ಮಂಗಳವಾರ, ನವೆಂಬರ್ 9, 2010

ಗಣಕ ಲೋಕದಿಂದ ಮೇಘ ಸಂದೇಶ

ಟಿ ಜಿ ಶ್ರೀನಿಧಿ


ಕ್ಲೌಡ್ ಕಂಪ್ಯೂಟಿಂಗ್ - ಗಣಕ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪರಿಕಲ್ಪನೆ. ಗೂಗಲ್, ಅಮೆಜಾನ್ ಮುಂತಾದ ಅಂತರಜಾಲ ಸಂಸ್ಥೆಗಳು ಈಗಾಗಲೇ ಬಳಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ತಾವೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್, ಎಚ್‌ಪಿ, ಡೆಲ್ ಮುಂತಾದ ಸಂಸ್ಥೆಗಳು ಈಗಾಗಲೇ ದೊಡ್ಡಪ್ರಮಾಣದ ಪ್ರಯತ್ನಗಳನ್ನು ಶುರುಮಾಡಿವೆ. ಗ್ರಾಹಕ ಸಂಪರ್ಕ ನಿರ್ವಹಣೆ ವ್ಯವಸ್ಥೆಯನ್ನು ಕ್ಲೌಡ್ ಮೂಲಕ ಒದಗಿಸುತ್ತಿರುವ ಸೇಲ್ಸ್‌ಫೋರ್ಸ್ ಡಾಟ್ ಕಾಮ್‌ನಂತಹ ಸಂಸ್ಥೆಗಳು ಈಗಾಗಲೇ ಅದ್ಭುತ ಯಶಸ್ಸು ಸಾಧಿಸಿವೆ. ಈಗ ವಾರ್ಷಿಕ ೨.೪ ಬಿಲಿಯನ್ ಡಾಲರುಗಳಷ್ಟು ವಹಿವಾಟು ನಡೆಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರ ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ದೊಡ್ಡದಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಗಣಕ ಲೋಕದ ಭವಿಷ್ಯವೇ ಈ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿದೆ ಎನ್ನುವ ಧಾಟಿಯ ಮಾತುಗಳೂ ಬೇಕಾದಷ್ಟು ಕೇಳಿಬರುತ್ತಿವೆ.

ಇಲ್ಲಿ ಕ್ಲೌಡ್ ಎಂದರೆ ಮೋಡವಲ್ಲ. ಕ್ಲೌಡ್ ಕಂಪ್ಯೂಟಿಂಗ್ ಬಳಕೆದಾರರು ಮೋಡದ ಮೇಲೆ ಕುಳಿತಿರಬೇಕಾದ ಅಗತ್ಯವೂ ಇಲ್ಲ. ಹಾಗಾದರೆ ಈ ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಏನು?

ತಂತ್ರಾಂಶ, ಶೇಖರಣಾ ಸಾಮರ್ಥ್ಯ, ದುಬಾರಿ ಯಂತ್ರಾಂಶ - ಹೀಗೆ ಗಣಕದಲ್ಲಿ ನಿಮಗೆ ಅಗತ್ಯವಾದ ಯಾವುದೇ ಸೇವೆಯನ್ನು ಅಂತರಜಾಲದ ಮೂಲಕ ಒದಗಿಸುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಯಾವುದೇ ಸಂಸ್ಥೆ ತನ್ನ ಅಗತ್ಯಗಳಿಗೆ ಬೇಕಾದ ಗಣಕ ವ್ಯವಸ್ಥೆಯನ್ನು ಸ್ವತಃ ಸ್ಥಾಪಿಸಿಕೊಂಡು ನಿರ್ವಹಿಸುವ ಬದಲು ಬೇರೊಂದು ಸಂಸ್ಥೆಗೆ ಗುತ್ತಿಗೆ ಕೊಟ್ಟುಬಿಡುವುದು ಕ್ಲೌಡ್ ಕಂಪ್ಯೂಟಿಂಗ್‌ನ ಮೂಲಮಂತ್ರ.

ಉದಾಹರಣೆಗೆ ಇಪ್ಪತ್ತೈದು ಉದ್ಯೋಗಿಗಳಿರುವ ಒಂದು ಸಂಸ್ಥೆಯನ್ನೇ ತೆಗೆದುಕೊಳ್ಳಿ. ಆ ಸಂಸ್ಥೆ ತನ್ನ ಎಲ್ಲ ನೌಕರರಿಗೆ ಇಮೇಲ್ ಸೌಲಭ್ಯ ಕೊಡಲು ತನ್ನದೇ ಆದ ಸರ್ವರ್ ಸ್ಥಾಪಿಸಿಕೊಂಡು ಅದರ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಹೊರಟರೆ ದೊಡ್ಡ ಪ್ರಮಾಣದ ಖರ್ಚು ಬರುತ್ತದೆ. ಅದರ ಬದಲು ಆ ಸಂಸ್ಥೆ ಗೂಗಲ್‌ನ ಎಂಟರ್‌ಪ್ರೈಸ್ ಇಮೇಲ್ ಸೌಲಭ್ಯವನ್ನು ಕೊಳ್ಳುತ್ತದೆ ಎಂದುಕೊಳ್ಳೋಣ. ಸರ್ವರ್ ಬೇಡ, ತಂತ್ರಾಂಶ ಬೇಡ, ಹೆಚ್ಚುವರಿ ಸಿಬ್ಬಂದಿಯೂ ಬೇಡ; ಆ ಖರ್ಚಿನ ಸಣ್ಣದೊಂದು ಭಾಗದಲ್ಲಿ ಸಂಸ್ಥೆಯ ಎಲ್ಲ ನೌಕರರಿಗೂ ಇಮೇಲ್ ಸೌಲಭ್ಯ ದೊರಕಿಬಿಡುತ್ತದೆ. ಜೊತೆಗೆ ನೌಕರರು ವಿಶ್ವದ ಯಾವುದೇ ಮೂಲೆಯಲ್ಲಿ - ಕಚೇರಿಯಲ್ಲಿ, ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲೇ ಇದ್ದರೂ ತಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ.

ಬಳಕೆದಾರರ ಸಂಸ್ಥೆಯ ಹೊರಗೆ, ಬೇರೊಬ್ಬರ ಸಂಪೂರ್ಣ ಉಸ್ತುವಾರಿಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆ ಕೆಲಸಮಾಡುತ್ತದೆ. ಹೀಗಾಗಿ ಗಣಕ ವ್ಯವಸ್ಥೆಗಳನ್ನು ಚಿತ್ರದಲ್ಲಿ ಪ್ರತಿನಿಧಿಸುವಾಗ ಈ ಭಾಗವನ್ನು ಮೋಡದ ಆಕಾರದಲ್ಲಿ ತೋರಿಸುತ್ತಾರೆ; ಅದು ನಮ್ಮ ವ್ಯವಸ್ಥೆಯಿಂದ ಹೊರಗಿದೆ ಎಂದು ತೋರಿಸುವುದು ಅದರ ಉದ್ದೇಶ. ಈ ಮೋಡದ ಆಕಾರವೇ 'ಕ್ಲೌಡ್' ಎಂಬ ಹೆಸರಿನ ಮೂಲ.

ಕ್ಲೌಡ್ ಕಂಪ್ಯೂಟಿಂಗ್ ತೀರಾ ಹೊಸ ಪರಿಕಲ್ಪನೆಯೇನಲ್ಲ. ನಮ್ಮ ನಿಮ್ಮಂತಹ ಸಾಮಾನ್ಯ ಬಳಕೆದಾರರು ಬ್ಲಾಗರ್, ಫ್ಲಿಕರ್, ಫೇಸ್‌ಬುಕ್, ಹಾಟ್‌ಮೇಲ್ ಮುಂತಾದ ಯಾವುದೋ ರೂಪದಲ್ಲಿ ಈಗಾಗಲೇ ಇದನ್ನು ಬಳಸುತ್ತಿದ್ದೇವೆ. ಆದರೆ ಸಂಸ್ಥೆಗಳ ದೃಷ್ಟಿಯಿಂದ ಇದಿನ್ನೂ ಈಗ ಬೆಳೆಯುತ್ತಿರುವ ಕ್ಷೇತ್ರ. ಇಮೇಲ್ ವ್ಯವಸ್ಥೆಯಿಂದ ಪ್ರಾರಂಭಿಸಿ ದತ್ತಸಂಚಯಗಳು, ಇಆರ್‌ಪಿ, ಥ್ರೀಡಿ ಮಾಡೆಲಿಂಗ್ ಇತ್ಯಾದಿಗಳವರೆಗೆ ಅನೇಕಬಗೆಯ ಸೇವೆಗಳು ಈಗ ಕ್ಲೌಡ್ ಕಂಪ್ಯೂಟಿಂಗ್ ಮೂಲಕ ದೊರಕುತ್ತಿವೆ. ಅವೆಲ್ಲವೂ ಅಂತರಜಾಲದ ಮೂಲಕವೇ ಲಭ್ಯವಾಗುತ್ತಿರುವುದರಿಂದ ಬಳಕೆದಾರರು ಗಣಕೀಕರಣಕ್ಕೆ ಮಾಡಬೇಕಾದ ವೆಚ್ಚದಲ್ಲಿ ಗಮನಾರ್ಹ ಉಳಿತಾಯ ಸಾಧ್ಯವಾಗುತ್ತಿದೆ.

ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವ ಸಂಸ್ಥೆಗಳು ಅನೇಕ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ಇಲ್ಲಿ ಒಂದೆರಡು ಸರ್ವರ್‌ಗಳಲ್ಲ, ಅನೇಕ ಸರ್ವರ್‌ಗಳ ತೋಟವೇ (ಸರ್ವರ್ ಫಾರ್ಮ್) ಇರುತ್ತದೆ. ಹೀಗಾಗಿ ಒಬ್ಬೊಬ್ಬರಿಗೂ ಬೇರೆಬೇರೆಯಾಗಿ ಯಂತ್ರಾಂಶಗಳನ್ನು ಕೊಳ್ಳುವ, ಸ್ಥಾಪಿಸುವ ಅಥವಾ ನಿರ್ವಹಿಸುವ ಅಗತ್ಯ ಇರುವುದಿಲ್ಲ; ಇದರ ಪರಿಣಾಮ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಬೇಕಾದ ಸೇವೆಗಳೆಲ್ಲ ದೊರಕಿಬಿಡುತ್ತವೆ. ಯಂತ್ರಾಂಶ ನಿರ್ವಹಣೆ, ಆಗಿಂದಾಗ್ಗೆ ಅದರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು, ಇದಕ್ಕೆಲ್ಲ ಬೇಕಾದ ನೌಕರರ ಸಂಬಳ... ಈ ರೀತಿಯ ಯಾವ ತಲೆನೋವೂ ಇಲ್ಲ; ಬಿಲ್ ಬಂದಾಗ ದುಡ್ಡು ಕೊಟ್ಟರೆ ಮುಗಿಯಿತು - ನೀರಿನದೋ ಕರೆಂಟಿನದೋ ಕೇಬಲ್‌ದೋ ಬಿಲ್ ಕಟ್ಟಿದ ಹಾಗೆ! ಹೀಗಾಗಿಯೇ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಐಟಿ-ಆಸ್-ಎ-ಸರ್ವಿಸ್ ಎಂದೂ ಕರೆಯುತ್ತಾರೆ.

ಈ ವ್ಯವಸ್ಥೆಯಲ್ಲಿ ಬಳಕೆದಾರರ ಮಾಹಿತಿಯೆಲ್ಲ ಬೇರೊಬ್ಬರ ಗಣಕದಲ್ಲಿ ಶೇಖರವಾಗುವುದರಿಂದ ಕ್ಲೌಡ್ ಕಂಪ್ಯೂಟಿಂಗ್ ಸುರಕ್ಷಿತವೇ ಎಂಬ ಪ್ರಶ್ನೆ ಈಗಾಗಲೇ ಕೇಳಿಬಂದಿದೆ. ಆದರೆ ನಾವು ಅತ್ಯುನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ; ಅಷ್ಟೆಲ್ಲ ಹೆಚ್ಚಿನ ಸುರಕ್ಷತೆ ಸಣ್ಣಪುಟ್ಟ ಸಂಸ್ಥೆಗಳ ಗಣಕ ವ್ಯವಸ್ಥೆಯಲ್ಲಿ ಖಂಡಿತಾ ಇರುವುದಿಲ್ಲ ಎಂದು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ವಾದಿಸಿವೆ.

ಅದೆಲ್ಲ ಏನೇ ಇರಲಿ, ಗಣಕ ಲೋಕದಲ್ಲೊಂದು ಕ್ರಾಂತಿಕಾರಕ ಬದಲಾವಣೆ ತರಲು ರಂಗಸಜ್ಜಿಕೆ ಸಿದ್ಧವಾಗಿದೆ ಎನ್ನುವುದಂತೂ ನಿಜ.

ನವೆಂಬರ್ ೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge