ಮಂಗಳವಾರ, ಡಿಸೆಂಬರ್ 7, 2010

ಮೌಸ್ ಪುರಾಣ

ಟಿ ಜಿ ಶ್ರೀನಿಧಿ

ಈ ವರ್ಷದ ಜುಲೈನಲ್ಲಿ ಆಪಲ್ ಸಂಸ್ಥೆ ತನ್ನ ಗಣಕಗಳ ಬಳಕೆದಾರರಿಗಾಗಿ ಮ್ಯಾಜಿಕ್ ಟ್ರ್ಯಾಕ್‌ಪಾಡ್ ಎಂಬುದೊಂದು ಹೊಸ ಸಾಧನವನ್ನು ಪರಿಚಯಿಸಿತು. ಲ್ಯಾಪ್‌ಟಾಪ್ ಗಣಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಪರ್ಶಸಂವೇದಿ ಟಚ್‌ಪ್ಯಾಡುಗಳನ್ನು ಡೆಸ್ಕ್‌ಟಾಪ್‌ಗಳಲ್ಲೂ ಬಳಸುವಂತೆ ಮಾಡುವ ಪ್ರಯತ್ನ ಇದು. ಕೀಬೋರ್ಡ್ ಪಕ್ಕದಲ್ಲಿ ಇಟ್ಟುಕೊಳ್ಳುವ ಈ ಪುಟ್ಟ ಗಾಜಿನ ತುಂಡಿನ ಮೇಲೆ ಬೆರಳುಗಳನ್ನು ಓಡಾಡಿಸುವ ಮೂಲಕ - ಥೇಟ್ ಟಚ್ ಸ್ಕ್ರೀನ್ ಮೊಬೈಲ್‌ನಂತೆಯೇ - ಗಣಕವನ್ನು ನಿಯಂತ್ರಿಸುವುದು ಸಾಧ್ಯ. ಕ್ಲಿಕ್ ಮಾಡುವುದು, ಸ್ಕ್ರಾಲ್ ಮಾಡುವುದು, ಪರದೆಯ ಮೇಲಿನ ಚಿತ್ರವನ್ನು ಹೇಗೆ ಬೇಕೋ ಹಾಗೆ ತಿರುಗಿಸುವುದು, ಇ-ಪುಸ್ತಕದ ಪುಟಗಳನ್ನು ಮಗುಚುವುದು - ಇವೆಲ್ಲ ಬೆರಳುಗಳ ಚಲನೆಯಿಂದಲೇ ಸಾಧ್ಯವಾಗುವಾಗ ಮೌಸ್‌ನ ಅಗತ್ಯವೇ ಇಲ್ಲ!

ಹೀಗಾಗಿಯೇ ಮ್ಯಾಜಿಕ್ ಟ್ರ್ಯಾಕ್‌ಪ್ಯಾಡ್‌ನ ಜೊತೆಗೆ ಹಳೆಯದೊಂದು ಪ್ರಶ್ನೆಯೂ ಗಣಕ ಲೋಕದತ್ತ ಮತ್ತೊಮ್ಮೆ ಹರಿದುಬಂತು - "ಕಂಪ್ಯೂಟರ್ ಮೌಸ್‌ಗೆ ವಿದಾಯ ಹೇಳುವ ಕಾಲ ಸಮೀಪಿಸಿದೆಯೆ?

ಇಲಿ ಇತಿಹಾಸ
ವಿಶ್ವದ ಗಣಕ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿಯಾಗಿ ಸಾಗಿಬಂದಿರುವ ಸಾಧನ ಕಂಪ್ಯೂಟರ್ ಮೌಸ್. ಗಣಕ ಬಳಸಬೇಕಾದರೆ ಮೌಸ್ ಬೇಕೇಬೇಕು ಎನ್ನುವಷ್ಟರ ಮಟ್ಟದ್ದು ಈ ಸಾಧನದ ಜನಪ್ರಿಯತೆ. ನಾಲ್ಕು ದಶಕಗಳ ಹಿಂದೆ ಬಳಕೆಗೆ ಬಂದ ಈ ಸಾಧನದ ಸೃಷ್ಟಿ ಪ್ರಾಯಶಃ ಗಣಕ ಜಗತ್ತಿನ ಅತ್ಯಂತ ಪ್ರಮುಖ ಸಾಧನೆಗಳಲ್ಲೊಂದು.

ಕಂಪ್ಯೂಟರ್ ಮೌಸ್‌ನ ಇತಿಹಾಸ ಶುರುವಾಗುವುದು ೧೯೬೮ರಲ್ಲಿ. ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಆ ವರ್ಷ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಂಪ್ಯೂಟರ್ ತಂತ್ರಜ್ಞಾನ ಸಮ್ಮೇಳನದಲ್ಲಿ ಡಗ್ಲಾಸ್ ಎಂಗೆಲ್‌ಬಾರ್ಟ್ ಎಂಬಾತ 'ಎಕ್ಸ್-ವೈ ಪೊಸಿಷನ್ ಇಂಡಿಕೇಟರ್ ಫಾರ್ ಎ ಡಿಸ್ಪ್ಲೇ ಸಿಸ್ಟಮ್' ಎಂಬ ಸಾಧನವನ್ನು ಪ್ರದರ್ಶಿಸಿದ. ಇದೇ ಇಂದಿನ ಗಣಕಗಳ ಜೀವಾಳವಾಗಿರುವ ಮೌಸ್‌ನ ಪೂರ್ವಜ.

ಎಂಗೆಲ್‌ಬಾರ್ಟ್‌ನ ಮೊದಲ ಮೌಸ್ ಮರದಿಂದ ತಯಾರಿಸಿದ್ದಾಗಿತ್ತು. ಆತನ ಸಹಚರ ಬಿಲ್ ಇಂಗ್ಲಿಷ್ ಎಂಬಾತ ಇದನ್ನು ನಿರ್ಮಿಸಿದ್ದ. ಈ ಸಾಧನದ ತಳದಲ್ಲಿ ಎರಡು ಗಾಲಿಗಳಿದ್ದರೆ, ಮೇಲ್ಭಾಗದಲ್ಲಿ ಒಂದೇ ಒಂದು ಕೆಂಪು ಬಣ್ಣದ ಗುಂಡಿ ಇತ್ತು. ಎಂಗೆಲ್‌ಬಾರ್ಟ್‌ನ ಸಹೋದ್ಯೋಗಿಗಳಿಗೆ ಈ ವಿಚಿತ್ರ ಯಂತ್ರ ಇಲಿಯಂತೆ ಕಂಡಿದ್ದರಿಂದ ಅವರು ಅದನ್ನು ಮೌಸ್ ಎಂದು ಕರೆದರು ಎನ್ನುವುದು ಪ್ರತೀತಿ.

ಇದೇ ಎಂಗೆಲ್‌ಬಾರ್ಟ್ ಮುಂದೆ ಚಿತ್ರಾತ್ಮಕ ಸಂಪರ್ಕ ಸಾಧನ - ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) - ಅನ್ನೂ ಸೃಷ್ಟಿಸಿದ. ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಗಣಕಕ್ಕೆ ಆದೇಶ ನೀಡುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಯಿತು. ಈ ವ್ಯವಸ್ಥೆಯನ್ನು ಆಧರಿಸಿ ರೂಪಗೊಂಡ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಗಣಕಗಳ ಬಳಕೆಯಲ್ಲಿ ಹೊಸದೊಂದು ಶಕೆಯನ್ನೇ ಪ್ರಾರಂಭಿಸಿತು. ಗಣಕಗಳಲ್ಲಿ ಚಿತ್ರಾತ್ಮಕ ಸಂಪರ್ಕ ಸಾಧನ ಹೊಂದಿರುವ ತಂತ್ರಾಂಶಗಳ ಬಳಕೆ ಹೆಚ್ಚುತ್ತಿದ್ದಂತೆ ಮೌಸ್‌ನ ಜನಪ್ರಿಯತೆಯೂ ಹೆಚ್ಚುತ್ತಾ ಹೋಯಿತು.

ಮೌಸ್ ಬದಲು ನೌಸ್
ಈಚಿನ ವರ್ಷಗಳಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಂತೆ ಕಂಪ್ಯೂಟರ್ ಮೌಸ್‌ಗೆ ಹಲವಾರು ಬದಲಿಗಳು ತಯಾರಾಗಿವೆ. ಸ್ಪರ್ಷವನ್ನು ಗ್ರಹಿಸಿ ಕೆಲಸಮಾಡುವ ಟಚ್ ಸ್ಕ್ರೀನ್ ತಂತ್ರಜ್ಞಾನವಂತೂ ಬಹಳ ಸಾಮಾನ್ಯವಾಗಿಹೋಗಿದೆ: ಮೊಬೈಲ್ ದೂರವಾಣಿ, ಎಟಿಎಂಗಳಿಂದ ಪ್ರಾರಂಭಿಸಿ ಗಣಕದ ಮಾನಿಟರ್‌ವರೆಗೆ ಎಲ್ಲೆಲ್ಲೂ ಟಚ್‌ಸ್ಕ್ರೀನ್ ಭರಾಟೆ ಕಾಣಸಿಗುತ್ತಿದೆ.

ಬಳಕೆದಾರರ ಮುಖಭಾವ, ಕಣ್ಣಿನ ದೃಷ್ಟಿ, ಹಾವಭಾವಗಳನ್ನು ಗ್ರಹಿಸಿ ಕೆಲಸಮಾಡುವ ಸಾಧನಗಳೂ ತಯಾರಾಗುತ್ತಿವೆ. ಗಣಕದ ಮುಂದೆ ಕುಳಿತ ಬಳಕೆದಾರನ ಮೂಗಿನ ಚಲನೆಯನ್ನು ಕ್ಯಾಮೆರಾ ಮೂಲಕ ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಕೆಲಸಮಾಡುವ 'ನೌಸ್' ಎಂಬ ವಿಚಿತ್ರ ಸಾಧನ ಕೂಡ ಇದೆ - ನೋಸ್ ಬಳಸಿ ಉಪಯೋಗಿಸುವ ಮೌಸ್ ಇದು. ಬಳಕೆದಾರರ ಮೂಗು ಹೇಗೆಲ್ಲ ಚಲಿಸುತ್ತದೋ ಪರದೆಯ ಮೇಲಿನ ಮೌಸ್ ಪಾಯಿಂಟರ್ ಕೂಡ ಹಾಗೆಯೇ ಓಡಾಡುತ್ತದೆ. ಕ್ಲಿಕ್ ಮಾಡಲು ಕಣ್ಣು ಮಿಟುಕಿಸಿದರೆ ಸಾಕು!

ದಿನೇದಿನೇ ಬೆಳೆಯುತ್ತಿರುವ ಕಂಪ್ಯೂಟರ್ ಗೇಮ್ಸ್ ಮಾರುಕಟ್ಟೆ ಮತ್ತಷ್ಟು ಹೊಸ ಪ್ರಯೋಗಗಳಿಗೆ ಕೈಹಾಕಿದೆ. ಕೀಬೋರ್ಡ್, ಜಾಯ್‌ಸ್ಟಿಕ್ ಎಲ್ಲ ಬಿಟ್ಟು ಪುಟ್ಟದೊಂದು ಉಪಕರಣ ಹಿಡಿದುಕೊಂಡು ಕೈಯನ್ನು ಆಚೀಚೆ ಬೀಸುವ ಮೂಲಕವೇ ಆಟವನ್ನು ನಿಯಂತ್ರಿಸಲು ಅನುವುಮಾಡಿಕೊಟ್ಟ 'ನಿಂಟೆಂಡೋ ವೀ' ಈಗಾಗಲೇ ಅಪಾರ ಜನಪ್ರಿಯತೆ ಗಳಿಸಿದೆ. ಮೊಬೈಲ್‌ನಲ್ಲೂ ಅಷ್ಟೆ, ಚಲನೆಯನ್ನು ಪತ್ತೆಮಾಡುವ (ಮೋಷನ್ ಡಿಟೆಕ್ಷನ್) ತಂತ್ರಜ್ಞಾನದಿಂದಾಗಿ ಮೊಬೈಲ್ ದೂರವಾಣಿಯನ್ನು ಆಚೀಚೆ ಅಲುಗಾಡಿಸುವ ಮೂಲಕವೇ ಆಟವಾಡುವುದು ಸಾಧ್ಯವಾಗಿದೆ.

ಆಲೋಚನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುವ ಉಪಕರಣಗಳೂ ಇಷ್ಟರಲ್ಲೇ ತಯಾರಾಗಲಿವೆ ಎಂಬ ಸುದ್ದಿ ಕೂಡ ಇದೆ.

ಇವೆಲ್ಲ ಘಟನೆಗಳು ಮೌಸ್‌ನ ಅಂತ್ಯಕಾಲ ಸಮೀಪಿಸಿರುವುದರ ಸೂಚನೆಗಳು ಎಂದು ತಜ್ಞರು ಹೇಳುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಕಾಣದಂತೆ ಮಾಯವಾದ ಫ್ಲಾಪಿಗಳ ಹಾಗೆಯೇ ಮೌಸ್ ಕೂಡ ಮುಂಬರುವ ವರ್ಷಗಳಲ್ಲಿ ಅಪರೂಪವಾಗಲಿದೆ ಎನ್ನುವುದು ಅವರ ಅಭಿಪ್ರಾಯ.

ಡಿಸೆಂಬರ್ ೭, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge