ಮಂಗಳವಾರ, ಮೇ 1, 2012

ಬೇಗನೆ ಎದ್ದ ಹಕ್ಕಿಯೂ, ತಡವಾಗಿ ಬಂದ ಇಲಿಯೂ...

ತಂತ್ರಜ್ಞಾನ ಲೋಕದ ಕೆಲ ಇಂಟರೆಸ್ಟಿಂಗ್ ಕತೆಗಳು

ಟಿ. ಜಿ. ಶ್ರೀನಿಧಿ

ಇಂಗ್ಲಿಷಿನಲ್ಲೊಂದು ಹೇಳಿಕೆಯಿದೆ, "ಅರ್ಲಿ ಬರ್ಡ್ ಗೆಟ್ಸ್ ದ ವರ್ಮ್" ಅಂತ. ಯಾವ ಹಕ್ಕಿ ಮಿಕ್ಕೆಲ್ಲವಕ್ಕಿಂತ ಬೇಗ ಎದ್ದು ಹೊರಡುತ್ತದೋ ಅದಕ್ಕೆ ಹೆಚ್ಚು ಹುಳುಗಳು ಆಹಾರವಾಗಿ ಸಿಗುತ್ತವೆ ಎನ್ನುವುದು ಅದರ ಅರ್ಥ. ಬೇಗನೆ ಎದ್ದ ಹುಳುವಿನ ಕತೆ ಏನಾದರೂ ಆಗಲಿ, ನೀವು ಬೇಗನೆ ಎದ್ದು ಹೊರಟ ಹಕ್ಕಿಯಾದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಈ ಮಾತಿನ ಸಾರಾಂಶ.

ಹಾಗಾದರೆ ಈ ಮಾತಿನ ಆಧಾರದ ಮೇಲೆ ಯಾವುದೇ ಕೆಲಸವನ್ನು ಯಾರು ಬೇಗನೆ ಪ್ರಾರಂಭಿಸಿರುತ್ತಾರೋ ಅವರಿಗೇ ಹೆಚ್ಚಿನ ಅಡ್ವಾಂಟೇಜು ಎನ್ನಬಹುದೆ? ಕಾಮನ್ ಸೆನ್ಸ್ ಪ್ರಕಾರ ಹೇಳುವುದಾದರೆ ಬಹುತೇಕ ಸಂದರ್ಭಗಳಲ್ಲಿ ಅದೇ ಸರಿ.

ಆದರೆ ತಂತ್ರಜ್ಞಾನ ಲೋಕದಲ್ಲಿ ಎಲ್ಲವೂ ಯಾವಾಗಲೂ ಕಾಮನ್ ಆಗಿರುವುದಿಲ್ಲ. ಅದು ಹೇಗೆ ಎನ್ನುವುದಕ್ಕೆ ಇಲ್ಲೊಂದಷ್ಟು ಉದಾಹರಣೆಗಳಿವೆ. ಓದಿ.


* * *

ಟ್ಯಾಬ್ಲೆಟ್ ಅಂದತಕ್ಷಣ ಬಹಳಷ್ಟು ಜನರಿಗೆ ಐಪ್ಯಾಡ್ ಹೆಸರು ನೆನಪಿಗೆ ಬರುತ್ತದೆ. ಆಪಲ್ ಸಂಸ್ಥೆ ಮಾಡಿರುವ ಮೋಡಿ ಅಂಥದ್ದು. ಟ್ಯಾಬ್ಲೆಟ್ ಕಂಪ್ಯೂಟರ್ ಪರಿಕಲ್ಪನೆಗೆ ಜನಪ್ರಿಯತೆ ತಂದುಕೊಟ್ಟ ಸಾಧನೆ ಆ ಸಂಸ್ಥೆಯದು. ಆದರೆ ಈ ಪರಿಕಲ್ಪನೆಯ ಮಟ್ಟಿಗೆ ಆಪಲ್ ಸಂಸ್ಥೆ ಬೇಗನೆ ಎದ್ದ ಹಕ್ಕಿಯಾಗಿರಲಿಲ್ಲ! ಅದು ಪಿಕ್ಚರಿಗೆ ಬಂದದ್ದು ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಪಿಸಿಗಳು ಪರಿಚಯವಾದ ಒಂದು ದಶಕದ ನಂತರವೇ ಆದರೂ ಬೇಗನೆ ಎದ್ದ ಹಕ್ಕಿಗೆ ಸಿಗದ ಯಶಸ್ಸನ್ನು ತನ್ನದಾಗಿಸಿಕೊಂಡಿತು.

ಕೊಡಕ್ ಸಂಸ್ಥೆಯದು ಬೇಗನೆ ಎದ್ದರೂ ಆಹಾರ ಸಿಗದ ಹಕ್ಕಿಯ ಪಾಡು. ಆ ಸಂಸ್ಥೆ ೧೯೭೫ರಷ್ಟು ಹಿಂದೆಯೇ ಪ್ರಪಂಚದ ಮೊತ್ತಮೊದಲ ಡಿಜಿಟಲ್ ಕ್ಯಾಮೆರಾ ತಯಾರಿಸಿದರೂ ಕೂಡ ಆ ಸಂಶೋಧನೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಪರಿಣಾಮ? ಡಿಜಿಟಲ್ ಕ್ಯಾಮೆರಾಗಳ ಬೇಡಿಕೆ ಉತ್ತುಂಗಕ್ಕೆ ತಲುಪುತ್ತಿರುವ ಸಂದರ್ಭದಲ್ಲಿ ಕೊಡಕ್ ಸಂಸ್ಥೆ ದಿವಾಳಿಯಾಗುವ ಅಂಚಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂತು. ಡಿಜಿಟಲ್ ಕ್ಯಾಮೆರಾ ಪ್ರಪಂಚಕ್ಕೆ ಕೊಡಕ್ ನಂತರ ಕಾಲಿಟ್ಟ ಸಂಸ್ಥೆಗಳೆಲ್ಲ ಇವತ್ತು ಮಿಂಚಿಂಗೋ ಮಿಂಚಿಂಗು!

ಯಾಹೂ ಕತೆಯೂ ಅಷ್ಟೆ. ಗೂಗಲ್ ಬರುವ ಮೊದಲೇ ಯಾಹೂ ಸರ್ಚ್ ಅಸ್ತಿತ್ವದಲ್ಲಿತ್ತು; ಅಷ್ಟೇ ಏಕೆ, ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿತ್ತು. ಆದರೆ ಅವರು ಆ ಜನಪ್ರಿಯತೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಲಿಲ್ಲ. ಇಂದು ಯಾಹೂ ಸಂಸ್ಥೆ ತನ್ನ ಗತವೈಭವದ ನೆನಪಿನಲ್ಲಿ ಪರದಾಡುತ್ತಿದ್ದರೆ ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿ ಹುಡುಕುವ ಪ್ರಕ್ರಿಯೆಗೆ ಗೂಗಲ್ ಒಂದು ಪರ್ಯಾಯ ಹೆಸರಾಗಿಯೇ ಬೆಳೆದುಬಿಟ್ಟಿದೆ.

ಹಾಗೆಂದಮಾತ್ರಕ್ಕೆ ಗೂಗಲ್ ಮುಟ್ಟಿದ್ದೆಲ್ಲ ಚಿನ್ನವೇನೂ ಆಗಲಿಲ್ಲ. ಉದಾಹರಣೆಗೆ ಸಮಾಜಜಾಲಗಳನ್ನೇ ತೆಗೆದುಕೊಳ್ಳಿ. ಫೇಸ್‌ಬುಕ್ ಹೆಸರು ಕೇಳುವ ಮೊದಲು ನಾವೆಲ್ಲರೂ ಆರ್ಕುಟ್ ತಾಣದ ಸದಸ್ಯರಾಗಿದ್ದ ಕಾಲವೊಂದಿತ್ತು. ಅತಿ ಹೆಚ್ಚು ಆರ್ಕುಟ್ ಬಳಕೆದಾರರಿರುವ ದೇಶಗಳ ಸಾಲಿನಲ್ಲಿ ಭಾರತವೂ ಇತ್ತು. ಆದರೆ ಈಗ? ಕೊಂಚ ತಡವಾಗಿ ರೇಸಿಗೆ ಬಂದರೂ ಫೇಸ್‌ಬುಕ್ ಕುದುರೆ ಆರ್ಕುಟ್ ಅನ್ನು ಮೈಲಿಗಟ್ಟಲೆ ಹಿಂದಿಕ್ಕಿ ಅದೆಷ್ಟೋ ಸಮಯವೇ ಆಗಿದೆಯಲ್ಲ!

ಬ್ರೌಸರ್‌ಗಳ ಬಗ್ಗೆ ಹೇಳಹೊರಟರಂತೂ ಅಲ್ಲಿ ಉದಾಹರಣೆಗಳ ಸಾಲೇ ಇದೆ. ತೊಂಬತ್ತರ ದಶಕದಲ್ಲಿ ಪ್ರಪಂಚದ ಅಂತರಜಾಲ ಬಳಕೆದಾರರಲ್ಲಿ ಬಹಳಷ್ಟು ಮಂದಿ ನೆಟ್‌ಸ್ಕೇಪ್ ನ್ಯಾವಿಗೇಟರ್ ತಂತ್ರಾಂಶ ಬಳಸುತ್ತಿದ್ದರು. ಆ ದಶಕದ ಮಧ್ಯದ ವೇಳೆಗೆ ಒಟ್ಟು ಅಂತರಜಾಲ ಬಳಕೆದಾರರ ಪೈಕಿ ಶೇ.೯೦ರಷ್ಟು ಜನ ಈ ತಂತ್ರಾಂಶದ ಬಳಕೆದಾರರಾಗಿದ್ದರಂತೆ. ಆದರೆ ಮುಂದಿನ ಒಂದು-ಒಂದೂವರೆ ದಶಕಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಒಡ್ಡಿದ ಸ್ಪರ್ಧೆಯಿಂದಾಗಿ ನೆಟ್‌ಸ್ಕೇಪ್ ನ್ಯಾವಿಗೇಟರ್ ಬಳಕೆದಾರರೇ ಇಲ್ಲವೇನೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಅದಾದ ನಂತರ ಬಂದ ಫೈರ್‌ಫಾಕ್ಸ್, ಕ್ರೋಮ್ ಇತ್ಯಾದಿಗಳು ಈಗ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ಗೇ ಇತಿಹಾಸವನ್ನು ನೆನಪಿಸುತ್ತಿವೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೂ ಅಷ್ಟೆ. ಮೊದಮೊದಲಿಗೆ ಸ್ಮಾರ್ಟ್‌ಫೋನುಗಳನ್ನು ಪರಿಚಯಿಸಿದ ಬ್ಲ್ಯಾಕ್‌ಬೆರಿ, ನೋಕಿಯಾ ಮುಂತಾದ ಸಂಸ್ಥೆಗಳು ಐಫೋನ್ ಹಾಗೂ ಆಂಡ್ರಾಯ್ಡ್ ಉಪಕರಣಗಳ ಭರಾಟೆಯಲ್ಲಿ ತಮ್ಮ ಮಾರುಕಟ್ಟೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಬೇಗನೆ ಎದ್ದರೂ ಆಹಾರ ಸಿಗದ ಹಕ್ಕಿಯಂತಾಗಿದೆ ಅವುಗಳ ಪರಿಸ್ಥಿತಿ!

* * *

ಒಟ್ಟಿನಲ್ಲಿ ಇದ್ಯಾಕೋ ಬೇಗನೆ ಎದ್ದ ಹಕ್ಕಿಯ ಲಾಜಿಕ್ ಇಲ್ಲಿಗೆ ಸರಿಯೇಹೊಂದುತ್ತಿಲ್ಲ ಎನಿಸುತ್ತಿದೆಯೆ? ಚಿಂತೆಬೇಡ. ಇಂಗ್ಲಿಷಿನಲ್ಲಿ ಇನ್ನೂ ಒಂದು ಹೇಳಿಕೆಯಿದೆ, "ಸೆಕೆಂಡ್ ಮೌಸ್ ಗೆಟ್ಸ್ ದ ಚೀಸ್" ಅಂತ. ಟಾಮ್ ಆಂಡ್ ಜೆರ್ರಿ ಕಾರ್ಟೂನಿನಲ್ಲಿ ಪುಟ್ಟದೊಂದು ಚೀಸ್ ತುಣುಕು ಇಟ್ಟಿರುವ ಇಲಿ ಬೋನು ಬರುತ್ತದಲ್ಲ, ಅವಸರ ಮಾಡಿಕೊಂಡು ಬಂದ ಇಲಿ ಅಂಥದ್ದೊಂದು ಬೋನಿಗೆ ಸಿಕ್ಕಿಕೊಂಡರೆ ಅದರಲ್ಲಿರುವ ಚೀಸು ಎರಡನೆಯದಾಗಿ ಬರುವ ಇಲಿಗೇ ತಾನೆ ಸಿಗುತ್ತದೆ!

ಈ ದೃಷ್ಟಿಯಿಂದ ನೋಡಿದರೆ ತಂತ್ರಜ್ಞಾನ ಲೋಕವೂ ಯಾಕೋ ಸರಿಯಾದ ಗೇಮ್‌ಪ್ಲಾನ್ ಇಲ್ಲದೆ ಆತುರಪಡುವ ಇಲಿಗಳನ್ನು ಹಿಡಿದುಹಾಕುವ ಬೋನಿನಂತೆಯೇ ಕಾಣುತ್ತಿದೆ ಅಲ್ಲವೆ?

ಮೇ ೧, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

5 ಕಾಮೆಂಟ್‌ಗಳು:

beluru ಹೇಳಿದರು...

ಅರ್ಲಿ ಬರ್ಡ್‌ ಗೆಟ್ಸ್ ದಿ ವರ್ಮ್‌: ಈ ವಾಕ್ಯವೇ ವಿರೋಧಾಭಾಸಗಳಿಂದ ಕೂಡಿದೆ!! ಹಾಗಾದ್ರೆ ಪಾಪ, ಬರ್ಡ್‌ಗಿಂತ ಮುಂಚೆ ಎದ್ದ ವರ್ಮ್‌ ಕಥೆ ಏನು?!!!!! (ಇಲ್ಲಿ ಅರ್ಲಿ ಬರ್ಡ್‌ ಎನ್ನುವುದು ಉಪಮೆಯೇ ಹೊರತು ಬರ್ಡ್‌‌ಗೆ ಸಂಬಂಧಿಸಿದ್ದಲ್ಲ ತಾನೆ?)

beluru ಹೇಳಿದರು...

ಅರ್ಲಿ ಬರ್ಡ್‌ ಗೆಟ್ಸ್ ದಿ ವರ್ಮ್‌: ಈ ವಾಕ್ಯವೇ ವಿರೋಧಾಭಾಸಗಳಿಂದ ಕೂಡಿದೆ!! ಹಾಗಾದ್ರೆ ಪಾಪ, ಬರ್ಡ್‌ಗಿಂತ ಮುಂಚೆ ಎದ್ದ ವರ್ಮ್‌ ಕಥೆ ಏನು?!!!!! (ಇಲ್ಲಿ ಅರ್ಲಿ ಬರ್ಡ್‌ ಎನ್ನುವುದು ಉಪಮೆಯೇ ಹೊರತು ಬರ್ಡ್‌‌ಗೆ ಸಂಬಂಧಿಸಿದ್ದಲ್ಲ ತಾನೆ?)

beluru ಹೇಳಿದರು...

ಅರ್ಲಿ ಬರ್ಡ್‌ ಗೆಟ್ಸ್ ದಿ ವರ್ಮ್‌: ಈ ವಾಕ್ಯವೇ ವಿರೋಧಾಭಾಸಗಳಿಂದ ಕೂಡಿದೆ!! ಹಾಗಾದ್ರೆ ಪಾಪ, ಬರ್ಡ್‌ಗಿಂತ ಮುಂಚೆ ಎದ್ದ ವರ್ಮ್‌ ಕಥೆ ಏನು?!!!!! (ಇಲ್ಲಿ ಅರ್ಲಿ ಬರ್ಡ್‌ ಎನ್ನುವುದು ಉಪಮೆಯೇ ಹೊರತು ಬರ್ಡ್‌‌ಗೆ ಸಂಬಂಧಿಸಿದ್ದಲ್ಲ ತಾನೆ?)

sridahara ಹೇಳಿದರು...

This is nothing but late mover advantage. Many times innovative late entrants outsell pioneers in most of the fields, not only in IT as u think.

Sridhara BaSu

Paramesh H ಹೇಳಿದರು...

thumba adbhuthavaada vimarshe

badge