ಮಂಗಳವಾರ, ನವೆಂಬರ್ 30, 2010

ಹುಡುಕಾಟದ ಎರಡು ದಶಕ

ಟಿ ಜಿ ಶ್ರೀನಿಧಿ

೧೯೯೦ನೇ ಇಸವಿ. ಅಂತರಜಾಲ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಸಮಯ. ವಿಶ್ವವ್ಯಾಪಿ ಜಾಲವಂತೂ ಆಗತಾನೇ ಕಣ್ಣುಬಿಡುತ್ತಿತ್ತು. ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿದ್ದ ಅಲಾನ್ ಎಮ್‌ಟೇಜ್ ಹಾಗೂ ಆತನ ಮಿತ್ರರು ಆ ವರ್ಷದಲ್ಲಿ 'ಆರ್ಚಿ' ಎಂಬ ತಂತ್ರಾಂಶ ಸೃಷ್ಟಿಸಿದರು. ಈ ತಂತ್ರಾಂಶ ಅಂದಿನ ಅಂತರಜಾಲದಲ್ಲಿ ಲಭ್ಯವಿದ್ದ ಕಡತಗಳ ಹೆಸರನ್ನೆಲ್ಲ ಪಟ್ಟಿಮಾಡಿಟ್ಟುಕೊಂಡು ಅವುಗಳಲ್ಲಿ ನಿಮಗೆ ಬೇಕಾದ್ದನ್ನು ಹುಡುಕಲು ಅನುವುಮಾಡಿಕೊಡುತ್ತಿತ್ತು.

ಅದೇ 'ಆರ್ಚಿ' ಇಂದಿನ ಸರ್ಚ್ ಇಂಜನ್‌ಗಳ ಪೂರ್ವಜ. ಪ್ರಪಂಚದ ಮೊದಲ ಸರ್ಚ್‌ಇಂಜನ್ ಎಂದು ಗುರುತಿಸಲಾಗುವ ಈ ತಂತ್ರಾಂಶ ಸೃಷ್ಟಿಯಾಗಿ ಇದೀಗ ಇಪ್ಪತ್ತು ವರ್ಷ.

ಸರ್ಚ್ ಇಂಜನ್ ಅಂದರೇನು?ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸಹಾಯಮಾಡುವ ತಂತ್ರಾಂಶಕ್ಕೆ ಸರ್ಚ್ ಇಂಜನ್ ಅಥವಾ ಶೋಧನ ಚಾಲಕ ತಂತ್ರಾಂಶ ಎಂದು ಹೆಸರು. ನಮಗೆಲ್ಲ ಚಿರಪರಿಚಿತವಾದ ಗೂಗಲ್, ಬಿಂಗ್ ಮುಂತಾದವೆಲ್ಲ ಸರ್ಚ್ ಇಂಜನ್‌ಗೆ ಉದಾಹರಣೆಗಳು.

ಅಂತರಜಾಲದಲ್ಲಿದ್ದ ಕಡತಗಳನ್ನಷ್ಟೆ ಹುಡುಕುತ್ತಿದ್ದ 'ಆರ್ಚಿ' ತಂತ್ರಾಂಶಕ್ಕಿಂತ ಭಿನ್ನವಾಗಿ ಕೆಲಸಮಾಡುವ ಇವು ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಹುಡುಕಿಕೊಡುತ್ತವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯವನ್ನಷ್ಟೆ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ವೀಡಿಯೋಗಳು, ಭೂಪಟಗಳು ಮುಂತಾದವನ್ನೆಲ್ಲ ಈ ಸರ್ಚ್ ಇಂಜನ್‌ಗಳು ಹುಡುಕಿಕೊಡಬಲ್ಲವು.

ಎಲ್ಲಬಗೆಯ ಮಾಹಿತಿಯನ್ನೂ ಹುಡುಕಿಕೊಡುವ ಇಂತಹ ಸರ್ಚ್‌ಇಂಜನ್‌ಗಳ ಜೊತೆಗೆ ವಿಜ್ಞಾನ, ಪ್ರವಾಸ ಮುಂತಾದ ನಿರ್ದಿಷ್ಟ ವಿಷಯಗಳಿಗೆ ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಇಂಜನ್‌ಗಳು ಕೂಡ ಇವೆ; ಯಾವುದೇ ವಿಷಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ವುಲ್ಫ್‌ರಮ್ ಆಲ್ಫಾದಂತಹ ನಾಲೆಜ್ ಇಂಜನ್‌ಗಳೂ ರೂಪಗೊಂಡಿವೆ.

ಹುಡುಕುವ ಜೇಡವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಲು ಸರ್ಚ್ ಇಂಜನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ಇವನ್ನು ನಾವು ಜೇಡಗಳೆಂದು ಕರೆಯೋಣ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಈ ಜೇಡಗಳ ಕೆಲಸ.

ಜಾಲತಾಣಗಳನ್ನು ರೂಪಿಸುವವರು ಜೇಡಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದಲ್ಲಿರುವ ಪುಟಗಳ ಬಗ್ಗೆ ವಿವರಗಳನ್ನು ಮೆಟಾ ಟ್ಯಾಗ್‌ಗಳ ರೂಪದಲ್ಲಿ ಶೇಖರಿಸಿಟ್ಟಿರುತ್ತಾರೆ. ಜೇಡಗಳ ಹುಡುಕಾಟ ಇವೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಈ ಜೇಡಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಅದರ ಸರ್ವರ್‌ನಲ್ಲಿರುವ ಇತರ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಗೆ ಅನುಗುಣವಾಗಿ ಅವನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಶುರುವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಸಂಗ್ರಹಿಸಲಾದ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಇಂಜನ್‌ಗಳು ನಮಗೆ ಬೇಕಾದದ್ದನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

ಹುಡುಕಾಟದ ವ್ಯವಹಾರನಮಗೆ ಬೇಕಾದ ಮಾಹಿತಿಯ ಪಕ್ಕದಲ್ಲೇ ಒಂದಷ್ಟು ಜಾಹೀರಾತುಗಳನ್ನೂ ಪ್ರದರ್ಶಿಸುವ ಮೂಲಕ ಸರ್ಚ್ ಇಂಜನ್‌ಗಳು ಹಣ ಸಂಪಾದಿಸುತ್ತವೆ. ಬಳಕೆದಾರ ಯಾವುದೋ ನಿರ್ದಿಷ್ಟ ಮಾಹಿತಿಗಾಗಿ ಹುಡುಕಿದಾಗ ಪ್ರಾಯೋಜಿತ ಲಿಂಕ್‌ಗಳನ್ನು ಪ್ರದರ್ಶಿಸುವ ಸರ್ಚ್ ಇಂಜನ್‌ಗಳೂ ಇವೆ. ಈ ಲಿಂಕ್‌ಗಳನ್ನು ತೋರಿಸಲು ಅವು ಜಾಹೀರಾತುದಾರರಿಂದ ಹಣ ಪಡೆದಿರುತ್ತವೆ.

ಮುಂದಿನ ಹಾದಿಪ್ರತಿಯೊಬ್ಬ ಬಳಕೆದಾರನೂ ಯಾವಯಾವ ತಾಣಗಳಿಗೆ ಭೇಟಿಕೊಡುತ್ತಾನೆ ಎಂಬುದನ್ನು ಗಮನಿಸಿಕೊಂಡು ಅದರ ಆಧಾರದ ಮೇಲೆ ಅಕಾರಾದಿ (ಇಂಡೆಕ್ಸ್) ಸಿದ್ಧಪಡಿಸಿಕೊಳ್ಳುವ ವಾವ್ಡ್ ಹಾಗೂ ಫಾರೂನಂತಹ ಸರ್ಚ್ ಇಂಜನ್‌ಗಳು ಇತ್ತೀಚೆಗೆ ಪ್ರಾರಂಭವಾಗಿವೆ. ಈ ಸರ್ಚ್ ಇಂಜನ್‌ಗಳು ಎಲ್ಲ ಬಳಕೆದಾರರ ಗಣಕದಲ್ಲೂ ಒಂದೊಂದು ಅಕಾರಾದಿಯನ್ನು ಇರಿಸುವ, ಹಾಗೂ ಅತಿ ಹೆಚ್ಚು ಬಳಕೆದಾರರನ್ನು ಆಕರ್ಷಿಸುವ ತಾಣಗಳನ್ನಷ್ಟೆ ತೋರಿಸುವ ಮೂಲಕ ಹುಡುಕಾಟವನ್ನು ಇನ್ನಷ್ಟು ಕ್ಷಿಪ್ರ ಹಾಗೂ ನಿಖರಗೊಳಿಸುವ ಮಹತ್ವಾಕಾಂಕ್ಷೆ ಹೊಂದಿವೆ.

ಯಾವುದೇ ವಿಷಯವನ್ನು ಕುರಿತ ಮಾಹಿತಿಯನ್ನು ಜನರ ನೆರವಿನಿಂದಲೇ ಒಟ್ಟುಗೂಡಿಸಿ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಮುದಾಯ ಸರ್ಚ್‌ಇಂಜನ್‌ಗಳ ಸೃಷ್ಟಿಗಾಗಿ ಅನೇಕ ಪ್ರಯತ್ನಗಳು ಸಾಗಿವೆ. ಇಂತಹ ತಾಣಗಳು ಟ್ವೀಟರ್ ಹಾಗೂ ಫೇಸ್‌ಬುಕ್‌ನಂತಹ ತಾಣಗಳಲ್ಲಿ ಲಭ್ಯವಿರುವ ಸಂದೇಶಗಳನ್ನೂ ಹುಡುಕಿಕೊಡುವಂತಿರಬೇಕು ಎನ್ನುವ ಉದ್ದೇಶವೂ ಇದೆ.

ತನ್ನನ್ನು 'ಹೆಲ್ಪ್ ಇಂಜನ್' ಎಂದು ಗುರುತಿಸಿಕೊಳ್ಳುವ ಆರ್ಡ್‌ವರ್ಕ್ ಎಂಬ ತಾಣ ಬ್ಲಾಗುಗಳು, ಫೇಸ್‌ಬುಕ್ ಸಂದೇಶಗಳು ಹಾಗೂ ಟ್ವೀಟ್‌ಗಳನ್ನು ಜಾಲಾಡಿ ಅವುಗಳ ಲೇಖಕರಿಂದ ನಿಮಗೆ ಬೇಕಾದ ಮಾಹಿತಿ ಪಡೆದುಕೊಡುವ ಕೆಲಸವನ್ನು ಈಗಾಗಲೇ ಶುರುಮಾಡಿದೆ. ಇತರ ಬಳಕೆದಾರರಿಂದ ನಿಮ್ಮ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವ ಸೌಲಭ್ಯವನ್ನು ಫೇಸ್‌ಬುಕ್ ಕೂಡ ಪರಿಚಯಿಸಿದೆ.

ಇಷ್ಟೇ ಅಲ್ಲ, ಚಿತ್ರಗಳ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಇಂಜನ್‌ಗಳು, ಆಡುಮಾತಿನ ಪ್ರಶ್ನೆಗಳಿಗೆ (ನ್ಯಾಚುರಲ್ ಲ್ಯಾಂಗ್ವೇಜ್ ಕ್ವೆರಿಯಿಂಗ್) ಉತ್ತರಿಸುವಂತಹ ಸರ್ಚ್ ಇಂಜನ್‌ಗಳು, ಅಷ್ಟೇ ಏಕೆ, ಧ್ವನಿಯ ರೂಪದಲ್ಲಿ ನಾವು 'ಕೇಳುವ' ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆಯಂತೆ.

ಇಷ್ಟೆಲ್ಲ ಆದರೂ ಅಡುಗೆ ಮನೆ ಮೂಲೆಯಲ್ಲಿ ಅಡಗಿಕುಳಿತಿರುವ ಸಾಸಿವೆ ಡಬ್ಬ, ಪ್ಯಾಂಟಿನ ಜೇಬಿನಲ್ಲಿಟ್ಟು ಮರೆತ ಬೈಕಿನ ಕೀಲಿ ಇವನ್ನೆಲ್ಲ ಹುಡುಕಿಕೊಡುವ ಸರ್ಚ್ ಇಂಜನ್ ಮಾತ್ರ ಇದುವರೆಗೂ ತಯಾರಾಗಿಲ್ಲ. ಇಷ್ಟರಲ್ಲೇ ತಯಾರಾದರೂ ಆಗಬಹುದು, ಕಾದುನೋಡೋಣ!


ನವೆಂಬರ್ ೩೦, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge