ಮಂಗಳವಾರ, ಸೆಪ್ಟೆಂಬರ್ 6, 2011

ಬ್ರಾಡ್‌ಬ್ಯಾಂಡ್ ಭಾಷೆ

ಟಿ. ಜಿ. ಶ್ರೀನಿಧಿ

ಅಂತರಜಾಲ ಸಂಪರ್ಕ ಬಂದ ಹೊಸತು. ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸಬೇಕೆಂದರೆ ಆಗ ಲಭ್ಯವಿದ್ದದ್ದು ಡಯಲ್ ಅಪ್ ಸಂಪರ್ಕ ಮಾತ್ರ. ದೂರವಾಣಿ ಬಳಸಿ ಕೆಲಸಮಾಡುತ್ತಿದ್ದ ಆ ಬಗೆಯ ಸಂಪರ್ಕ ಬಳಸುವವರಿಗೆ ಅಪಾರ ತಾಳ್ಮೆಯಿರಬೇಕಿದ್ದು ಅನಿವಾರ್ಯವಾಗಿತ್ತು. ಯಾವುದೋ ಜಾಲತಾಣ ನೋಡಬೇಕೆಂದು ಹೊರಟರೆ ಪುಟಗಳು ತೀರಾ ನಿಧಾನವಾಗಿ ತೆರೆದುಕೊಳ್ಳುತ್ತಿದ್ದವು. ಇನ್ನು ಯಾವುದಾದರೂ ಕಡತವನ್ನು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡಬೇಕಾದರಂತೂ ಅದರ ಆಮೆವೇಗ ಬೇಸರಬರಿಸಿಬಿಡುತ್ತಿತ್ತು. ಅಂತರಜಾಲ ಸಂಪರ್ಕದಲ್ಲಿರುವಾಗ ಯಾರಿಗಾದರೂ ಕರೆಮಾಡಬೇಕೆಂದರೆ ಅದೂ ಸಾಧ್ಯವಾಗುತ್ತಿರಲಿಲ್ಲ.

ಈ ಅನುಭವವನ್ನು ಥಟ್ ಅಂತ ಬದಲಿಸಿ ವಿಶ್ವವ್ಯಾಪಿ ಜಾಲದ ಜೊತೆಗಿನ ನಮ್ಮ ಅನುಭವದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಬ್ರಾಡ್‌ಬ್ಯಾಂಡ್ ಸಂಪರ್ಕ.

ಬ್ರಾಡ್‌ಬ್ಯಾಂಡ್ ಕ್ರಾಂತಿ
ಹೆಚ್ಚಿನ ಬ್ಯಾಂಡ್‌ವಿಡ್ತ್ ಹೊಂದಿರುವ, ಸದಾ ಕಾರ್ಯನಿರತವಾಗಿರುವ ಅಂತರಜಾಲ ಸಂಪರ್ಕವನ್ನು ಬ್ರಾಡ್‌ಬ್ಯಾಂಡ್ ಸಂಪರ್ಕ ಎಂದು ಕರೆಯಬಹುದು. ಡಯಲ್ ಅಪ್ ಸಂಪರ್ಕಗಳಿಗೆ ಹೋಲಿಸಿದಾಗ ಬ್ರಾಡ್‌ಬ್ಯಾಂಡ್ ಬಳಸಿ ಹತ್ತಾರು ಪಟ್ಟು ಹೆಚ್ಚಿನ ವೇಗದಲ್ಲಿ ಮಾಹಿತಿ ಸಂವಹನ ಕೈಗೊಳ್ಳುವುದು ಸಾಧ್ಯ. ಅಂತರಜಾಲ ಸಂಪರ್ಕದಲ್ಲಿರುವಾಗ ದೂರವಾಣಿ ಕರೆ ಮಾಡುವಂತಿಲ್ಲ ಎಂಬ ನಿರ್ಬಂಧವೂ ಇಲ್ಲ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ಯಾವುದೇ ಅಂತರಜಾಲ ಸಂಪರ್ಕ ಬ್ರಾಡ್‌ಬ್ಯಾಂಡ್ ಎಂದು ಕರೆಸಿಕೊಳ್ಳಲು ಪ್ರತಿ ಸೆಕೆಂಡಿಗೆ ಕನಿಷ್ಠ ೨೫೬ ಕೆಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿರಬೇಕು.

ಕೆಬಿ ಅಂದರೆ ಕಿಲೋಬೈಟ್ ಕೇಳಿದ್ದೇವೆ, ಆದರೆ ಇದೇನಿದು ಕೆಬಿಪಿಎಸ್?

ಡೇಟಾ ರೇಟ್
ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.

ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್.

ಡೇಟಾ ರೇಟ್ ಯುನಿಟ್
ಗಣಕದ ಸ್ಮೃತಿಯಲ್ಲಿ ಯಾವುದೇ ದತ್ತಾಂಶ ದ್ವಿಮಾನ ಪದ್ಧತಿಯ ಸಂಖ್ಯೆಗಳ (೧ ಅಥವಾ ೦) ರೂಪದಲ್ಲಿ ಮಾತ್ರ ಶೇಖರವಾಗುವುದು ಸಾಧ್ಯ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಈ ಸಂಖ್ಯೆಗಳನ್ನು ಬೈನರಿ ಡಿಜಿಟ್ ಅಥವಾ ಬಿಟ್ ಎಂದು ಕರೆಯುತ್ತಾರೆ ಎನ್ನುವುದೂ ನಮಗೆ ಗೊತ್ತು.

ಯಾವುದೋ ಅಂತರಜಾಲ ಸಂಪರ್ಕ ಬಳಸಿ ಪ್ರತಿ ಸೆಕೆಂಡಿಗೆ ಒಂದು ಸಾವಿರ ಬಿಟ್‌ನಷ್ಟು ದತ್ತಾಂಶವನ್ನು ಪಡೆದುಕೊಳ್ಳುವುದು ಸಾಧ್ಯ ಎಂದುಕೊಳ್ಳೋಣ. ಆಗ ಆ ಸಂಪರ್ಕದ ಮೂಲಕ ಒಂದು ಕಿಲೋಬಿಟ್ ಪರ್ ಸೆಕೆಂಡ್ (ಕೆಬಿಪಿಎಸ್) ದತ್ತಾಂಶ ಹಾದುಹೋದಂತಾಯಿತು. ಇಲ್ಲಿ ಕೆಬಿಪಿಎಸ್ ಎನ್ನುವುದು ದತ್ತಾಂಶದ ಹರಿವನ್ನು ಅಳೆಯುವ ಏಕಮಾನ, ಅರ್ಥಾತ್ ಡೇಟಾ ರೇಟ್ ಯುನಿಟ್.

ಬೇರೆಬೇರೆ ಏಕಮಾನ
ಡಯಲ್ ಅಪ್ ಸಂಪರ್ಕಗಳ ಕಾಲದಲ್ಲಿ ೫೬ಕೆಬಿಪಿಎಸ್ ಸಂಪರ್ಕ ಬಹಳ ಸಾಮಾನ್ಯವಾಗಿತ್ತು. ೬೪ ಕೆಬಿಪಿಎಸ್ ವೇಗದ ಸಂಪರ್ಕಗಳೂ ಒಂದಷ್ಟುಕಾಲ ಜನಪ್ರಿಯವಾಗಿದ್ದವು. ಬ್ರಾಡ್‌ಬ್ಯಾಂಡ್ ಬಂದಮೇಲೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ೨೫೬ ಕೆಬಿಪಿಎಸ್ ಸಂಪರ್ಕಗಳು ವ್ಯಾಪಕವಾಗಿ ಕಾಣಿಸಿಕೊಂಡವು.

ಇದೀಗ ಬ್ರಾಡ್‌ಬ್ಯಾಂಡ್ ಸಂಪರ್ಕಗಳ ವೇಗ ಕಿಲೋಬಿಟ್‌ಗಳನ್ನು ದಾಟಿ ಮೆಗಾಬಿಟ್‌ಗಳನ್ನು ಮುಟ್ಟಿದೆ. ಒಂದು ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ಗಳಷ್ಟು ದತ್ತಾಂಶವನ್ನು ನಿಭಾಯಿಸಬಂಥವು ೧ ಎಂಬಿಪಿಎಸ್ ಸಂಪರ್ಕಗಳೆಂದು ಕರೆಸಿಕೊಳ್ಳುತ್ತವೆ. ೨ ಎಂಬಿಪಿಎಸ್, ೪ ಎಂಬಿಪಿಎಸ್, ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೨೪ ಎಂಬಿಪಿಎಸ್ ಹೀಗೆ ವಿವಿಧ ವೇಗದ ಸಂಪರ್ಕಗಳು ಲಭ್ಯವಿವೆ.

ಸೆಪ್ಟೆಂಬರ್ ೬, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

Viji ಹೇಳಿದರು...

tumba upayuktha lekhana tumba dhanyavada

Viji ಹೇಳಿದರು...

tumba dhanyavadagalu nimma lekanadalli tilisiruva vicharakke

badge