ಮಂಗಳವಾರ, ಸೆಪ್ಟೆಂಬರ್ 13, 2011

ಹಳೆಯ ಗಣಕದ ಹಳತಾಗದ ನೆನಪು

ಟಿ. ಜಿ. ಶ್ರೀನಿಧಿ

'ಫೋರ್ಡ್ ಮಾಡೆಲ್ ಟಿ' ಹೆಸರು ಕೇಳಿದ್ದೀರಾ? ಆಟೊಮೊಬೈಲ್ ಕ್ಷೇತ್ರದ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಿದ ಕಾರು ಅದು. "ಕಾರುಗಳೆಂದರೆ ಐಷಾರಾಮಿ ವಸ್ತುಗಳು, ಅವು ಏನಿದ್ದರೂ ಶ್ರೀಮಂತರಿಗೆ ಮಾತ್ರ ಮೀಸಲು" ಎನ್ನುವ ಪರಿಸ್ಥಿತಿಯಿದ್ದ ಕಾಲದಲ್ಲಿ 'ಫೋರ್ಡ್ ಮಾಡೆಲ್ ಟಿ' ಕಾರು ಜನಸಾಮಾನ್ಯರಿಗೂ ಎಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಂತು. ಕಾರುಗಳನ್ನು ಮಧ್ಯಮವರ್ಗದ ಜನತೆಯ ನಿಲುಕಿಗೂ ತಂದದ್ದು ಈ ಕಾರಿನ ಸಾಧನೆ.

ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅದರಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಕೆಲ ಘಟನೆಗಳು ಇತಿಹಾಸದಲ್ಲಿ ಕಾಣಸಿಗುತ್ತವೆ.

ವೈಯಕ್ತಿಕ ಗಣಕಗಳನ್ನು (ಪರ್ಸನಲ್ ಕಂಪ್ಯೂಟರ್; ಪಿಸಿ) ಸಾಮಾನ್ಯ ಜನರಿಗೂ ಎಟುಕುವಂತೆ ಮಾಡಿದ ಕಮಡೋರ್ ೬೪ ಗಣಕಗಳ ಸೃಷ್ಟಿಯನ್ನು ಇಂತಹ ಘಟನೆಗಳ ಸಾಲಿಗೆ ಧಾರಾಳವಾಗಿ ಸೇರಿಸಬಹುದು.


ಕಮಡೋರ್ ೬೪
ಕಮಡೋರ್ ೬೪ ಗಣಕ ಮಾರುಕಟ್ಟೆಗೆ ಬಂದದ್ದು ೧೯೮೨ರಲ್ಲಿ. ಆಗ ಮಾರುಕಟ್ಟೆಯಲ್ಲಿದ್ದ ಇತರ ಗಣಕಗಳಿಗೆ ಹೋಲಿಸಿದಾಗ ಇದು ನಾಲ್ಕಾರು ಪಟ್ಟು ಕಡಿಮೆ ಬೆಲೆಯಲ್ಲಿ ದೊರಕುತ್ತಿತ್ತು. ಕಂಪ್ಯೂಟರ್ ಮಾರಾಟಗಾರರಲ್ಲಿ ಮಾತ್ರವಲ್ಲದೆ ಸೂಪರ್‌ಮಾರ್ಕೆಟ್‌ಗಳಲ್ಲೂ ಮಾರಾಟವಾಗುತ್ತಿದ್ದದ್ದು ಈ ಗಣಕದ ಹೆಗ್ಗಳಿಕೆ. ಇವೆಲ್ಲ ಕಾರಣಗಳಿಂದ ಮಾರುಕಟ್ಟೆಗೆ ಬಂದ ಸ್ವಲ್ಪವೇ ಸಮಯದಲ್ಲಿ ಕಮಡೋರ್ ೬೪ ಅಪಾರ ಜನಪ್ರಿಯತೆ ಗಳಿಸಿಕೊಂಡಿತು.

'The best home computer available today' ಎಂದು ಕರೆಸಿಕೊಂಡಿದ್ದ ಈ ಗಣಕಕ್ಕೆ ಪ್ರತ್ಯೇಕ ಮಾನಿಟರ್‌ನ ಅಗತ್ಯವೇ ಇರಲಿಲ್ಲ; ಯಾವುದೇ ಟೀವಿ ಜೊತೆಗೆ ಅದನ್ನು ಸುಲಭವಾಗಿ ಬಳಸಬಹುದಿತ್ತು. ಕೇಂದ್ರೀಯ ಸಂಸ್ಕರಣ ಘಟಕದ (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್) ಸಮಸ್ತ ಭಾಗಗಳೂ ಅದರ ಕೀಬೋರ್ಡ್‌ನೊಳಗೇ ಅಡಕವಾಗಿದ್ದವು. ಫ್ಲಾಪಿ ಡ್ರೈವ್, ಜಾಯ್‌ಸ್ಟಿಕ್, ಮೋಡೆಮ್, ಗೇಮ್ ಕಾಟ್ರಿಡ್ಜ್ ಇತ್ಯಾದಿಗಳು ಬೇಕಿದ್ದರೆ ಅವನ್ನು ಪ್ರತ್ಯೇಕವಾಗಿ ಕೊಂಡು ಬಳಸಬಹುದಿತ್ತು.

ಕಮಡೋರ್ ೬೪ನಲ್ಲಿದ್ದ ರ್‍ಯಾಮ್ (ರ್‍ಯಾಂಡಮ್ ಆಕ್ಸೆಸ್ ಮೆಮೊರಿ) ಸಾಮರ್ಥ್ಯ ಕೇವಲ ೬೪ ಕಿಲೋಬೈಟ್. ಆಗಿನ ಕಾಲಕ್ಕೆ ಇದೇ 'ಲಾಟ್ಸ್ ಆಫ್ ಮೆಮೊರಿ' ಆಗಿತ್ತು! ಬೇಸಿಕ್ ಭಾಷೆಯ ಕ್ರಮವಿಧಿಗಳನ್ನು ಬಳಸಿ ಕೆಲಸಮಾಡುತ್ತಿದ್ದ ಈ ಗಣಕಕ್ಕಾಗಿ ಹಲವಾರು ವಿಭಿನ್ನ ತಂತ್ರಾಶಗಳು ಸೃಷ್ಟಿಯಾಗಿದ್ದವು; ಅಷ್ಟೇ ಅಲ್ಲ, ಅಪಾರ ಸಂಖ್ಯೆಯ ಆಟಗಳೂ ಲಭ್ಯವಿದ್ದವು.

ಈ ಮಾದರಿಯ ಒಂದೂವರೆ ಕೋಟಿಗೂ ಹೆಚ್ಚು ಗಣಕಗಳು ಮಾರಾಟವಾದದ್ದು ಇಂದಿಗೂ ಮುರಿಯದ ಗಿನಿಸ್ ದಾಖಲೆ. ಒಂದೇ ಮಾದರಿಯ ವೈಯಕ್ತಿಕ ಗಣಕ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಮಾರಾಟವಾದ ಬೇರೆ ಯಾವ ಉದಾಹರಣೆಯೂ ಇಲ್ಲ.

ಮರೆಯಲಾಗದ ಕಮಡೋರ್ ನಂಟು
ಕಮಡೋರ್ ೬೪ರ ಜನಪ್ರಿಯತೆ ನಿಜಕ್ಕೂ ವಿಶ್ವವ್ಯಾಪಿಯಾಗಿತ್ತು. ಬೆಂಗಳೂರಿನಲ್ಲಿ ಕೆಲಸಮಾಡುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಎಂಬತ್ತರ ದಶಕದಲ್ಲಿ ಜರ್ಮನಿಗೆ ಹೋಗಿದ್ದಾಗ ಅಲ್ಲಿಂದ ಒಂದು ಕಮಡೋರ್ ೬೪ ಗಣಕವನ್ನು ಕೊಂಡುತಂದಿದ್ದರು. ಅಲ್ಲಿನ ಅಂಗಡಿಗಳಲ್ಲಿ ಈ ಗಣಕವನ್ನು ಮೊದಲ ಬಾರಿ ನೋಡಿ ಮೆಚ್ಚಿದ್ದನ್ನು ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಗಣಕದೊಡನೆ ಬಳಸಲು ಫ್ಲಾಪಿ ಡ್ರೈವ್ ಕೊಂಡಾಗ ಗಣಕಕ್ಕೆ ಕೊಟ್ಟಷ್ಟೇ ಮೊತ್ತದ ಹಣ ಕೊಡಬೇಕಾಗಿ ಬಂದದ್ದು ಅವರ ಇನ್ನೊಂದು ನೆನಪು.

ಮನೆಯ ಟೀವಿಗೆ ಕ್ಷಣಾರ್ಧದಲ್ಲಿ ಹೊಂದಿಕೊಳ್ಳುತ್ತಿದ್ದ ಕಮಡೋರ್ ೬೪ ಗಣಕ, ಅದರಲ್ಲಿದ್ದ ಪುಟ್ಟಪುಟ್ಟ ಆಟಗಳು, ಬೇಸಿಕ್ ಭಾಷೆಯಲ್ಲಿ ಕ್ರiವಿಧಿ ಬರೆದಾಗ ಹೊರಡುತ್ತಿದ್ದ ಸಂಗೀತ - ಈ ನೆನಪುಗಳೆಲ್ಲ ಅವರ ಕುಟುಂಬದಲ್ಲಿ ಇನ್ನೂ ಹಸಿರಾಗಿಯೇ ಇವೆ. ಮನೆಯ ಟೀವಿಯೇ ಗಣಕದ ಮಾನಿಟರ್ ಆಗಿ ಬದಲಾಗಬೇಕಿದ್ದರಿಂದ ಟೀವಿ ನೋಡಬೇಕಿದ್ದವರು ಹಾಗೂ ಗಣಕ ಬಳಸಲು ಹೊರಟವರು ಆಗಿಂದಾಗ್ಗೆ ಪರಸ್ಪರ ಸ್ಪರ್ಧೆಗಿಳಿಯುತ್ತಿದ್ದುದರ ನೆನಪೂ ಇದೆ.

ತೀರಾ ಈಚೆಗೂ ಒಂದು ದಿನ ಕಮಡೋರ್ ೬೪ ಗಣಕವನ್ನು ಅಟ್ಟದ ಮೇಲಿಂದ ಕೆಳಗಿಳಿಸಿ ಟೀವಿಗೆ ಜೋಡಿಸಿದಾಗ ಅದು ಸರಿಯಾಗಿಯೇ ಕೆಲಸಮಾಡುತ್ತಿತ್ತಂತೆ!

ಕಮಡೋರ್ ಏಳುಬೀಳು
ಕಮಡೋರ್ ೬೪ ಗಣಕವನ್ನು ಸೃಷ್ಟಿಸಿದ್ದು ಕಮಡೋರ್ ಬಿಸಿನೆಸ್ ಮಷೀನ್ಸ್ ಎನ್ನುವ ಸಂಸ್ಥೆ. ಮೊದಲಿಗೆ ಟೈಪ್‌ರೈಟರ್ ರಿಪೇರಿ ಕೆಲಸ ಮಾಡುತ್ತಿದ್ದ ಈ ಸಂಸ್ಥೆ ನಂತರದ ದಿನಗಳಲ್ಲಿ ಕ್ಯಾಲ್ಕ್ಯುಲೇಟರ್‌ಗಳನ್ನು ತಯಾರಿಸುತ್ತಿತ್ತು.

ಈ ಸಂಸ್ಥೆಯ ಅತ್ಯಂತ ಜನಪ್ರಿಯ ಉತ್ಪನ್ನವೇ ಕಮಡೋರ್ ೬೪ ಗಣಕ. ಕಮಡೋರ್ ೬೪ಗೆ ಮೊದಲು ಮಾರುಕಟ್ಟೆಗೆ ಬಂದಿದ್ದ ವಿಐಸಿ-೨೦ ಹಾಗೂ ಆನಂತರ ಬಂದ ಅಮಿಗಾ ಸರಣಿಯ ಗಣಕಗಳೂ ತಕ್ಕಮಟ್ಟಿಗೆ ಹೆಸರುಮಾಡಿದ್ದವು. ಕಮಡೋರ್ ೬೪ ಗಣಕದಲ್ಲಿ ಬಳಕೆಯಾಗಿದ್ದ ೬೫೦೨ ಪ್ರಾಸೆಸರ್ ಅದೆಷ್ಟು ಯಶಸ್ವಿಯಾಗಿತ್ತೆಂದರೆ ಒಂದು ಕಾಲದಲ್ಲಿ ಆಪಲ್ ಸಂಸ್ಥೆ ಕೂಡ ಆ ಪ್ರಾಸೆಸರ್‌ಗಳನ್ನು ಬಳಸುತ್ತಿತ್ತು.

ಆದರೆ ಕಮಡೋರ್‌ನ ಜನಪ್ರಿಯತೆ ಹೆಚ್ಚುಕಾಲ ಉಳಿಯಲಿಲ್ಲ. ದೂರದೃಷ್ಟಿಯಿಲ್ಲದ ನಿರ್ಧಾರಗಳು, ಮಾರುಕಟ್ಟೆಯಲ್ಲಿ ಹೆಚ್ಚಿದ ಸ್ಪರ್ಧೆ ಮುಂತಾದ ಹಲವು ಕಾರಣಗಳು ಒಟ್ಟಾಗಿ ಕಮಡೋರ್ ಬಿಸಿನೆಸ್ ಮಷೀನ್ಸ್ ಸಂಸ್ಥೆಯನ್ನು ನಷ್ಟದತ್ತ ದೂಡಿದವು. ೧೯೯೪ರಲ್ಲಿ ಆ ಸಂಸ್ಥೆ ದಿವಾಳಿಯಾಗಿದೆ ಎಂದು ಘೋಷಿಸಲಾಯಿತು.

ಮತ್ತೆ ಮಾರುಕಟ್ಟೆಗೆ
ಇದೀಗ, ಕಮಡೋರ್ ೬೪ ಗಣಕ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದು ಮೂರು ದಶಕಗಳಾಗುತ್ತಿರುವ ಸಂದರ್ಭದಲ್ಲಿ ಅದಕ್ಕೊಂದು ಮರುಹುಟ್ಟು ದೊರೆತಿದೆ.

ಮೂಲ ಕಮಡೋರ್ ಸಂಸ್ಥೆ ದಿವಾಳಿಯಾದ ಬಳಿಕ ಅದರ ಹಕ್ಕುಗಳನ್ನು ಖರೀದಿಸಿದವರು ಕಮಡೋರ್ ಯುಎಸ್‌ಎ ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆ ಕಮಡೋರ್ ೬೪ನಂತೆಯೇ ಕಾಣಿಸುವ, ಆದರೆ ಆಧುನಿಕ ಯಂತ್ರಾಂಶ-ತಂತ್ರಾಂಶಗಳನ್ನು ಹೊಂದಿರುವ ಗಣಕವನ್ನು ರೂಪಿಸಿದೆ. ಬಳಕೆದಾರರಲ್ಲೂ ಈ ಗಣಕದ ಕುರಿತು ಸಾಕಷ್ಟು ಆಸಕ್ತಿ ಕಂಡುಬಂದಿರುವುದು ವಿಶೇಷ.

ಸೆಪ್ಟೆಂಬರ್ ೧೩, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge