ಮಂಗಳವಾರ, ಜೂನ್ 5, 2012

ಕ್ರೌಡ್‌ಫಂಡಿಂಗ್

ಟಿ. ಜಿ. ಶ್ರೀನಿಧಿ

"ನನ್ನ ಹತ್ತಿರ ಎಂತಹ ಬಿಸಿನೆಸ್ ಐಡಿಯಾ ಇದೆ ಗೊತ್ತಾ? ಇನ್‌ವೆಸ್ಟ್ ಮಾಡೋದಕ್ಕೆ ಯಾರಾದ್ರೂ ಸಿಕ್ಕಿದ್ರೆ ಅದರಿಂದ ಲಕ್ಷ ಲಕ್ಷ ದುಡಿಯಬಹುದು!" ಎಂದೆಲ್ಲ ಹೇಳುವವರನ್ನು ನೀವೂ ನೋಡಿರಬಹುದು. ಬಹಳಷ್ಟು ಸಾರಿ ಇವು ಬಂಡವಾಳವಿಲ್ಲದ ಬಡಾಯಿಗಳಾಗಿರುತ್ತವಾದರೂ ಕೆಲವೊಮ್ಮೆ ಒಳ್ಳೆಯ ಐಡಿಯಾಗಳು ಕೂಡ ಇನ್ವೆಸ್ಟ್‌ಮೆಂಟ್ ಸಮಸ್ಯೆಯಿಂದ ಬಳಲುತ್ತವೆ. ಬಂಡವಾಳದ ಕೊರತೆಯಿಂದ ಅದೆಷ್ಟು ಒಳ್ಳೆಯ ಐಡಿಯಾಗಳು ಅಪರಿಚಿತವಾಗಿಯೇ ಉಳಿದುಬಿಟ್ಟಿವೆಯೋ!

ಒಳ್ಳೆಯ ಬಿಸಿನೆಸ್ ರೂಪಿಸಿಕೊಳ್ಳಲು ಸಖತ್ತಾಗಿರುವ ಐಡಿಯಾ ಎಷ್ಟು ಮುಖ್ಯವೋ ಅದಕ್ಕೆ ಬೇಕಾದಷ್ಟು ಬಂಡವಾಳ ಹೂಡುವುದೂ ಅಷ್ಟೇ ಮುಖ್ಯ. ಆದರೆ ಐಡಿಯಾ ದೊಡ್ಡದಾದಂತೆ ಅದಕ್ಕೆ ಬೇಕಾದ ಬಂಡವಾಳದ ಪ್ರಮಾಣವೂ ದೊಡ್ಡದೇ ಆಗುತ್ತದೆ; ಅಲ್ಲೇ ಸಮಸ್ಯೆಯೂ ಶುರುವಾಗುತ್ತದೆ. ಬಿಸಿನೆಸ್‌ಗೆ ಬೇಕಾದ ಬಂಡವಾಳ ಹೊಂದಿಸಿಕೊಳ್ಳುವುದು ಬಹಳಷ್ಟು ಸಾರಿ ದೊಡ್ಡ ಸಮಸ್ಯೆಯೇ. ವ್ಯವಹಾರ ಲಾಭದಾಯಕವಾಗಬಹುದು ಎಂದು ಹೂಡಿಕೆದಾರರಿಗೆ ಅನಿಸದಿದ್ದರೆ ಬಂಡವಾಳ ಹುಟ್ಟುವುದೇ ಇಲ್ಲ. ತೀರಾ ಕ್ರಾಂತಿಕಾರಕ ಎನಿಸುವಂತಹ ಐಡಿಯಾಗಳು ಈ ಕಾರಣದಿಂದಾಗಿಯೇ ಹಲವು ಸಾರಿ ಬಂಡವಾಳಕ್ಕಾಗಿ ಪರದಾಡಬೇಕಾಗುತ್ತದೆ.

ಅಂತರಜಾಲದ ಲೋಕದಲ್ಲಿ ಇದಕ್ಕೊಂದು ಯಶಸ್ವಿ ಪರ್ಯಾಯ ಇದೆ. ಅದು ಬಹಳ ಸರಳವೂ ಹೌದು - ಒಬ್ಬನೇ ಹೂಡಿಕೆದಾರನಿಂದ ಒಂದು ಲಕ್ಷ ರೂಪಾಯಿ ಕೇಳುವುದಕ್ಕಿಂತ ನೂರು ಜನರಿಂದ ತಲಾ ಸಾವಿರ ರೂಪಾಯಿ ಪಡೆದುಕೊಳ್ಳುವುದು ಸುಲಭ ಎನ್ನುವ ಅಂಶವನ್ನು 'ಕ್ರೌಡ್‌ಫಂಡಿಂಗ್' ಹೆಸರಿನ ಈ ಪರಿಕಲ್ಪನೆ ಬಳಸಿಕೊಳ್ಳುತ್ತದೆ.


ಅಂತರಜಾಲದ ಮೂಲಕ ಕ್ರೌಡ್‌ಫಂಡಿಂಗ್ ಎಂಬ ಕಲ್ಪನೆ ಶುರುವಾದದ್ದು ತೊಂಬತ್ತರ ದಶಕದಲ್ಲಿ. ೧೯೯೭ರಲ್ಲಿ ಇಂಗ್ಲೆಂಡಿನ ರಾಕ್ ಮ್ಯೂಸಿಕ್ ತಂಡವೊಂದು ಅಮೆರಿಕಾಗೆ ಹೋಗಬೇಕಾಗಿ ಬಂದಾಗ ಆ ತಂಡದ ಅಭಿಮಾನಿಗಳು ಅಂತರಜಾಲದ ಮೂಲಕ ಒಂದು ಅಭಿಯಾನ ಸಂಘಟಿಸಿ ಇಡೀ ಪ್ರವಾಸದ ವೆಚ್ಚವನ್ನು ಸಂಗ್ರಹಿಸಿಕೊಟ್ಟಿದ್ದರು. ಪ್ರಾಯಶಃ ಇದೇ ಕ್ರೌಡ್‌ಫಂಡಿಂಗ್‌ನ ಮೊದಲ ಉದಾಹರಣೆ.

ಪ್ರತಿ ಕಾರ್ಯಕ್ರಮಕ್ಕೂ ಪ್ರತ್ಯೇಕವಾಗಿ ಕ್ರೌಡ್‌ಫಂಡಿಂಗ್ ಅಭಿಯಾನ ಆಯೋಜಿಸುವುದು ಕಷ್ಟವಲ್ಲ! ಇದರ ಬದಲಿಗೆ ಕ್ರೌಡ್‌ಫಂಡಿಂಗ್‌ಗಾಗಿಯೇ ಜಾಲತಾಣಗಳನ್ನು ರೂಪಿಸಿಬಿಟ್ಟರೆ ಯಾರಿಗೆ ಯಾವ ಉದ್ದೇಶಕ್ಕಾಗಿ ಹಣ ಬೇಕಾಗುತ್ತದೋ ಅವರು ಆ ತಾಣದ ನೆರವು ಪಡೆಯಬಹುದು. ಈ ಉದ್ದೇಶದೊಡನೆ ಹೊಸ ಶತಮಾನದ ಪ್ರಾರಂಭದಲ್ಲಿ ಶುರುವಾದ ಆರ್ಟಿಸ್ಟ್ ಶೇರ್ ಎಂಬ ಜಾಲತಾಣ ಮೊದಲ ಕ್ರೌಡ್‌ಫಂಡಿಂಗ್ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ನಂತರದ ದಿನಗಳಲ್ಲಿ ಇಂತಹವೇ ಇನ್ನೂ ಹಲವಾರು ತಾಣಗಳು ಪ್ರಾರಂಭವಾದವು. ಕ್ರೌಡ್‌ಫಂಡಿಂಗ್ ನೆರವಿನಿಂದ ಮ್ಯೂಸಿಕ್ ಆಲ್ಬಂಗಳು, ಚಲನಚಿತ್ರಗಳೆಲ್ಲ ರೂಪುಗೊಂಡವು. ಕ್ರೌಡ್‌ಫಂಡಿಂಗ್ ಜನಪ್ರಿಯವಾಗುತ್ತಿದ್ದಂತೆ ಎಲ್ಲ ಬಗೆಯ ಪ್ರಾಜೆಕ್ಟುಗಳೂ ತಮಗೆ ಬೇಕಾದ ಬಂಡವಾಳಕ್ಕಾಗಿ ಅತ್ತ ಮುಖಮಾಡಲು ಪ್ರಾರಂಭಿಸಿದವು; ಬಂಡವಾಳ ತೊಡಗಿಸಿದವರಿಗೆ ಪ್ರತಿಫಲವಾಗಿ ಕೊಡುಗೆಗಳನ್ನು ನೀಡುವ ಸಂಪ್ರದಾಯವೂ ಶುರುವಾಯಿತು.

ಹಲವಾರು ಬಾರಿ ಬಂಡವಾಳದ ನೆರವಿನಿಂದ ತಯಾರಾದ ಉತ್ಪನ್ನವನ್ನೇ ಹೀಗೆ ಕೊಡುಗೆಯಾಗಿ ನೀಡಲಾಗುತ್ತದೆ; ಸಿನಿಮಾಗೆ ಹಣತೊಡಗಿಸಿದ್ದರೆ ಸಿನಿಮಾ ಟಿಕೇಟು, ಪುಸ್ತಕವೋ ತಂತ್ರಾಂಶವೋ ಆದರೆ ಅದರದೊಂದು ಪ್ರತಿ - ಹೀಗೆ. ಜೊತೆಗೆ ಇನ್ನಿತರ ಕೊಡುಗೆಗಳನ್ನು ಕೊಡುವ ಅಭ್ಯಾಸವೂ ಅಪರೂಪವೇನಲ್ಲ. ಹಣಹೂಡುವವರಿಗೆ ಶೇರುಗಳ ರೂಪದ ಪಾಲುದಾರಿಕೆ ನೀಡುವ ಅಭ್ಯಾಸವೂ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಈಚಿನ ದಿನಗಳಲ್ಲಿ ಕ್ರೌಡ್‌ಫಂಡಿಂಗ್ ತಾಣಗಳಲ್ಲಿ ಸ್ಟಾರ್‌ಪಟ್ಟ ಗಳಿಸಿಕೊಂಡಿರುವುದು ಕಿಕ್‌ಸ್ಟಾರ್ಟರ್ ಡಾಟ್ ಕಾಮ್. ಈ ತಾಣ ತಂತ್ರಜ್ಞಾನದ ಐಡಿಯಾಗಳಿಗೂ ಬಂಡವಾಳ ಹುಡುಕಿಕೊಳ್ಳಲು ನೆರವಾಗುವುದು ವಿಶೇಷ. ತಂತ್ರಜ್ಞಾನದ ಹಲವು ಐಡಿಯಾಗಳಿಗೆ ಈ ತಾಣ ಈಗಾಗಲೇ ಹಣ ಹೊಂದಿಸಿಕೊಳ್ಳಲು ನೆರವುನೀಡಿದೆ. ಸಣ್ಣಪುಟ್ಟ ಮೊತ್ತಗಳಷ್ಟೇ ಅಲ್ಲ, ಈ ತಾಣದ ನೆರವಿನಿಂದ ಒಂದು ಮಿಲಿಯನ್ ಡಾಲರುಗಳಿಗಿಂತ ಹೆಚ್ಚಿನ ಬಂಡವಾಳ ಪಡೆದುಕೊಂಡಿರುವ ಉದಾಹರಣೆಗಳೂ ಇವೆ. ಡಬಲ್ ಫೈನ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಹೊಸತೊಂದು ವೀಡಿಯೋ ಗೇಮ್ ರೂಪಿಸಲು ಕಿಕ್‌ಸ್ಟಾರ್ಟರ್ ಸಹಾಯದಿಂದ ಮೂರು ಮಿಲಿಯನ್ ಡಾಲರುಗಳ ಮೊತ್ತ ಸಂಗ್ರಹಿಸಿ ದಾಖಲೆಯನ್ನೇ ಸ್ಥಾಪಿಸಿದೆ. ಕಳೆದೊಂದು ವರ್ಷದಲ್ಲಿ ಕಿಕ್‌ಸ್ಟಾರ್ಟರ್ ತಾಣದ ಮೂಲಕ ಸಂಗ್ರಹವಾಗಿರುವ ಒಟ್ಟು ಮೊತ್ತ ಹೆಚ್ಚೂಕಡಿಮೆ ನೂರು ಮಿಲಿಯನ್ ಡಾಲರುಗಳಂತೆ!

ಕಿಕ್‌ಸ್ಟಾರ್ಟರ್ ಮೂಲಕ ತಮ್ಮ ಯೋಜನೆಗೆ ಬಂಡವಾಳ ಸಂಗ್ರಹಿಸಲು ಹೊರಡುವವರು ತಮಗೆಷ್ಟು ಬಂಡವಾಳ ಬೇಕಾಗಬಹುದು ಎನ್ನುವುದನ್ನು ಸೂಚಿಸಿ ತಮಗೆ ನೆರವಾಗುವಂತೆ ತಾಣದ ಬಳಕೆದಾರರನ್ನು ಕೇಳಬಹುದು. ಅವರ ಐಡಿಯಾ ಇಷ್ಟವಾದ ಬಳಕೆದಾರರು ತಮ್ಮಿಂದಾದಷ್ಟು ನೆರವು ನೀಡಲು ಮುಂದೆಬರುತ್ತಾರೆ. ನಿರ್ದಿಷ್ಟ ಸಮಯದಲ್ಲಿ ಅಗತ್ಯ ಪ್ರಮಾಣದ ಬಂಡವಾಳದ ಆಶ್ವಾಸನೆ ಸಿಕ್ಕರೆ ಮಾತ್ರ ಯೋಜನೆಗೆ ಹಣ ಸಂದಾಯವಾಗುತ್ತದೆ, ಇಲ್ಲದಿದ್ದರೆ ಇಲ್ಲ! ಯೋಜನೆಗೆ ಹಣ ಸಿಗುವುದೇ ಆದರೆ ಅದರಲ್ಲಿ ಶೇ.೫ರಷ್ಟು ಭಾಗ ಕಿಕ್‌ಸ್ಟಾರ್ಟರ್ ತಾಣಕ್ಕೆ ಹೋಗುತ್ತದೆ. ಬಂಡವಾಳ ಹೂಡಿದವರಿಗೆ ಯೋಜನೆ ಕಾರ್ಯಗತಗೊಳಿಸುವವರ ಕಡೆಯಿಂದ ಉಡುಗೊರೆಯೂ ದೊರಕುತ್ತದೆ. ಎಷ್ಟು ಸುಲಭ ಎನ್ನಿಸುತ್ತಿದೆಯೇ? ಇಲ್ಲೊಂದು ಸಂಗತಿಯಿದೆ: ಕಿಕ್‌ಸ್ಟಾರ್ಟರ್ ತಾಣದ ನೆರವು ಭಾರತದ ಪ್ರಾಜೆಕ್ಟುಗಳಿಗೆ ಇನ್ನೂ ದೊರಕುತ್ತಿಲ್ಲ.

ಹಾಗೆಂದಮಾತ್ರಕ್ಕೆ ಭಾರತದಲ್ಲಿ ಕ್ರೌಡ್‌ಫಂಡಿಂಗ್ ಇನ್ನೂ ಕಾಣಿಸಿಕೊಂಡೇ ಇಲ್ಲ ಎಂದುಕೊಳ್ಳುವಂತಿಲ್ಲ. ನಮ್ಮ ಕನ್ನಡನಾಡಿನಲ್ಲೂ ಕ್ರೌಡ್‌ಫಂಡಿಂಗ್ ಪರಿಕಲ್ಪನೆ ಪ್ರಚಲಿತಕ್ಕೆ ಬಂದಿದೆ. 'ಲೈಫು ಇಷ್ಟೇನೆ...!' ಖ್ಯಾತಿಯ ಚಿತ್ರನಿರ್ದೇಶಕ ಪವನ್ ಕುಮಾರ್ ತಮ್ಮ 'ಪ್ರಾಜೆಕ್ಟ್ ಲೂಸಿಯಾ'ಗಾಗಿ ಕ್ರೌಡ್‌ಫಂಡಿಂಗ್ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಐವತ್ತು ಲಕ್ಷ ರೂಪಾಯಿ ಸಂಗ್ರಹಣೆಯ ಗುರಿಯನ್ನು ಇಪ್ಪತ್ತೇಳೇ ದಿನಗಳಲ್ಲಿ ಮುಟ್ಟಿಯೂ ಇದ್ದಾರೆ! ಪ್ರೇಕ್ಷಕರಿಂದಲೇ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವೆಂಬ ಹಣೆಪಟ್ಟಿ ಗಳಿಸಿಕೊಂಡಿರುವ ಲೂಸಿಯಾ ಬಗೆಗಿನ ಹೆಚ್ಚಿನ ಮಾಹಿತಿ ಈ ತಾಣದಲ್ಲಿದೆ.

ಜೂನ್ ೫, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾಗಿರುವ ಲೇಖನ

ಕಾಮೆಂಟ್‌ಗಳಿಲ್ಲ:

badge