ಮಂಗಳವಾರ, ಅಕ್ಟೋಬರ್ 25, 2011

ಗೂಗಲ್ ಬಜ್‌ಗೆ ಬೈ ಬೈ!

ಟಿ. ಜಿ. ಶ್ರೀನಿಧಿ

"ಜನರ ಬದುಕನ್ನೇ ಬದಲಿಸುವಂತಹ, ಅವರು ದಿನಕ್ಕೆ ಎರಡು ಮೂರು ಬಾರಿಯಾದರೂ ಬಳಸುವಂತಹ ಉತ್ಪನ್ನಗಳನ್ನು ರೂಪಿಸುವುದು ನಮ್ಮ ಆಶಯ. ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಬೇಕು; ನಾವು ಏನೆಲ್ಲ ಕೆಲಸ ಮಾಡುತ್ತೇವೆ ಎಂದು ಯೋಚಿಸಿಕೊಳ್ಳುವಂತೆಯೇ ನಾವು ಏನೆಲ್ಲ ಮಾಡುವುದಿಲ್ಲ ಎನ್ನುವುದನ್ನೂ ಗುರುತಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ಕೆಲ ಉತ್ಪನ್ನಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ"

ಸರಿಸುಮಾರು ಇದೇ ಅರ್ಥ ಹೊಂದಿದ್ದ ಹೇಳಿಕೆ ಕಂಡುಬಂದದ್ದು ಈಗ ಕೆಲದಿನಗಳ ಹಿಂದೆ, ಗೂಗಲ್ ಸಂಸ್ಥೆಯ ಅಧಿಕೃತ ಬ್ಲಾಗ್‌ನಲ್ಲಿ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ 'ಮನೆ ಕ್ಲೀನಿಂಗ್' ಕೆಲಸದ ಮುಂದುವರೆದ ಭಾಗವಾಗಿ ಈ ಹೇಳಿಕೆ ಹೊರಬಿದ್ದಿದೆ.

ಸೆಪ್ಟೆಂಬರ್‌ನ ಘೋಷಣೆಯಲ್ಲಿ ಸಾಕಷ್ಟು ಉತ್ಪನ್ನಗಳ ನಿವೃತ್ತಿ ಪ್ರಸ್ತಾಪ ಇತ್ತಾದರೂ ಅವುಗಳಲ್ಲಿ ಹೆಸರಾಂತ ಎನ್ನಬಹುದಾದ ಯಾವ ಉತ್ಪನ್ನವೂ ಇಲ್ಲದ್ದರಿಂದ ಅದು ಅಷ್ಟೇನೂ ಸುದ್ದಿಯಾಗಿರಲಿಲ್ಲ. ಸೋಶಿಯಲ್ ಸರ್ಚ್ ಕ್ಷೇತ್ರದ ಮಹತ್ವದ ತಾಣವಾಗಲಿದೆ ಎಂಬ ಹಣೆಪಟ್ಟಿ ಹೊತ್ತಿದ್ದ 'ಆರ್ಡ್‌ವರ್ಕ್' ಹಾಗೂ ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಅನೇಕರು ಬಳಸಿದ್ದ 'ಗೂಗಲ್ ಡೆಸ್ಕ್‌ಟಾಪ್' - ಇವು ಆಗ ನಿವೃತ್ತಿಯತ್ತ ಮುಖಮಾಡಿದ ಉತ್ಪನ್ನಗಳಲ್ಲಿ ಪ್ರಮುಖವಾದವು.

ಅಕ್ಟೋಬರ್ ೧೪ರ ಘೋಷಣೆಯಲ್ಲಿ 'ಕೋಡ್ ಸರ್ಚ್', 'ಜೈಕು' ಮುಂತಾದ ಹೆಸರುಗಳಿವೆ. ಆದರೆ ಇವುಗಳ ಜೊತೆ ಒಂದು ಪರಿಚಿತ ಹೆಸರೂ ಸೇರಿಕೊಂಡಿರುವುದು ಈ ಬಾರಿಯ ಘೋಷಣೆ ಕೊಂಚಮಟ್ಟಿಗೆ ಸುದ್ದಿಮಾಡಲು ಕಾರಣವಾಗಿದೆ.


ಆ ಹೆಸರೇ ಗೂಗಲ್ ಬಜ್‌ನದು. ಟ್ವೀಟರ್‌ಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುವ ಹಂಬಲದೊಡನೆ ೨೦೧೦ರಲ್ಲಿ ಪರಿಚಯಿಸಲಾಗಿದ್ದ ಈ ಸೇವೆ ಒಂದೇ ವರ್ಷದಲ್ಲಿ ನಿವೃತ್ತಿಯ ಅಂಚಿಗೆ ಬಂದು ನಿಂತಿರುವುದು ವಿಪರ್ಯಾಸ.

ಗೂಗಲ್ ಬಜ್‌ನ ಪರಿಚಯವಾದದ್ದು ಕಳೆದ ವರ್ಷ ಫೆಬ್ರುವರಿಯಲ್ಲಿ. ವಿಶ್ವವಿಖ್ಯಾತ ಜಿಮೇಲ್ ಸೇವೆಯ ಜೊತೆಗೇ ಹೊಂದಿಕೊಂಡಂತಿರುವ ಸೋಶಿಯಲ್ ನೆಟ್‌ವರ್ಕಿಂಗ್ ಸೇವೆ ಇದು. ಟ್ವೀಟರ್‌ನಲ್ಲಿ 'ಟ್ವೀಟ್' ಹೆಸರಿನ ಸಂದೇಶಗಳನ್ನು ರವಾನಿಸುವಂತೆ ಇಲ್ಲಿ 'ಬಜ್'ಗಳನ್ನು ಹಂಚಿಕೊಳ್ಳಬಹುದು. ಚಿತ್ರಗಳು, ಬೇರೆ ತಾಣಗಳ ಲಿಂಕುಗಳು, ವೀಡಿಯೋಗಳನ್ನು ಹಂಚಿಕೊಳ್ಳುವುದೂ ಸಾಧ್ಯ. ಗೂಗಲ್‌ನ ಇತರ ಉತ್ಪನ್ನಗಳ ಜೊತೆ ಇದು ಸುಲಭವಾಗಿ ಹೊಂದಿಕೊಳ್ಳುವುದರಿಂದ ಜಿಟಾಕ್‌ನ ಸ್ಟೇಟಸ್ಸು, ಬ್ಲಾಗರ್‌ನಲ್ಲಿ ಬರೆದ ಲೇಟೆಸ್ಟ್ ಬ್ಲಾಗ್ ಪೋಸ್ಟು, ಪಿಕಾಸಾಗೆ ಸೇರಿಸಿದ ಇತ್ತೀಚಿನ ಫೋಟೋಸು - ಎಲ್ಲವನ್ನೂ ಇಲ್ಲಿ ಹಂಚಿಕೊಳ್ಳಬಹುದು, ಟ್ವೀಟರ್‌ನ ಟ್ವೀಟುಗಳನ್ನೂ ಇಲ್ಲಿ ನೋಡಬಹುದು. ಗೆಳೆಯರನ್ನು 'ಫಾಲೋ' ಮಾಡುವುದು, ಅವರು ಹಂಚಿಕೊಂಡಿರುವ ಮಾಹಿತಿಯನ್ನು 'ಲೈಕ್' ಮಾಡುವುದು ಕೂಡ ಸಾಧ್ಯ.

ಆದರೆ ಗೂಗಲ್ ಬಜ್‌ಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಪರಿಚಯವಾದ ಕೆಲವೇ ದಿನಗಳಲ್ಲಿ ಗೋಪ್ಯತೆ ಕುರಿತಾದ ವಿವಾದಗಳೂ ಹುಟ್ಟಿಕೊಂಡದ್ದು ಗೂಗಲ್ ಬಜ್‌ಗೆ ಇನ್ನಷ್ಟು ಹಿನ್ನಡೆಯಾಗಲು ಕಾರಣವಾಯಿತು. ಯಾರು ಯಾರ ಜೊತೆಯಲ್ಲಿ ಇಮೇಲ್ ಸಂಪರ್ಕದಲ್ಲಿದ್ದಾರೆ ಎನ್ನುವುದು ಗೂಗಲ್ ಬಜ್‌ನಿಂದಾಗಿ ಜಗಜ್ಜಾಹೀರಾಗಿಹೋದದ್ದು ಬಳಕೆದಾರರನ್ನು ಚೆನ್ನಾಗಿಯೇ ಕೆರಳಿಸಿತು. ರಹಸ್ಯವಾಗಿದೆ ಅಂದುಕೊಂಡು ಮಾತನಾಡುತ್ತಿದ್ದವರ ಜೊತೆಗಿನ ಸಂಪರ್ಕ ರಾತ್ರೋರಾತ್ರಿ ಬಯಲಿಗೆ ಬಂದರೆ ಯಾರು ತಾನೆ ಸುಮ್ಮನಿದ್ದಾರು ಹೇಳಿ?

ಪ್ರಾರಂಭಿಕ ತಯಾರಿ ಪರಿಪೂರ್ಣವಾಗಿಲ್ಲದ್ದರಿಂದ ಹೀಗಾಯಿತು ಎಂದು ಗೂಗಲ್ ಹೇಳಿತು; ಗೂಗಲ್ ಬಜ್ ಸೇವೆಯನ್ನು ವ್ಯಾಪಕವಾಗಿ ಪರೀಕ್ಷಿಸದೆಹೋದದ್ದೂ ಈ ತೊಂದರೆಗೆ ಕಾರಣವಾಗಿತ್ತು. ಇದಕ್ಕೆ ಪರಿಹಾರ ರೂಪದಲ್ಲಿ "ವಿಶ್ವವ್ಯಾಪಿ ಜಾಲದಲ್ಲಿ ಗೋಪ್ಯತೆಗೆ ಸಂಬಂಧಪಟ್ಟ ವಿಷಯಗಳ ಮೇಲೆ ಕೆಲಸಮಾಡುತ್ತಿರುವ ಸಂಸ್ಥೆಗಳಿಗೆ ನೆರವು ನೀಡುವ" ಎಂಟೂವರೆ ಮಿಲಿಯನ್ ಡಾಲರ್ ಮೊತ್ತದ ನಿಧಿಯೊಂದನ್ನು ಸ್ಥಾಪಿಸುವ ಮೂಲಕ ಗೂಗಲ್ ಸಂಸ್ಥೆ ಕಾನೂನಿನ ಸಮಸ್ಯೆಗಳನ್ನು ನಿವಾರಿಸಿಕೊಂಡಿತು; ಆದರೆ ಗೂಗಲ್ ಬಜ್ ಜನಪ್ರಿಯತೆ ಮಾತ್ರ ಹೆಚ್ಚಲೇ ಇಲ್ಲ. ಈಗ ಅದರ ನಿವೃತ್ತಿ ಘೋಷಣೆಗೂ ಇದೇ ಅಂಶ ಕಾರಣವಾಯಿತು ಎನ್ನಬಹುದು.

ಹಾಗೆಂದ ಮಾತ್ರಕ್ಕೆ ಈ ಸೇವೆಯನ್ನು ಯಾರೂ ಬಳಸಲೇ ಇಲ್ಲ ಎಂದೇನೂ ಇಲ್ಲ. ಬಳಕೆದಾರರ ಸಣ್ಣಸಣ್ಣ ಗುಂಪುಗಳಲ್ಲಿ ಗೂಗಲ್ ಬಜ್ ತಕ್ಕಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿತ್ತು. ಕನ್ನಡದ ಬ್ಲಾಗಿಗರಂತೂ ಗೂಗಲ್ ಬಜ್ ಪ್ರಪಂಚದಲ್ಲಿ ಚೆನ್ನಾಗಿಯೇ ಸಕ್ರಿಯರಾಗಿದ್ದಾರೆ - ಅವರ ನಡುವಿನ ಅನೇಕ ವಾದವಿವಾದಗಳಿಗೂ ಈ ಸೇವೆ ಸಾಕ್ಷಿಯಾಗಿದೆ. ಗೆಳೆಯರ ನಡುವಿನ ಚೇಷ್ಟೆಗಳಿಗೆ, ಕಾಲೆಳೆತಗಳಿಗೂ ಗೂಗಲ್ ಬಜ್ ಬಳಕೆಯಾಗುತ್ತಿತ್ತು; ಈಗಲೂ ಆಗುತ್ತಿದೆ.

ಗೂಗಲ್ ಬಜ್ ಸೇವೆ ನಿಂತಮೇಲೆ ಅದರ ಬಳಕೆದಾರರು ಗೂಗಲ್ ಪ್ಲಸ್ ಕಡೆಗೆ ಹೋಗಲಿ ಎನ್ನುವುದು ಗೂಗಲ್‌ನ ಆಶಯ. ಗೂಗಲ್ ವೇವ್‌ನ ವೈಫಲ್ಯ ಹಾಗೂ ಆರ್ಕುಟ್‌ನ ಸೀಮಿತ ಯಶಸ್ಸಿನ ನಂತರ ಬಂದ ಗೂಗಲ್ ಪ್ಲಸ್ ನಿಧಾನಕ್ಕೆ ಬೆಳೆಯುತ್ತಿದೆ; ಈ ಸಂದರ್ಭದಲ್ಲಿ ಅದರತ್ತಲೇ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು ಎಂದು ಅವರಿಗೆ ಅನಿಸಿರಬೇಕು.

ಆದರೆ ಗೂಗಲ್ ಬಜ್ ಬಳಸುತ್ತಿದ್ದ ಕೆಲವೇ ಜನರಿಗೆ ಗೂಗಲ್ ಪ್ಲಸ್ ಕೂಡ ಇಷ್ಟವಾಗುತ್ತದೋ ಇಲ್ಲವೋ ಕಾದುನೋಡಬೇಕು. ಇತರ ಸಮಾಜ ಜಾಲಗಳ ಬಳಕೆದಾರರ ಸಂಖ್ಯೆಗೆ ಹೋಲಿಸಿದರೆ ತೀರಾ ಅಲ್ಪಸಂಖ್ಯಾತವಾಗಿರುವ ಈ ಗುಂಪಿನ ಇಷ್ಟಾನಿಷ್ಟಗಳ ಬಗ್ಗೆ, ಸದ್ಯಕ್ಕಂತೂ, ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಅಕ್ಟೋಬರ್ ೨೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge