ಇರಾನ್ ದೇಶದ ಅಣುಶಕ್ತಿ ಕಾರ್ಯಕ್ರಮ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯುರೇನಿಯಂ ಸೆಂಟ್ರಿಫ್ಯೂಜ್‌ಗಳನ್ನು ನಿಯಂತ್ರಿಸುತ್ತಿದ್ದ ಕಂಪ್ಯೂಟರಿನೊಳಗೆ ಸೇರಿಕೊಂಡಿದ್ದ ಈ ಕುತಂತ್ರಾಂಶ ಅವು ಪದೇ ಪದೇ ಕೆಡಲು ಕಾರಣವಾಗಿತ್ತು. ಈ ಕುತಂತ್ರಾಂಶದ ಹಾವಳಿಯಿಂದಾಗಿ ಇರಾನಿನ ಅಣುಶಕ್ತಿ ಯೋಜನೆ ಕನಿಷ್ಠ ಎರಡು ವರ್ಷದಷ್ಟಾದರೂ ಹಿಂದುಳಿಯುವಂತಾಯಿತು ಎಂದು ಅಂದಾಜುಗಳು ಹೇಳುತ್ತವೆ. ಅಮೇರಿಕಾ ಹಾಗೂ ಇಸ್ರೇಲ್ ದೇಶಗಳು ಈ ಕುತಂತ್ರಾಂಶದ ಹಿಂದಿನ ಶಕ್ತಿಗಳಿರಬೇಕೆಂದು ಶಂಕಿಸಲಾಗಿತ್ತು.

ಇವೆರಡು ದೇಶಗಳ ಬೆಂಬಲದಿಂದಲೇ ಸೃಷ್ಟಿಯಾಗಿದೆ ಎಂದು ಹೇಳಲಾಗಿರುವ 'ಫ್ಲೇಮ್' ಎಂಬ ಇನ್ನೊಂದು ಕುತಂತ್ರಾಂಶ ಈಚೆಗೆ ಪತ್ತೆಯಾಗಿದೆ. ಸ್ಟಕ್ಸ್‌ನೆಟ್‌ನಂತೆಯೇ ಈ ಕುತಂತ್ರಾಂಶ ಕೂಡ ಇರಾನಿನ ಅಣುಶಕ್ತಿ ಕಾರ್ಯಕ್ರಮವನ್ನೇ ತನ್ನ ಗುರಿಯಾಗಿಸಿಕೊಂಡಿತ್ತಂತೆ. ನೇರ ಯುದ್ಧಕ್ಕೆ ಇಳಿಯುವ ಬದಲಿಗೆ ಈ ರೀತಿಯ ಪರೋಕ್ಷ ಮಾರ್ಗಗಳಿಂದ ಇರಾನಿನ ವಿವಾದಾತ್ಮಕ ಅಣುಶಕ್ತಿ ಯೋಜನೆಯ ಅನುಷ್ಠಾನವನ್ನು ನಿಧಾನಿಸುವ ಉದ್ದೇಶ ಫ್ಲೇಮ್‌ಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾದ ವರದಿಯೊಂದು ಹೇಳಿದೆ. ಸ್ಟಕ್ಸ್‌ನೆಟ್‌ನಂತೆ ಈ ಕುತಂತ್ರಾಂಶಕ್ಕೆ ಒಂದೇ ಉದ್ದೇಶ ಇರಲಿಲ್ಲವಂತೆ; ಅದು ತನ್ನ ಕೈಗೆ ಸಿಕ್ಕ ಎಲ್ಲ ಉಪಯುಕ್ತ ಮಾಹಿತಿಯನ್ನೂ ಬಳಸಿಕೊಳ್ಳಲು ಶಕ್ತವಾಗಿತ್ತು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಹೀಗೆ ಪದೇ ಪದೇ ವೆಬ್ ದಾಳಿಗಳಿಗೆ ತುತ್ತಾಗುತ್ತಿರುವ ಇರಾನ್ ಕೂಡ ತನ್ನ ಸೈಬರ್ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೊರಟಿದೆ. ಮುಂದಿನ ದಿನಗಳಲ್ಲಿ ಅದು ಇನ್ನಿತರ ದೇಶಗಳ ವಿರುದ್ಧ ದಾಳಿ ನಡೆಸಲು ಮುಂದಾದರೆ ಅದರಲ್ಲೇನೂ ಆಶ್ಚರ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಅಮೆರಿಕಾ, ಇಸ್ರೇಲ್, ಇರಾನ್‌ಗಳಷ್ಟೆ ಅಲ್ಲ, ನಮ್ಮ ನೆರೆಯ ಚೀನಾ ಸೇರಿದಂತೆ ಇನ್ನೂ ಅನೇಕ ದೇಶಗಳು ಕೂಡ ವೆಬ್ ಯುದ್ಧದಲ್ಲಿ ತೊಡಗಿಕೊಂಡಿರುವ ಶಂಕೆ ದಟ್ಟವಾಗಿದೆ. ಚೀನಾ ದೇಶ ಹಲವು ಸಂದರ್ಭಗಳಲ್ಲಿ ಸ್ವತಃ ಸೈಬರ್ ದಾಳಿಗಳಿಗೆ ತುತ್ತಾಗಿರುವುದು ನಿಜವೇ ಆದರೂ ಅದು ಇತರರ ವಿರುದ್ಧ ಡಿಜಿಟಲ್ ಪ್ರಪಂಚದಲ್ಲಿ ಸಮರ ಸಾರಿರುವ ಹಾಗೂ ಗೌಪ್ಯ ಮಾಹಿತಿಯ ಕಳವಿಗೆ ಪ್ರಯತ್ನಿಸುತ್ತಿರುವ ಬಗೆಗೂ ಹಲವಾರು ಆರೋಪಗಳಿವೆ. ಕೆಲವು ಪ್ರಮುಖ ಕ್ಷೇತ್ರಗಳ ತಂತ್ರಜ್ಞಾನಕ್ಕಾಗಿ ಆ ದೇಶದ ಮೇಲೆ ಅವಲಂಬಿತವಾಗಿರುವ ನಮ್ಮ ದೇಶವಂತೂ ಎಷ್ಟು ಎಚ್ಚರದಿಂದಿದ್ದರೂ ಕಡಿಮೆಯೇ!

ಒಳ್ಳೆಯ ಬುದ್ಧಿ ಉಳಿದರೆ ಅಷ್ಟೇ ಸಾಕು

ವೆಬ್ ಯುದ್ಧದಲ್ಲಿ ತೊಡಗಿರುವ ದೇಶಗಳು ಆ ಮೂಲಕ ಪರಸ್ಪರರ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಹಾಳುಗೆಡವಿದರೆ, ಅಣುಬಾಂಬುಗಳು ಸಿಡಿಯದಂತೆ ಮಾಡಿದರೆ ಒಂದು ರೀತಿಯಲ್ಲಿ ಒಳಿತೇ ಆಯಿತು ಎನ್ನಬಹುದೇನೋ. ಆದರೆ ವೆಬ್ ಯುದ್ಧದ ಪರಿಣಾಮ ಮನುಕುಲಕ್ಕೆ ಉಪಯುಕ್ತವಾದ ತಂತ್ರಜ್ಞಾನದ ಮೇಲೂ ಆದರೆ ಅದರ ಪರಿಣಾಮ ಭೀಕರವಾಗಬಹುದು.

ಹೀಗಾಗಿಯೇ ವೆಬ್ ಯುದ್ಧದ ಬೆಳೆವಣಿಗೆಯನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಹಲವು ಅಂತಾರಾಷ್ಟ್ರೀಯ ಸಂಘಟನೆಗಳು ಇಂತಹ ದಾಳಿಗಳನ್ನು ತಡೆಯುವತ್ತ ಕಾರ್ಯೋನ್ಮುಖವಾಗಿವೆ. ಯಾವುದೇ ದೇಶದ ಬೆಂಬಲದಿಂದ ನಡೆಯುತ್ತಿರುವ ದಾಳಿಯ ಬಗೆಗೆ ತನಗೇನಾದರೂ ಗೊತ್ತಾದರೆ ಅಂತಹ ದಾಳಿಗೆ ತುತ್ತಾದ ಕಂಪ್ಯೂಟರುಗಳ ಬಳಕೆದಾರರನ್ನು ತಾನು ಎಚ್ಚರಿಸುತ್ತೇನೆಂದು ಗೂಗಲ್ ತಾಣ ಹೇಳಿಕೊಂಡಿದೆ.

ತಮ್ಮ ನಿರ್ದಿಷ್ಟ ಉದ್ದೇಶ ಈಡೇರಿಸಿಕೊಳ್ಳಲು ಕೆಲ ರಾಷ್ಟ್ರಗಳು ವೆಬ್ ಯುದ್ಧದ ದಾರಿ ಹಿಡಿಯಬಹುದಾದರೂ ಅವು ತೀರಾ ಜನಸಾಮಾನ್ಯರಿಗೆ ತೊಂದರೆಕೊಡುವ ಮಟ್ಟಕ್ಕೆ ಹೋಗಲಾರವೆಂಬ ಆಶಾಭಾವನೆಯನ್ನು ಸೈಬರ್ ಅಪರಾಧ ಕ್ಷೇತ್ರದ ವಿದ್ವಾಂಸರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಯೋತ್ಪಾದಕರೇನಾದರೂ ಅತ್ತ ಮುಖಮಾಡಿದರೆ?

ಹಾಗಾಗದಿರಲಿ, ಎಲ್ಲೆಲ್ಲೂ ಒಳ್ಳೆಯ ಬುದ್ಧಿಯಷ್ಟೇ ಉಳಿಯಲಿ ಎಂಬ ಆಶಾಭಾವನೆಯನ್ನು ನಾವು ವ್ಯಕ್ತಪಡಿಸೋಣ.

ಜೂನ್ ೨೬, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
ಮಾಹಿತಿ: ಅಂತರಜಾಲದ ವಿವಿಧ ಮೂಲಗಳಿಂದ

1 ಕಾಮೆಂಟ್‌:

ಶ್ರೀಪತಿ ಮ. ಗೋಗಡಿಗೆ ಹೇಳಿದರು...

ಉತ್ತಮವಾದ ಮಾಹಿತಿ, ಧನ್ಯವಾದಗಳು

badge