ಬುಧವಾರ, ಅಕ್ಟೋಬರ್ 13, 2010

ಮುಂದಿನ ಹೆಜ್ಜೆ ಸೂರ್ಯನ ಕಡೆಗೆ!

ಟಿ ಜಿ ಶ್ರೀನಿಧಿ

ಕಳೆದ ವರ್ಷ ರೋಚಕ  ಯಶಸ್ಸು ಪಡೆದ ಚಂದ್ರಯಾನದ  ನಂತರ ಪ್ರಪಂಚದ ಗಮನ ಮತ್ತೊಮ್ಮೆ ಚಂದ್ರನ ಕಡೆಗೆ ತಿರುಗಿದೆ. ಚಂದ್ರನ ಅಧ್ಯಯನವನ್ನು ಗಮನದಲ್ಲಿಟ್ಟುಕೊಂಡ ಅನೇಕ ಯೋಜನೆಗಳು ರೂಪಗೊಳ್ಳುತ್ತಿವೆ; ನಾಲ್ಕು ದಶಕಗಳ ಹಿಂದೆ ಮಾನವ ಚಂದ್ರನ ಮೇಲೆ ಇಳಿದದ್ದು ನಿಜವೋ ಸುಳ್ಳೋ ಎಂಬ ಚರ್ಚೆ ಮುಗಿಯುವ ಮೊದಲೇ ಇನ್ನೊಂದು ಬಾರಿ ಚಂದ್ರನ ಮೇಲೆ ಮನುಷ್ಯರನ್ನು ಇಳಿಸುವ ಯೋಜನೆಗಳು ಕೂಡ ಕೇಳಿಬರುತ್ತಿವೆ. 

ಆದರೆ ಅಷ್ಟರಲ್ಲೇ  ಇನ್ನೊಂದು ಹೆಜ್ಜೆ ಮುಂದೆಹೋಗಿರುವ ಅಮೆರಿಕಾದ  ನಾಸಾ ಸಂಸ್ಥೆ ಮಾನವರಹಿತ ಅಂತರಿಕ್ಷವಾಹನವೊಂದನ್ನು  ಸೂರ್ಯನ ವಾತಾವರಣದೊಳಕ್ಕೆ ನುಗ್ಗಿಸುವ  ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದೆ. 'ಸೋಲಾರ್  ಪ್ರೋಬ್ ಪ್ಲಸ್' ಎಂಬ ಹೆಸರಿನ ಈ ಅಂತರಿಕ್ಷವಾಹನವನ್ನು ೨೦೧೮ರ ವೇಳೆಗೆ ಉಡಾಯಿಸುವ ಆಲೋಚನೆ ನಾಸಾದ್ದು. ಸುಮಾರು ಹದಿನೆಂಟು ಕೋಟಿ ಡಾಲರ್ ವೆಚ್ಚದ ಈ ಯೋಜನೆ ನಮ್ಮೆಲ್ಲರ ಜೀವನಾಧಾರವಾದ ಸೂರ್ಯನ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಲಿದೆ ಎಂಬ ನಿರೀಕ್ಷೆಯಿದೆ. 

ಸೂರ್ಯನ ಹೊರ ವಾತಾವರಣಕ್ಕೆ ಕರೋನಾ ಎಂದು ಹೆಸರು. ಇದು ನಮಗೆ ಕಾಣುವ ಸೂರ್ಯನ ಮೇಲ್ಮೈ(ಫೋಟೋಸ್ಫಿಯರ್)ಗಿಂತ ನೂರಾರು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಈ ವೈಚಿತ್ರ್ಯಕ್ಕೆ ಕಾರಣ ಹುಡುಕುವುದು ಸೋಲಾರ್ ಪ್ರೋಬ್ ಪ್ಲಸ್‌ನ ಆಶಯಗಳಲ್ಲೊಂದು. 

ಜೊತೆಗೆ ಸೌರ ಮಾರುತಗಳ (ಸೋಲಾರ್ ವಿಂಡ್) ಬಗೆಗೂ ಹೆಚ್ಚಿನ ಮಾಹಿತಿ ಕಲೆಹಾಕುವ ಉದ್ದೇಶವಿದೆ. ಸೂರ್ಯನ ವಾತಾವರಣದಿಂದ ಹೊರಚಿಮ್ಮುವ ಇಲೆಕ್ಟ್ರಾನ್ ಹಾಗೂ ಪ್ರೋಟಾನುಗಳ ಈ ಧಾರೆ ನಮ್ಮ ಭೂಮಿಯ ಮೇಲೆ ಭೂಕಾಂತೀಯ ಮಾರುತಗಳು, ಅರೋರಾಗಳು ಮುಂತಾದ ಘಟನೆಗಳಿಗೆ ಕಾರಣವಾಗುತ್ತದೆ. ಧೂಮಕೇತುಗಳ ಬಾಲ ಸದಾಕಾಲ ಸೂರ್ಯನ ವಿರುದ್ಧ ದಿಕ್ಕಿಗೇ ತೋರುವುದಕ್ಕೂ ಸೌರಮಾರುತಗಳೇ ಕಾರಣ.

ಅಂತರಿಕ್ಷದ ಮೂಲೆಮೂಲೆಗಳಿಗೂ  ಲಗ್ಗೆಯಿಟ್ಟಿರುವ ಅಂತರಿಕ್ಷವಾಹನಗಳು ಈವರೆಗೂ ತಲುಪದಿರುವ ಕೆಲವೇ ಗುರಿಗಳಲ್ಲಿ ಅತ್ಯಂತ  ಪ್ರಮುಖವಾದದ್ದು ಸೂರ್ಯ. ಈ ಕೊರತೆಯನ್ನು  ನೀಗುವ ಮಹತ್ವದ ಪ್ರಯತ್ನಕ್ಕೆ ಸೋಲಾರ್ ಪ್ರೋಬ್ ಪ್ಲಸ್ ತಂಡ ಸಿದ್ಧವಾಗುತ್ತಿದೆ. 

ಆದರೆ ಸೂರ್ಯನ  ವಾತಾವರಣ ವಿಪರೀತ ಬಿಸಿಯಿರುತ್ತಲ್ಲ, ಈ ಅಂತರಿಕ್ಷವಾಹನ ಅದನ್ನು ಪ್ರವೇಶಿಸುವುದಾದರೂ ಹೇಗೆ  ಎಂದು ನೀವು ಕೇಳಬಹುದು. ನಿಜ, ಸೂರ್ಯನ  ವಾತಾವರಣ ತಲುಪುತ್ತಿದ್ದಂತೆಯೇ ಈ ವಾಹನ ಅಲ್ಲಿನ ಶಾಖ ತಾಳಲಾರದೆ ಸುಟ್ಟುಹೋಗುತ್ತದೆ. ಆದರೆ ಅಷ್ಟರೊಳಗಾಗಿಯೇ ಅದು ಅತ್ಯಂತ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸಲಿದೆ. ಅಲ್ಲಿಯವರೆಗಿನ ತಾಪಮಾನ ಹಾಗೂ ವಿಕಿರಣದಿಂದ ಈ ಅಂತರಿಕ್ಷವಾಹನದ ಉಪಕರಣಗಳನ್ನು ಸುರಕ್ಷಿತವಾಗಿಡಲು ಬೇಕಾದ ಸುರಕ್ಷತಾ ಕವಚದ (ಕಾರ್ಬನ್ ಕಾಂಪೋಸಿಟ್ ಹೀಟ್ ಶೀಲ್ಡ್) ನಿರ್ಮಾಣ ಇಷ್ಟರಲ್ಲೇ ಪ್ರಾರಂಭವಾಗಲಿದೆ.   

ಅಂದಹಾಗೆ ಸೂರ್ಯನ  ಬಳಿ ಸಾಗುವ ಪ್ರಯತ್ನಗಳಲ್ಲಿ ಸೋಲಾರ್  ಪ್ರೋಬ್ ಪ್ಲಸ್ ಏಕಾಂಗಿಯೇನಲ್ಲ. ನಾಸಾ  ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಜಂಟಿಯಾಗಿ ಸೋಲಾರ್ ಆರ್ಬಿಟರ್ ಎಂಬ ಯೋಜನೆಯೊಂದನ್ನು  ರೂಪಿಸುತ್ತಿವೆ. ಈ ದಶಕದ ಕೊನೆಯ ವೇಳೆಗೆ ಸೂರ್ಯನತ್ತ ಒಂದು ಉಪಗ್ರಹವನ್ನು ಕಳುಹಿಸುವ ಉದ್ದೇಶ ಈ ಯೋಜನೆಯದು. 

ಅಕ್ಟೋಬರ್ ೧೩, ೨೦೧೦ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge