ಬುಧವಾರ, ಜುಲೈ 13, 2011

ಬೆದರು ತಂತ್ರಾಂಶಗಳಿಗೆ ಹೆದರಬೇಡಿ!

ಟಿ ಜಿ ಶ್ರೀನಿಧಿ

ಈ ಸನ್ನಿವೇಶವನ್ನು ಗಮನಿಸಿ: ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವಾಗ ನಿಮ್ಮ ಗಣಕದ ಪರದೆಯ ಮೇಲೆ ಇದ್ದಕ್ಕಿದ್ದಂತೆ ಒಂದು ಜಾಹೀರಾತು ಕಾಣಿಸಿಕೊಳ್ಳುತ್ತದೆ. ನಿಮ್ಮ ಗಣಕಕ್ಕೆ ಅದ್ಯಾವುದೋ ವೈರಸ್ ತಗುಲಿಕೊಂಡಿದೆ ಎನ್ನುವುದು ಈ ಜಾಹೀರಾತಿನ ಸಾರಾಂಶ. ಆ ವೈರಸ್ ಕಾಟದಿಂದ ಮುಕ್ತರಾಗಲು ಏನುಮಾಡಬೇಕು ಎನ್ನುವುದೂ ಅದೇ ಜಾಹೀರಾತಿನಲ್ಲಿರುತ್ತದೆ: "ಇಲ್ಲಿ ಕ್ಲಿಕ್ ಮಾಡಿ, ನಮ್ಮ ಆಂಟಿವೈರಸ್ ತಂತ್ರಾಂಶ ಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ, ವೈರಸ್ ಕಾಟದಿಂದ ಮುಕ್ತರಾಗಿ!"

ಆದರೆ ನಿಜ ವಿಷಯವೇ ಬೇರೆ. ನಿಮ್ಮ ಗಣಕಕ್ಕೆ ಪ್ರಾಯಶಃ ವೈರಸ್ ಬಂದಿರುವುದೂ ಇಲ್ಲ, ಅವರು ಕೊಡುವ ತಂತ್ರಾಂಶ ಅದನ್ನು ಹೋಗಿಸುವುದೂ ಇಲ್ಲ. ವೈರಸ್ ಹೋಗಿಸುವುದಿರಲಿ, ಅದು ಇನ್ನೇನಾದರೂ ಕೆಟ್ಟ ಕೆಲಸ ಮಾಡದಿದ್ದರೆ ಅದೇ ನಿಮ್ಮ ಅದೃಷ್ಟ.

ಹೌದು, ವಿಶ್ವವ್ಯಾಪಿ ಜಾಲದಲ್ಲಿ ಈಗ ಇದೊಂದು ದೊಡ್ಡ ಟೋಪಿ ವ್ಯವಹಾರ. ಗಣಕಕ್ಕೆ ವೈರಸ್ ಬಂದಿದೆ ಎಂದು ಹೆದರಿಸಿ ನಿಷ್ಪ್ರಯೋಜಕ, ಅಥವಾ ದುರುದ್ದೇಶಪೂರಿತ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಹಾಗೂ ಅದಕ್ಕಾಗಿ ಅವರಿಂದ ಹಣವನ್ನೂ ವಸೂಲಿಮಾಡುವ ಈ ದಂಧೆ ಕೋಟಿಗಟ್ಟಲೆ ಡಾಲರುಗಳನ್ನು ಸಂಪಾದಿಸುತ್ತಿದೆಯಂತೆ.

ಗಣಕ ಬಳಕೆದಾರರನ್ನು ವೈರಸ್ ಹೆಸರಿನಲ್ಲಿ ಹೆದರಿಸಿ ದುಡ್ಡುಕೀಳುವುದೇ ಈ ತಂತ್ರಾಂಶಗಳ ಮುಖ್ಯ ಉದ್ದೇಶವಾದ್ದರಿಂದ ಇವುಗಳನ್ನು 'ಸ್ಕೇರ್‌ವೇರ್'ಗಳೆಂದೇ ಕರೆಯುತ್ತಾರೆ. ಬೆದರುಬೊಂಬೆಗಳ ಹಾಗೆ ಸುಖಾಸುಮ್ಮನೆ ಹೆದರಿಸುವುದೇ ಇವುಗಳ ಕೆಲಸವಾದ್ದರಿಂದ ಇವುಗಳ ಹೆಸರೂ ಬೆದರು ತಂತ್ರಾಂಶ ಎಂದೇ!

ಒಂದಷ್ಟು ಹಣ ಕಿತ್ತು ಯಾವುದಕ್ಕೂ ಉಪಯೋಗವಿಲ್ಲದ ತಂತ್ರಾಂಶವನ್ನು ನೀಡಿ ಸುಮ್ಮನಾಗುತ್ತಾರೆ ಎಂದರೆ ಹೋದದ್ದು ಹೋಯಿತು ಎಂದುಕೊಳ್ಳಬಹುದೇನೋ. ಆದರೆ ಈ ದಂಧೆಗೆ ಇನ್ನೊಂದು ಆಯಾಮವೂ ಇದೆ. ಆಂಟಿವೈರಸ್ ಹೆಸರಿನಲ್ಲಿ ಬರುವ ಬೆದರು ತಂತ್ರಾಂಶಗಳು ಬಹಳಷ್ಟು ಸಂದರ್ಭಗಳಲ್ಲಿ ಬೇರೆ ದುರುದ್ದೇಶಗಳನ್ನು ಹೊಂದಿರುವುದೂ ಇದೆ; ಸ್ಪೈವೇರ್‌ನಂತಹ ಕುತಂತ್ರಾಂಶಗಳನ್ನು ಗಣಕಕ್ಕೆ ಸೇರಿಸಿ ಖಾಸಗಿ ಮಾಹಿತಿಯನ್ನು ಕದಿಯುವುದು, ಗಣಕವನ್ನು ದುಷ್ಕರ್ಮಿಗಳ ನಿಯಂತ್ರಣಕ್ಕೆ ವಹಿಸಿಕೊಟ್ಟು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುವುದು - ಹೀಗೆ ಸ್ಕೇರ್‌ವೇರ್‌ನ ಉದ್ದೇಶ ಏನು ಬೇಕಾದರೂ ಇರಬಹುದು. ಅದನ್ನು ಕೊಂಡುಕೊಂಡವರದು ಮಾತ್ರ ಬೀದಿಯಲ್ಲಿ ಹೋಗುವ ಮಾರಿಯನ್ನು ದುಡ್ಡುಕೊಟ್ಟು ಮನೆಗೆ ಕರೆಸಿಕೊಂಡ ಪರಿಸ್ಥಿತಿ.

ಈ ಪರಿಸ್ಥಿತಿ ನಿಮಗೆ ಬಾರದಿರಬೇಕಾದರೆ ಮೊದಲಿಗೆ ನಿಮ್ಮ ಗಣಕದಲ್ಲಿ ಒಂದು ಉತ್ತಮ ಆಂಟಿವೈರಸ್ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಿ, ಹಾಗೂ ಅದು ಆಗಿಂದಾಗ್ಗೆ ಅಪ್‌ಡೇಟ್ ಆಗುತ್ತಿರುವಂತೆ ನೋಡಿಕೊಳ್ಳಿ. ಹಾಗೆಯೇ ಸಾಮಾನ್ಯವಾಗಿ ಯಾವುದೇ ಆಂಟಿವೈರಸ್ ಸಂಸ್ಥೆ ನಿಮ್ಮ ಗಣಕಕ್ಕೆ ವೈರಸ್ ಬಂದಿದೆ ಎಂದು ತಿಳಿಸಲು ಜಾಹೀರಾತುಗಳ ಮೊರೆಹೋಗುವುದಿಲ್ಲ ಎನ್ನುವುದೂ ನಿಮ್ಮ ನೆನಪಿನಲ್ಲಿರಲಿ. ವಿಶ್ವವ್ಯಾಪಿ ಜಾಲದ ಮೂಲಕ ಆಂಟಿವೈರಸ್ ತಂತ್ರಾಂಶವನ್ನು ಕೊಳ್ಳುವುದೇ ಆದರೆ ಹೆಸರಾಂತ ಸಂಸ್ಥೆಗಳ ಉತ್ಪನ್ನಗಳನ್ನು ಅವುಗಳದೇ ತಾಣದಲ್ಲಿ ಮಾತ್ರ ಕೊಂಡುಕೊಳ್ಳಿ.

ಜುಲೈ ೧೩, ೨೦೧೧ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge