ಬುಧವಾರ, ಅಕ್ಟೋಬರ್ 20, 2010

ನಿಲ್ಲದ ವಿಮಾನಕ್ಕಾಗಿ ಮುಗಿಯದ ಹುಡುಕಾಟ

ಟಿ ಜಿ ಶ್ರೀನಿಧಿ

ಈಚಿನ ವರ್ಷಗಳಲ್ಲಿ  ಚಾಲಕರಹಿತ ವಿಮಾನಗಳು (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ - ಯುಎವಿ) ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ರಕ್ಷಣಾ ಸಿಬ್ಬಂದಿಯ ಜೀವಹಾನಿಯಾಗುವ ಭಯವಿಲ್ಲದೆ, ಶತ್ರುಪ್ರದೇಶದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಗಮನಿಸಲು, ಅಲ್ಲಿನ ಚಲನವಲನಗಳ ಚಿತ್ರಗಳನ್ನು ಪಡೆಯಲು,  ಕಡೆಗೆ ಆ ಪ್ರದೇಶಗಳ ಮೇಲೆ ದಾಳಿ ನಡೆಸಲು ಕೂಡ ಈ ವಿಮಾನಗಳು ಉಪಯುಕ್ತವಾಗಿವೆ. ಕೈಯಲ್ಲಿ ಹಿಡಿದುಕೊಳ್ಳುವಷ್ಟು ಪುಟ್ಟ ಗಾತ್ರದಿಂದ ಪ್ರಾರಂಭಿಸಿ ಒಂದೆರಡು ಸಾವಿರ  ಕೆಜಿ ತೂಗುವ ದೊಡ್ಡ ವಿಮಾನಗಳವರೆಗೆ ಅನೇಕ ಬಗೆಯ ಚಾಲಕರಹಿತ ವಿಮಾನಗಳು ವಿಶ್ವದ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.

ಆದರೆ ಇಂತಹ ವಿಮಾನಗಳ  ಬಳಕೆಯಲ್ಲಿ ಅವುಗಳಿಗೆ ಪೂರೈಸಬೇಕಾದ  ಇಂಧನದ್ದೇ ಬಹುದೊಡ್ಡ ಸಮಸ್ಯೆ. ಎಷ್ಟೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ  ವಿಮಾನವಾದರೂ  ಅದರಲ್ಲಿ ಸೀಮಿತ ಪ್ರಮಾಣದ  ಇಂಧನವನ್ನಷ್ಟೆ ಶೇಖರಿಸಿಡಲು ಸಾಧ್ಯ; ಹೀಗಾಗಿ  ನಿರ್ದಿಷ್ಟ ಸಮಯದ ಹಾರಾಟದ ನಂತರ ಅವು ತಮ್ಮ ನಿಯಂತ್ರಣ ಕೇಂದ್ರಕ್ಕೆ ವಾಪಸ್  ಬರಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುವುದಷ್ಟೇ ಅಲ್ಲದೆ ಶತ್ರುಪ್ರದೇಶದಲ್ಲಿ ಹೆಚ್ಚು ದೂರ ಸಾಗುವುದೂ ಅಸಾಧ್ಯವಾಗುತ್ತದೆ; ಹೀಗಾಗಿ ಈ ವಿಮಾನಗಳ ಕಾರ್ಯಕ್ಷೇತ್ರವೂ ಸೀಮಿತವಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಬಹುದಿನಗಳಿಂದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಸಾಂಪ್ರದಾಯಿಕ ಇಂಧನ ಮೂಲಗಳ ಬದಲಿಗೆ ಸೌರಶಕ್ತಿ ಬಳಸಿದರೆ ಸುದೀರ್ಘ  ಕಾಲದವರೆಗೆ ನಿಲ್ಲದೆ ಹಾರಾಡುವಂತಹ ವಿಮಾನಗಳನ್ನು ಸೃಷ್ಟಿಸುವುದು ಸಾಧ್ಯ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡೇ ಸಾಕಷ್ಟು ಕೆಲಸ ನಡೆದಿದೆ. ೧೯೭೪ರಷ್ಟು ಹಿಂದೆಯೇ ಆಸ್ಟ್ರೋಫ್ಲೈಟ್ ಸನ್‌ರೈಸ್ ಎಂಬ ಹೆಸರಿನ ಸೌರಶಕ್ತಿಚಾಲಿತ ವಿಮಾನ ಯಶಸ್ವಿ ಹಾರಾಟ ನಡೆಸಿತ್ತು. ೨೦೦೦ನೇ ಇಸವಿಯ ಆಸುಪಾಸಿನಲ್ಲಿ ಸಾಕಷ್ಟು ಸುದ್ದಿಮಾಡಿದ್ದ ಹೀಲಿಯೋಸ್ ಎಂಬ ಸೌರ ವಿಮಾನವಂತೂ ಮೂವತ್ತು ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಿ ದಾಖಲೆ ನಿರ್ಮಿಸಿತ್ತು.

ಇಷ್ಟೆಲ್ಲ ಆದರೂ ಇಂಧನ  ಮರುಪೂರೈಕೆಯ ಅಗತ್ಯವಿಲ್ಲದೆ ಸುದೀರ್ಘ ಅವಧಿಯ ಹಾರಾಟ ಕೈಗೊಳ್ಳುವ ನಿಟ್ಟಿನಲ್ಲಿ  ಮಾತ್ರ ಯಾವ ಗಮನಾರ್ಹ ಸಾಧನೆಯೂ  ಕಂಡುಬಂದಿರಲಿಲ್ಲ.  ೨೦೦೧ರಲ್ಲಿ ಸತತ ಮೂವತ್ತು  ಗಂಟೆಗಳ ಕಾಲ ಹಾರಾಟ ನಡೆಸಿದ ಗ್ಲೋಬಲ್ ಹಾಕ್ ವಿಮಾನದ್ದೇ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಚಾಲಕರಹಿತ ವಿಮಾನವೇಕೆ,  ಮನುಷ್ಯಚಾಲಿತ ವಿಮಾನ ಕೂಡ ಇಂಧನ ಮರುಪೂರೈಕೆ ಬೇಡದೆ ಒಂಬತ್ತು ದಿನಗಳಿಗಿಂತ ಹೆಚ್ಚುಕಾಲ ಹಾರಾಡಿರಲಿಲ್ಲ.

ಆದರೆ ಈಗ ಹಿಂದಿನ  ಎಲ್ಲ ದಾಖಲೆಗಳನ್ನೂ ಮುರಿದಿರುವ ಕೈನೆಟಿಕ್ ಜಫೈರ್ ಎಂಬ ಚಾಲಕರಹಿತ ವಿಮಾನ ಒಮ್ಮೆಯೂ ನಿಲ್ಲದೆ ಸತತ ಎರಡು ವಾರಗಳ ಕಾಲ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದೆ. ಕಳೆದ ಜುಲೈ ೯ರಿಂದ ಜುಲೈ ೨೩ರ ಅವಧಿಯಲ್ಲಿ ಸತತವಾಗಿ ೩೩೬ ಗಂಟೆಗಳ ಕಾಲ ಹಾರಾಡಿದ ಈ ವಿಮಾನಕ್ಕೀಗ ಎಂದೆಂದೂ ನಿಲ್ಲದ ವಿಮಾನ ಎಂಬ ಬಿರುದಿನ ಹೆಮ್ಮೆ.

ಈ ವಿಮಾನದ ಮೈತುಂಬಾ ಅಳವಡಿಸಲಾಗಿದ್ದ ಸೌರಶಕ್ತಿ ಕೋಶಗಳು  ಸೂರ್ಯನ ಬೆಳಕನ್ನು ಸೌರಶಕ್ತಿಗೆ ಪರಿವರ್ತಿಸಿ ಲೀಥಿಯಂ-ಸಲ್ಫರ್ ಬ್ಯಾಟರಿಗಳಲ್ಲಿ ಶೇಖರಿಸುತ್ತವೆ. ಈ  ವಿದ್ಯುತ್ತಿನಿಂದಲೇ ವಿಮಾನದ ತಡೆರಹಿತ ಹಾರಾಟ ಸಾಧ್ಯವಾಗುತ್ತದೆ. ಹಗಲು ಹೊತ್ತಿನಲ್ಲಿ ಶೇಖರವಾದ ಹೆಚ್ಚಿನ ವಿದ್ಯುತ್ತು ರಾತ್ರಿಹೊತ್ತಿನ ಹಾರಾಟಕ್ಕೆ ಬಳಕೆಯಾಗುತ್ತದೆ.

ಇಂತಹ ಅಭೂತಪೂರ್ವ  ಸಾಧನೆಯಿಂದ ವಿಶ್ವದ ಗಮನಸೆಳೆದಿರುವ ಈ ವಿಮಾನವನ್ನು ಸೃಷ್ಟಿಸಿದವರು ಬ್ರಿಟನ್ನಿನ ಕೈನೆಟಿಕ್ ಸಂಸ್ಥೆಯ ತಂತ್ರಜ್ಞರು. ಈ  ವಿಮಾನ ಅತಿ ಶೀಘ್ರದಲ್ಲೇ ಅನೇಕ ರೀತಿಯ ಉದ್ದೇಶಗಳಿಗಾಗಿ ಬಳಕೆಯಾಗಲಿದೆ ಎಂಬ ಸಂತಸ ಅವರದು. ಯಾವುದೇ ಪ್ರದೇಶದ ಮೇಲೆ ಸತತ ನಿಗಾ ಇಡುವುದನ್ನು ಸಾಧ್ಯವಾಗಿಸಲಿರುವ ಜಫೈರ್ ವಿಮಾನ ರಕ್ಷಣಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅನೇಕ ವೈಜ್ಞಾನಿಕ ಉದ್ದೇಶಗಳಿಗಾಗಿಯೂ ಬಳಕೆಯಾಗಬಲ್ಲದು ಎಂದು ಅವರು ಹೇಳುತ್ತಾರೆ.

ಆದರೆ ಇಲ್ಲೂ ಒಂದು  ಸಮಸ್ಯೆಯಿದೆ - ಸೌರಶಕ್ತಿಚಾಲಿತ ವಿಮಾನಗಳ  ಮೇಲೆ ಸಾಕಷ್ಟು ಸಂಖ್ಯೆಯ ಸೌರಶಕ್ತಿಕೋಶಗಳಿರಬೇಕಾಗುತ್ತದೆ; ಹೀಗಾಗಿ ಇಂತಹ ವಿಮಾನಗಳ  ಗಾತ್ರವನ್ನು ಗಣನೀಯವಾಗಿ ಚಿಕ್ಕದಾಗಿಸುವುದು ಕಷ್ಟ. ದೊಡ್ಡಗಾತ್ರದ ವಿಮಾನಗಳು ಶತ್ರುಪ್ರದೇಶದಲ್ಲಿ ಗೂಢಚಾರಿಕೆ ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಅಮೆರಿಕಾದ ಎಂಐಟಿಯ ತಂತ್ರಜ್ಞರು ಈ ಸಮಸ್ಯೆಗೂ ಒಂದು ಪರಿಹಾರ ಹುಡುಕಲು ಹೊರಟಿದ್ದಾರೆ. ಹೆಚ್ಚೂಕಡಿಮೆ ಪ್ರಪಂಚದ ಎಲ್ಲಕಡೆಗಳಲ್ಲೂ ವ್ಯಾಪಿಸಿಕೊಂಡಿರುವ ವಿದ್ಯುತ್ ವಿತರಣಾ ಜಾಲಗಳಿಂದ ವಿದ್ಯುತ್ತನ್ನು ಕದಿಯುವುದು ಅವರ ಐಡಿಯಾ. ಶತ್ರುಪ್ರದೇಶದಲ್ಲಿ ಹಾರಾಡುವ ವಿಮಾನಕ್ಕೆ ಅವರದೇ ಖರ್ಚಿನಲ್ಲಿ ಇಂಧನವೂ ದೊರಕುವಂತೆ ಮಾಡುವ  ಉದ್ದೇಶ ಈ ತಂತ್ರಜ್ಞರದು. ನಮ್ಮ ಮನೆಗಳ ಮುಂದಿನ ವಿದ್ಯುತ್ ತಂತಿಯ ಮೇಲೆ ಕಾಗೆಗಳು ಕೂರುತ್ತವಲ್ಲ, ಅದೇ ರೀತಿ ವಿದ್ಯುತ್ ತಂತಿಗಳ ಮೇಲೆ "ಕುಳಿತು" ತನ್ನ  ಬ್ಯಾಟರಿಗಳನ್ನು ರೀಚಾರ್ಜ್ ಮಾಡಿಕೊಳ್ಳಬಲ್ಲ ಪುಟ್ಟ ವಿಮಾನವೊಂದನ್ನು ಅವರು ರೂಪಿಸುತ್ತಿದ್ದಾರೆ. ಅಮೆರಿಕಾರ ಡೇಟನ್‌ನಲ್ಲಿರುವ ಏರ್‌ಫೋರ್ಸ್ ರೀಸರ್ಚ್ ಲ್ಯಾಬೊರೇಟರಿ  ಕೂಡ ಇಂತಹುದೇ ವಿಮಾನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆಯಂತೆ.

ಒಟ್ಟಿನಲ್ಲಿ ವಿಮಾನಯಾನ  ಕ್ಷೇತ್ರದಲ್ಲಿ ಹೊಸದೊಂದು ಶಕೆಯ ಆರಂಭಕ್ಕೆ ರಂಗಸಜ್ಜಿಕೆ ಸಿದ್ಧವಾಗಿದೆ. ಇದಕ್ಕೆ ಕಾರಣವಾಗುವ  ಹೊಸ ಬೆಳವಣಿಗೆಗಳು ಬರಿಯ ಯುದ್ಧರಂಗಕ್ಕಷ್ಟೆ ಸೀಮಿತವಾಗದೆ ಮನುಕುಲದ ಕಲ್ಯಾಣಕ್ಕೆ ತಮ್ಮ ಕೊಡುಗೆ ನೀಡಲಿ ಎಂದು ಹಾರೈಸುವುದಷ್ಟೆ ನಮ್ಮ ಕೆಲಸ.

ಅಕ್ಟೋಬರ್ ೨೦, ೨೦೧೦ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge