ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಎತ್ತ ಹೊರಟಿದೆ ಗೂಗಲ್ ಪ್ಲಸ್?

ಟಿ. ಜಿ. ಶ್ರೀನಿಧಿ

ಕಳೆದ ಜೂನ್ ತಿಂಗಳಿನಲ್ಲಿ ಗೂಗಲ್ ಪ್ಲಸ್ ಲೋಕಾರ್ಪಣೆಯಾದಾಗ ಮಾಧ್ಯಮಗಳಲ್ಲೆಲ್ಲ ಅದೇ ಸುದ್ದಿ ಹರಿದಾಡುತ್ತಿತ್ತು. ಸಮಾಜ ಜಾಲಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಪದೇ ಪದೇ ಏಟುತಿಂದಿದ್ದ ಗೂಗಲ್ ಈ ಬಾರಿ ಹೊಸತೇನನ್ನು ಕೊಡುತ್ತದೋ ನೋಡೋಣ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು.

ಹೀಗೆ ಕಾಯುತ್ತಿದ್ದವರಿಗೆ ಗೂಗಲ್ ಪ್ಲಸ್ ನಿರಾಸೆಯನ್ನೇನೂ ಮಾಡಲಿಲ್ಲ. ಅನೇಕ ಉತ್ತಮ ಸೌಲಭ್ಯಗಳೊಡನೆ ಬಂದ ಈ ಉತ್ಪನ್ನ ನೋಡಿ "ಇದೇ ನೋಡಿ ಫೇಸ್‌ಬುಕ್‌ಗೆ ಪರ್ಯಾಯ" ಅಂದವರು ಅದೆಷ್ಟೋ ಜನ.

ಪರಿಚಯವಾದ ಹದಿನಾರೇ ದಿನಗಳಲ್ಲಿ ಒಂದು ಕೋಟಿ ಬಳಕೆದಾರರನ್ನು ಸಂಪಾದಿಸಿದ ಗೂಗಲ್ ಪ್ಲಸ್ ಸದಸ್ಯರ ಸಂಖ್ಯೆ ನೂರು ದಿನಗಳೊಳಗೆ ನಾಲ್ಕು ಕೋಟಿ ಮುಟ್ಟಿತು. ಇಂಥದ್ದೊಂದು ಸಾಧನೆಯನ್ನು ಈವರೆಗೆ ಯಾವ ಜಾಲತಾಣವೂ ಮಾಡಿರಲಿಲ್ಲ. ಅಷ್ಟೇ ಏಕೆ, ಸಮಾಜ ಜಾಲಗಳ ಲೋಕದಲ್ಲಿ ಅಗ್ರಗಣ್ಯ ತಾಣಗಳೆಂದು ಗುರುತಿಸಿಕೊಳ್ಳುವ ಫೇಸ್‌ಬುಕ್, ಟ್ವೀಟರ್‌ಗಳೆಲ್ಲ ಒಂದು ಕೋಟಿ ಸದಸ್ಯರ ಸಂಖ್ಯೆ ತಲುಪಲು ಎರಡು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದವು.

ಆದರೆ ಗೂಗಲ್ ಪ್ಲಸ್ ಬಗೆಗೆ ಸೃಷ್ಟಿಯಾದ ಕುತೂಹಲ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. ಇದರಲ್ಲಿ ಏನಿದೆ ನೋಡೋಣ ಎಂದು ಗೂಗಲ್ ಪ್ಲಸ್‌ನೊಳಗೆ ಇಣುಕಿದವರಲ್ಲಿ ಅನೇಕರು ಮರಳಿ ಫೇಸ್‌ಬುಕ್ ಅನ್ನೇ ಲೈಕ್ ಮಾಡುತ್ತಿದ್ದಾರೆ; ಟ್ವೀಟರಿನ ಟ್ವೀಟುಗಳನ್ನೇ ಕೇಳುತ್ತಿದ್ದಾರೆ.

ಥಾಯ್‌ಲ್ಯಾಂಡ್‌ನಲ್ಲಿ ಮಳೆ, ಐಟಿ ಜಗತ್ತಿಗೆ ಜ್ವರ!

ಟಿ. ಜಿ. ಶ್ರೀನಿಧಿ

ಥಾಯ್‌ಲ್ಯಾಂಡ್‌ನಲ್ಲಿ ಮಳೆಯ ಹಾವಳಿ ವಿಪರೀತವಾಗಿ ಅಲ್ಲಿ ವ್ಯಾಪಕ ಸಮಸ್ಯೆ ಸೃಷ್ಟಿಯಾಗಿರುವ ಸುದ್ದಿ ಈಚೆಗೆ ಮಾಧ್ಯಮಗಳಲ್ಲೆಲ್ಲ ಕಾಣಿಸಿಕೊಳ್ಳುತ್ತಿದೆ. ಮೊನ್ನೆ ಬೆಳಿಗ್ಗೆಯೂ ಪೇಪರಿನಲ್ಲಿ ಈ ಸುದ್ದಿ ಓದಿದ್ದೆ. ಅದೇ ದಿನ ಮಧ್ಯಾಹ್ನ ಕಂಪ್ಯೂಟರ್ ಬಿಡಿಭಾಗಗಳ ವಿತರಕನಾದ ನನ್ನ ಗೆಳೆಯ ಚೇತನ್‌ಗೆ ಕರೆಮಾಡಿದ್ದೆ; ನನ್ನ ಪಿ.ಸಿ.ಗೊಂದು ಹೊಸ ಹಾರ್ಡ್‌ಡಿಸ್ಕ್ ಬೇಕು ಕಣಪ್ಪ ಅಂದೆ.

"ಥಾಯ್‌ಲ್ಯಾಂಡ್‌ನಲ್ಲಿ ಮಳೆ ಜಾಸ್ತಿಯಾಗಿ ತುಂಬಾ ತೊಂದರೆಯಾಗಿದೆ" ಅಂತ ಉತ್ತರ ಬಂತು. ಇದೇನಪ್ಪ ಇವನು ನನ್ನ ಕಂಪ್ಯೂಟರ್‌ಗೆ ಹಾರ್ಡ್‌ಡಿಸ್ಕ್ ಬೇಕು ಅಂದರೆ ಥಾಯ್‌ಲ್ಯಾಂಡ್‌ನಲ್ಲಿ ಮಳೆ ಅಂತಾನಲ್ಲ ಅಂತ ಒಂದು ನಿಮಿಷ ಗೊಂದಲವಾಯಿತು. ಅದಕ್ಕೂ ಇದಕ್ಕೂ ಏನಪ್ಪ ಸಂಬಂಧ ಅಂತ ಕೇಳಿದಾಗಲೇ ಗೊತ್ತಾದದ್ದು - ಥಾಯ್‌ಲ್ಯಾಂಡ್ ಮಳೆಯ ಪರಿಣಾಮವಾಗಿ ಹಾರ್ಡ್‌ಡಿಸ್ಕ್‌ಗಳ ಬೆಲೆ ವಿಪರೀತವಾಗಿ ಏರಿರುವ ವಿಷಯ!

ಪ್ರವಾಹವೋ ಬರಗಾಲವೋ ಬಂದಾಗ ಆಹಾರ ಧಾನ್ಯಗಳ ಉತ್ಪಾದನೆ - ಪೂರೈಕೆಯಲ್ಲಿ ವ್ಯತ್ಯಯವಾಗುವುದು, ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾಗುವುದು - ಇವೆಲ್ಲ ನಮಗೆ ಗೊತ್ತಿರುವ ವಿಷಯ. ಆದರೆ ಥಾಯ್‌ಲ್ಯಾಂಡ್‌ನಲ್ಲಿ ಮಳೆ ಬಂದರೆ ಹಾರ್ಡ್‌ಡಿಸ್ಕ್ ಬೆಲೆ ಯಾಕೆ ಜಾಸ್ತಿಯಾಗಬೇಕು?

ಮನೆಯೇ ಆಫೀಸು!

ಟಿ. ಜಿ. ಶ್ರೀನಿಧಿ
ನೆನಪಿಡಿ - ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿವರಗಳು ಪೂರ್ಣಕಾಲಿಕ ಉದ್ಯೋಗದಲ್ಲಿರುವವರಿಗೆ ಮನೆಯಿಂದಲೂ ಕೆಲಸಮಾಡಲು ಸಂಸ್ಥೆಗಳು ಒದಗಿಸುವ ಸೌಲಭ್ಯದ ಕುರಿತು ಮಾತ್ರ. ಪತ್ರಿಕೆಯಲ್ಲೋ ಅಂತರಜಾಲದಲ್ಲೋ ಮನೆಯಿಂದಲೇ ಕೆಲಸಮಾಡುವ ಬಗೆಗೆ ಜಾಹೀರಾತು ಕಂಡರೆ ಆ ನಿಟ್ಟಿನಲ್ಲಿ ಮುಂದುವರೆಯುವ ಮುನ್ನ ಅದರ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
ನನ್ನ ಮಿತ್ರ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಶನಿವಾರ ಭಾನುವಾರದ ವೀಕೆಂಡು ಹೋಗಲಿ, ವಾರದ ಮಧ್ಯೆ ಫೋನುಮಾಡಿ ಎಲ್ಲಿದ್ದೀಯೋ ಅಂದರೆ ಹತ್ತರಲ್ಲಿ ಎಂಟು ಸಲ ಮನೆಯಲ್ಲಿದ್ದೀನಿ ಅಂತಲೋ ಮೈಸೂರಲ್ಲಿದ್ದೀನಿ ಅಂತಲೋ ಉತ್ತರ ಬರುತ್ತದೆ. ಆಫೀಸಿನಲ್ಲಿದ್ದೀನಿ ಅನ್ನುವ ಉತ್ತರ ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆಯಾದರೂ ಬಂದರೆ ಅದೇ ವಿಶೇಷ. ಅವನ ಮದುವೆಯ ಸಿದ್ಧತೆಯಾಗುತ್ತಿದ್ದ ಸಂದರ್ಭದಲ್ಲಿ ಅವನ ಭಾವಿ ಅತ್ತೆ-ಮಾವನಿಗೆ ಅವನು ನಿಜವಾಗಿಯೂ ಕೆಲಸದಲ್ಲಿದ್ದಾನೋ ಇಲ್ಲವೋ ಅನ್ನುವ ಸಂಶಯ ಬಂದಿತ್ತಂತೆ!

ಈವರೆಗೆ ಕೊಟ್ಟಿರುವ ವಿವರಣೆ ಕೇಳಿ ನಿಮಗೂ ಅದೇ ಸಂಶಯ ಬಂದಿದ್ದರೆ ಅದರಲ್ಲೂ ತಪ್ಪೇನಿಲ್ಲ ಬಿಡಿ. ಇನ್ನು ನನ್ನ ಮಿತ್ರನಿಗಂತೂ ಇದೇ ಪ್ರಶ್ನೆ ಪದೇ ಪದೆ ಎದುರಾಗುತ್ತಲೇ ಇರುತ್ತದೆ. "ನೀನು ಸಾಫ್ಟ್‌ವೇರ್ ಕಂಪನೀಲಿ ಕೆಲಸ ಮಾಡ್ತೀನಿ ಅಂತೀಯ, ಆಫೀಸಿಗೆ ಹೋಗಿದ್ದನ್ನೇ ನೋಡಿಲ್ಲ ಅದೇನು ಕೆಲಸ ನಿಂದು?" ಅಂತ ಅದೆಷ್ಟೋ ಜನ ಅವನನ್ನು ಕೇಳಿದ್ದಾರೆ.

ಅವನು ಅಷ್ಟೆಲ್ಲ ಪ್ರಶ್ನೆಗಳನ್ನು ಎದುರಿಸುವಂತೆ ಮಾಡುತ್ತಿರುವುದು 'ವರ್ಕ್ ಫ್ರಮ್ ಹೋಮ್' ಎಂಬ ಪರಿಕಲ್ಪನೆ.

ಲೈಟ್ರೋ ಜಾದೂ!

ಟಿ. ಜಿ. ಶ್ರೀನಿಧಿ

ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ಫೋಟೋಗ್ರಫಿ ಅದೆಷ್ಟು ಸುಲಭವಾಗಿದೆಯಲ್ಲ! ಬೇರೆಬೇರೆ ರೀತಿಯ ಚಿತ್ರಗಳನ್ನು ತೆಗೆಯಲು ಹತ್ತಾರು ಸುಲಭ ಆಯ್ಕೆಗಳು, ಸ್ವಯಂಚಾಲಿತ ಆಯ್ಕೆ ಬೇಡ ಎನ್ನುವುದಾದರೆ ಮ್ಯಾನ್ಯುಯಲ್ ಸೆಟ್ಟಿಂಗುಗಳು, ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ತೀರ್ಮಾನಿಸುವ ಸ್ವಾತಂತ್ರ್ಯ, ಹೈ ಡೆಫನಿಷನ್ ವೀಡಿಯೋ ಚಿತ್ರೀಕರಿಸುವ ಸೌಕರ್ಯ, ದೂರದೂರದ ದೃಶ್ಯಗಳನ್ನೂ ಕಣ್ಣೆದುರಿಗೆ ತಂದುನಿಲ್ಲಿಸುವ ಮೆಗಾಜೂಮ್ - ಹೀಗೆ ಆಧುನಿಕ ಕ್ಯಾಮೆರಾಗಳಲ್ಲಿರುವ ವೈಶಿಷ್ಟ್ಯಗಳ ಪಟ್ಟಿಗೆ ಕೊನೆಯೇ ಇಲ್ಲ.

ಕ್ಯಾಮೆರಾಗಳ ವೈಶಿಷ್ಟ್ಯ ಮಾತ್ರವಲ್ಲ, ಅವುಗಳ ವೈವಿಧ್ಯವೂ ಕಡಿಮೆಯೇನಲ್ಲ. ಮೊಬೈಲಿನಲ್ಲಿ, ಟ್ಯಾಬ್ಲೆಟ್ ಗಣಕಗಳಲ್ಲಿ, ಲ್ಯಾಪ್‌ಟಾಪಿನಲ್ಲಿ, ಪೆನ್ನಿನಲ್ಲಿ, ಕೊನೆಗೆ ಅಂಗಿಯ ಗುಂಡಿಯಲ್ಲೂ ಅಡಗಿ ಕೂರಬಲ್ಲ ಕ್ಯಾಮೆರಾಗಳಿವೆ.

ಆದರೆ ಕ್ಯಾಮೆರಾಗಳಲ್ಲಿ ಅದೇನೇ ವೈಶಿಷ್ಟ್ಯ-ವೈವಿಧ್ಯ ಇದ್ದರೂ ಒಂದು ವಿಷಯ ಮಾತ್ರ ಎಲ್ಲ ಬಗೆಯ ಕ್ಯಾಮೆರಾಗಳನ್ನೂ ಸಮಾನವಾಗಿ ಕಾಡುತ್ತದೆ. ಆ ವಿಷಯವೇ ಫೋಕಸ್.

ಬಾಲ್ಕನಿ ಕೈದೋಟದಲ್ಲಿ ಅರಳಿರುವ ಹೂವಿನ ಚಿತ್ರ ತೆಗೆಯಲು ಹೋದಾಗ ಆ ಹೂವಿಗಿಂತ ಸ್ಪಷ್ಟವಾಗಿ ಪಕ್ಕದಲ್ಲಿ ಒಣಗುತ್ತಿರುವ ಒರೆಸುವ ಬಟ್ಟೆ ಕಾಣುತ್ತಿರುತ್ತದೆ. ಯಾವುದೋ ಪ್ರವಾಸಿ ತಾಣದಲ್ಲಿ ಪ್ರೇಯಸಿಯ ಚಿತ್ರ ಕ್ಲಿಕ್ಕಿಸಿದ್ದೇನೆ ಎಂದು ನೀವು ಅಂದುಕೊಂಡರೆ ನಿಮ್ಮ ಕ್ಯಾಮೆರಾ ಅವಳ ಹಿಂದಿರುವ ಅಜ್ಜಿಯ ಕಡೆ ಹೆಚ್ಚಿನ ಗಮನ ಕೊಟ್ಟಿರುತ್ತದೆ. ಇನ್ನು ಕೆರೆ ದಡದಲ್ಲಿರುವ ಮರದ ಬೊಡ್ಡೆಯ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಬೆಳ್ಳಕ್ಕಿಯ ಚಿತ್ರ ತೆಗೆಯಲು ಹೋದಿರೋ, ಅನುಮಾನವೇ ಬೇಡ, ಅತ್ಯಂತ ಸ್ಪಷ್ಟವಾಗಿ ಬಂದಿರುತ್ತದೆ - ಮರದ ಬೊಡ್ಡೆ!

ಇಬ್ಬರು ದಿಗ್ಗಜರ ನೆನಪಿನಲ್ಲಿ...

ಕಳೆದೊಂದು ತಿಂಗಳಲ್ಲಿ ಗಣಕ ವಿಜ್ಞಾನ ಕ್ಷೇತ್ರ ಇಬ್ಬರು ದಿಗ್ಗಜರನ್ನು ಕಳೆದುಕೊಂಡಿದೆ. ಈ ಬರೆಹ ಅವರಿಬ್ಬರ ನೆನಪಿಗೆ ಸಮರ್ಪಿತ.
ಸಿ ಸೃಷ್ಟಿಕರ್ತ ಇನ್ನಿಲ್ಲ
ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಗಣಕ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.

ತಮ್ಮ ಜೀವಮಾನದುದ್ದಕ್ಕೂ ಪ್ರಚಾರದಿಂದ ದೂರವೇ ಉಳಿದಿದ್ದ ಅವರ ನಿಧನದ ಸುದ್ದಿ ಹೊರಜಗತ್ತಿಗೆ ಗೊತ್ತಾದದ್ದೂ ತಡವಾಗಿಯೇ ಎನ್ನುವುದು ವಿಪರ್ಯಾಸ. ಅಕ್ಟೋಬರ್ ೧೩ರಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ಗೂಗಲ್ ಪ್ಲಸ್‌ನಲ್ಲಿ ಸೇರಿಸಿದ ಸಂದೇಶದಿಂದಾಗಿ ಈ ಸುದ್ದಿ ಹರಡುವಷ್ಟರಲ್ಲಿ ಡೆನ್ನಿಸ್ ನಿಧನರಾಗಿ ದಿನಗಳೇ ಕಳೆದಿದ್ದವು.
badge