ಮಂಗಳವಾರ, ಮಾರ್ಚ್ 1, 2011

ಇದು ಸೋಷಿಯಲ್ ಶಾಪಿಂಗ್

ಟಿ ಜಿ ಶ್ರೀನಿಧಿ

ಸ್ನ್ಯಾಪ್‌ಡೀಲ್, ಕೂವ್ಸ್, ಡೀಲಿವೋರ್, ಡೀಲ್ಸ್ ಆಂಡ್ ಯೂ, ಟ್ಯಾಗಲ್, ಮಸ್ತಿ ಡೀಲ್ಸ್, ಸಿಟಿಆಫರ್ಸ್ - ಇವು ಭಾರತದ ಜಾಲಲೋಕದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೊಸ ಹೆಸರುಗಳಲ್ಲಿ ಕೆಲವು. "ಇಪ್ಪತ್ತೈದು ರೂಪಾಯಿ ಕೊಡಿ, ಪುಸ್ತಕಗಳ ಖರೀದಿ ಮೇಲೆ ಇನ್ನೂರು ರೂಪಾಯಿ ರಿಯಾಯಿತಿ ಪಡೆಯಿರಿ", "ನಾನ್ನೂರು ರೂಪಾಯಿ ಬೆಲೆಯ ತಿಂಡಿತೀರ್ಥ ಸೇವಿಸಿ, ನೂರಾ ತೊಂಬತ್ತು ರೂಪಾಯಿ ಮಾತ್ರ ಬಿಲ್ ಪಾವತಿಸಿ", "ವೈನಾಡಿನ ಕಾಡಿನಲ್ಲಿರುವ ರೆಸಾರ್ಟಿನಲ್ಲಿ ತಂಗಲು ಅರ್ಧಬೆಲೆ ಮಾತ್ರ ಕೊಟ್ಟರೆ ಸಾಕು" ಎನ್ನುವಂತಹ 'ಡೀಲು'ಗಳನ್ನು ಮಾರುವುದು ಈ ತಾಣಗಳ ಕೆಲಸ. ಆನ್‌ಲೈನ್ ವ್ಯಾಪಾರಕ್ಕೆ ಹೊಸ ಮೆರುಗು ತಂದುಕೊಟ್ಟಿರುವ ಈ ತಾಣಗಳೆಲ್ಲ ಸೋಷಿಯಲ್ ಶಾಪಿಂಗ್‌ನ ಪರಿಕಲ್ಪನೆ ಆಧರಿಸಿ ಕೆಲಸಮಾಡುತ್ತಿವೆ.


ಇ-ವ್ಯಾಪಾರದ ಹೊಸ ಅವತಾರ
ತೊಂಬತ್ತರ ದಶಕದ ಕೊನೆಯ ವೇಳೆಗೆ ಡಾಟ್‌ಕಾಂ ಗಾಳಿ ಜೋರಾಗಿ ಬೀಸುತ್ತಿದ್ದ ಕಾಲದಲ್ಲಿ ರೂಪುತಳೆದ ಮಹತ್ವಾಕಾಂಕ್ಷಿ ಕಲ್ಪನೆ ಅಂತರಜಾಲ ವ್ಯಾಪಾರದ್ದು. ವೆಬ್‌ಸೈಟ್‌ಗಳ ಮೂಲಕವೇ ಅಕ್ಕಿ-ಬೇಳೆಯಿಂದ ಹಿಡಿದು ಟೀವಿ-ಕಂಪ್ಯೂಟರುಗಳವರೆಗೆ ಸಮಸ್ತ ವಸ್ತುಗಳ ವ್ಯಾಪಾರವನ್ನೂ ನಡೆಸುವ ಇ-ವ್ಯಾಪಾರದ ಈ ಕಲ್ಪನೆ ಅಂತರಜಾಲದ ಬಳಕೆಗೆ ಹೊಸತೊಂದು ಆಯಾಮವನ್ನೇ ಒದಗಿಸಿಕೊಟ್ಟಿತು.

ಮನೆಯಲ್ಲಿ ಅಥವಾ ಕಚೇರಿಯಲ್ಲಿ ಗಣಕದ ಮುಂದೆ ಆರಾಮವಾಗಿ ಕುಳಿತು ನಮಗೆ ಬೇಕಾದ ವಸ್ತುಗಳನ್ನೆಲ್ಲ ಕೊಳ್ಳಬಹುದು ಎಂಬ ಆಲೋಚನೆಯೇ ಕ್ರಾಂತಿಕಾರಕವಾದದ್ದು. ಈ ಆಲೋಚನೆಯನ್ನು ಮುಂದಿಟ್ಟುಕೊಂಡು ವ್ಯಾಪಾರ ಪ್ರಾರಂಭಿಸಿದ ಅಮೆಜಾನ್‌ನಂತಹ ಸಂಸ್ಥೆಗಳು ವಿಶ್ವವಿಖ್ಯಾತವಾಗಿ ಬೆಳೆದವು; ಅನೇಕ ಭಾರತೀಯ ಸಂಸ್ಥೆಗಳು ಕೂಡ ತಕ್ಕಮಟ್ಟಿಗೆ ಯಶಸ್ವಿಯಾದವು.

ಈ ಶತಮಾನದ ಪ್ರಾರಂಭದಲ್ಲಿ ಡಾಟ್ ಕಾಮ್ ಭರಾಟೆಯೆಲ್ಲ ಠುಸ್ಸೆಂದಾಗ ಇ-ವ್ಯಾಪಾರಕ್ಕೂ ಭಾರೀ ಹೊಡೆತವೇ ಬಿದ್ದಿತ್ತು. ಆದರೆ ಈಗ, ಹೆಚ್ಚೂಕಡಿಮೆ ಒಂದು ದಶಕದ ನಂತರ, ಇ-ವ್ಯಾಪಾರ ಕ್ಷೇತ್ರ ಭಾರತದಂತಹ ದೇಶದಲ್ಲೂ ಜನಪ್ರಿಯತೆ ಕಾಣುತ್ತಿದೆ. ಅಷ್ಟೇ ಅಲ್ಲ, ಕಾಲಕ್ಕೆ ತಕ್ಕಂತಹ ಬದಲಾವಣೆಗಳನ್ನೂ ಕಂಡಿದೆ.

ಇಂತಹ ಬದಲಾವಣೆಗಳಲ್ಲಿ ಮುಖ್ಯವಾದದ್ದು ಸೋಷಿಯಲ್ ಶಾಪಿಂಗ್‌ನ ಪರಿಕಲ್ಪನೆ.

ಶಾಪಿಂಗ್ ಲೋಕದ ಸಮಾಜವಾದ
ಇ-ವ್ಯಾಪಾರ ಹಾಗೂ ಸಾಮಾಜಿಕ ಜಾಲಗಳ (ಸೋಷಿಯಲ್ ನೆಟ್‌ವರ್ಕ್) ಪರಿಕಲ್ಪನೆಯನ್ನು ಒಂದುಗೂಡಿಸುವ ಉದ್ದೇಶ ಸೋಷಿಯಲ್ ಶಾಪಿಂಗ್‌ನದು. ಯಾವುದೇ ವಸ್ತುವನ್ನೇ ಆದರೂ ಒಟ್ಟಾಗಿ ಕೊಂಡಾಗ ಅದರ ಮಾರಾಟ ಬೆಲೆ ಕಡಿಮೆಯಾಗುತ್ತದೆ ಎನ್ನುವ ಸರಳ ತತ್ತ್ವವನ್ನು ಈ ಪರಿಕಲ್ಪನೆ ಬಳಸಿಕೊಳ್ಳುತ್ತದೆ. ಊಟ ತಿಂಡಿ, ಪುಸ್ತಕ-ಸಿಡಿ-ಡಿವಿಡಿಗಳು, ಇಲೆಕ್ಟ್ರಾನಿಕ್ ಉತ್ಪನ್ನಗಳು, ಆರೋಗ್ಯಕ್ಕೆ ಸಂಬಂಧಪಟ್ಟ ಸೇವೆಗಳು, ಪ್ರವಾಸ ಪ್ಯಾಕೇಜ್‌ಗಳು - ಸೋಷಿಯಲ್ ಶಾಪಿಂಗ್ ಮೂಲಕ ಮಾರಾಟವಾಗುವ ಉತ್ಪನ್ನಗಳಲ್ಲಿ ನೂರೆಂಟು ಬಗೆ.

ಮಾರಾಟಗಾರರೊಡನೆ ವ್ಯವಹರಿಸಿ ಅವರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರುವಂತೆ ಮನವೊಲಿಸುವುದು, ಹಾಗೆ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ವಸ್ತು ಅಥವಾ ಸೇವೆಗಳಿಗೆ ಪ್ರಚಾರ ಕೊಟ್ಟು ಗ್ರಾಹಕರಿಗೆ ಮಾರುವುದು, ಹಾಗೂ ಅಷ್ಟು ಮಾಡಿದ್ದಕ್ಕೆ ಒಂದಷ್ಟು ಕಮಿಷನ್ ಸಂಪಾದಿಸಿಕೊಳ್ಳುವುದು - ಇದಿಷ್ಟು ಸೋಷಿಯಲ್ ಶಾಪಿಂಗ್ ತಾಣಗಳ ಕೆಲಸ. ನಿರ್ದಿಷ್ಟ ಸಂಖ್ಯೆಯ ಗ್ರಾಹಕರು ದೊರೆತರಷ್ಟೆ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರುವ ಷರತ್ತೂ ಕೆಲವು ತಾಣಗಳಲ್ಲಿರುತ್ತದೆ.

ಏರುತ್ತಿರುವ ಜನಪ್ರಿಯತೆ
ಪರಿಚಯವಾದ ಕೆಲವೇ ಸಮಯದಲ್ಲಿ ಸೋಷಿಯಲ್ ಶಾಪಿಂಗ್ ಪರಿಕಲ್ಪನೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ತಂತ್ರಜ್ಞಾನ ಕ್ಷೇತ್ರದ ಹೆಸರಾಂತ ಪತ್ರಿಕೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ ಭಾರತದ ಅತ್ಯಂತ ಜನಪ್ರಿಯ ಇ-ವ್ಯಾಪಾರ ತಾಣಗಳ ಪಟ್ಟಿಯಲ್ಲಿ ಅನೇಕ ಸೋಷಿಯಲ್ ಶಾಪಿಂಗ್ ತಾಣಗಳು ಸ್ಥಾನಪಡೆದಿವೆ.

ಈ ಜನಪ್ರಿಯತೆಯಿಂದ ಪ್ರಭಾವಿತರಾಗಿರುವ ಇತರ ಇ-ವ್ಯಾಪಾರ ತಾಣಗಳೂ ಸೋಷಿಯಲ್ ಶಾಪಿಂಗ್‌ನತ್ತ ಮುಖಮಾಡಿವೆ. ವಿಶ್ವವಿಖ್ಯಾತ ಇ-ಬೇ ತಾಣದ ಭಾರತೀಯ ಆವೃತ್ತಿಯಲ್ಲಿ ಸೋಷಿಯಲ್ ಶಾಪಿಂಗ್ ವಿಭಾಗ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ. ಸೋಸಸ್ತಾ ಎಂಬ ಸಂಸ್ಥೆಯನ್ನು ಕೊಳ್ಳುವುದರ ಮೂಲಕ ಅಮೆರಿಕಾದ ಹೆಸರಾಂತ ಸೋಷಿಯಲ್ ಶಾಪಿಂಗ್ ತಾಣ ಗ್ರೂಪ್‌ಆನ್ ಭಾರತಕ್ಕೂ ಕಾಲಿರಿಸಿದೆ.

ಒಟ್ಟಿನಲ್ಲಿ ಸೋಷಿಯಲ್ ಶಾಪಿಂಗ್ ಗಾಳಿ ಇದೀಗ ನಮ್ಮ ದೇಶದಲ್ಲಿ ಸಾಕಷ್ಟು ಬಲವಾಗಿಯೇ ಬೀಸುತ್ತಿದೆ. ಮುಂದಿನ ಬೆಳವಣಿಗೆಗಳನ್ನು ಕಾದುನೋಡುವುದಷ್ಟೆ ನಮ್ಮ ಕೆಲಸ!

ಮಾರ್ಚ್ ೧, ೨೦೧೧ರ ಉದಯವಾಣಿಯಲ್ಲಿ 'ಸೋಷಿಯಲ್ ಶಾಪಿಂಗ್ ಕುರಿತು..' ಎಂಬ ಶೀರ್ಷಿಕೆಯೊಡನೆ ಪ್ರಕಟವಾದ ಲೇಖನ. ಇದು ನನ್ನ 'ವಿಜ್ಞಾಪನೆ' ಅಂಕಣದ ಇಪ್ಪತ್ತನೇ ಬರೆಹವೂ ಹೌದು.

ಕಾಮೆಂಟ್‌ಗಳಿಲ್ಲ:

badge