ಮಂಗಳವಾರ, ಜುಲೈ 12, 2011

ಹಕ್ಕಿಗಳಿಗೆ ಕೋಪ ಬಂದಾಗ...

ಟಿ ಜಿ ಶ್ರೀನಿಧಿ


ಹಂದಿಗಳ ಗುಂಪು ಹಕ್ಕಿಗಳ ಮೊಟ್ಟೆ ಕದ್ದೊಯ್ದರೆ ಏನಾಗುತ್ತದೆ?

ಹಕ್ಕಿಗಳಿಗೆ ಕೋಪ ಬರುತ್ತದೆ. ಸಿಂಪಲ್!

ಹಕ್ಕಿಗಳಿಗೆ ಕೋಪಬಂದರೆ ಏನಾಗುತ್ತದೆ?

ಪ್ರಪಂಚದಾದ್ಯಂತ ಕೋಟ್ಯಂತರ ಜನಕ್ಕೆ ಹೊಸತೊಂದು ಹವ್ಯಾಸ ಸಿಗುತ್ತದೆ; ಅವರಲ್ಲಿ ಅನೇಕರಿಗೆ ಈ ಹೊಸ ಹವ್ಯಾಸ ಚಟವೇ ಆಗಿಬಿಡುತ್ತದೆ; ಇದಕ್ಕೆಲ್ಲ ಕಾರಣವಾದ ಫಿನ್ಲೆಂಡಿನ ಸಂಸ್ಥೆಯೊಂದು ವಿಶ್ವವಿಖ್ಯಾತವಾಗುತ್ತದೆ!

ಆ ಸಂಸ್ಥೆಯ ಹೆಸರು ರೋವಿಯೋ ಮೊಬೈಲ್, ಹಾಗೂ ಆ ಸಂಸ್ಥೆ ಹುಟ್ಟುಹಾಕಿರುವ ವಿಶ್ವವಿಖ್ಯಾತ ಹವ್ಯಾಸದ ಹೆಸರು - ಆಂಗ್ರಿ ಬರ್ಡ್ಸ್.


ಹಕ್ಕಿ ವರ್ಸಸ್ ಹಂದಿ
ಇಷ್ಟರಲ್ಲಾಗಲೇ ನಿಮಗೆ ಗೊತ್ತಾಗಿರಬೇಕು, ಆಂಗ್ರಿ ಬರ್ಡ್ಸ್ ಎನ್ನುವುದು ಒಂದು ಆಟ. ಮೊದಲಿಗೆ ಈ ಆಟ ಬಿಡುಗಡೆಯಾದದ್ದು ೨೦೦೯ರ ಡಿಸೆಂಬರ್‌ನಲ್ಲಿ, ಅದೂ ಐ‌ಫೋನ್‌ಗಳಿಗಾಗಿ ಮಾತ್ರ. ಅಂದಿನಿಂದ ಇಂದಿನವರೆಗೆ ಅಭೂತಪೂರ್ವ ಯಶಸ್ಸು ಕಂಡಿರುವ ಆಂಗ್ರಿ ಬರ್ಡ್ಸ್ ಈಗ ಇನ್ನೂ ಹಲವಾರು ಬಗೆಯ ಮೊಬೈಲುಗಳಲ್ಲಿ ಹಾಗೂ ಗಣಕಗಳಲ್ಲಿ ಲಭ್ಯವಿದೆ. ಈವರೆಗೆ ಸುಮಾರು ಒಂದು ಕೋಟಿಗೂ ಹೆಚ್ಚಿನ ಜನ ಈ ಆಟವನ್ನು ಕೊಂಡಿದ್ದಾರೆ, ಹೆಚ್ಚೂಕಡಿಮೆ ಇಪ್ಪತ್ತೈದು ಕೋಟಿ ಜನ ಇದರ ಉಚಿತ ಆವೃತ್ತಿಗಳನ್ನು ಬಳಸುತ್ತಿದ್ದಾರೆ ಎಂದರೆ ಆಂಗ್ರಿ ಬರ್ಡ್ಸ್ ಜನಪ್ರಿಯತೆಯ ಅರಿವಾಗಬಹುದು. ತಿಂಗಳಿನಲ್ಲಿ ಸುಮಾರು ಆರು ಲಕ್ಷ ಜನ ಆಂಗ್ರಿ ಬರ್ಡ್ಸ್‌ನ ಫೇಸ್‌ಬುಕ್ ಆವೃತ್ತಿಯನ್ನು ಬಳಸುತ್ತಾರಂತೆ.

ಹಂದಿಗಳೇ ಈ ಆಟದ ವಿಲನ್‌ಗಳು. ಅವು ಹಕ್ಕಿ ಮೊಟ್ಟೆಗಳನ್ನು ಕದ್ದೊಯ್ದು ಎಲ್ಲೆಲ್ಲೋ ಅಡಗಿ ಕುಳಿತಿರುತ್ತವೆ. ಬಣ್ಣಬಣ್ಣದ ಹಕ್ಕಿಗಳ ಗುಂಪು ಈ ದುಷ್ಟ ಹಸಿರು ಹಂದಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದೇ ಈ ಆಟದ ಸಾರಾಂಶ. ಚಾಟರ್‌ಬಿಲ್ಲಿನ ಸಹಾಯದಿಂದ ಹಕ್ಕಿಗಳನ್ನು ಸರಿಯಾಗಿ ಗುರಿಯಿಟ್ಟು ಹಂದಿಗಳತ್ತ ಹೊಡೆಯುವುದು ಆಟಗಾರನ ಕೆಲಸ. ಒಂದು ಹಂತದಲ್ಲಿ ಹಂದಿಗಳನ್ನೆಲ್ಲ ಹೊಡೆದು ಮುಗಿಸುತ್ತಿದ್ದಂತೆ ಇನ್ನೊಂದು ಹಂತ ಶುರುವಾಗುತ್ತದೆ. ಮುಂದಿನ ಹಂತಗಳಿಗೆ ಹೋಗುತ್ತಿದ್ದಂತೆ ಹಂದಿಗಳ ಅಡಗುದಾಣದ ವಿನ್ಯಾಸ ಬದಲಾಗುತ್ತದೆ, ಬೇರೆಬೇರೆ ರೀತಿಯ ಹಕ್ಕಿಗಳೂ ಕಾಣಿಸಿಕೊಳ್ಳುತ್ತವೆ.

ಆಟವೋ, ಪಾಠವೋ, ಬರಿಯ ಚಟವೋ?
ಆಂಗ್ರಿ ಬರ್ಡ್ಸ್ ಬರಿಯ ಆಟವಷ್ಟೇ ಅಲ್ಲ, ಇದರಲ್ಲಿ ಒಂದಷ್ಟು ವಿಜ್ಞಾನವೂ ಇದೆ. ಚಾಟರ್‌ಬಿಲ್ಲಿನಿಂದ ಹಕ್ಕಿಗಳನ್ನು ಹಾರಿಬಿಡುವಾಗ ಅವುಗಳ ವೇಗ ಹಾಗೂ ಹಾರಾಟದ ಕೋನವನ್ನು ನಿಯಂತ್ರಿಸದಿದ್ದರೆ ಹಂದಿಗೆ ಹೊಡೆಯುವುದು ಸಾಧ್ಯವಾಗುವುದಿಲ್ಲ.

ಅಮೆರಿಕಾದ ಕೆಲ ಶಾಲೆಗಳಲ್ಲಿ ಭೌತಶಾಸ್ತ್ರ ಬೋಧಿಸುವಾಗ ಈ ಆಟವನ್ನು ಪೂರಕವಾಗಿ ಬಳಸಲಾಗುತ್ತಿದೆಯಂತೆ. ಭೌತಶಾಸ್ತ್ರದ ದೃಷ್ಟಿಯಿಂದ ಆಂಗ್ರಿ ಬರ್ಡ್ಸ್‌ ಆಟವನ್ನು ವಿಶ್ಲೇಷಿಸಿರುವ ವಿದ್ವಾಂಸರೂ ಇದ್ದಾರೆ.

ಇದೇ ರೀತಿಯಲ್ಲಿ ಮನೋವಿಜ್ಞಾನಿಗಳೂ ಈ ಆಟವನ್ನು ಗಮನಿಸುತ್ತಿದ್ದಾರೆ. ಈ ಆಟ ಅನೇಕರಲ್ಲಿ ಚಟವಾಗಿ ಪರಿವರ್ತನೆಯಾಗುತ್ತಿದೆ ಎನ್ನುವುದು ಅವರ ಹೇಳಿಕೆ.

ಫಿನ್‌ಲೆಂಡಿನ ಹಕ್ಕಿ
ಇವೆಲ್ಲ ವಿಶ್ಲೇಷಣೆಗಳ ನಡುವೆ ಆಂಗ್ರಿ ಬರ್ಡ್ಸ್ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಈ ಜನಪ್ರಿಯತೆಯ ಲಾಭ ಪಡೆಯುತ್ತಿರುವುದು ಆಂಗ್ರಿ ಬರ್ಡ್ಸ್ ಸೃಷ್ಟಿಕರ್ತರಾದ ಫಿನ್‌ಲೆಂಡಿನ ರೋವಿಯೋ ಮೊಬೈಲ್ ಸಂಸ್ಥೆ.

ಆಂಗ್ರಿ ಬರ್ಡ್ಸ್‌ನ ಜನಪ್ರಿಯತೆ ಈ ಸಂಸ್ಥೆಗೆ ಹೊಸಹೊಸ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿದೆ. ಈ ಆಟದಲ್ಲಿರುವ ಪಾತ್ರಗಳ ರೂಪದ ಆಟಿಕೆಗಳು, ಚಪ್ಪಲಿಗಳು, ಬ್ಯಾಗುಗಳು, ಟೈ - ಎಲ್ಲವೂ ಮಾರಾಟಕ್ಕಿವೆ. ಅಷ್ಟೇ ಅಲ್ಲ, ಆಂಗ್ರಿ ಬರ್ಡ್ಸ್ ಇದೀಗ ಹಾಲಿವುಡ್ ಚಲನಚಿತ್ರದ ರೂಪದಲ್ಲೂ ಮೂಡಿಬರಲಿದೆಯಂತೆ!

ಬೆರಳೆಣಿಕೆಯಷ್ಟು ಜನ ತಂತ್ರಜ್ಞರು ಸೇರಿಕೊಂಡು ರೂಪಿಸಿದ ಈ ಆಟದ ಯಶಸ್ಸು ವಾಣಿಜ್ಯಲೋಕದಲ್ಲೂ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ರೋವಿಯೋ ಸಂಸ್ಥೆಯ ಕುರಿತು ಮೂಡಿರುವ ಈ ಆಸಕ್ತಿಯ ಪರಿಣಾಮವಾಗಿ ಕಳೆದ ಮಾರ್ಚ್ ತಿಂಗಳಿನಲ್ಲಿ ಆ ಸಂಸ್ಥೆಯತ್ತ ನಾಲ್ಕು ಕೋಟಿ ಡಾಲರುಗಳಿಗೂ ಹೆಚ್ಚಿನ ಮೊತ್ತದ ಹೂಡಿಕೆ ಹರಿದುಬಂದಿದೆ.

ಜುಲೈ ೧೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge