ಮಂಗಳವಾರ, ಜನವರಿ 25, 2011

ಅಂತರಜಾಲಕ್ಕೂ ಬೆನ್ನೆಲುಬು!

ಟಿ ಜಿ ಶ್ರೀನಿಧಿ

ಮಳೆಗಾಲದಲ್ಲಿ ವಿದ್ಯುತ್ ಹಾಗೂ ದೂರವಾಣಿ ತಂತಿಗಳ ಮೇಲೆ ಕೊಂಬೆಯೋ ಮರವೋ ಬಿದ್ದು ದಿನಗಟ್ಟಲೆ ಸಂಪರ್ಕ ತಪ್ಪಿಹೋಗುವುದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸಂಗತಿ. ಬರಿಯ ಗ್ರಾಮೀಣ ಪ್ರದೇಶಗಳೇ ಏಕೆ, ನಗರಗಳಲ್ಲೂ ಒಮ್ಮೊಮ್ಮೆ ಇಂತಹ ತೊಂದರೆ ಆಗುವುದುಂಟು. ತುಂಡಾದ ತಂತಿ ಸರಿಹೋಗುವ ತನಕ ವಿದ್ಯುತ್ತೂ ಇಲ್ಲ, ದೂರವಾಣಿಯೂ ಇಲ್ಲ. ದೂರವಾಣಿ ಸಂಪರ್ಕದ ತಂತಿ ಕಡಿದುಹೋದರೆ ಅಂತರಜಾಲ ಸಂಪರ್ಕಕ್ಕೂ ಕುತ್ತು.

ಆದರೆ ಇಂತಹ ಸಂದರ್ಭಗಳಲ್ಲಿ ತೊಂದರೆಯಾಗುವುದು ಬಹಳ ಸೀಮಿತ ಪ್ರದೇಶದಲ್ಲಿ ಮಾತ್ರ - ನಗರಪ್ರದೇಶವಾದರೆ ಒಂದೋ ಎರಡೋ ರಸ್ತೆ, ಗ್ರಾಮೀಣ ಪ್ರದೇಶದಲ್ಲಿ ಒಂದೋ ಎರಡೋ ಹಳ್ಳಿ ಅಷ್ಟೆ. ಆದರೆ ದೇಶದೇಶಗಳ ಅಂತರಜಾಲ ಸಂಪರ್ಕವೇ ತಪ್ಪಿಹೋಗುವುದರ ಬಗ್ಗೆ ಕೇಳಿದ್ದೀರಾ?

ಇದು ಖಂಡಿತಾ ತಮಾಷೆಯಲ್ಲ, ಅಂತರಜಾಲದ ಬೆನ್ನೆಲುಬಿಗೆ ತೊಂದರೆಯಾದಾಗ ಇಂತಹ ಸಮಸ್ಯೆ ನಿಜಕ್ಕೂ ಕಾಣಿಸಿಕೊಳ್ಳುತ್ತದೆ!

ಅಂತರಜಾಲದ ಬ್ಯಾಕ್‌ಬೋನ್
ನಮ್ಮ ಮನೆಗಳಿಗೆ ಅಂತರಜಾಲ ಸಂಪರ್ಕ ಒದಗಿಸುವ ಬಿಎಸ್‌ಎನ್‌ಎಲ್, ಏರ್‌ಟೆಲ್ ಮುಂತಾದ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮಗೆ ಅಂತರಜಾಲ ಸಂಪರ್ಕ ಒದಗಿಸುವ ಇಂತಹ ಸಂಸ್ಥೆಗಳಿಗೆ ಅವಕ್ಕಿಂತ ದೊಡ್ಡದಾದ ಮತ್ತೊಂದು ಐ.ಎಸ್.ಪಿ.ಯ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ದೊಡ್ಡ ಐ.ಎಸ್.ಪಿ.ಗಳಿಗೆ, ಇನ್ನೂ ದೊಡ್ಡ ಐ.ಎಸ್.ಪಿ.ಗಳ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ಸಂಪರ್ಕವನ್ನು ಸಾಮಾನ್ಯವಾಗಿ ಉಪಗ್ರಹ ಸಂಕೇತಗಳ ಮೂಲಕ ಏರ್ಪಡಿಸಿಕೊಳ್ಳಲಾಗುತ್ತದೆ.

ಕೊನೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಐ.ಎಸ್.ಪಿ.ಗಳು ತಮ್ಮ ನಡುವೆ ಫೈಬರ್ ಆಪ್ಟಿಕ್ ತಂತುಗಳ ಜಾಲವನ್ನು ನಿರ್ಮಿಸಿಕೊಂಡಿರುತ್ತವೆ. ಇದನ್ನು ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್ ಎಂದು ಕರೆಯುತ್ತಾರೆ. ಜಾಗತಿಕ ಮಟ್ಟದ ಅಂತರಜಾಲದ ಬೆನ್ನೆಲುಬು ಇದು. ಇವೆಲ್ಲ ಸಂಪರ್ಕಗಳೂ ಒಟ್ಟಾಗಿ ಅಂತರಜಾಲದ ಮೂಲಕ ಇಡೀ ವಿಶ್ವವನ್ನೇ ಒಂದುಗೂಡಿಸುತ್ತವೆ.

ಆಪ್ಟಿಕಲ್ ಫೈಬರ್
ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ಆಪ್ಟಿಕಲ್ ಫೈಬರ್‌ಗಳು ತಯಾರಾಗುತ್ತವೆ. ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗಿರುವುದು ಇಂತಹವೇ ಆಪ್ಟಿಕಲ್ ಫೈಬರ್‌ಗಳು.

ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಅಪಾರ ಪ್ರಮಾಣದ ಮಾಹಿತಿಯನ್ನು ಬೆಳಕಿನ ಕಿರಣಗಳ ರೂಪದಲ್ಲಿ ಅನೇಕ ಕಿಲೋಮೀಟರುಗಳಷ್ಟು ದೂರ ರವಾನಿಸುವುದು ಸಾಧ್ಯ. ಈ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಕ್ಕೆ ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಸಂಪೂರ್ಣವಾಗಿ ಈ ಎಳೆಯೊಳಗೇ ಪ್ರತಿಫಲಿಸಲ್ಪಡುತ್ತದೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ಬಹಳ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಬಹಳ ಹೆಚ್ಚಾಗಿರುತ್ತದೆ.

ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ. ಅಂತರಜಾಲ ಸಂಪರ್ಕಕ್ಕಾಗಿ ಬಳಕೆಯಾಗುವ ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳಂತೂ ವಿಶ್ವದ ಮೂಲೆಮೂಲೆಗಳನ್ನು ಸಂಪರ್ಕಿಸುತ್ತಿವೆ.

ಬೆನ್ನೆಲುಬಿನ ಸಮಸ್ಯೆ
ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳ ಮೂಲಕ ನಡೆಯುವ ಸಂವಹನಕ್ಕೆ ಸಬ್‌ಮರೀನ್ ಕಮ್ಯೂನಿಕೇಷನ್ಸ್ ಕೇಬಲ್‌ಗಳನ್ನು ಬಳಸಲಾಗುತ್ತದೆ; ಅಂದರೆ, ಈ ಕೇಬಲ್‌ಗಳು ಸಮುದ್ರದ ಆಳದಲ್ಲಿರುತ್ತವೆ. ಅಂತರರಾಷ್ಟ್ರೀಯ ದೂರವಾಣಿ ಕರೆಗಳಿಗೂ ಈ ಕೇಬಲ್‌ಗಳೇ ಬೇಕು. ವಿಶ್ವದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ಇನ್ನಾವುದೋ ಮೂಲೆಯಲ್ಲಿರುವ ಮತ್ತೊಬ್ಬರನ್ನು ಸಂಪರ್ಕಿಸಬೇಕಾದರೆ ಆ ಸಂವಹನಕ್ಕೆ ಸಮುದ್ರದಾಳದ ಈ ಕೇಬಲ್ಲುಗಳೇ ಜೀವಾಳ. ಅನೇಕ ಸರಕಾರಗಳು ಹಾಗೂ ಖಾಸಗಿ ಸಂಸ್ಥೆಗಳ ಒಡೆತನದಲ್ಲಿ ಕಾರ್ಯನಿರ್ವಹಿಸುವ ಈ ಬಗೆಯ ಕೇಬಲ್ಲುಗಳ ಜಾಲ ಅಂಟಾರ್ಕ್‌ಟಿಕಾ ಹೊರತುಪಡಿಸಿ ಬೇರೆಲ್ಲ ಖಂಡಗಳನ್ನೂ ಪರಸ್ಪರ ಸಂಪರ್ಕಿಸುತ್ತದೆ.

ಹೀಗಾಗಿಯೇ ಈ ಕೇಬಲ್‌ಗಳಿಗೆ ಏನಾದರೂ ತೊಂದರೆಯಾದಾಗ ಬಹುದೊಡ್ಡ ಪ್ರದೇಶದ ಸಂಪರ್ಕವ್ಯವಸ್ಥೆಗೆ ಕುತ್ತುಬರುತ್ತದೆ. ೨೦೦೮ರಲ್ಲಿ ಎರಡು ಬಾರಿ ನಮ್ಮೆಲ್ಲರ ಅಂತರಜಾಲ ಸಂಪರ್ಕಗಳು ಏಕಾಏಕಿ ಕೈಕೊಟ್ಟಿದ್ದು ನಿಮಗೆ ನೆನಪಿರಬಹುದು, ಯುರೋಪ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳನ್ನು ಭಾರತಕ್ಕೆ ಸಂಪರ್ಕಿಸುವ ಸಬ್‌ಮರೀನ್ ಕೇಬಲ್ಲುಗಳಲ್ಲಿ ಕೆಲವು ಈಜಿಪ್ಟ್ ಸಮೀಪದಲ್ಲಿ ತುಂಡಾದದ್ದು ಈ ಘಟನೆಗೆ ಕಾರಣವಾಗಿತ್ತು. ತೀರಾ ಇತ್ತೀಚೆಗೆ, ೨೦೧೦ರ ಕೊನೆಯ ಭಾಗದಲ್ಲಿ ಕೂಡ ಇಂತಹವೇ ಕೆಲ ಕೇಬಲ್ಲುಗಳು ಕತ್ತರಿಸಿಹೋಗಿದ್ದರಿಂದ ಆಫ್ರಿಕಾ ಖಂಡದ ಬಹುಭಾಗದಲ್ಲಿ ಅಂತರಜಾಲ ಸಂಪರ್ಕ ಕಡಿದುಹೋಗಿತ್ತು.

ಸುಮಾರು ಎರಡೂಮುಕ್ಕಾಲು ಇಂಚು ಅಥವಾ ಅದಕ್ಕಿಂತ ಕಡಿಮೆ ವ್ಯಾಸದ, ಪ್ರತಿ ಮೀಟರ್ ಉದ್ದಕ್ಕೆ ಹೆಚ್ಚೂಕಡಿಮೆ ಹತ್ತು ಕಿಲೋಗ್ರಾಮ್ ತೂಕ ಹೊಂದಿರುವ ಈ ಕೇಬಲ್‌ಗಳ ಮಹತ್ವ ಅಂತರಜಾಲ ಲೋಕದ ಮಟ್ಟಿಗೆ ಅತ್ಯಂತ ಮಹತ್ವದ್ದು. ಇವುಗಳ ಮೂರ್ತಿ ಅಂಥಾ ಚಿಕ್ಕದೇನಲ್ಲ, ನಿಜ. ಆದರೆ ಕೀರ್ತಿ ಮಾತ್ರ ಬಹಳ ದೊಡ್ಡದು!

ಜನವರಿ ೨೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge