ಮಂಗಳವಾರ, ಫೆಬ್ರವರಿ 15, 2011

ಗಣಕಲೋಕಕ್ಕೆ ಪವರ್‌ಕಟ್ ಭೀತಿ

ಟಿ ಜಿ ಶ್ರೀನಿಧಿ

ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಆಗಿರುವ ವ್ಯಾಪಕ ಗಣಕೀಕರಣದ ಪರಿಚಯ ನಮ್ಮೆಲ್ಲರಿಗೂ ಚೆನ್ನಾಗಿಯೇ ಇದೆ. ಅತ್ಯಂತ ಹೆಚ್ಚು ಗಣಕೀಕರಣವಾಗಿರುವ ಇಂತಹ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖವಾದದ್ದು. ಒಂದು ಶಾಖೆಯಲ್ಲಿರುವ ಖಾತೆಯನ್ನು ಬೇರೆ ಯಾವ ಖಾತೆಯಿಂದಲಾದರೂ ನಿರ್ವಹಿಸುವುದು, ಖಾತೆಗಳ ನಡುವೆ ಬಹಳ ಸುಲಭವಾಗಿ ಹಣ ವರ್ಗಾವಣೆ ಮಾಡುವುದು - ಇಂತಹ ಸೌಲಭ್ಯಗಳಿಗೆಲ್ಲ ಗಣಕೀಕರಣವೇ ಕಾರಣ.

ಗಣಕೀಕರಣದ ಇನ್ನೊಂದು ಪರಿಣಾಮವೆಂದರೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಗಣಕಗಳ ಮೇಲಿನ ಅವಲಂಬನೆ ತೀವ್ರವಾಗಿ ಹೆಚ್ಚಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಿರ್ವಹಿಸುವ ಈ ಗಣಕಗಳು ಸದಾಕಾಲ ಕೆಲಸಮಾಡುತ್ತಲೇ ಇರಬೇಕಾಗುತ್ತದೆ; ತಪ್ಪುಗಳಾಗುವ ಅಥವಾ ಯಾಂತ್ರಿಕ ವೈಫಲ್ಯದ ಸಾಧ್ಯತೆಯಂತೂ ಇಲ್ಲವೇ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.


ಬರಿಯ ಬ್ಯಾಂಕಿಂಗ್ ಕ್ಷೇತ್ರ ಅಷ್ಟೇ ಅಲ್ಲ, ಬಹುತೇಕ ಇತರ ಕ್ಷೇತ್ರಗಳ ಕತೆಯೂ ಇದೇ. ಯಾವುದೇ ವ್ಯವಹಾರ ಸರಿಯಾಗಿ ನಡೆಯಬೇಕಾದರೂ ಗಣಕ ವ್ಯವಸ್ಥೆ ಸರಿಯಾಗಿ ಕೆಲಸಮಾಡುತ್ತಿರಬೇಕಾದದ್ದು ಅನಿವಾರ್ಯವಾಗಿಹೋಗಿದೆ.

ಹೀಗಾಗಿಯೇ ಡೇಟಾಸೆಂಟರ್‌ಗಳು ಗಣಕಲೋಕದಲ್ಲಿ ಎಲ್ಲಿಲ್ಲದ ಪ್ರಾಮುಖ್ಯತೆ ಪಡೆದುಕೊಂಡಿವೆ. ಯಾವುದೇ ಸಂಸ್ಥೆಯ ಗಣಕಜಾಲಕ್ಕೆ ಅತ್ಯಗತ್ಯವಾಗಿ ಬೇಕಾಗುವ ಸರ್ವರ್‌ನಂತಹ ಕೇಂದ್ರೀಯ ಗಣಕ ವ್ಯವಸ್ಥೆಗಳು, ಸಂವಹನ ವ್ಯವಸ್ಥೆ ಇತ್ಯಾದಿಗಳೆಲ್ಲ ಈ ಡೇಟಾಸೆಂಟರ್‌ನಲ್ಲಿರುತ್ತವೆ. ಇದು ಆ ಸಂಸ್ಥೆಯ ಮಟ್ಟಿಗೆ ಗಣಕ ವ್ಯವಸ್ಥೆಯ ಹೃದಯ, ಮೆದುಳು ಎಲ್ಲವೂ ಇದ್ದಹಾಗೆ. ಇಲ್ಲಿ ಯಾವುದಾದರೂ ಗಂಭೀರ ಸಮಸ್ಯೆ ಕಾಣಿಸಿಕೊಂಡರೆ ಇಡೀ ಸಂಸ್ಥೆಯ ಚಟುವಟಿಕೆಯೆಲ್ಲ ನಿಂತುಹೋಗುವ ಭೀತಿಯಿರುತ್ತದೆ.

ತಾಂತ್ರಿಕವಾಗಿ ಸಂಭವಿಸಬಹುದಾದ ತೊಂದರೆಗಳನ್ನು ನಿರೀಕ್ಷಿಸಿ ಅವುಗಳನ್ನು ನಿವಾರಿಸಿಕೊಳ್ಳುವ ಕೆಲಸ ಡೇಟಾಸೆಂಟರ್‍ನ ತಂತ್ರಜ್ಞರದ್ದು. ಅವರು ವರ್ಷಪೂರ್ತಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕೆಲಸಮಾಡುತ್ತಿರುವುದರಿಂದ ಅಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ.

ಆದರೆ ಡೇಟಾಸೆಂಟರ್‌ಗೆ ಬೇಕಾದ ವಿದ್ಯುತ್ ಪೂರೈಕೆಯ ಜವಾಬ್ದಾರಿ ತಂತ್ರಜ್ಞರ ಕೈಯಲ್ಲಿರುವುದಿಲ್ಲವಲ್ಲ, ಹೀಗಾಗಿ ಡೇಟಾಸೆಂಟರ್ ಮಟ್ಟಿಗೆ ವಿದ್ಯುತ್ತಿನದೇ ಅತಿದೊಡ್ಡ ಸಮಸ್ಯೆ. ಯಾವ ನಿಮಿಷದಲ್ಲಿ ವಿದ್ಯುತ್ ಕೈಕೊಡುತ್ತದೋ ಎಂಬ ಭೀತಿಯಲ್ಲಿ ಅವರು ಬ್ಯಾಕಪ್ ಜನರೇಟರ್‌ಗಳು, ಅದಕ್ಕೆ ಬೇಕಾದ ಇಂಧನ ಇತ್ಯಾದಿಗಳನ್ನೆಲ್ಲ ಸದಾಕಾಲ ಸಿದ್ಧವಾಗಿಟ್ಟಿರುತ್ತಾರೆ.

ಇಂತಹ ಜನರೇಟರ್‌ಗಳಲ್ಲಿ ಬಳಕೆಯಾಗುವ ಬಹುಮುಖ್ಯ ಇಂಧನ ಡೀಸಲ್. ಹೀಗಾಗಿ ಪಳೆಯುಳಿಕೆ ಇಂಧನ ಬಳಕೆದಾರರನ್ನು ಕಾಡುವ ಎಲ್ಲ ಸಮಸ್ಯೆಗಳು ಡೇಟಾಸೆಂಟರ್‌ಗಳನ್ನೂ ಕಾಡುತ್ತವೆ. ಕಳೆದ ವರ್ಷ ಯಾವುದೋ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಡೀಸಲ್ ಪೂರೈಕೆ ವ್ಯತ್ಯಯವಾದಾಗ ನಮ್ಮ ಸಾಫ್ಟ್‌ವೇರ್ ಸಂಸ್ಥೆಗಳಿಗೆಲ್ಲ ದೊಡ್ಡಪ್ರಮಾಣದಲ್ಲೇ ತಲೆಬಿಸಿಯಾಗಿತ್ತು. ಅದೇ ಸಂದರ್ಭದಲ್ಲಿ ವಿದ್ಯುತ್ ಕೊರತೆಯೂ ತೀವ್ರವಾಗಿದ್ದರಿಂದ ಜನರೇಟರ್‌ಗಳಿಗೆ ಡೀಸಲ್ ಪೂರೈಸುವ ಜವಾಬ್ದಾರಿ ಹೊತ್ತಿದ್ದವರು ಹಗಲೂರಾತ್ರಿ ಪರದಾಡುವ ಪರಿಸ್ಥಿತಿ ಬಂದಿತ್ತು.

ಕೇವಲ ಕೆಲವು ದಿನಗಳಿಗಷ್ಟೆ ಸೀಮಿತವಾಗಿದ್ದ ಡೀಸಲ್ ಕೊರತೆ ಇಷ್ಟೆಲ್ಲ ತೊಂದರೆ ಮಾಡಬಲ್ಲುದಾದರೆ ಒಂದಲ್ಲ ಒಂದುದಿನ ಮುಗಿದುಹೋಗಲಿರುವ ಡೀಸಲ್ ನಿಕ್ಷೇಪಗಳನ್ನು ನೆಚ್ಚಿಕೊಂಡು ಇಷ್ಟೆಲ್ಲ ದೊಡ್ಡ ವ್ಯವಸ್ಥೆಗಳನ್ನು ನಡೆಸುವುದನ್ನು ಎಷ್ಟರಮಟ್ಟಿಗೆ ನಂಬಿಕೊಳ್ಳಬಹುದು?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟವರಿಗೆ ಜೈವಿಕ ಇಂಧನಗಳು ವಿಶ್ವಸನೀಯ ಪರ್ಯಾಯ ಮಾರ್ಗವಾಗಿ ಕಂಡಿವೆ. ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎಣ್ಣೆಗಳನ್ನು ಪಳೆಯುಳಿಕೆ ಇಂಧನಗಳ ಬದಲಿಗೆ, ಅಥವಾ ಅವುಗಳೊಡನೆ ಮಿಶ್ರಮಾಡಿ ಬಳಸುವ ಪರಿಕಲ್ಪನೆ ಇದು.

ಇಂತಹ ಇಂಧನಗಳಲ್ಲಿ ಬಯೋಡೀಸಲ್ ಕೂಡ ಒಂದು. ನಮ್ಮಲ್ಲಿ ಸಾಮಾನ್ಯವಾಗಿ ಬೆಳೆಯುವ ಹೊಂಗೆ, ಹಿಪ್ಪೆ, ಬೇವು ಮೊದಲಾದ ಯಾವುದೇ ಮರಗಳ ಬೀಜದಿಂದ ತೆಗೆದ ಎಣ್ಣೆ ಈ ಬಯೋಡೀಸಲ್‌ನ ಮೂಲ. ಕೆಲ ದೇಶಗಳು ಸೋಯಾ ಹಾಗೂ ಪಾಮ್‌ನಂತಹ ಖಾದ್ಯ ಎಣ್ಣೆಗಳನ್ನೂ ಬಯೋಡೀಸಲ್ ತಯಾರಿಕೆಯಲ್ಲಿ ಬಳಸುತ್ತಿವೆ.

ಇಂತಹ ಯಾವುದೇ ಎಣ್ಣೆಯನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬಯೋಡೀಸಲ್ ಅನ್ನು ತಯಾರಿಸಲಾಗುತ್ತದೆ. ಇದನ್ನು ನೇರವಾಗಿ ಅಥವಾ ಡೀಸಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಮಾಡಿ ಉಪಯೋಗಿಸಬಹುದು. ಇದಕ್ಕಾಗಿ ಇಂಜಿನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯ ಅಗತ್ಯವೂ ಇಲ್ಲ; ಇದು ನವೀಕರಿಸಬಹುದಾದ ಇಂಧನಮೂಲವಾದ್ದರಿಂದ ಪರಿಸರ ಸ್ನೇಹಿ ಕೂಡ!

ಜೈವಿಕ ಇಂಧನಗಳ ತಯಾರಿಕೆ ಹಾಗೂ ಬಳಕೆಯ ಪ್ರಯೋಗಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅನೇಕ ಬಸ್ಸುಗಳನ್ನು ಬಯೋಡೀಸಲ್ ಮಿಶ್ರಣದೊಂದಿಗೆ ಓಡಿಸಲಾಗುತ್ತಿದೆ. ಬಯೋಡೀಸಲ್ ಅನ್ನು ಬಳಕೆದಾರರಿಗೂ ಲಭ್ಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಆಹಾರ ಭದ್ರತೆಯ ದೃಷ್ಟಿಯಿಂದ ಯಾವುದೇ ಖಾದ್ಯ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸದೆ ವಿಶ್ವಕ್ಕೇ ಮಾದರಿಯಾಗಿರುವುದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಾಧನೆ.

ಬ್ಯಾಕಪ್ ಜನರೇಟರ್‌ಗಳಲ್ಲೂ ಇದೇ ಬಯೋಡೀಸಲ್ ಬಳಕೆ ಸಾಧ್ಯ. ಅಮೆರಿಕಾದ ಅನೇಕ ಡೇಟಾಸೆಂಟರ್‌ಗಳು ಈಗಾಗಲೇ ಬಯೋಡೀಸಲ್ ಆಧರಿತ ಜನರೇಟರ್‌ಗಳನ್ನು ಬಳಸುತ್ತಿವೆ. ಬಯೋಡೀಸಲ್ ಬಳಕೆಯನ್ನು ಕಡ್ಡಾಯಗೊಳಿಸುವ ಕಾಯಿದೆಗಳೂ ಅಲ್ಲಿನ ಕೆಲ ರಾಜ್ಯಗಳಲ್ಲಿವೆ. ಮುಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯ ಡೇಟಾಸೆಂಟರ್‌ಗಳಲ್ಲಿ ಬಯೋಡೀಸಲ್ ಬಳಕೆ ಸಾಮಾನ್ಯವಾಗಬಹುದು ಎಂಬ ನಿರೀಕ್ಷೆ ಗಣಕಲೋಕದಲ್ಲಿದೆ.

ಫೆಬ್ರುವರಿ ೧೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

N-H ಹೇಳಿದರು...

The message is clear. But it could have been more emphatic if only you referred to the signature campaign going on against the Facebook Facebook plans to start a new data center in Oregon, USA, which will be powered by coal. The same coal which threatens forests, wildlife and the entire environment. Mark Zuckerberg the CEO of Facebook is being pressurised from all quarters to stop using coal based power.
Nagesh Hegde

Govinda Nelyaru ಹೇಳಿದರು...

ನಿಜ. ಮೊದಲಿಗೆ ಬದಲಿ ಇಂದನವಾಗಿ ಹೊಂಗೆ ಎಣ್ಣೆಯನ್ನೇ ಬಳಸುತ್ತಾರೆ. ಆದರೆ ಹೊಂಗೆ ಎಣ್ಣೆ ಸಾಕಾಗದಿರುವಾಗ .....

ರಾಜೀವ ಗಾಂದಿ ಎಲ್ಲೋ ಹೇಳಿದ ಜೋಕು. ಒಬ್ಬಾತ ಹೋಟೇಲಿಗೆ ಹೋಗಿ ಕೋಳಿಮಾಂಸದ ಖಾದ್ಯ ಬಯಸಿದ. ತಿನ್ನುವಾಗ ಏನೋ ಸಂಶಯ. ಬಡಿಸುವಾತನಲ್ಲಿ ಕೇಳಿದ “ಇದು ಕೋಳಿ ಮಾಂಸದಂತಿಲ್ಲವಲ್ಲ”
ಹೋಟೇಲಿನವ ಉತ್ತರಿಸಿದ “ ಕೋಳಿ ಮಾಂಸ ಕಡಿಮೆ ಇತ್ತು. ಹಾಗಾಗಿ ಬೇರೆ ಮಾಂಸ ಸೇರಿಸಿದ್ದೇವೆ”
“ಯಾವ ಪ್ರಾಣಿ ಮಾಂಸ ? ಎಷ್ಟು”
“ಕುದುರೆ ಮಾಂಸ. ಒಂದು ಕೋಳಿಯ ಮಾಂಸಕ್ಕೆ ಒಂದು ಕುದುರೆ ಮಾಂಸ ಸೇರಿಸಲಾಗಿದೆ”

ಬಯೋಡೀಸಲ್ ಸಹಾ ಸಾಕಷ್ಟು ದುಬಾರಿಯ ವಸ್ತುವೇ.

badge