ಮಂಗಳವಾರ, ಜನವರಿ 18, 2011

ಜಾಲಲೋಕದಲ್ಲಿ ಮೋಸದ ಗಾಳ

ಟಿ ಜಿ ಶ್ರೀನಿಧಿ

ನಿಮ್ಮ ಬ್ಯಾಂಕಿನ ಹೆಸರಿನಲ್ಲಿ ನಿಮಗೊಂದು ಇಮೇಲ್ ಸಂದೇಶ ಬರುತ್ತದೆ. ಇಂತಹ ಸಂದೇಶ ಸಾಮಾನ್ಯವಾಗಿ ಕೆಳಗಿರುವ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನಿಮ್ಮ ಖಾತೆಯ ವಿವರಗಳನ್ನು ದೃಢೀಕರಿಸಿ; ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಮುಚ್ಚಿಬಿಡುತ್ತೇನೆ ಹುಷಾರ್! ಎಂಬ ಧಾಟಿಯಲ್ಲಿರುತ್ತದೆ. ಅದನ್ನು ನಂಬಿ ನೀವೇನಾದರೂ ನಿಮ್ಮ ವಿವರಗಳನ್ನು ಕೊಟ್ಟಿರೋ, ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಒಂದೇ ಬಾರಿಗೆ ಮಂಗಮಾಯವಾಗಿಬಿಡುತ್ತದೆ!

ಇದಕ್ಕೆ ಕಾರಣವಿಷ್ಟೆ: ನಿಮಗೆ ಬಂದ ಸಂದೇಶ ಮೇಲ್ನೋಟಕ್ಕೆ ನೈಜವಾಗಿಯೇ ಕಂಡರೂ ಅದನ್ನು ನಿಮ್ಮ ಬ್ಯಾಂಕು ಕಳುಹಿಸಿರುವುದೇ ಇಲ್ಲ. ಇಷ್ಟರಮೇಲೆ ಆ ಸಂದೇಶದಲ್ಲಿದ್ದ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನೀವು ಭೇಟಿಕೊಟ್ಟ ತಾಣ ನಿಮ್ಮ ಬ್ಯಾಂಕಿನದೂ ಆಗಿರುವುದಿಲ್ಲ.

ಇದೇ ಫಿಶಿಂಗ್ - ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಭಾರೀ ಹಗರಣ.

ಈ ಹಗರಣಕ್ಕೆ ಫಿಶಿಂಗ್ (phishing) ಎಂಬ ನಾಮಕರಣವಾದದ್ದು ೧೯೯೬ರಲ್ಲಿ.  ಈ ಹಗರಣ ಗಾಳ ಹಾಕಿ ಮೀನು ಹಿಡಿಯುವ ಹಾಗೆಯೇ ನಡೆಯುವುದರಿಂದ ಇದಕ್ಕೆ ಫಿಶಿಂಗ್ ಎಂದು ಹೆಸರಿಡಲಾಯಿತು, ಈ ಹೆಸರನ್ನು ಪ್ರತ್ಯೇಕವಾಗಿ ಗುರುತಿಸಲು ಸ್ಪೆಲ್ಲಿಂಗ್‌ನಲ್ಲಿ ಮಾತ್ರ ಬದಲಾವಣೆ ಮಾಡಲಾಯಿತು ಎನ್ನುವುದು ಸಾಮಾನ್ಯ ನಂಬಿಕೆ. ಗಣಕಗಳ ಸಹಾಯದಿಂದ ಅನೇಕ ಬಗೆಯ ಅವ್ಯವಹಾರ ನಡೆಸುವ ಹ್ಯಾಕರ್‌ಗಳ ಸಮುದಾಯದಲ್ಲಿ  ಇಂತಹ ವಿಭಿನ್ನ ರೀತಿಯ ಸ್ಪೆಲ್ಲಿಂಗ್ ಬಳಕೆ ಸಾಮಾನ್ಯವಂತೆ.

ಫಿಶಿಂಗ್‌ನ ಸಮಸ್ಯೆ ಈಗ ಇಮೇಲ್‌ಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಎಸ್ಸೆಮ್ಮೆಸ್‌ಗಳು, ಇನ್ಸ್‌ಟೆಂಟ್ ಮೆಸೆಂಜರ್‌ಗಳು, ನಕಲಿ ಜಾಹಿರಾತುಗಳು - ಹೀಗೆ ಎಲ್ಲೆಡೆಗಳಲ್ಲೂ ಹರಡಿಕೊಂಡಿರುವ ಫಿಶಿಂಗ್ ಜಾಲ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಫಿಶಿಂಗ್‌ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜೊತೆಗೆ ಸಮುದಾಯ ತಾಣಗಳು ಹಾಗೂ ಇಮೇಲ್ ಖಾತೆಯ ಪಾಸ್‌ವರ್ಡ್‌ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ.

ನಿಮಗೆ ಆದಾಯತೆರಿಗೆಯ ಮರುಪಾವತಿ ಬರುವುದಿದೆ, ಅದನ್ನು ಯಾವ ಖಾತೆಗೆ ಕಳುಹಿಸಬೇಕು ಹೇಳಿ ಎನ್ನುವ ನೆಪದಲ್ಲಿ ಬಳಕೆದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದ ಅನೇಕ ಘಟನೆಗಳು ಕಳೆದ ವರ್ಷ ವಿಶ್ವದ ವಿವಿಧೆಡೆಗಳಿಂದ ವರದಿಯಾಗಿದ್ದವು. ಇನ್ನು ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು "ನಾನು ಲಂಡನ್‌ನಲ್ಲಿದ್ದೇನೆ, ನನ್ನ ಪರ್ಸ್ ಕಳೆದುಹೋಗಿದೆ, ಆದಷ್ಟು ಬೇಗ ಒಂದು ಸಾವಿರ ಪೌಂಡ್ ಕಳಿಸು" ಎಂಬಂತಹ ಸಂದೇಶಗಳನ್ನು ಕಳುಹಿಸುವುದೂ ಒಂದು ದೊಡ್ಡ ದಂಧೆಯೇ. ಈ ಕುತಂತ್ರಕ್ಕೆ ಬಲಿಯಾದವರ ಸುದ್ದಿಗಳು ಆಗಿಂದಾಗ್ಗೆ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಫಿಶಿಂಗ್ ಸಂದೇಶವನ್ನು ಪಡೆಯುವವರಲ್ಲಿ ಶೇಕಡಾ ಐದರಷ್ಟು ಜನ ಅಂತಹ ಸಂದೇಶಗಳನ್ನು ನಂಬಿ ವಂಚನೆಗೆ ಒಳಗಾಗುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಹೀಗೆ ಫಿಶಿಂಗ್‌ನಿಂದ ವಂಚನೆಗೆ ಒಳಗಾಗುವುದು ಎಂದರೆ ಸಾಮಾನ್ಯವಾಗಿ ಭಾರೀ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವುದು ಎಂದೇ ಅರ್ಥ. ಹೀಗಾಗಿ ಈ ಹಗರಣದ ಕುರಿತು ಎಚ್ಚರದಿಂದಿರಬೇಕಾದದ್ದು ಅಗತ್ಯ.

ಇಂತಹ ಯಾವುದೇ ಸಂಶಯಾಸ್ಪದ ಸಂದೇಶಗಳು ಬಂದಾಗ ತಟ್ಟನೆ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಯೋಚಿಸುವುದು ಒಳ್ಳೆಯದು. ಬುದ್ಧಿವಂತಿಕೆಯ ಲಕ್ಷಣ. ಸಾಮಾನ್ಯವಾಗಿ ಯಾವುದೇ ಸಂಸ್ಥೆ ನಿಮ್ಮ ಪಾಸ್‌ವರ್ಡ್‌ಗಳನ್ನು ಕೊಡುವಂತೆ ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಬಗೆಯ ಖಾಸಗಿ ವ್ಯವಹಾರ ನಡೆಸುವಾಗ ವೆಬ್‌ತಾಣಗಳನ್ನು ತೆರೆಯಲು ಸಂದೇಶದಲ್ಲಿರುವ ಲಿಂಕ್‌ಗಳನ್ನು ಬಳಸಬೇಡಿ; ಇಂತಹ ಲಿಂಕ್‌ಗಳು ನಿಮ್ಮನ್ನು ನಕಲಿ ತಾಣಗಳಿಗೆ ಕೊಂಡೊಯ್ಯುವ ಸಾಧ್ಯತೆಯೇ ಹೆಚ್ಚು. ಬದಲಿಗೆ ಬ್ರೌಸರ್ ತಂತ್ರಾಂಶದಲ್ಲಿ ಜಾಲತಾಣದ ವಿಳಾಸ ಬೆರಳಚ್ಚಿಸಿಯೇ ತಾಣವನ್ನು ಪ್ರವೇಶಿಸಿ. ಲಿಂಕ್ ಮೂಲಕವೇ ತಾಣ ಪ್ರವೇಶಿಸಬೇಕಾಗಿ ಬಂದಾಗ ಬ್ರೌಸರ್‌ನ ವಿಳಾಸಪಟ್ಟಿಯಲ್ಲಿ ಸರಿಯಾದ ತಾಣದ ವಿಳಾಸವಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ.

ಜನವರಿ ೧೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge