ಬುಧವಾರ, ಫೆಬ್ರವರಿ 1, 2012

ಪೈರಸಿ ಕಾಟ, ಇಂಟರ್‌ನೆಟ್ ಪರದಾಟ

ಸೋಪಾ-ಪೀಪಾ ಆದಮೇಲೆ ಈಗ ಆಕ್ಟಾ ಬೇರೆ ಬಂದಿದೆ. ಇಂಟರ್‌ನೆಟ್ ಲೋಕಕ್ಕೆ ಪೈರಸಿಯ ಜೊತೆಗೆ ಪೈರಸಿ ವಿರೋಧಿ ಕಾನೂನುಗಳ ಕಾಟವೂ ಶುರುವಾಗಿದೆ!
ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಅಂತರಜಾಲ ಪ್ರಪಂಚದಲ್ಲಿ ಗಲಾಟೆಯೋ ಗಲಾಟೆ.

ಕಳೆದ ಜನವರಿ ೧೮ರಂದು ವಿಕಿಪೀಡಿಯಾ ತಾಣ ಒಂದು ದಿನದ ಬಂದ್ ಆಚರಿಸಿದ್ದು ನಿಮಗೆಲ್ಲ ನೆನಪಿರಬೇಕು; ವಿಕಿಪೀಡಿಯಾ ಜೊತೆಗೆ ಇನ್ನೂ ಹಲವಾರು ದೊಡ್ಡ-ಸಣ್ಣ ತಾಣಗಳು ಆ ಬಂದ್‌ನಲ್ಲಿ ಪಾಲ್ಗೊಂಡಿದ್ದವು. ಇನ್ನು ಕೆಲ ಜಾಲತಾಣಗಳು ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.

ಇಷ್ಟೆಲ್ಲ ಗಲಾಟೆಗೆ ಕಾರಣವಾದದ್ದು ಅಮೆರಿಕಾ ಸಂಸತ್ತಿನಲ್ಲಿ ಪ್ರಸ್ತಾಪವಾಗಿದ್ದ ಎರಡು ಮಸೂದೆಗಳು. ಅವುಗಳ ಹೆಸರೇ 'ಸೋಪಾ' (ಸ್ಟಾಪ್ ಆನ್‌ಲೈನ್ ಪೈರಸಿ ಆಕ್ಟ್) ಹಾಗೂ 'ಪೀಪಾ' (ಪ್ರೊಟೆಕ್ಟ್ ಇಂಟಲೆಕ್ಚುಯಲ್ ಪ್ರಾಪರ್ಟಿ ಆಕ್ಟ್). ಇಂಟರ್‌ನೆಟ್ ಪ್ರಪಂಚವನ್ನು ಕಾಡುತ್ತಿರುವ ಪೈರಸಿ ಪೀಡೆಯ ನಿವಾರಣೆಗೆ ಪ್ರಯತ್ನಿಸುವುದು ಈ ಮಸೂದೆಗಳ ಉದ್ದೇಶ. ಪೈರಸಿ ತಡೆಗಾಗಿ ಈ ಮಸೂದೆಗಳಲ್ಲಿ ಪ್ರಸ್ತಾಪವಾಗಿರುವ ಕೆಲ ನಿಯಮಗಳು ತೀರಾ ಕಠಿಣವಾಗಿವೆ ಎನ್ನುವುದು ಅವುಗಳ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿತ್ತು.

ಜನವರಿ ೧೮ರ ಪ್ರತಿಭಟನೆಗಳಿಗೆ ವಿಶ್ವವ್ಯಾಪಿ ಬೆಂಬಲ ವ್ಯಕ್ತವಾದಾಗ ಸೋಪಾ-ಪೀಪಾಗಳಿಗೆ ದೊರೆತಿದ್ದ ಬೆಂಬಲ ಕೊಂಚಮಟ್ಟಿಗೆ ಕಡಿಮೆಯಾಯಿತು. ಜನರ ಒತ್ತಡಕ್ಕೆ ಮಣಿದ ಅಮೆರಿಕಾ ಸಂಸತ್ತು ಸದ್ಯಕ್ಕೆ ಈ ವಿಧೇಯಕಗಳ ಬಗೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವ ನಿರ್ಧಾರವನ್ನೂ ಪ್ರಕಟಿಸಿತು. ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ವಿಕಿಪೀಡಿಯಾ ಹೇಳಿದೆಯಾದರೂ ಸೋಪಾ-ಪೀಪಾ ಪ್ರಸಂಗಕ್ಕೆ ಅಲ್ಪವಿರಾಮವಂತೂ ಸಿಕ್ಕಿದೆ.


ಈ ಪ್ರಸಂಗದ ಬೆನ್ನಲ್ಲೇ ಬಂದದ್ದು ಮೆಗಾಅಪ್ಲೋಡ್ ತಾಣದ ಸುದ್ದಿ. ಕಡತಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯಮಾಡುತ್ತಿದ್ದ ಈ ತಾಣ ಪೈರಸಿ ದಂಧೆಯನ್ನೂ ಪೋಷಿಸುತ್ತಿತ್ತು ಎನ್ನುವ ಕಾರಣದಿಂದ ಅಮೆರಿಕಾ ಸರಕಾರ ಆ ತಾಣದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಯಿತು.

ಅಲ್ಲಿಗೆ ಪ್ರತಿಭಟನೆಯ ಇನ್ನೊಂದು ಅಧ್ಯಾಯವೂ ಶುರುವಾಯಿತು. ಅಮೆರಿಕಾ ಸರಕಾರ, ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ನ್ಯೂಜಿಲೆಂಡ್ ಸರಕಾರಗಳ ಕ್ರಮ ಸರಿಯಲ್ಲ ಎಂದು ವಾದಿಸುವವರು ಈ ಪ್ರತಿಭಟನೆಗಳ ಹಿಂದಿದ್ದರು. ಸಾಲುಸಾಲು ಸರಕಾರಿ ತಾಣಗಳ ವಿರುದ್ಧ ಡಿನಯಲ್ ಆಫ್ ಸರ್ವಿಸ್ ದಾಳಿಗಳು ಶುರುವಾದವು.

ಹೆಚ್ಚೂಕಡಿಮೆ ಈ ಘಟನೆಯ ಜೊತೆಯಲ್ಲೇ ಯುರೋಪಿನಲ್ಲೂ ಗಲಾಟೆ ಶುರುವಾಗಲು ಕಾರಣವಾದದ್ದು ಆಕ್ಟಾ. ಆಕ್ಟಾ ಎನ್ನುವುದು 'ಆಂಟಿ-ಕೌಂಟರ್‌ಫೀಟಿಂಗ್ ಟ್ರೇಡ್ ಅಗ್ರೀಮೆಂಟ್' ಎನ್ನುವ ಹೆಸರಿನ ಹ್ರಸ್ವರೂಪ. ಬೌದ್ಧಿಕ ಹಕ್ಕುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಾನಕಗಳನ್ನು ರೂಪಿಸುವುದು ಈ ಒಪ್ಪಂದದ ಉದ್ದೇಶ.

ಇದು ಸಂಪೂರ್ಣ ಹೊಸದೇನೂ ಅಲ್ಲ. ಸುಮಾರು ನಾಲ್ಕು ವರ್ಷಗಳಿಂದಲೇ ಚರ್ಚೆಯಲ್ಲಿದ್ದ ಈ ಒಪ್ಪಂದಕ್ಕೆ ಅಮೆರಿಕಾ, ಕೆನಡಾ, ಜಪಾನ್ ಮುಂತಾದ ಹಲವು ರಾಷ್ಟ್ರಗಳು ಈಗಾಗಲೇ ಸಹಿಹಾಕಿವೆ. ತೀರಾ ಈಚೆಗೆ ಯುರೋಪಿಯನ್ ಒಕ್ಕೂಟದ ದೇಶಗಳು ಈ ಒಪ್ಪಂದಕ್ಕೆ ಸಹಿಹಾಕಿರುವುದು ಈಗ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಸೋಪಾ-ಪೀಪಾಗಳಂತೆ ಈ ಒಪ್ಪಂದದಲ್ಲೂ ತೀರಾ ಕಠಿಣ ಕ್ರಮಗಳ ಪ್ರಸ್ತಾಪವಿದೆ; ಅಂತರಜಾಲದ ಮುಕ್ತ ಸ್ವರೂಪಕ್ಕೆ ಈ ಒಪ್ಪಂದ ಧಕ್ಕೆತರಲಿದೆ ಎನ್ನುವುದು ಇದರ ವಿರೋಧಿಗಳ ವಾದ. ಈ ವಿರೋಧ ಪೋಲಂಡ್ ದೇಶದಲ್ಲಿ ಈಗಾಗಲೇ ತಾರಕಕ್ಕೇರಿದೆ. ಪೋಲಂಡ್ ಸರಕಾರದ ಜಾಲತಾಣಗಳ ಮೇಲೆ ಹಲವಾರು ವೆಬ್‌ದಾಳಿಗಳೂ ನಡೆದಿವೆ. ಜನವರಿ ೨೨ರ ಭಾನುವಾರದಂದು ಪೋಲಂಡ್ ಸರಕಾರದ ಅನೇಕ ಜಾಲತಾಣಗಳು ತೆರೆದುಕೊಳ್ಳುತ್ತಿರಲಿಲ್ಲ ಎಂದು ಬಿಬಿಸಿ ವರದಿಮಾಡಿತ್ತು.

ಆಕ್ಟಾ ಒಪ್ಪಂದಕ್ಕೆ ಭಾರತವೂ ಸಹಿಹಾಕುವ ಪರಿಸ್ಥಿತಿ ಬರಬಹುದು ಎನ್ನುವ ಆತಂಕದ ನಡುವೆ ಹಲವಾರು ದಿಕ್ಕುಗಳಿಂದ ವಿರೋಧ ವ್ಯಕ್ತವಾಗತೊಡಗಿದೆ.

ಇನ್ನು ಜನವರಿ ಪ್ರಾರಂಭದಲ್ಲಿ ಸ್ಪೇನ್‌ನಲ್ಲೂ ಒಂದು ಪೈರಸಿ ವಿರೋಧಿ ಕಾಯ್ದೆಗೆ ಅನುಮತಿಯ ಮುದ್ರೆ ಬಿದ್ದಿದೆ. ಪೈರಸಿಯಲ್ಲಿ ತೊಡಗಿರುವ ಯಾವುದೇ ತಾಣ ಅಥವಾ ಅದಕ್ಕೆ ಬೆಂಬಲವಾಗಿರುವ ಐಎಸ್‌ಪಿಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಈ ಕಾಯ್ದೆ ಸರಕಾರಕ್ಕೆ ನೀಡಲಿದೆ. ಈ ಕಾಯ್ದೆಯ ವಿರೋಧದಲ್ಲಿ ಪ್ರತಿಭಟನೆಗಳು ಈಗಾಗಲೇ ಶುರುವಾಗಿವೆ.

ಒಟ್ಟಿನಲ್ಲಿ ಅಂತರಜಾಲದ ಮೂಡು ಸದ್ಯಕ್ಕಂತೂ ಸರಿಯಿರುವಂತೆ ಕಾಣುತ್ತಿಲ್ಲ. ಈ ಪರಿಸ್ಥಿತಿ ಬೇಗನೆ ಬದಲಾಗಲಿ, ಅಂತರಜಾಲದ ಮುಕ್ತ ಸ್ವರೂಪ ಹಾಗೆಯೇ ಉಳಿದುಕೊಳ್ಳಲಿ ಎಂದು ಹಾರೈಸೋಣ!

ಜನವರಿ ೩೧, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge