ಮಂಗಳವಾರ, ಮಾರ್ಚ್ 8, 2011

ಕಾಪಿ ಪೇಸ್ಟ್ ಕತೆ

ಟಿ ಜಿ ಶ್ರೀನಿಧಿ

ಇತ್ತೀಚೆಗೆ ಜರ್ಮನಿಯ ಮಂತ್ರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂತು. ಆತನ ಮೇಲಿದ್ದದ್ದು ತನ್ನ ಡಾಕ್ಟರೇಟ್ ಪ್ರಬಂಧದಲ್ಲಿ ಕೃತಿಚೌರ್ಯ ಮಾಡಿದ ಆರೋಪ. ಲಿಬಿಯಾದ ಕುಖ್ಯಾತ ಸರ್ವಾಧಿಕಾರಿ ಕರ್ನಲ್ ಗಡಾಫಿಯ ಮಗನ ಮೇಲೂ ಇದೀಗ ಇಂತಹುದೇ ಅರೋಪ ಬಂದಿದೆ. ಆತನಿಗೆ ಡಾಕ್ಟರೇಟ್ ಕೊಟ್ಟಿದ್ದ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಈ ಅರೋಪ ಕುರಿತ ತನಿಖೆ ಪ್ರಾರಂಭಿಸಿದೆ.

ಗಣಕ ಜಗತ್ತಿನಲ್ಲಿ ಸರ್ವಾಂತರ್ಯಾಮಿಯಾಗಿರುವ ಕಾಪಿ-ಪೇಸ್ಟ್ ತಂತ್ರ ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಇವು ಕೇವಲ ಉದಾಹರಣೆಗಳಷ್ಟೆ.


ಕಂಟ್ರೋಲ್ ಸಿ ಕಂಟ್ರೋಲ್ ವಿ
ಪಠ್ಯ, ಚಿತ್ರ ಮುಂತಾದ ಯಾವುದೇ ರೂಪದಲ್ಲಿ ಒಂದು ಕಡೆ ಇರುವ ಮಾಹಿತಿಯನ್ನು ನಕಲುಮಾಡಿಕೊಂಡು ಮತ್ತೊಂದು ಕಡೆ ಅಂಟಿಸಿ ಬಳಸುವ ಕ್ರಿಯೆಗೆ ಕಾಪಿ-ಪೇಸ್ಟ್ ಎಂದು ಹೆಸರು. 'ಕಂಟ್ರೋಲ್' ಮತ್ತು 'ಸಿ' ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಕಾಪಿ, ಹಾಗೆಯೇ 'ಕಂಟ್ರೋಲ್' ಮತ್ತು 'ವಿ' ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಪೇಸ್ಟ್ - ಇವು ಗಣಕ ಬಳಕೆದಾರರಿಗೆಲ್ಲ ಚಿರಪರಿಚಿತ.

ಕಾಪಿ-ಪೇಸ್ಟ್‌ನ ಪರಿಕಲ್ಪನೆ ಪದಸಂಸ್ಕಾರಕಗಳ ಪರಿಚಯದ ಜೊತೆಗೇ ಗಣಕ ಲೋಕವನ್ನು ಪ್ರವೇಶಿಸಿತು. ಆದರೆ ಕಾಪಿ ಮಾಡಲು ಕಂಟ್ರೋಲ್ ಸಿ, ಹಾಗೂ ಪೇಸ್ಟ್ ಮಾಡಲು ಕಂಟ್ರೋಲ್ ವಿ ಎಂಬ ಆದೇಶಗಳು ಬಳಕೆಗೆ ಬಂದದ್ದು ೧೯೭೦ರ ದಶಕದಲ್ಲಿ, ಜೆರಾಕ್ಸ್ ಸಂಸ್ಥೆಯ ಪಾಲೋ ಆಲ್ಟೋ ರೀಸರ್ಚ್ ಸೆಂಟರ್‌ನಲ್ಲಿ ನಡೆದ ತಂತ್ರಾಂಶ ಅಭಿವೃದ್ಧಿಯ ಸಂದರ್ಭದಲ್ಲಿ. ಕಟ್ ಮಾಡಲು ಕಂಟ್ರೋಲ್ ಎಕ್ಸ್, ಹಿಂದಿನ ಕ್ರಿಯೆಯನ್ನು ರದ್ದುಪಡಿಸಲು ಕಂಟ್ರೋಲ್ ಜೆಡ್, ಮುದ್ರಿಸಲು ಕಂಟ್ರೋಲ್ ಪಿ ಮುಂತಾದ ಆದೇಶಗಳ ಬಳಕೆ ಕೂಡ ಇದೇ ಸಮಯದಲ್ಲಿ ಪ್ರಾರಂಭವಾಯಿತು.

ಮುಂದಿನ ದಿನಗಳಲ್ಲಿ ಕಂಟ್ರೋಲ್ ಸಿ ಹಾಗೂ ಕಂಟ್ರೋಲ್ ವಿ ಎಷ್ಟು ಪ್ರಮಾಣದ ಜನಪ್ರಿಯತೆ ಗಳಿಸಿಕೊಂಡವೆಂದರೆ ಅವು ಈಗ ಕಾಪಿ-ಪೇಸ್ಟ್‌ಗೆ ಪರ್ಯಾಯ ಹೆಸರಾಗಿ ಬಳಕೆಯಲ್ಲಿವೆ.

ಜಾಲದ ಕೃಪೆ
ವಿಶ್ವವ್ಯಾಪಿ ಜಾಲದ ಬಳಕೆ ಹೆಚ್ಚಿದಂತೆಯೇ ಅದರಲ್ಲಿ ಲಭ್ಯವಿರುವ ಮಾಹಿತಿಯ ಪ್ರಮಾಣ-ವೈವಿಧ್ಯಗಳೂ ತೀವ್ರವಾಗಿ ಹೆಚ್ಚಿವೆ. ಪ್ರಾಥಮಿಕ ಶಾಲಾ ಮಕ್ಕಳ ಹೋಮ್‌ವರ್ಕಿನಿಂದ ಹಿಡಿದು ಡಾಕ್ಟರೇಟ್ ಪ್ರಬಂಧಗಳನ್ನು ಸಿದ್ಧಪಡಿಸುವವರೆಗೆ ಎಲ್ಲವುದಕ್ಕೂ ವಿಶ್ವವ್ಯಾಪಿಜಾಲದ ಮೊರೆಹೋಗುವುದು ಸಾಮಾನ್ಯವಾಗುತ್ತಿದೆ.

ಕೃತಿಚೌರ್ಯದ ಹೆಚ್ಚಳಕ್ಕೂ ಇದೊಂದು ಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಾರೆ. ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಪರಾಮರ್ಶೆಗಾಗಷ್ಟೆ ಬಳಸುವ ಬದಲು ಅಲ್ಲಿರುವ ಮಾಹಿತಿಯನ್ನು ನೇರವಾಗಿ ತಮ್ಮ ಕೆಲಸದಲ್ಲಿ ಬಳಸಿಕೊಳ್ಳುವ ಅಭ್ಯಾಸ ಇತ್ತೀಚೆಗೆ ವ್ಯಾಪಕವಾಗಿದೆ. ವಿಶ್ವವ್ಯಾಪಿ ಜಾಲದ ಮೊದಲು ನಾಲ್ಕಾರು ಪುಸ್ತಕಗಳನ್ನು ಓದಿ ಕೈಬರಹದಲ್ಲೋ ಬೆರಳಚ್ಚಿನಲ್ಲೋ ನಕಲು ಮಾಡಬೇಕಿದ್ದದ್ದು ಇದೀಗ 'ಕಂಟ್ರೋಲ್ ಸಿ ಕಂಟ್ರೋಲ್ ವಿ'ಯಷ್ಟೇ ಸರಳವಾಗಿಬಿಟ್ಟಿದೆ.

ಕಳ್ಳರ ಮೇಲೊಂದು ಕಣ್ಣು
ಗಣಕೀಕರಣದ ಪ್ರಭಾವದಿಂದ ಕೃತಿಚೌರ್ಯದ ಸಮಸ್ಯೆ ಹೆಚ್ಚಾಗಿದೆ, ನಿಜ. ಆದರೆ ಕೃತಿಚೌರ್ಯವನ್ನು ಪತ್ತೆಹಚ್ಚಲೂ ಗಣಕಗಳು ನೆರವಾಗುತ್ತಿವೆ. ಕೃತಿಚೌರ್ಯದ ಸಾಧ್ಯತೆಯನ್ನು ಪತ್ತೆಮಾಡುವ 'ಟರ್ನ್ ಇಟ್ ಇನ್'ನಂತಹ ತಂತ್ರಾಂಶಗಳು ಈಗಾಗಲೇ ತಯಾರಾಗಿವೆ.

ದತ್ತಸಂಚಯದಲ್ಲಿ ಶೇಖರಿಸಿಟ್ಟ ಲಕ್ಷಾಂತರ ಸಂಶೋಧನಾ ಪ್ರಬಂಧಗಳು, ಬರೆಹಗಳು, ವೆಬ್ ಪುಟಗಳು ಮುಂತಾದ ಮಾಹಿತಿಯನ್ನು ಈ ತಂತ್ರಾಂಶಗಳು ಬಳಸಿಕೊಳ್ಳುತ್ತವೆ. ಸಂಶಯಾಸ್ಪದ ಲೇಖನವನ್ನು ಇಲ್ಲಿರುವ ಮಾಹಿತಿಯೊಡನೆ ಹೋಲಿಸಿನೋಡಿ ಸಂಶಯಾಸ್ಪದ ಭಾಗಗಳನ್ನು ಗುರುತಿಸಿಕೊಡುವುದು ಈ ತಂತ್ರಾಂಶಗಳ ಕೆಲಸ.

ಆದರೆ ಇಂತಹ ತಂತ್ರಾಂಶಗಳು ಇನ್ನೂ ಪರಿಪೂರ್ಣವಾಗಿ ಬೆಳೆದಿಲ್ಲ. ಪ್ರಬಂಧದಲ್ಲಿ ಸೂಕ್ತವಾಗಿಯೇ ಉಲ್ಲೇಖಿಸಲಾಗಿರುವ ಇತರ ಲೇಖಕರ ಬರೆಹ ಕೆಲವೊಮ್ಮೆ ಕೃತಿಚೌರ್ಯ ಎಂಬ ಹಣೆಪಟ್ಟಿ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೃತಿಚೌರ್ಯದ ಎಲ್ಲ ಘಟನೆಗಳನ್ನೂ ತಂತ್ರಾಂಶದ ಸಹಾಯದಿಂದ ಪತ್ತೆಮಾಡಲು ಕೂಡ ಸಾಧ್ಯವಾಗುವುದಿಲ್ಲ. ಹೀಗಾಗಿ ಕೃತಿಚೌರ್ಯ ಪತ್ತೆಯಲ್ಲಿ ಮಾನವ ಹಸ್ತಕ್ಷೇಪ ಬೇಕೇಬೇಕು ಎಂದು ಟರ್ನ್ ಇಟ್ ಇನ್‌ನ ತಂತ್ರಜ್ಞರಲ್ಲೊಬ್ಬರಾದ ಬ್ಯಾರಿ ಕ್ಯಾಲ್‌ವರ್ಟ್ ಹೇಳುತ್ತಾರೆ.

ಮಾರ್ಚ್ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge