ಭಾನುವಾರ, ಮೇ 29, 2011

ಲಿಂಕ್ಡ್‌ಇನ್ ಲಂಘನ

ಟಿ ಜಿ ಶ್ರೀನಿಧಿ

ಕಳೆದ ವಾರ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ ಲಿಂಕ್ಡ್‌ಇನ್ ಎನ್ನುವ ಸಂಸ್ಥೆಯ ಷೇರುಗಳ ವಹಿವಾಟು ಪ್ರಾರಂಭವಾಯಿತು. ಅದೂ ಅಂತಿಂತಹ ಪ್ರಾರಂಭವೇನಲ್ಲ, ತಲಾ ನಲವತ್ತೈದು ಡಾಲರುಗಳ ಬೆಲೆಯಲ್ಲಿ ವಿತರಣೆಯಾಗಿದ್ದ ಈ ಷೇರಿನ ಬೆಲೆ ಎರಡನೆಯ ದಿನದ ವೇಳೆಗಾಗಲೇ ನೂರು ಡಾಲರುಗಳ ಆಸುಪಾಸಿಗೆ ತಲುಪಿಬಿಟ್ಟಿತ್ತು. ನಮ್ಮ ಲೆಕ್ಕದಲ್ಲಿ ಹೇಳುವುದಾದರೆ ಈ ಬೆಲೆಯಲ್ಲಿ ಲಿಂಕ್ಡ್‌ಇನ್ ಸಂಸ್ಥೆಯ ಮೌಲ್ಯ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತದೆ!

ಇದನ್ನೆಲ್ಲ ನೋಡಿದ, ಕೇಳಿದ ಅನೇಕರ ಮನಸ್ಸಿನಲ್ಲಿ ಹುಟ್ಟಿಕೊಂಡದ್ದು ಒಂದೇ ಪ್ರಶ್ನೆ - "ಇಷ್ಟೆಲ್ಲ ಭರ್ಜರಿಯಾಗಿ ಮಾರುಕಟ್ಟೆ ಪ್ರವೇಶಿಸಿದೆಯಲ್ಲ, ಇಷ್ಟಕ್ಕೂ ಈ ಸಂಸ್ಥೆ ಏನು ಮಾಡುತ್ತದೆ?"


ಏನಿದು ಲಿಂಕ್ಡ್‌ಇನ್?
ಸರಳವಾಗಿ ಹೇಳಬೇಕಾದರೆ ಲಿಂಕ್ಡ್‌ಇನ್ (www.linkedin.com) ಒಂದು ಸಾಮಾಜಿಕ ಜಾಲತಾಣ (ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್). ೨೦೦೩ರಲ್ಲಿ, ಸಾಮಾಜಿಕ ಜಾಲಗಳ ಕಲ್ಪನೆ ಇನ್ನೂ ಅಷ್ಟಾಗಿ ಜನಪ್ರಿಯವಾಗಿಲ್ಲದ ಕಾಲದಲ್ಲಿ ಪ್ರಾರಂಭವಾದ ತಾಣ ಇದು.

ಸಾಮಾಜಿಕ ಜಾಲತಾಣ ಎಂದ ತಕ್ಷಣ ನಮಗೆ ಫೇಸ್‌ಬುಕ್, ಆರ್ಕುಟ್ ಇತ್ಯಾದಿಗಳ ನೆನಪಾಗುವುದು ಸಹಜ. ಮಿತ್ರರೊಡನೆ ಸಂಪರ್ಕದಲ್ಲಿರಲು, ಛಾಯಾಚಿತ್ರ-ವೀಡಿಯೋ ಇತ್ಯಾದಿಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ಈ ತಾಣಗಳಿಗಿಂತ ಲಿಂಕ್ಡ್‌ಇನ್ ಕೊಂಚ ಭಿನ್ನವಾದದ್ದು.

ಫೇಸ್‌ಬುಕ್-ಆರ್ಕುಟ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಸಹಾಯಮಾಡುವಂತೆಯೇ ಲಿಂಕ್ಡ್‌ಇನ್ ತಾಣ ತನ್ನ ಬಳಕೆದಾರರಿಗೆ ತಮ್ಮ ವೃತ್ತಿಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಲು ಅನುವುಮಾಡಿಕೊಡುತ್ತದೆ. ಕೆಲಸಮಾಡುತ್ತಿರುವ ಸಂಸ್ಥೆಯ ಹೆಸರು, ಹುದ್ದೆ, ವಿದ್ಯಾರ್ಹತೆ, ಹಿಂದಿನ ಅನುಭವ, ವಿವಿಧ ಕ್ಷೇತ್ರಗಳಲ್ಲಿನ ನೈಪುಣ್ಯ ಇತ್ಯಾದಿಗಳ ಬಗೆಗೆ ಲಿಂಕ್ಡ್‌ಇನ್‌ನಲ್ಲಿ ಮಾಹಿತಿ ಹಂಚಿಕೊಳ್ಳಬಹುದು. ಹೀಗಾಗಿಯೇ ಇದು ಬರಿಯ ಸೋಶಿಯಲ್ ನೆಟ್‌ವರ್ಕ್ ಆಗಿರದೆ 'ಪ್ರೊಫೆಶನಲ್ ನೆಟ್‌ವರ್ಕ್' ಎಂದು ಕರೆಸಿಕೊಳ್ಳುತ್ತದೆ.

ನಡೆದುಬಂದ ದಾರಿ
ಲಿಂಕ್ಡ್‌ಇನ್ ಪ್ರಾರಂಭವಾದಾಗ ಅದಕ್ಕೆ ಹೇಳಿಕೊಳ್ಳುವಂತಹ ಜನಪ್ರಿಯತೆಯೇನೂ ಸಿಕ್ಕಿರಲಿಲ್ಲ. ಆದರೆ ವೃತ್ತಿಸಂಬಂಧಿತ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಈ ತಾಣ ಎಷ್ಟು ಉಪಯುಕ್ತ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಇದರ ಜನಪ್ರಿಯತೆಯೂ ಬೆಳೆಯುತ್ತಲೇ ಹೋಯಿತು. ಈಗಂತೂ ವಿಶ್ವದೆಲ್ಲೆಡೆಯ ಹತ್ತು ಕೋಟಿಗಿಂತ ಹೆಚ್ಚಿನ ಬಳಕೆದಾರರು ಲಿಂಕ್ಡ್‌ಇನ್‌ನಲ್ಲಿದ್ದಾರೆ.

ಇಷ್ಟೆಲ್ಲ ಜನ ಈ ತಾಣದ ಮೂಲಕ ಸಿಗುತ್ತಿರುವುದರಿಂದ ಉದ್ಯೋಗದಾತರಿಗೆ ಹಾಗೂ ಉದ್ಯೋಗ ಸಮಾಲೋಚಕರಿಗೂ ಲಿಂಕ್ಡ್‌ಇನ್ ಅಚ್ಚುಮೆಚ್ಚಿನ ತಾಣವಾಗಿ ಬೆಳೆದಿದೆ. ಈ ಮೂಲಕ ಲಿಂಕ್ಡ್‌ಇನ್‌ಗೂ ಸಾಕಷ್ಟು ಲಾಭ ಸಿಕ್ಕಿದೆ; ಉದ್ಯೋಗಗಳಿಗೆ ಸಂಬಂಧಪಟ್ಟ ಹಾಗೂ ಇನ್ನಿತರ ರೀತಿಯ ಜಾಹೀರಾತುಗಳು ಲಿಂಕ್ಡ್‌ಇನ್‌ಗೆ ಸಾಕಷ್ಟು ವರಮಾನ ತಂದುಕೊಟ್ಟಿವೆ.

ಮತ್ತೊಂದು ಅಂತರಜಾಲ ಕ್ರಾಂತಿ?
ಲಿಂಕ್ಡ್‌ಇನ್ ಷೇರುಗಳಿಗೆ ಮಾರುಕಟ್ಟೆಯಲ್ಲಿ ದೊರೆತಿರುವ ಸ್ವಾಗತದಿಂದ ಅಂತರಜಾಲ ಲೋಕಕ್ಕೆ ಅಕ್ಷರಶಃ ರೋಮಾಂಚನವೇ ಆಗಿದೆ. ಸೋಶಿಯಲ್ ಶಾಪಿಂಗ್ ತಾಣ ಗ್ರೂಪಾನ್, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ಫೇಸ್‌ಬುಕ್ ಮುಂತಾದವುಗಳೂ ಷೇರುಮಾರುಕಟ್ಟೆಯತ್ತ ಮುಖಮಾಡಿ ನಿಂತಿರುವ ಈ ಸಂದರ್ಭದಲ್ಲಿ ಲಿಂಕ್ಡ್‌ಇನ್ ಷೇರುಗಳ ಕಡೆಗೆ ವ್ಯಕ್ತವಾಗಿರುವ ಆಸಕ್ತಿ ಮತ್ತೊಂದು ಅಂತರಜಾಲ ಕ್ರಾಂತಿಯ ಮುನ್ಸೂಚನೆ ಎಂದು ಹೇಳುವವರೂ ಇದ್ದಾರೆ.

ಆದರೆ ಕಳೆದ ವರ್ಷದಲ್ಲಿ ಸಾವಿರ ಕೋಟಿ ರೂಪಾಯಿಗಳಷ್ಟು ಪ್ರಮಾಣದ ವಹಿವಾಟು ನಡೆಸಿ ಸುಮಾರು ಎಪ್ಪತ್ತು ಕೋಟಿ ರೂಪಾಯಿಗಳ ಲಾಭ ಗಳಿಸಿರುವ ಲಿಂಕ್ಡ್‌ಇನ್ ಸಂಸ್ಥೆಗೆ ಷೇರು ಮಾರುಕಟ್ಟೆಯಲ್ಲಿ ನಲವತ್ತು ಸಾವಿರ ಕೋಟಿ ರೂಪಾಯಿಗಳ ಭಾರೀ ಮೌಲ್ಯ ಕಟ್ಟಲಾಗಿರುವುದು ಸ್ವಲ್ಪಮಟ್ಟಿನ ಗಾಬರಿಗೂ ಕಾರಣವಾಗಿದೆ. ಇನ್ನು ಫೇಸ್‌ಬುಕ್‌ಗಂತೂ ಎರಡೂಕಾಲು ಲಕ್ಷ ಕೋಟಿ ರೂಪಾಯಿಗಳವರೆಗೂ ಬೆಲೆಕಟ್ಟಲಾಗಿದೆ. ಅಂತರಜಾಲದ ಮೂಲಕ ವಹಿವಾಟು ನಡೆಸುವ ಸಂಸ್ಥೆಗಳಿಗೆಲ್ಲ ಇದೇ ರೀತಿ ಮಾಡುತ್ತ ಹೋದರೆ ಈ ಶತಮಾನದ ಪ್ರಾರಂಭದಲ್ಲಿ ಆಗಿದ್ದಂತೆ ಮತ್ತೊಮ್ಮೆ ಡಾಟ್ ಕಾಮ್ ಕುಸಿತ ಕಂಡುಬರುವ ಸಾಧ್ಯತೆಯಿದೆ ಎನ್ನುವುದು ಈ ಗಾಬರಿಗೆ ಕಾರಣ.

ಡಾಟ್‌ಕಾಮ್‌ಗಳೆಲ್ಲ ಮತ್ತೊಮ್ಮೆ ಷೇರುಮಾರುಕಟ್ಟೆಯತ್ತ ಮುಖಮಾಡಿರುವ ಈ ಸಂದರ್ಭ ಮತ್ತೊಂದು ಅಂತರಜಾಲ ಕ್ರಾಂತಿಗೆ ನಾಂದಿಹಾಡುತ್ತದೋ ಅಥವಾ ವಿಶ್ವ ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗುತ್ತದೋ - ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.

ಮೇ ೨೪, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ 

ಕಾಮೆಂಟ್‌ಗಳಿಲ್ಲ:

badge