ಮಂಗಳವಾರ, ನವೆಂಬರ್ 29, 2011

ಎತ್ತ ಹೊರಟಿದೆ ಗೂಗಲ್ ಪ್ಲಸ್?

ಟಿ. ಜಿ. ಶ್ರೀನಿಧಿ

ಕಳೆದ ಜೂನ್ ತಿಂಗಳಿನಲ್ಲಿ ಗೂಗಲ್ ಪ್ಲಸ್ ಲೋಕಾರ್ಪಣೆಯಾದಾಗ ಮಾಧ್ಯಮಗಳಲ್ಲೆಲ್ಲ ಅದೇ ಸುದ್ದಿ ಹರಿದಾಡುತ್ತಿತ್ತು. ಸಮಾಜ ಜಾಲಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಪದೇ ಪದೇ ಏಟುತಿಂದಿದ್ದ ಗೂಗಲ್ ಈ ಬಾರಿ ಹೊಸತೇನನ್ನು ಕೊಡುತ್ತದೋ ನೋಡೋಣ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು.

ಹೀಗೆ ಕಾಯುತ್ತಿದ್ದವರಿಗೆ ಗೂಗಲ್ ಪ್ಲಸ್ ನಿರಾಸೆಯನ್ನೇನೂ ಮಾಡಲಿಲ್ಲ. ಅನೇಕ ಉತ್ತಮ ಸೌಲಭ್ಯಗಳೊಡನೆ ಬಂದ ಈ ಉತ್ಪನ್ನ ನೋಡಿ "ಇದೇ ನೋಡಿ ಫೇಸ್‌ಬುಕ್‌ಗೆ ಪರ್ಯಾಯ" ಅಂದವರು ಅದೆಷ್ಟೋ ಜನ.

ಪರಿಚಯವಾದ ಹದಿನಾರೇ ದಿನಗಳಲ್ಲಿ ಒಂದು ಕೋಟಿ ಬಳಕೆದಾರರನ್ನು ಸಂಪಾದಿಸಿದ ಗೂಗಲ್ ಪ್ಲಸ್ ಸದಸ್ಯರ ಸಂಖ್ಯೆ ನೂರು ದಿನಗಳೊಳಗೆ ನಾಲ್ಕು ಕೋಟಿ ಮುಟ್ಟಿತು. ಇಂಥದ್ದೊಂದು ಸಾಧನೆಯನ್ನು ಈವರೆಗೆ ಯಾವ ಜಾಲತಾಣವೂ ಮಾಡಿರಲಿಲ್ಲ. ಅಷ್ಟೇ ಏಕೆ, ಸಮಾಜ ಜಾಲಗಳ ಲೋಕದಲ್ಲಿ ಅಗ್ರಗಣ್ಯ ತಾಣಗಳೆಂದು ಗುರುತಿಸಿಕೊಳ್ಳುವ ಫೇಸ್‌ಬುಕ್, ಟ್ವೀಟರ್‌ಗಳೆಲ್ಲ ಒಂದು ಕೋಟಿ ಸದಸ್ಯರ ಸಂಖ್ಯೆ ತಲುಪಲು ಎರಡು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದವು.

ಆದರೆ ಗೂಗಲ್ ಪ್ಲಸ್ ಬಗೆಗೆ ಸೃಷ್ಟಿಯಾದ ಕುತೂಹಲ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. ಇದರಲ್ಲಿ ಏನಿದೆ ನೋಡೋಣ ಎಂದು ಗೂಗಲ್ ಪ್ಲಸ್‌ನೊಳಗೆ ಇಣುಕಿದವರಲ್ಲಿ ಅನೇಕರು ಮರಳಿ ಫೇಸ್‌ಬುಕ್ ಅನ್ನೇ ಲೈಕ್ ಮಾಡುತ್ತಿದ್ದಾರೆ; ಟ್ವೀಟರಿನ ಟ್ವೀಟುಗಳನ್ನೇ ಕೇಳುತ್ತಿದ್ದಾರೆ.


ಸಕ್ರಿಯ ಬಳಕೆದಾರರ ಸಂಖ್ಯೆ ಇಳಿಯುತ್ತಿದ್ದಂತೆ ಇದೀಗ ಮಾಧ್ಯಮದ ಟೀಕೆಗಳೂ ವ್ಯಾಪಕವಾಗಿ ಕೇಳಿಬರುತ್ತಿವೆ. ಗೂಗಲ್ ಪ್ಲಸ್ ಕತೆ ಮುಗಿದೇ ಹೋಯಿತು ಎನ್ನುವ ಅರ್ಥಕೊಡುವ ಹತ್ತಾರು ಲೇಖನಗಳು ಅಲ್ಲಲ್ಲಿ ಪ್ರಕಟವಾಗುತ್ತಿವೆ. ಫೋರ್ಬ್ಸ್‌ನ ಜಾಲತಾಣದಲ್ಲಿ ಪ್ರಕಟವಾದ ಒಂದು ಲೇಖನದಲ್ಲಂತೂ 'ಅಂಕಿಸಂಖ್ಯೆಗಳು ಏನೇ ಹೇಳಿದರೂ ಗೂಗಲ್ ಪ್ಲಸ್ ಒಂದು ವೈಫಲ್ಯವೇ' ಎಂದು ನೇರಾನೇರ ಬರೆಯಲಾಗಿದೆ.

ಆದರೆ ಇದನ್ನೆಲ್ಲ ಒಪ್ಪಲು ಗೂಗಲ್ ಸಂಸ್ಥೆ ಸುತರಾಂ ಸಿದ್ಧವಿಲ್ಲ. ಗೂಗಲ್ ಪ್ಲಸ್ ಇನ್ನೂ ಹೊಸದು, ಈಗಷ್ಟೆ ಬೆಳೆಯುತ್ತಿರುವ ಅದು ಇಷ್ಟುಬೇಗ ಸಾಯುವ ಪ್ರಶ್ನೆಯೇ ಇಲ್ಲ ಎನ್ನುವುದು ಅದರ ನಿರ್ಮಾತೃಗಳ ಹೇಳಿಕೆ.

ಪರ-ವಿರೋಧದ ಈ ಚರ್ಚೆಯ ಕುರಿತು ಬಿಬಿಸಿ ನ್ಯೂಸ್ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಕುತೂಹಲಕರ ಲೇಖನವೊಂದನ್ನು ಓದಿದ ಕೆಲವೇ ದಿನಗಳಲ್ಲಿ ಗೂಗಲ್ ಪ್ಲಸ್ ತಂಡದ ಪ್ರಮುಖ ಸದಸ್ಯ ಬ್ರಾಡ್ಲಿ ಹಾರೋವಿಟ್ಸ್ ಸಂದರ್ಶನ ನನ್ನ ಕಣ್ಣಿಗೆ ಬಿತ್ತು. ಟೆಕ್ನಾಲಜಿ ರಿವ್ಯೂ ಪತ್ರಿಕೆ ಮಾಡಿದ್ದ ಸಂದರ್ಶನ ಅದು.

"ಪ್ರಸ್ತುತ ಇರುವ ಸಮಾಜಜಾಲಗಳ ಬಳಕೆದಾರರಿಗೆ ಎಲ್ಲರೂ ಗೆಳೆಯರೇ - ಶಿಶುವಿಹಾರದಲ್ಲಿದ್ದ ಮಿತ್ರರಿಂದ ಪ್ರಾರಂಭಿಸಿ ಕಚೇರಿಯಲ್ಲಿ ಅಪರೂಪಕ್ಕೊಮ್ಮೆ ಹಾಯ್ ಎನ್ನುವವರತನಕ ಎಲ್ಲರಿಗೂ ಫ್ರೆಂಡ್ ಎಂಬ ಒಂದೇ ಹಣೆಪಟ್ಟಿ ಇರುತ್ತದೆ; ಹೀಗಾಗಿ ಯಾರೊಡನೆ ಯಾವ ಮಾಹಿತಿ ಹಂಚಿಕೊಳ್ಳಬೇಕು, ಯಾರಿಗೋ ಸಿಗಬೇಕಾದ ಮಾಹಿತಿ ಇನ್ನಾರಿಗೋ ಸಿಕ್ಕಿ ಫಜೀತಿಯಾಗದಂತೆ ಮಾಹಿತಿಯ ಗೌಪ್ಯತೆ ಕಾಪಾಡಿಕೊಳ್ಳುವುದು ಹೇಗೆ ಮುಂತಾದ ಅನೇಕ ಸಮಸ್ಯೆಗಳು ಸಮಾಜಜಾಲ ಬಳಕೆದಾರರನ್ನು ಕಾಡುತ್ತದೆ" ಎನ್ನುವ ಬ್ರಾಡ್ಲಿ, ಆ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲೆಂದೇ ಗೂಗಲ್ ಪ್ಲಸ್‌ನಲ್ಲಿ 'ಸರ್ಕಲ್'ಗಳ ಪರಿಕಲ್ಪನೆಯನ್ನು ಹುಟ್ಟುಹಾಕಲಾಯಿತು ಎನ್ನುತ್ತಾರೆ. ಗೆಳೆಯರನ್ನೆಲ್ಲ ಬೇರೆಬೇರೆ ಸರ್ಕಲ್ಲುಗಳಿಗೆ ಸೇರಿಸುವುದು ಬಳಕೆದಾರರ ಪಾಲಿಗೆ ಕೊಂಚ ಶ್ರಮದಾಯಕವೇ ಆದರೂ ಅದರಿಂದ ಮಾಹಿತಿಯ ಗೌಪ್ಯತೆ ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಅವರ ಹೇಳಿಕೆ - ಮನೆಯ ಯಾವುದೋ ಸಮಾರಂಭದ ಚಿತ್ರಗಳನ್ನು ಕುಟುಂಬಸ್ಥರಿಗಷ್ಟೆ ಕಳುಹಿಸಲು, ಮಿತ್ರರೊಡನೆ ಭಾಗವಹಿಸಿದ್ದ ಪಾರ್ಟಿಯ ವಿವರಗಳನ್ನು ಅವರೊಡನೆ ಮಾತ್ರ ಹಂಚಿಕೊಳ್ಳಲು ಇದರಿಂದ ಅನುಕೂಲವಾಗುತ್ತದೆ ಎಂದು ಅವರು ಹೇಳುತ್ತಾರೆ.

ಹಾಗಿದ್ದೂ ಗೂಗಲ್ ಪ್ಲಸ್ ಮತ್ತು ಫೇಸ್‌ಬುಕ್‌ನಲ್ಲಿರುವ ಸೌಲಭ್ಯಗಳ ನಡುವೆ ಕ್ರಾಂತಿಕಾರಕ ಎನಿಸಿಕೊಳ್ಳುವಂತಹ ದೊಡ್ಡ ವ್ಯತ್ಯಾಸಗಳೇನೂ ಇಲ್ಲ. ಇದ್ದ ಕೆಲ ವ್ಯತ್ಯಾಸಗಳನ್ನೂ ಬಹುಬೇಗ ನಿವಾರಿಸಿಕೊಂಡಿರುವ ಫೇಸ್‌ಬುಕ್ ತಂಡ ಅಲ್ಲಿ ಹೊಸ ಸೌಕರ್ಯಗಳನ್ನು ಒದಗಿಸಿಬಿಟ್ಟಿದೆ. ಗೂಗಲ್ ಪ್ಲಸ್‌ನ ಸರ್ಕಲ್ಲುಗಳಿಗೆ ಪ್ರತಿಯಾಗಿ ಗೆಳೆಯರನ್ನು ಬೇರೆಬೇರೆ ಪಟ್ಟಿಗಳಿಗೆ ಸೇರಿಸುವ ಸೌಕರ್ಯ ಫೇಸ್‌ಬುಕ್‌ನಲ್ಲೂ ಬಂದುಬಿಟ್ಟಿದೆ.

"ಭವಿಷ್ಯದಲ್ಲಿ ಗೂಗಲ್ ಪ್ಲಸ್ ಇನ್ನಷ್ಟು ಬದಲಾವಣೆಗಳನ್ನು ತರಲಿದೆ; ಗೂಗಲ್‌ನಿಂದ ಲಭ್ಯವಿರುವ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ ನೀಡಬಲ್ಲ ಸಾಮಾಜಿಕ ಹಂದರವಾಗಿ ಗೂಗಲ್ ಪ್ಲಸ್ ಅನ್ನು ಬೆಳೆಸುವ ಯೋಚನೆಯಿದೆ" ಎನ್ನುವುದು ಈ ಪ್ರಶ್ನೆಗೆ ಬ್ರಾಡ್ಲಿ ನೀಡುವ ಉತ್ತರ. ಸರ್ಚ್ ಫಲಿತಾಂಶಗಳಲ್ಲಿ ಮಿತ್ರರು ಇಷ್ಟಪಟ್ಟ ವಿಷಯಗಳಿಗೆ ಪ್ರಾಮುಖ್ಯ ನೀಡುವ ಸೋಶಿಯಲ್ ಸರ್ಚ್ ಪರಿಕಲ್ಪನೆಗೆ ಗೂಗಲ್ ಪ್ಲಸ್ ಇನ್ನಷ್ಟು ಪುಷ್ಟಿನೀಡಲಿದೆ ಎಂದು ಅವರು ಹೇಳುತ್ತಾರೆ. ಗೂಗಲ್ ಪ್ಲಸ್‌ನ ಗೆಳೆಯರು ಇಷ್ಟಪಟ್ಟ ಹೋಟಲ್ಲುಗಳು, ಪ್ರವಾಸಿ ತಾಣಗಳ ಬಗೆಗೆ ಗೂಗಲ್ ಮ್ಯಾಪ್ಸ್‌ನಲ್ಲೂ ಮಾಹಿತಿ ಕಾಣಸಿಗಲಿದೆ. ಹೀಗೆಯೇ ಮುಂದುವರೆದು ಮುಂದೊಂದು ದಿನ ವಿಶ್ವವ್ಯಾಪಿ ಜಾಲದ ಪ್ರತಿಯೊಂದು ಆಯಾಮವೂ ತನ್ನ ಬಳಕೆದಾರನ ಇಷ್ಟಾನಿಷ್ಟಗಳಿಗೆ ಅನುಗುಣವಾಗಿಯೇ ಕೆಲಸಮಾಡುವ ಕಾಲ ಕೂಡ ಬರಲಿದೆ ಎನ್ನುವುದು ಅವರ ಅಭಿಪ್ರಾಯ. ಗೂಗಲ್ ಉತ್ಪನ್ನಗಳಿಗೆ ಈಗಾಗಲೇ ಇರುವ ಅಸಂಖ್ಯ ಬಳಕೆದಾರರ ಬೆಂಬಲ ಅಂತಹ ಸನ್ನಿವೇಶವನ್ನು ನಿರ್ಮಿಸುವಲ್ಲೂ ನೆರವಾಗಲಿದೆ ಎನ್ನುವ ಆಶಯ ಕೂಡ ಇದೆ.

ಮುಂದಿನ ದಿನಗಳಲ್ಲಿ ತನ್ನ ಸಮಾಜ ಜಾಲವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಗೂಗಲ್ ಸಂಸ್ಥೆ ಹಾಕಿಕೊಂಡಿರುವ ಯೋಜನೆ ಯಶಸ್ವಿಯಾಗಲಿದೆಯೇ, ಸಮಾಜ ಜಾಲಗಳು ಹಾಗೂ ವಿಶ್ವವ್ಯಾಪಿ ಜಾಲದ ಜೊತೆಗೆ ವಿಶ್ವವನ್ನೇ ಬದಲಿಸಲಿದೆಯೇ - ಕಾದುನೋಡಬೇಕಿದೆ. ಇದೆಲ್ಲದಕ್ಕಿಂತ ಮುಂಚೆ ಗೂಗಲ್ ಪ್ಲಸ್ ತನ್ನ ಬಳಕೆದಾರರ ಆಸಕ್ತಿಯನ್ನು ಉಳಿಸಿಕೊಳ್ಳಬಲ್ಲದೇ ಎನ್ನುವ ಪ್ರಶ್ನೆ ಕೂಡ ಇದೆ.

ನವೆಂಬರ್ ೨೯, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Sandesh Kumar ಹೇಳಿದರು...

In my Openion G+ is much much better any other social sites out there.. its to stay here. Whatever reviews are just to get more page views. G+ is completely different from FB, only regular users can find these differences. FB is just for photo sharing right now(after the subscribe option, you can see only photo sharing!), but G+ is more than that you can find interesting people like Artists, Geeks, Photographers, Programmers, musicians etc. G+ is the top social product of 2011 (as per http://www.readwriteweb.com/archives/top_10_social_web_products_of_2011.php).. I am a regular user of G+, I can see more and more users coming and posting there.. more active now. I dont want all my FB friends to join G+ becz FB is doign it well. FB is on your emotional graph(Family, Friends, Birthday etc.) but G+ is different-completely on your interest graph(Photography, food, Programming, traveling etc).. and more to come. its just the beginning!

badge