ಮಂಗಳವಾರ, ಜೂನ್ 12, 2012

ಕಂಪ್ಯೂಟರ್ ಪರಿಣತ ಎನಿಸಿಕೊಳ್ಳಬೇಕೆ? ಸಾಫ್ಟ್‌ವೇರ್ ಪರಿಣತಿಯಷ್ಟೆ ಸಾಲದು!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿ ಗಳಿಸಿಕೊಳ್ಳುವುದಷ್ಟೆ ಅಲ್ಲ, ಕಂಪ್ಯೂಟರ್ ಬಳಕೆಯ ಸರಿಯಾದ ವಿಧಾನ ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯ. ಕಂಪ್ಯೂಟರ್ ಬಳಸುವ ಸರಿಯಾದ ವಿಧಾನ ಎಂದಮಾತ್ರಕ್ಕೆ ಅದು ಕಂಪ್ಯೂಟರ್ ಬಳಸಿ ಮಾಡುವ ಕೆಲಸಗಳಿಗಷ್ಟೆ ಸಂಬಂಧಪಟ್ಟ ವಿಷಯವಲ್ಲ; ಕಂಪ್ಯೂಟರ್ ಬಳಸುವಾಗ ನಾವು ಕುಳಿತಿರುವ ಭಂಗಿ, ಬಳಸುವ ಪೀಠೋಪಕರಣಗಳ ವಿನ್ಯಾಸವೂ ಅದರ ವ್ಯಾಪ್ತಿಗೆ ಬರುತ್ತವೆ.

ಅಸಮರ್ಪಕ ಭಂಗಿ ಅಥವಾ ಹೊಂದಿಕೊಳ್ಳದ ಪೀಠೋಪಕರಣದ ಬಳಕೆ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಲ್ಲದು. ಅಂತಹ ದುಷ್ಪರಿಣಾಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಾಲಿಸಬಹುದಾದ ಕೆಲ ನಿಯಮಗಳು ಇಲ್ಲಿವೆ.

  • ಅತ್ಯಾಧುನಿಕ ಕಂಪ್ಯೂಟರ್ ಕೊಳ್ಳಲು ವೆಚ್ಚಮಾಡುವ ಹಣದ ಕೆಲಭಾಗವನ್ನಾದರೂ ಒಳ್ಳೆಯ ಮೇಜು ಹಾಗೂ ಕುರ್ಚಿಗಾಗಿ ಖರ್ಚುಮಾಡಿ. ಕುರ್ಚಿಯ ಎತ್ತರವನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವಂತಿದ್ದರೆ ಒಳಿತು. ಹಾಗೆಯೇ ಅದು ನಿಮ್ಮ ಬೆನ್ನು ಮತ್ತು ಮೊಣಕೈಗಳಿಗೆ ಸರಿಯಾಗಿ ಆಧಾರ ನೀಡುವಂತಿರಲಿ.
  • ಕಂಪ್ಯೂಟರಿನ ಪರದೆ ನಿಮ್ಮ ಕಣ್ಣಿನ ದೃಷ್ಟಿಗೆ ನೇರವಾಗಿಯೇ ಇರಲಿ. ಹಾಗೆಂದು ಮಾನಿಟರನ್ನು ತೀರಾ ಸಮೀಪದಲ್ಲಿಟ್ಟುಕೊಳ್ಳುವುದೂ ತಪ್ಪು; ಕಂಪ್ಯೂಟರಿನ ಪರದೆಗೂ ನಿಮಗೂ ನಡುವೆ ಕನಿಷ್ಠ ಒಂದು ಮಾರುದ್ದದ ಅಂತರವಿರಲಿ. ಕೀಬೋರ್ಡ್-ಮೌಸ್ ಇತ್ಯಾದಿಗಳೂ ಕಂಪ್ಯೂಟರ್ ಪರದೆಯ ಎದುರಿಗೇ ಇರಲಿ.
  • ಕೀಬೋರ್ಡ್ ಹಾಗೂ ಮೌಸ್ ಇಟ್ಟಿರುವ ಮೇಜಿನ ಮೇಲ್ಮೈ ತೀರಾ ಎತ್ತರದಲ್ಲಿ ಅಥವಾ ತೀರಾ ತಗ್ಗಿನಲ್ಲಿ ಇಲ್ಲದಂತೆ ನೋಡಿಕೊಳ್ಳಿ. ಕುರ್ಚಿಯ ಮೇಲೆ ಕುಳಿತು ಕೀಬೋರ್ಡ್-ಮೌಸ್ ಬಳಸುವಾಗ ನಿಮ್ಮ ಮೊಣಕೈ ಹೆಚ್ಚೂಕಡಿಮೆ ಮೇಜಿನ ಮಟ್ಟದಲ್ಲೇ ಇರಬೇಕು.
  • ಕುರ್ಚಿಯ ಮೇಲೆ ಕುಳಿತಾಗ ನಿಮ್ಮ ಕಾಲುಗಳು ನೆಲದ ಮೇಲೆ ಆರಾಮವಾಗಿ ಊರಿರಲಿ. ಕುರ್ಚಿಯ ತುದಿಯಲ್ಲೆಲ್ಲೋ ಕುಳಿತುಕೊಳ್ಳಬೇಡಿ; ಬೆನ್ನಿಗೆ ಸರಿಯಾದ ಆಧಾರ ಸಿಗದಿದ್ದರೆ ಬೆನ್ನು ನೋವು ಕಾಣಿಸಿಕೊಳ್ಳಬಹುದು. ನಿಮ್ಮ ಭಂಗಿ ಮೊಣಕಾಲಿಗೂ ನೆಲಕ್ಕೂ ನಡುವೆ ಹೆಚ್ಚೂಕಡಿಮೆ ತೊಂಬತ್ತು ಡಿಗ್ರಿ ಕೋನ ಉಂಟುಮಾಡುವಂತಿರಬೇಕು. ಮೊಣಕಾಲಿನ ಮೇಲೆ ಯಾವುದೇ ಒತ್ತಡ ಇಲ್ಲದಂತೆ ನೋಡಿಕೊಳ್ಳಿ.
  • ಟೈಪಿಸುತ್ತಿರುವಾಗ ನಿಮ್ಮ ಮಣಿಕಟ್ಟುಗಳು ಆದಷ್ಟೂ ಸಡಿಲವಾಗಿರಲಿ. ಕೀಬೋರ್ಡ್-ಮೌಸ್ ಬಳಸಲು ಮಣಿಕಟ್ಟುಗಳನ್ನು ಮೇಲಕ್ಕೆ, ಕೆಳಕ್ಕೆ ಅಥವಾ ಪಕ್ಕಕ್ಕೆ ಬಾಗಿಸಬೇಕಾಗುವ ಪರಿಸ್ಥಿತಿಯಿದೆ ಎಂದರೆ ನಿಮ್ಮ ಭಂಗಿ ಸರಿಯಿಲ್ಲ ಎಂದೇ ಅರ್ಥ. ಇಂತಹ ಭಂಗಿಯಲ್ಲಿ ನೀವು ಸುದೀರ್ಘ ಅವಧಿಗಳವರೆಗೆ ಕಂಪ್ಯೂಟರ್ ಬಳಸಿದ್ದೇ ಆದರೆ ನಿಮ್ಮ ಮಣಿಕಟ್ಟಿನ ಮೇಲೆ ಒತ್ತಡ ಜಾಸ್ತಿಯಾಗಿ ಕೈನೋವು ಕಾಣಿಸಿಕೊಳ್ಳಬಹುದು.
  • ಬರಿಯ ಮಣಿಕಟ್ಟಷ್ಟೆ ಅಲ್ಲ, ತಪ್ಪು ಭಂಗಿಯಿಂದಾಗಿ ಕತ್ತು-ಮೊಣಕೈ-ಬೆನ್ನು ಮುಂತಾದ ಯಾವುದೇ ಭಾಗದ ಮೇಲೆ ಸತತವಾಗಿ ಒತ್ತಡ ಬಿದ್ದರೂ ಆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಅದು ಸುಲಭಕ್ಕೆ ವಾಸಿಯಾಗುವುದೂ ಇಲ್ಲ. ವೈದ್ಯಕೀಯ ನೆರವು ಅತ್ಯಗತ್ಯವಾಗುವ ಇಂತಹ ಪರಿಸ್ಥಿತಿಯನ್ನು ರಿಪಿಟಿಟಿವ್ ಸ್ಟ್ರೈನ್ ಇಂಜುರಿ ಅಥವಾ ಆರ್‌ಎಸ್‌ಐ ಎಂದು ಕರೆಯುತ್ತಾರೆ (ನಮ್ಮಲ್ಲಿ ಅನೇಕರು ಕತ್ತು-ಭುಜದ ನಡುವೆ ಮೊಬೈಲ್ ಇರುಕಿಸಿಕೊಂಡು ಮಾತನಾಡುತ್ತೇವಲ್ಲ, ಅದೂ ಆರ್‌ಎಸ್‌ಐಗೆ ಕಾರಣವಾಗಬಹುದು!).
  • ನೀವು ಕೆಲಸಮಾಡುವಲ್ಲಿ ಗಾಳಿ-ಬೆಳಕು ಕೂಡ ಸರಿಯಾಗಿರುವಂತೆ ನೋಡಿಕೊಳ್ಳಿ. ನೀವು ಕುಳಿತಿರುವ ಭಂಗಿ ಎಷ್ಟೇ ಸರಿಯಿದ್ದರೂ ಸುದೀರ್ಘ ಅವಧಿಗಳವರೆಗೆ ಹಾಗೆಯೇ ಕುಳಿತಿರಬೇಡಿ. ಆಗಾಗ ಒಂದೊಂದು ಬ್ರೇಕ್ ತೆಗೆದುಕೊಳ್ಳಿ, ನಿಮ್ಮ ಕಣ್ಣುಗಳಿಗೆ-ದೇಹಕ್ಕೆ ಕೊಂಚವಾದರೂ ವಿರಾಮ ಕೊಡಿ. ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿರುತ್ತೇನೆ, ಸಮಯದ ಪರಿವೆಯೇ ಇರುವುದಿಲ ಎನ್ನುವವರು ನೀವಾದರೆ ಹಲವಾರು ತಂತ್ರಾಂಶಗಳು ನಿಮ್ಮ ಸಹಾಯಕ್ಕೆ ಬರಬಲ್ಲವು (ಇಂತಹ ತಂತ್ರಾಂಶಗಳನ್ನು ಹುಡುಕಲು ಗೂಗಲ್‌ನಲ್ಲಿ 'ಬ್ರೇಕ್ ರಿಮೈಂಡರ್ ಸಾಫ್ಟ್‌ವೇರ್' ಎಂದು ಟೈಪಿಸಿ).
  • ಅಷ್ಟೇ ಅಲ್ಲ, ದೈಹಿಕವಾಗಿ ಏನಾದರೂ ತೊಂದರೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದನ್ನೂ ಮರೆಯಬೇಡಿ!

ವಿನ್ಯಾಸದ ವಿಜ್ಞಾನ 'ಆರ್ಗೊನಾಮಿಕ್ಸ್'
ರೇಜರ್‌ನಿಂದ ಪ್ರಾರಂಭಿಸಿ ರೋಡ್‌ರೋಲರ್‌ವರೆಗೆ ಯಾವುದೇ ವಿನ್ಯಾಸವಾದರೂ ಅದು ಬಳಕೆದಾರನಿಗೆ ಅನುಕೂಲವಾಗುವಂತಿರಬೇಕು. ಹೀಗಾಗಿಯೇ ವಸ್ತುಗಳ ವಿನ್ಯಾಸ ಬಹಳ ದೊಡ್ಡ ಕ್ಷೇತ್ರವಾಗಿ ಬೆಳೆದಿದೆ; ಕೆಲ ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ನಾವು ಬಳಸುವ ಬಹುತೇಕ ವಸ್ತುಗಳ ವಿನ್ಯಾಸವೆಲ್ಲ ಗಣನೀಯವಾಗಿ ಬದಲಾಗಿದೆ.

ಕೆಲಸದ ಸ್ಥಳದ ಮಾತು ಬಂದಾಗಲಂತೂ ಅಲ್ಲಿನ ವಿನ್ಯಾಸದಿಂದ ಕೆಲಸಗಾರರಿಗೆ ಸಣ್ಣ ತೊಂದರೆಯೂ ಆಗದಂತೆ ಉದ್ಯೋಗದಾತರು ಎಚ್ಚರವಹಿಸುತ್ತಾರೆ. ಬೇರೆಬೇರೆ ಸನ್ನಿವೇಶಗಳಿಗೆ ಮಾನವ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡಿಕೊಂಡು ಅತ್ಯಂತ ಸಮರ್ಪಕವಾದ ವಿನ್ಯಾಸ ರೂಪಿಸುವ ವಿಜ್ಞಾನದ ಒಂದು ಶಾಖೆಯೇ ಬೆಳೆದಿದೆ - ಅರ್ಗೊನಾಮಿಕ್ಸ್ ಎಂಬ ಹೆಸರಿನ ಈ ವಿಜ್ಞಾನ ಕಂಪ್ಯೂಟರ್ ಬಳಕೆದಾರರ ಮಟ್ಟಿಗಂತೂ ಬಹಳ ಮುಖ್ಯವಾದದ್ದು. ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಆರಾಮವಾಗಿ ಕೆಲಸಮಾಡಬೇಕೆಂದರೆ ಆರ್ಗೊನಾಮಿಕ್ ವಿನ್ಯಾಸದ ಪೀಠೋಪಕರಣ ಬಳಸುವುದು ಅಪೇಕ್ಷಣೀಯ.

ಹಿರಿಯ ಲೇಖಕ ನಾಗೇಶ ಹೆಗಡೆಯವರು ಹೇಳುವಂತೆ ಇದನ್ನು ಕನ್ನಡದಲ್ಲಿ 'ಸುವಿಧಾವಿನ್ಯಾಸ' ಎಂದು ಕರೆಯಬಹುದು.
ಜೂನ್ ೧೨, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge