ಮಂಗಳವಾರ, ಡಿಸೆಂಬರ್ 20, 2011

ಐಟಿ ಕ್ರಾಂತಿಯ ಬಟ್ಟೆ ನೇಯ್ದ ಫ್ರಾನ್ಸಿನ ಮಗ್ಗ

ಟಿ ಜಿ ಶ್ರೀನಿಧಿ

ಒಂದಾನೊಂದು ಕಾಲದಲ್ಲಿ, ಇವತ್ತಿಗೆ ಸುಮಾರು ಇನ್ನೂರು ವರ್ಷಗಳಿಗೂ ಹಿಂದೆ, ಫ್ರಾನ್ಸಿನಲ್ಲಿ ಜೋಸೆಫ್ ಜಾಕಾರ್ಡ್ ಎಂಬ ವ್ಯಕ್ತಿಯೊಬ್ಬನಿದ್ದ. ಆತ ಒಂದು ವಿಶಿಷ್ಟ ರೀತಿಯ ಮಗ್ಗವನ್ನು ತಯಾರಿಸಿದ್ದ. ಆ ಮಗ್ಗ ಉದ್ದನೆಯ ದಾರದಲ್ಲಿ ಪೋಣಿಸಿದ್ದ ಮರದ ಪಟ್ಟಿಗಳನ್ನು 'ಓದಿಕೊಂಡು' ಬಟ್ಟೆಯ ವಿನ್ಯಾಸವನ್ನು ರೂಪಿಸಿಕೊಳ್ಳುತ್ತಿತ್ತು. ಅಂದರೆ, ಆ ಪಟ್ಟಿಗಳಲ್ಲಿದ್ದ ರಂಧ್ರಗಳ ಆಧಾರದ ಮೇಲೆ ಯಾವ ಬಣ್ಣದ ದಾರ ಎಲ್ಲಿ ಬರಬೇಕು ಎಲ್ಲಿ ಬರಬಾರದು ಎನ್ನುವುದನ್ನು ಅದು ಅರಿತುಕೊಳ್ಳುತ್ತಿತ್ತು.

ಈ ತಂತ್ರಜ್ಞಾನದ ಸಹಾಯದಿಂದ ಬಟ್ಟೆಯ ನೇಯ್ಗೆ ಬಹಳ ಸುಲಭವಾಯಿತು. ಅಷ್ಟೇ ಅಲ್ಲ, ಬಟ್ಟೆಯನ್ನು ನೇಯುವಾಗ ಕ್ಲಿಷ್ಟ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಾಯಿತು - ಈ ತಂತ್ರಜ್ಞಾನ ಬಳಸಿ ಜೋಸೆಫ್ ಜಾಕಾರ್ಡ್ ತನ್ನ ಕೊಠಡಿಯಲ್ಲಿ ಕುಳಿತಿರುವಂತೆ ಚಿತ್ರಿಸಲಾದ ವಿನ್ಯಾಸವನ್ನೇ ರೇಷ್ಮೆ ಬಟ್ಟೆಯಲ್ಲಿ ಮೂಡಿಸಲಾಗಿತ್ತು! ಮಿಲ್ ಮಾಲೀಕರೆಲ್ಲ ಇದರಿಂದ ಬಹಳ ಖುಷಿಯಾದರೇನೋ ಸರಿ, ಆದರೆ ಈ ಆವಿಷ್ಕಾರದಿಂದ ಆವರೆಗೂ ಮನುಷ್ಯರು ಮಾಡುತ್ತಿದ್ದ ಕೆಲಸ ಕಡಿಮೆಯಾಗಿ ಅನೇಕ ಕಾರ್ಮಿಕರು ನಿರುದ್ಯೋಗಿಗಳಾದರು. ಹಲವೆಡೆ ಈ ಮಗ್ಗಗಳನ್ನು ಒಡೆದುಹಾಕಿದ ಘಟನೆಗಳು ನಡೆದವು; ಸ್ವತಃ ಜಾಕಾರ್ಡ್ ಮೇಲೂ ಹಲ್ಲೆಗೆ ಯತ್ನ ನಡೆಯಿತು.


* * *

ಇದಾಗಿ ಸುಮಾರು ಎರಡು ದಶಕಗಳ ನಂತರ ಚಾರ್ಲ್ಸ್ ಬ್ಯಾಬೇಜ್ ಎಂಬ ಬ್ರಿಟಿಷ್ ವ್ಯಕ್ತಿ ತನ್ನ ಸರಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಿದ. ಡಿಫರೆನ್ಸ್ ಇಂಜನ್ ಎಂಬ ಯಂತ್ರವನ್ನು ತಯಾರಿಸುವ ಯೋಜನೆ ಆ ಪ್ರಸ್ತಾವನೆಯಲ್ಲಿತ್ತು. ಹಬೆಯ ಶಕ್ತಿ ಬಳಸಿಕೊಂಡು ಕೆಲಸಮಾಡಲಿದ್ದ ಕೊಠಡಿಗಾತ್ರದ ಈ ಯಂತ್ರ ಲಾಗರಿದಮ್ ಟೇಬಲ್‌ನಂತಹ ಕೋಷ್ಠಕಗಳನ್ನು ಸಿದ್ಧಪಡಿಸುವ ಕ್ಲಿಷ್ಟ ಲೆಕ್ಕಾಚಾರಗಳನ್ನು ಸುಲಭವಾಗಿ ಮಾಡಲಿದೆ ಎನ್ನಲಾಗಿತ್ತು. ಇಂತಹ ಲೆಕ್ಕಾಚಾರಗಳ ಮಹತ್ವವನ್ನು ಅರಿತ ಸರಕಾರವೂ ಬ್ಯಾಬೇಜ್ ಪ್ರಸ್ತಾವನೆಯನ್ನು ಅನುಮೋದಿಸಿ ಅದಕ್ಕೆ ಹಣಕಾಸಿನ ನೆರವು ನೀಡಿತು. ಅಂದಿನ ದಿನಗಳಲ್ಲಿ ಸೇನೆ - ವ್ಯಾಪಾರೋದ್ಯಮ ಎಲ್ಲೆಡೆಯೂ ಹಡಗುಗಳ ಬಳಕೆ ವ್ಯಾಪಕವಾಗಿತ್ತು, ಹಾಗೂ ಅಲ್ಲಿ ನ್ಯಾವಿಗೇಶನ್ ಟೇಬಲ್‌ನ ತಪ್ಪಿಲ್ಲದ ಲೆಕ್ಕಾಚಾರ ಬಹಳ ಅಗತ್ಯವಾಗಿತ್ತು; ಬ್ಯಾಬೇಜ್‌ನ ಡಿಫರೆನ್ಸ್ ಇಂಜನ್ ಈ ನ್ಯಾವಿಗೇಶನ್ ಟೇಬಲ್ ಅನ್ನು ತಪ್ಪಿಲ್ಲದೆ ಲೆಕ್ಕಹಾಕಬಲ್ಲದು ಎನ್ನುವ ನಿರೀಕ್ಷೆ ಸರಕಾರದ್ದಾಗಿತ್ತು.

ಆದರೆ ಹತ್ತು ವರ್ಷ ಕಳೆದರೂ ಡಿಫರೆನ್ಸ್ ಇಂಜನ್ ತಯಾರಾಗಲಿಲ್ಲ. ಸರಕಾರದ ಹಣ ಬಳಸುವ ಯೋಜನೆ ಇಷ್ಟು ದಿನ ಏನೂ ಫಲಿತಾಂಶ ತೋರಿಸದಿದ್ದರೆ ಹೇಗೆ, ಗಲಾಟೆ ಶುರುವಾಯಿತು; ಕೊನೆಗೊಂದು ದಿನ ಹಣಕಾಸಿನ ನೆರವೂ ನಿಂತುಹೋಯಿತು. ಡಿಫರೆನ್ಸ್ ಇಂಜನ್ ಎಂಬ ಈ ಮಹತ್ವಾಕಾಂಕ್ಷಿ ಯೋಜನೆ ಮುಂದೆಂದೂ ಪೂರ್ಣಗೊಳ್ಳಲೂ ಇಲ್ಲ.

* * *

ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಈ ಎರಡು ಘಟನೆಗಳಿಗೂ ಸಂಬಂಧ ಕಲ್ಪಿಸುವ ಇನ್ನೊಂದು ಘಟನೆ ಮುಂದಿನ ಕೆಲ ವರ್ಷಗಳಲ್ಲಿ ನಡೆಯಿತು.

ಡಿಫರೆನ್ಸ್ ಇಂಜನ್ ಯೋಜನೆಯ ವೈಫಲ್ಯದಿಂದ ಧೃತಿಗೆಡದ ಚಾರ್ಲ್ಸ್ ಬ್ಯಾಬೇಜ್ ಇದೀಗ ಇನ್ನೊಂದು ಹೊಸ ಯೋಜನೆ ರೂಪಿಸಿದ. ಈ ಬಾರಿ ಆತ ತಯಾರಿಸಹೊರಟದ್ದು ಅನಲಿಟಿಕಲ್ ಇಂಜನ್ ಎಂಬ ಯಂತ್ರವನ್ನು. ಕಳೆದ ಬಾರಿಯ ಪ್ರಯತ್ನದಲ್ಲಿ ಕೊಠಡಿ ಗಾತ್ರದ ಯಂತ್ರ ನಿರ್ಮಿಸಲು ಹೊರಟಿದ್ದ ಆತ ಈ ಬಾರಿ ಒಂದು ಮನೆಯಷ್ಟು ದೊಡ್ಡದಾದ ಯಂತ್ರವನ್ನೇ ನಿರ್ಮಿಸುವ ಯೋಜನೆ ಹಾಕಿದ್ದ. ಈ ವಿನ್ಯಾಸದಂತೆ ಅನಲಿಟಿಕಲ್ ಇಂಜನ್ ಆರು ಉಗಿ ಇಂಜನ್‌ಗಳ ಶಕ್ತಿ ಬಳಸಲಿತ್ತು. ಈ ಯಂತ್ರ ಪ್ರೋಗ್ರಾಮಬಲ್ ಆಗಿದ್ದದ್ದು ವಿಶೇಷ. ಅಂದರೆ, ಆ ಯಂತ್ರವನ್ನು ಬಳಸಿ ಏನೇನು ಲೆಕ್ಕಾಚಾರ ಮಾಡಬೇಕೆಂದು ನಾವೇ ಹೇಳುವುದು ಸಾಧ್ಯವಿತ್ತು.

ಇದನ್ನು ಸಾಧ್ಯವಾಗಿಸಲು ಈ ಯಂತ್ರ ಜಾಕಾರ್ಡ್‌ನ ತಂತ್ರಜ್ಞಾನ ಬಳಸುತ್ತಿತ್ತು!

* * *

ಬಟ್ಟೆ ತಯಾರಿಸುವ ಮಗ್ಗದ ವಿಶಿಷ್ಟ ವಿನ್ಯಾಸ ಮನುಕುಲದ ಇತಿಹಾಸವನ್ನೇ ಬದಲಿಸಿದ ಅದ್ಭುತ ಕತೆ ಇದು. ಜಕಾರ್ಡ್‌ನ ಮಗ್ಗದಲ್ಲಿ ಬಟ್ಟೆಯ ವಿನ್ಯಾಸವನ್ನು ಪ್ರತಿನಿಧಿಸಲು ರಂಧ್ರಗಳಿದ್ದ ಮರದ ಪಟ್ಟಿಯನ್ನು ಬಳಸಲಾಗುತ್ತಿತ್ತಲ್ಲ, ಅದೇ ತಂತ್ರಜ್ಞಾನವನ್ನು ತನ್ನ ಯಂತ್ರದಲ್ಲೂ ಬಳಸಿಕೊಳ್ಳಬಹುದು ಎಂದು ಚಾರ್ಲ್ಸ್ ಬ್ಯಾಬೇಜ್ ಯೋಚಿಸಿದ. ನಮ್ಮ ದತ್ತಾಂಶವನ್ನು ಇಂತಹುದೇ ಪಟ್ಟಿಯಲ್ಲಿ ರಂಧ್ರಗಳ ರೂಪದಲ್ಲಿ ದಾಖಲಿಸಿ ಯಂತ್ರಕ್ಕೆ ಊಡಿಸುವುದು ಸಾಧ್ಯ ಎನ್ನುವುದು ಆತನ ಯೋಚನೆಯಾಗಿತ್ತು.

ಈ ಕ್ರಾಂತಿಕಾರಕ ಯೋಚನೆಯಲ್ಲಿ ಬ್ಯಾಬೇಜ್ ಜೊತೆಗೆ ಕೈಜೋಡಿಸಿದ್ದು ಸುಪ್ರಸಿದ್ಧ ಕವಿ ಲಾರ್ಡ್ ಬೈರನ್‌ನ ಪುತ್ರಿ ಅಡಾ. ಗಣಿತದಲ್ಲಿ ಅಗಾಧ ಆಸಕ್ತಿಯಿದ್ದ ಆಕೆಗೆ ಆಗಿನ್ನೂ ಇಪ್ಪತ್ತು ವರ್ಷವೂ ಆಗಿರಲಿಲ್ಲ. ಬ್ಯಾಬೇಜ್ ನಿರ್ಮಿಸಲು ಹೊರಟಿದ್ದ ಅನಲಿಟಿಕಲ್ ಇಂಜನ್‌ನ ವಿನ್ಯಾಸದಲ್ಲಿ ಆಸಕ್ತಿವಹಿಸಿದ ಆಕೆ ರಂಧ್ರಗಳಿದ್ದ ಪಟ್ಟಿಗಳನ್ನು ಬಳಸಿ ಆ ಯಂತ್ರಕ್ಕೆ ದತ್ತಾಂಶ ಹಾಗೂ ಆದೇಶಗಳನ್ನು ಊಡಿಸುವ ವಿಧಾನವನ್ನು ರೂಪಿಸಿದಳು. ಹಾಗೆ ನೋಡಿದರೆ ಆಕೆಯೇ ಪ್ರಪಂಚದ ಮೊತ್ತಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎನ್ನಬಹುದು.

* * *

ಯಾವಾಗಲೂ ಹ್ಯಾಪಿ ಎಂಡಿಂಗ್ ಆಗಲು ಜೀವನವೇನು ಸಿನಿಮಾ ಅಲ್ಲವಲ್ಲ. ಡಿಫರೆನ್ಸ್ ಇಂಜನ್‌ನಂತೆ ಅನಲಿಟಿಕಲ್ ಇಂಜನ್ ಯೋಜನೆ ಕೂಡ ಪೂರ್ಣವಾಗಲಿಲ್ಲ.

ಆದರೆ ಕಂಪ್ಯೂಟರ್ ಕ್ಷೇತ್ರದಲ್ಲಿ ಅನಲಿಟಿಕಲ್ ಇಂಜನ್ ವಿನ್ಯಾಸ ಒಂದು ಬೃಹತ್ ಕ್ರಾಂತಿಯನ್ನೇ ತಂದಿತು. ನಮಗೆ ಅಗತ್ಯಕ್ಕೆ ತಕ್ಕ ದತ್ತಾಂಶ ಹಾಗೂ ಆದೇಶಗಳನ್ನು ನೀಡುವ ಮೂಲಕ ಕಂಪ್ಯೂಟರ್‌ಗಳನ್ನು ಯಾವ ಉದ್ದೇಶಕ್ಕೆ ಬೇಕಾದರೂ ಬಳಸಿಕೊಳ್ಳುವುದು ಸಾಧ್ಯ ಎಂದು ಅದು ತೋರಿಸಿಕೊಟ್ಟಿತು. ಅದರ ನಿರ್ಮಾಣ ಪೂರ್ಣವಾಗದಿದ್ದರೇನಂತೆ, ಒಂದು ಶತಮಾನದ ನಂತರ ನಿರ್ಮಾಣವಾದ ಆಧುನಿಕ ಕಂಪ್ಯೂಟರುಗಳಿಗೆ ಇದೇ ವಿನ್ಯಾಸ ಪ್ರೇರಣೆಯಾಯಿತು. ಜಾಕಾರ್ಡ್ ಬಳಸಿದ, ಬ್ಯಾಬೇಜ್ ಬಳಸಲು ಬಯಸಿದ ರಂಧ್ರಗಳುಳ್ಳ ಪಟ್ಟಿಗಳೇ ಮುಂದೆ ಪಂಚ್ಡ್ ಕಾರ್ಡುಗಳೆಂಬ ಹೆಸರಿನಲ್ಲಿ ದಶಕಗಳ ಕಾಲ ಕಂಪ್ಯೂಟರಿಗೆ ದತ್ತಾಂಶ ಹಾಗೂ ಆದೇಶಗಳನ್ನು ಊಡಿಸಲು ಬಳಕೆಯಾಯಿತು.

ನಮ್ಮೂರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಡುವಲ್ಲಿ ಇನ್ನೂರು ವರ್ಷಗಳ ಹಿಂದೆ ಫ್ರಾನ್ಸಿನಲ್ಲಿ ತಯಾರಾದ ಮಗ್ಗದ ಪಾಲೂ ಇದೆ ಎಂದರೆ ಅದೇನೂ ತಪ್ಪಲ್ಲ ಅಲ್ಲವೆ?

ಡಿಸೆಂಬರ್ ೨೦, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. 'ವಿಜ್ಞಾಪನೆ' ಅಂಕಣದ ಅರವತ್ತನೇ ಕಂತು.

ಕಾಮೆಂಟ್‌ಗಳಿಲ್ಲ:

badge