ಮಂಗಳವಾರ, ಅಕ್ಟೋಬರ್ 4, 2011

ಟ್ಯಾಬ್ಲೆಟ್ ಲೋಕದಲ್ಲೊಂದು ಹೊಸ ಕಿಚ್ಚು

ಟಿ. ಜಿ. ಶ್ರೀನಿಧಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್, ಬ್ಲ್ಯಾಕ್‌ಬೆರಿ ಪ್ಲೇಬುಕ್, ಮೋಟರೋಲಾ ಕ್ಸೂಮ್, ಡೆಲ್ ಸ್ಟ್ರೀಕ್ - ಒಂದರ ಹಿಂದೊಂದರಂತೆ ಹೊಸಹೊಸ ಟ್ಯಾಬ್ಲೆಟ್ ಗಣಕಗಳು ಮಾರುಕಟ್ಟೆಗೆ ಬರುತ್ತಲೇ ಇದ್ದರೂ ಟ್ಯಾಬ್ಲೆಟ್ ಲೋಕದಲ್ಲಿ ಆಪಲ್ ಐಟ್ಯಾಬ್‌ನ ಆಧಿಪತ್ಯ ಬಹುತೇಕ ಅಬಾಧಿತವಾಗಿಯೇ ಇದೆ. ಈ ವರ್ಷದ ಅಂತ್ಯಕ್ಕೂ ವಿಶ್ವದ ಟ್ಯಾಬ್ಲೆಟ್ ಮಾರುಕಟ್ಟೆಯ ಮುಕ್ಕಾಲು ಭಾಗ ಆಪಲ್ ಹಿಡಿತದಲ್ಲೇ ಮುಂದುವರೆಯಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕೇಳಿಬಂದಿತ್ತಲ್ಲ!

ಆದರೆ ಕಳೆದ ವರ್ಷಾಂತ್ಯಕ್ಕೆ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿನ ಆಪಲ್ ಪಾಲು ಇದಕ್ಕಿಂತ ಶೇಕಡಾ ಹತ್ತರಷ್ಟು ಜಾಸ್ತಿಯಿತ್ತು ಎನ್ನುವುದು ಗಮನಾರ್ಹ. ಅಷ್ಟೇ ಅಲ್ಲ, ಈಗಷ್ಟೇ ಬೆಳೆಯುತ್ತಿರುವ ಕೆಲ ಮಾರುಕಟ್ಟೆಗಳಲ್ಲಿ (ವಿಶೇಷವಾಗಿ ನಮ್ಮ ದೇಶದಲ್ಲಿ) ಅಗ್ರಸ್ಥಾನ ತಲುಪಲು ಆಪಲ್ ಐಟ್ಯಾಬ್‌ಗೆ ಸಾಧ್ಯವಾಗಿಲ್ಲ ಎಂಬ ಸುದ್ದಿ ಕೂಡ ಇದೆ.

ಇಂತಹ ಸಂದರ್ಭದಲ್ಲಿ ಅಮೆಜಾನ್ ಡಾಟ್ ಕಾಮ್‌ನ ಹೊಸ ಉತ್ಪನ್ನ 'ಕಿಂಡ್ಲ್ ಫೈರ್' ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಷ್ಟೇ ಅಲ್ಲ, ಈವರೆಗೂ ಬ್ರ್ಯಾಂಡ್ ನೇಮ್ ಹಾಗೂ ಟ್ಯಾಬ್ಲೆಟ್‌ನಲ್ಲಿರುವ ಸೌಲಭ್ಯಗಳ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತಿದ್ದ ಟ್ಯಾಬ್ಲೆಟ್ ಪ್ರಪಂಚದಲ್ಲಿ ಕಿಂಡ್ಲ್ ಫೈರ್ ಪ್ರವೇಶದಿಂದಾಗಿ ದರಸಮರವೂ ಶುರುವಾಗಿದೆ!


ಏನಿದು ಕಿಂಡ್ಲ್?
ಮೂಲತಃ ಕಿಂಡ್ಲ್ ಎನ್ನುವುದೊಂದು ಇಬುಕ್ ರೀಡರ್, ಅಂದರೆ ವಿದ್ಯುನ್ಮಾನ ಪುಸ್ತಕಗಳನ್ನು ಓದಲೆಂದೇ ರೂಪಿಸಲಾಗಿರುವ ವಿಶಿಷ್ಟ ಉಪಕರಣ. ನಿಸ್ತಂತು ಸಂಪರ್ಕ ಬಳಸಿ ಇ-ಪುಸ್ತಕಗಳನ್ನು ಕೊಂಡು, ಡೌನ್‌ಲೋಡ್ ಮಾಡಿಕೊಂಡು, ಓದಲು ಈ ಉಪಕರಣ ಅನುವುಮಾಡಿಕೊಡುತ್ತದೆ.

೨೦೦೭ರಿಂದಲೇ ಮಾರುಕಟ್ಟೆಯಲ್ಲಿರುವ ಕಿಂಡ್ಲ್‌ನ ಹಲವಾರು ಮಾದರಿಗಳು ಈಗಾಗಲೇ ಬಂದುಹೋಗಿವೆ. ಇ-ಬುಕ್ ರೀಡರ್‌ಗಳ ಸಾಲಿನಲ್ಲಿ ಕಿಂಡ್ಲ್ ತನ್ನದೇ ಆದ ವಿಶಿಷ್ಟ ಸ್ಥಾನವನ್ನೂ ಗಳಿಸಿಕೊಂಡಿದೆ.

ಆದರೆ ಕಿಂಡ್ಲ್ ಹೆಸರು ಎಲ್ಲೆಲ್ಲೂ ಕೇಳಸಿಗುತ್ತಿರುವುದು ಈಗಲೇ. ಅದಕ್ಕೆ ಕಾರಣವಾಗಿರುವುದು ಕಿಂಡ್ಲ್ ಫೈರ್. ಈವರೆಗೂ ಕಪ್ಪು-ಬಿಳುಪಿನ ಪರದೆಯನ್ನಷ್ಟೆ ಹೊಂದಿದ್ದ ಕಿಂಡ್ಲ್ ತನ್ನ ಈ ಹೊಸ ಅವತಾರದಲ್ಲಿ ವರ್ಣಮಯವಾಗಿರಲಿದೆ; ಅಷ್ಟೇ ಅಲ್ಲ, ಇ-ಬುಕ್ ರೀಡರ್ ಎಂಬ ಹಣೆಪಟ್ಟಿ ಕಳಚಿಕೊಂಡು ಟ್ಯಾಬ್ಲೆಟ್ ಗಣಕದ ರೂಪವನ್ನೂ ಪಡೆದುಕೊಂಡಿದೆ!

ಕಿಂಡ್ಲ್ ಫೈರ್
ಮಾರುಕಟ್ಟೆಯಲ್ಲಿ ಹತ್ತಾರು ಟ್ಯಾಬ್ಲೆಟ್ ಗಣಕಗಳಿರುವಾಗ ಇದೊಂದು ಟ್ಯಾಬ್ಲೆಟ್ ಬಗ್ಗೆ ಇಷ್ಟೆಲ್ಲ ಹೇಳಲು ಕಾರಣವಾದರೂ ಏನು ಎಂದು ನೀವು ಕೇಳಬಹುದು. ಹಾಗೆ ಕೇಳಬೇಕಾದದ್ದು ಸಹಜ ಕೂಡ.

ಸೌಲಭ್ಯಗಳ ದೃಷ್ಟಿಯಿಂದ ನೋಡಿದರೆ ಕಿಂಡ್ಲ್ ಬೇರೆ ಟ್ಯಾಬ್ಲೆಟ್ಟುಗಳಿಗಿಂತ ತುಂಬಾ ಭಿನ್ನವಾಗೇನೂ ಇಲ್ಲ. ಏಳು ಇಂಚಿನ ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್), ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ, ನಿಸ್ತಂತು ಸಂಪರ್ಕ ಬಳಸಿ ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವ ಸೌಲಭ್ಯ, ವೀಡಿಯೋ ನೋಡುವ - ಇಬುಕ್ ಓದುವ - ಆಟ ಆಡುವ ಸೌಕರ್ಯ ಇವೆಲ್ಲ ಕಿಂಡ್ಲ್ ಫೈರ್‌ನಲ್ಲಿವೆ.

ಇದರಲ್ಲಿರುವ ಸಿಲ್ಕ್ ಎಂಬ ಹೊಸ ಬ್ರೌಸರ್‌ನ ನೆರವಿನಿಂದ ಜಾಲತಾಣಗಳನ್ನು ಬಹಳ ಕ್ಷಿಪ್ರವಾಗಿ ತೆರೆಯುವುದು ಸಾಧ್ಯವಾಗಲಿದೆಯಂತೆ. ಅಮೆಜಾನ್ ತಾಣದ ಮೂಲಕ ಲಭ್ಯವಿರುವ ವಿದ್ಯುನ್ಮಾನ ಪುಸ್ತಕ, ಇ-ಪತ್ರಿಕೆ, ಸಂಗೀತ ಹಾಗೂ ವೀಡಿಯೋ ಕಡತಗಳನ್ನು ಕಿಂಡ್ಲ್ ಫೈರ್‌ನಲ್ಲೂ ಪಡೆದುಕೊಳ್ಳಬಹುದು.

ಕ್ಯಾಮೆರಾ, ಮೈಕ್ರೋಫೋನ್ ಹಾಗೂ ಥ್ರೀಜಿ ಸಂಪರ್ಕ ಇಲ್ಲದಿರುವ ಕೊರತೆಯೂ ಇದೆ. ಏಳು ಇಂಚಿನ ಪರದೆ ಕೊಂಚ ಸಣ್ಣದೇ ಆಯಿತು ಎನ್ನುವವರೂ ಇದ್ದಾರೆ.

ಇದರ ೮ಜಿಬಿ ಶೇಖರಣಾ ಸಾಮರ್ಥ್ಯವೂ ಕೊಂಚ ಕಡಿಮೆಯೇ. ಆದರೆ ತಮ್ಮ ಕಡತಗಳನ್ನು ಉಳಿಸಿಡಲು ಕಿಂಡ್ಲ್ ಫೈರ್ ಬಳಕೆದಾರು ಅಮೆಜಾನ್‌ನ ಕ್ಲೌಡ್ ವ್ಯವಸ್ಥೆಯನ್ನು ಉಚಿತವಾಗಿ ಬಳಸಬಹುದಾದ್ದರಿಂದ ಇದು ಅಂತಹ ದೊಡ್ಡ ಸಮಸ್ಯೆ ಎಂದೇನೂ ಎನಿಸಲಾರದು.

ಪ್ರೈಸ್ ಸರ್ಪ್ರೈಸ್!
ಈ ಹೊಸ ಟ್ಯಾಬ್ಲೆಟ್ ಬಗ್ಗೆ ಮಾರುಕಟ್ಟೆಯಲ್ಲಿ ಮೂಡಿರುವ ಆಸಕ್ತಿಗೆ ಮುಖ್ಯ ಕಾರಣ ಅದರ ಬೆಲೆ. ನೂರಾ ತೊಂಬತ್ತೊಂಬತ್ತು ಡಾಲರುಗಳಿಗೆ ಲಭ್ಯವಾಗಲಿರುವ ಕಿಂಡ್ಲ್ ಫೈರ್ ಈ ವಿಷಯದಲ್ಲಿ ಬೇರೆಲ್ಲ ಪ್ರಮುಖ ಟ್ಯಾಬ್ಲೆಟ್‌ಗಳಿಗೆ ಪ್ರಬಲ ಸ್ಪರ್ಧೆ ನೀಡಲಿದೆ. ಆಪಲ್ ಸೇರಿದಂತೆ ಬಹುತೇಕ ಟ್ಯಾಬ್ಲೆಟ್ ನಿರ್ಮಾತೃಗಳೆಲ್ಲ ತಮ್ಮ ಉತ್ಪನ್ನಗಳನ್ನು ನಾನ್ನೂರರಿಂದ ಐನೂರು ಡಾಲರುಗಳ ಬೆಲೆಯಲ್ಲಿ ಮಾರುತ್ತಿರುವುದು ಕಿಂಡ್ಲ್ ಫೈರ್‌ನ ಕುರಿತ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಕಿಂಡ್ಲ್ ಫೈರ್ ಹುಟ್ಟುಹಾಕಿರುವ ದರಸಮರದ ಮೊದಲನೇ ಹಂತದಲ್ಲಿ ಹಲವಾರು ಆನ್‌ಲೈನ್ ವ್ಯಾಪಾರ ಮಳಿಗೆಗಳು ಬ್ಲ್ಯಾಕ್‌ಬೆರಿ ಪ್ಲೇಬುಕ್ ಬೆಲೆಯಲ್ಲಿ ಭಾರೀ ಕಡಿತ ಘೋಷಿಸಿವೆ. ಹೆಚ್‌ಟಿಸಿ ಸಂಸ್ಥೆಯ ಉತ್ಪನ್ನ ಫ್ಲೈಯರ್‌ನ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ.

ನವೆಂಬರ್ ೧೫ರಿಂದ ಅಮೆರಿಕಾದಲ್ಲಿ ಲಭ್ಯವಾಗಲಿರುವ ಕಿಂಡ್ಲ್ ಫೈರ್‌ನ ಕಿಚ್ಚು ವಿಶ್ವದ ಇತರೆಡೆಗಳಿಗೆ ಯಾವಾಗ ಹಬ್ಬಲಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಕಿಚ್ಚು ಟ್ಯಾಬ್ಲೆಟ್ ಜಗತ್ತಿನಲ್ಲಿ ಯಾವೆಲ್ಲ ಹೊಸ ಬದಲಾವಣೆಗಳನ್ನು ತರಲಿದೆಯೋ ಕಾದುನೋಡಬೇಕಿದೆ.

ಅಕ್ಟೋಬರ್ ೪, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge