ಬುಧವಾರ, ಫೆಬ್ರವರಿ 29, 2012

ಕಳೆದುಹೋದ ಪುಟಗಳ ಹುಡುಕಾಟದಲ್ಲಿ...

ಟಿ. ಜಿ. ಶ್ರೀನಿಧಿ

ಹಿಂದೆ ಜಿಯೋಸಿಟೀಸ್ ಎಂಬುದೊಂದು ಜಾಲತಾಣ ಇತ್ತು. ವಿಶ್ವವ್ಯಾಪಿ ಜಾಲ ಆಗಷ್ಟೆ ಪರಿಚಿತವಾಗುತ್ತಿದ್ದ ಸಂದರ್ಭದಲ್ಲಿ ಅದೆಷ್ಟೋ ಲಕ್ಷ ಜನ ಬಳಕೆದಾರರು ಈ ತಾಣದ ಸೇವೆ ಬಳಸಿಕೊಂಡು ತಮ್ಮ ವೈಯಕ್ತಿಕ ವೆಬ್‌ಪುಟಗಳನ್ನು ರೂಪಿಸಿಕೊಂಡಿದ್ದರು. ಅದೆಷ್ಟೋ ಜನ ಬಳಕೆದಾರರಿಗೆ ನಮ್ಮ ಸ್ವಂತದ್ದೂ ಒಂದು ವೆಬ್‌ಪುಟ ಇದೆ ಎಂದು ಹೇಳಿಕೊಳ್ಳುವ ಖುಷಿ ಕೊಟ್ಟದ್ದು ಈ ತಾಣ. ೧೯೯೪ರಲ್ಲಿ ಪ್ರಾರಂಭವಾದ ಈ ತಾಣವನ್ನು ೧೯೯೯ರಲ್ಲಿ ಯಾಹೂ ಕೊಂಡುಕೊಂಡಿತ್ತು. ಒಂದು ಕಾಲಕ್ಕೆ ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ತಾಣಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದ ಜಿಯೋಸಿಟೀಸ್‌ನಲ್ಲಿ ೨೦೦೯ರ ವೇಳೆಗೆ ಮೂರೂವರೆ ಕೋಟಿಗಿಂತ ಹೆಚ್ಚು ಪುಟಗಳಿದ್ದವು.

ಆ ವೇಳೆಗೆ ಜಿಯೋಸಿಟೀಸ್ ತಾಣದ ಜನಪ್ರಿಯತೆ ಕಡಿಮೆಯಾಗುತ್ತಿತ್ತು. ಇನ್ನು ಇದನ್ನು ನಡೆಸುವುದು ಕಷ್ಟ ಎಂದುಕೊಂಡ ಯಾಹೂ ಒಂದು ದಿನ ಆ ತಾಣವನ್ನು ಮುಚ್ಚಿಯೇಬಿಟ್ಟಿತು. ಹಾಗೆ ಮುಚ್ಚುತ್ತಿದ್ದಂತೆ ಮೂರುವರೆ ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಅವೆಲ್ಲ ವೆಬ್ ಪುಟಗಳೂ ಅವನ್ನು ಸೃಷ್ಟಿಸಿದ್ದವರ ಪಾಲಿಗೆ ಖಾಯಂ ಆಗಿ ಕಳೆದುಹೋದವು.

ವಿಶ್ವವ್ಯಾಪಿ ಜಾಲದ ಇತಿಹಾಸದಲ್ಲಿ ಇಂತಹ ಇನ್ನೂ ಅದೆಷ್ಟೋ ಘಟನೆಗಳು ನಡೆದಿವೆ.
೨೦೦೮ರಲ್ಲಿ ಎಒಎಲ್ ಹೋಮ್‌ಟೌನ್ ತಾಣ ಕಣ್ಮುಚ್ಚಿದಾಗ ಅದರ ಬಳಕೆದಾರರು ರೂಪಿಸಿದ್ದ ಸುಮಾರು ಒಂದೂವರೆ ಕೋಟಿ ವೆಬ್‌ಪುಟಗಳು ಕಾಣೆಯಾದವು. ಅದೇ ವರ್ಷ ಫ್ಲಿಪ್ ಡಾಟ್ ಕಾಮ್ ಮುಚ್ಚಿದಾಗ ಸುಮಾರು ಮೂರು ಲಕ್ಷ ಜನ ಬಳಕೆದಾರರು ತಮ್ಮ ಖಾತೆಯಲ್ಲಿ ಸೇರಿಸಿದ್ದ ಮಾಹಿತಿ ಕಳೆದುಕೊಳ್ಳಬೇಕಾಗಿ ಬಂತು. ಕಳೆದ ವರ್ಷ ಪೊಯೆಟ್ರಿ ಡಾಟ್ ಕಾಮ್ ನಿಂತುಹೋದಾಗ ಅದರ ಬಳಕೆದಾರರು ಬರೆದಿದ್ದ ೧.೪ ಕೋಟಿ ಕವನಗಳು ಕಣ್ಮರೆಯಾದವು.

ಜಾಲತಾಣಗಳು ಶುರುವಾಗುವುದು ಮುಚ್ಚಿಹೋಗುವುದು ವಿಶ್ವವ್ಯಾಪಿ ಜಾಲದಲ್ಲಿ ಸಾಮಾನ್ಯವಾಗಿ ನಡೆಯುವ ಸಂಗತಿ ಅಂದುಕೊಂಡರೂ ಅಂತಹ ತಾಣಗಳಿಗೆ ಬಳಕೆದಾರರು ಸೇರಿಸಿದ ಮಾಹಿತಿ ಕಣ್ಮರೆಯಾಗುವುದೆಂದರೆ ಇತಿಹಾಸದ ಪುಟಗಳೇ ಅಳಿಸಿಹೋದಂತೆ. ಜಾಲತಾಣಗಳಲ್ಲಿರುವ ನಮ್ಮ ಮಾಹಿತಿ ಎಂದೆಂದಿಗೂ ಅಲ್ಲಿಯೇ ಇರುತ್ತದೆ ಎಂದುಕೊಂಡ ಬಳಕೆದಾರರಿಗೆ ಇಂತಹ ಘಟನೆಗಳು ಬಹುದೊಡ್ಡ ಶಾಕ್ ಟ್ರೀಟ್‌ಮೆಂಟ್ ಕೊಡುತ್ತವೆ. ಯಾಹೂ ಫೋಟೋಸ್ ತಾಣದಲ್ಲಿ ಚಿತ್ರಗಳನ್ನು ಶೇಖರಿಸಿಟ್ಟು ಮಿತ್ರರೊಡನೆ ಹಂಚಿಕೊಳ್ಳುತ್ತಿದ್ದ ನನ್ನಂತಹ ಅನೇಕ ಬಳಕೆದಾರರು ದುಡ್ಡು ಕೊಡಿ ಇಲ್ಲವೇ ನಿಮ್ಮ ಫೋಟೋಗಳನ್ನೆಲ್ಲ ಕಳೆದುಕೊಳ್ಳಿ ಎಂಬ ಸಂದೇಶ ಒಂದು ದಿನ ಇದ್ದಕ್ಕಿದ್ದಂತೆ ಬಂದಾಗ ಅನುಭವಿಸಿದ್ದು ಇಂತಹುದೇ ಆಘಾತ.

ಜಾಲಲೋಕದ ಇತಿಹಾಸದ ಪುಟಗಳು ಹೀಗೆ ಸಂಪೂರ್ಣವಾಗಿ ಕಣ್ಮರೆಯಾಗುವುದು ಅದೆಷ್ಟು ಸರಿ?

ಈ ಪ್ರಶ್ನೆಯನ್ನು ಪದೇ ಪದೇ ಎತ್ತುತ್ತಿರುವ ವ್ಯಕ್ತಿಯ ಹೆಸರು ಜೇಸನ್ ಸ್ಕಾಟ್. ಆದರೆ ಆತ ಮತ್ತು 'ಆರ್ಕೈವ್ ಟೀಮ್'ನಲ್ಲಿರುವ ಆತನ ಗೆಳೆಯರು ಈ ಪ್ರಶ್ನೆ ಎತ್ತಿ ಸುಮ್ಮನೆ ಕುಳಿತಿಲ್ಲ.

ಮೇಲೆ ಹೇಳಿದಂತೆ ಕಳೆದ ವರ್ಷ ಪೊಯೆಟ್ರಿ ಡಾಟ್ ಕಾಮ್ ಮುಚ್ಚುತ್ತಿದೆ ಎನ್ನುವ ಸುದ್ದಿಬಂದಾಗ ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ಮಾಡಿದ್ದಿಷ್ಟೆ: ಅಗತ್ಯ ತಂತ್ರಾಂಶಗಳನ್ನು ರಚಿಸಿ ಆ ಜಾಲತಾಣದಲ್ಲಿದ್ದ ಮಾಹಿತಿಯಲ್ಲಿ ಆದಷ್ಟೂ ಭಾಗವನ್ನು ಅದು ಮುಚ್ಚಿಹೋಗುವ ಮುನ್ನವೇ ಬೇರೆಡೆ ಕಾಪಿ ಮಾಡಿ ಕಾಪಿಡಲು ಶುರುಮಾಡಿದರು. ವಿಶ್ವದ ಮೂಲೆಮೂಲೆಗಳಲ್ಲಿದ್ದ ಹಿತೈಷಿಗಳು ಸರ್ವರ್‌ಗಳಲ್ಲಿ ಅವರಿಗೆ ಅಗತ್ಯವಾಗಿದ್ದ ಸ್ಥಳಾವಕಾಶವನ್ನು ಕೊಡುಗೆಯಾಗಿ ಕೊಟ್ಟು ನೆರವಾದರು. ಪರಿಣಾಮ - ಪೊಯೆಟ್ರಿ ಡಾಟ್ ಕಾಮ್ ಮುಚ್ಚಿಹೋಗುವ ಮುನ್ನ ಅದರಲ್ಲಿದ್ದ ಮಾಹಿತಿಯ ಶೇ.೨೦ರಷ್ಟು ಭಾಗವನ್ನು ಬೇರೆಡೆ ಉಳಿಸಿಡಲಾಯಿತು.

ಇಂತಹುದೇ ಕೆಲಸದಲ್ಲಿ ತೊಡಗಿರುವ ಇನ್ನೊಂದು ಸಂಸ್ಥೆ ಅಮೆರಿಕಾದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಇಂಟರ್‌ನೆಟ್ ಆರ್ಕೈವ್. ಅಂತರಜಾಲದ ಇತಿಹಾಸವನ್ನು ಉಳಿಸಿಡಬೇಕು ಎನ್ನುವ ಈ ಸಂಸ್ಥೆ ತನ್ನ ವೇಬ್ಯಾಕ್ ಮಷೀನ್ ಮೂಲಕ ಹಲವು ಜಾಲತಾಣಗಳ ಐತಿಹಾಸಿಕ ಆವೃತ್ತಿಗಳನ್ನು ನೋಡುವ ಅವಕಾಶ ಕಲ್ಪಿಸಿಕೊಡುತ್ತಿದೆ. ಇದೀಗ ಜೇಸನ್‌ನ ಆರ್ಕೈವ್ ಟೀಮ್ ಕೂಡ ಈ ಸಂಸ್ಥೆಯ ಜೊತೆಗೆ ಕೈಜೋಡಿಸಿದೆ. ಜಾಲಲೋಕದಲ್ಲಿರುವ ಮಾಹಿತಿ ಕೈಗೆ ಸಿಗದಂತೆ ಮಾಯವಾಗುವುದೆಂದರೆ ಅಮೂಲ್ಯ ಪುಸ್ತಕಗಳಿರುವ ಗ್ರಂಥಾಲಯ ಸುಟ್ಟುಹೋದಷ್ಟೇ ನಷ್ಟದ ವಿಷಯ ಎನ್ನುವುದು ಈ ಜೋಡಿಯ ಅನಿಸಿಕೆ.

ಯಾವುದೇ ತಾಣ ಮುಚ್ಚಿಹೋಗಲಿದೆ ಎಂಬ ಸೂಚನೆ ಕಂಡುಬಂದ ತಕ್ಷಣ ಕಾರ್ಯನಿರತವಾಗುವ ಈ ತಂಡ ಆ ತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ದೊರಕುವ ಮಾಹಿತಿಯನ್ನು ಪ್ರತಿಮಾಡಿಟ್ಟುಕೊಳ್ಳಲು ಪ್ರಾರಂಭಿಸುತ್ತದೆ. ಹೀಗೆ ಮಾಡಿಟ್ಟುಕೊಂಡ ಕಾಪಿಯನ್ನು ಒಮ್ಮೆ ಪರೀಕ್ಷಿಸಿದ ನಂತರ ಅದು ಇಂಟರ್‌ನೆಟ್ ಆರ್ಕೈವ್ ಮೂಲಕ, ಅಥವಾ ಇನ್ನು ಕೆಲ ಸನ್ನಿವೇಶಗಳಲ್ಲಿ ಟಾರೆಂಟ್‌ಗಳ ಹಾಗೂ ಕಡತ ವಿನಿಮಯ ತಾಣಗಳ ಮೂಲಕ ಮುಕ್ತ ಬಳಕೆಗೆ ಲಭ್ಯವಾಗುತ್ತದೆ. ಜಿಯೋಸಿಟೀಸ್‌ನ ಉದಾಹರಣೆಯನ್ನೇ ತೆಗೆದುಕೊಂಡರೆ ಅದರಿಂದ ಉಳಿಸಿಕೊಳ್ಳಲಾಗಿರುವ ಮಾಹಿತಿ ೬೫೨ ಗಿಗಾಬೈಟ್ ಗಾತ್ರದ ಟಾರೆಂಟ್ ಆಗಿ ದೊರಕುತ್ತಿದೆ.

ಇಂತಹ ಮಾಹಿತಿ ಉಳಿಸಿಟ್ಟುಕೊಳ್ಳುವುದರಿಂದ ಏನು ಉಪಯೋಗ ಎಂದು ಕೇಳುವವರಿಗೆ ಜೇಸನ್ ಒಂದು ಘಟನೆಯ ಉದಾಹರಣೆ ಕೊಡುತ್ತಾನೆ: ಎರಡನೇ ವಿಶ್ವಯುದ್ಧದಲ್ಲಿ ಸೇವೆಸಲ್ಲಿಸಿದ್ದ ಸೇನಾನಿಯೊಬ್ಬರು ತಮ್ಮ ಹಳೆಯ ಚಿತ್ರಗಳ ಸಂಗ್ರಹವನ್ನೆಲ್ಲ ಸ್ಕ್ಯಾನ್ ಮಾಡಿ ತಮ್ಮ ಜಿಯೋಸಿಟೀಸ್ ಪುಟದಲ್ಲಿ ಹಾಕಿಟ್ಟಿದ್ದರು. ಜಿಯೋಸಿಟೀಸ್ ಮುಚ್ಚಿದಾಗ ಆ ಚಿತ್ರಗಳೂ ಕಳೆದುಹೋದವು ಅಂದುಕೊಂಡಿದ್ದ ಆತನ ವಿಧವೆ ಪತ್ನಿಗೆ ಆರ್ಕೈವ್ ಟೀಮ್ ತೆಗೆದಿಟ್ಟುಕೊಂಡಿದ್ದ ಕಾಪಿಯಲ್ಲಿ ಆ ಚಿತ್ರಗಳನ್ನೆಲ್ಲ ಹುಡುಕಿ ಕಳುಹಿಸಿಕೊಡಲಾಯಿತು.

ಹಳೆಯ ನೆನಪುಗಳು ನೀಡುವ ಇಂತಹ ಅಪರೂಪದ ಅನುಭವಗಳಿಗಾಗಿಯೇ ನಾವು ಅವನ್ನು ಸಂರಕ್ಷಿಸಿಡಬೇಕು ಎನ್ನುತ್ತಾನೆ ಜೇಸನ್. ಈ ವಾದವನ್ನು ಅಲ್ಲಗೆಳೆಯುವುದಾದರೂ ಹೇಗೆ?

ಇಂತಹ ಕಾಳಜಿಗೆ ಗೌರವಕೊಟ್ಟೋ ಏನೋ, ಗೂಗಲ್ ತಾಣ ಟೇಕ್‌ಔಟ್ ಎನ್ನುವ ಸೌಲಭ್ಯ ಪ್ರಾರಂಭಿಸಿದೆ. ಆ ತಾಣದ ಮೂಲಕ ಲಭ್ಯವಿರುವ ಸೇವೆಗಳಲ್ಲಿ ನಾವು ಸೇರಿಸುವ ಮಾಹಿತಿಯ ಕೆಲಭಾಗವನ್ನು ಡೌನ್‌ಲೋಡ್ ಮಾಡಿ ಉಳಿಸಿಟ್ಟುಕೊಳ್ಳುವ ವ್ಯವಸ್ಥೆ ಇದು. ಈಚೆಗೆ ಗೂಗಲ್ ಬಜ್ ಕಣ್ಮುಚ್ಚುವ ಮೊದಲೇ ಇದು ಬಳಕೆಗೆ ಲಭ್ಯವಾಗಿತ್ತು. ಸರಿಸುಮಾರು ಇಂತಹುದೇ ಸೌಲಭ್ಯ ಫೇಸ್‌ಬುಕ್‌ನಲ್ಲಿ ನಾವು ಸೇರಿಸುವ ಕೆಲ ಮಾಹಿತಿಗೂ ದೊರಕಿದೆ.

ಇಂತಹ ಸೌಲಭ್ಯಗಳನ್ನು ಪದೇಪದೇ ಬಳಸುವಂತಹ ಅವಕಾಶ ಬಾರದಿರಲಿ.

ಫೆಬ್ರುವರಿ ೨೮, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge