ಬುಧವಾರ, ಆಗಸ್ಟ್ 19, 2009

'ಭುವನ'ರೂಪದರ್ಶನ!

ಟಿ ಜಿ ಶ್ರೀನಿಧಿ

೧೯೫೦ರ ದಶಕದಲ್ಲಿ ಉಡಾವಣೆಯಾದ ಮೊತ್ತಮೊದಲ ಉಪಗ್ರಹ ’ಸ್ಪುಟ್ನಿಕ್’ನಿಂದ ಪ್ರಾರಂಭಿಸಿ ಇಲ್ಲಿಯವರೆಗೆ ಸಾವಿರಗಟ್ಟಲೆ ಉಪಗ್ರಹಗಳು ಬಾಹ್ಯಾಕಾಶಕ್ಕೆ ನೆಗೆದಿವೆ; ಟೀವಿ ಚಾನೆಲ್ ಪ್ರಸಾರದಿಂದ ಹಿಡಿದು ಗೂಢಚಾರಿಕೆಯವರೆಗೆ ವೈವಿಧ್ಯಮಯ ಉದ್ದೇಶಗಳಿಗಾಗಿ ದುಡಿದಿವೆ, ದುಡಿಯುತ್ತಿವೆ.

ಈ ಉಪಗ್ರಹಗಳಲ್ಲಿ ಅನೇಕವು ಭೂಮಿಯ ಮೇಲೆ ಏನು ನಡೆಯುತ್ತಿದೆ ಎನ್ನುವತ್ತ ಸದಾ ಒಂದು ಕಣ್ಣಿಟ್ಟಿರುತ್ತವೆ. ಸದಾ ಒಂದಿಲ್ಲೊಂದು ಚಟುವಟಿಕೆಯ ಕೇಂದ್ರವಾಗಿರುವ ನಮ್ಮ ಗ್ರಹದ ಚಿತ್ರಗಳನ್ನು ತೆಗೆದು ನಮಗೆ ಕಳುಹಿಸುತ್ತಿರುತ್ತವೆ.

ಇಂತಹ ಚಿತ್ರಗಳು ನೋಡಲು ಬಹು ರೋಚಕವಾಗಿರುತ್ತವೆ. ಆಸಕ್ತರ ಕುತೂಹಲ ತಣಿಸುವ, ಭೂಗೋಳಶಾಸ್ತ್ರದ ಪಾಠಹೇಳುವ ಈ ಚಿತ್ರಗಳು ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಬಹಳ ಮಹತ್ವ ಹೊಂದಿವೆ. ಜಿಪಿಎಸ್ ಬಳಸಿ ಸಂಚಾರ ನಿರ್ದೇಶನಗಳನ್ನು ಕೊಡುವ ಅನೇಕ ತಂತ್ರಾಂಶಗಳು ಕೂಡ ಭೂಮಿಯ ಸ್ಯಾಟೆಲೈಟ್ ಚಿತ್ರಗಳನ್ನು ಬಳಸುತ್ತವೆ.

ಒಂದೆರಡು ದಶಕಗಳ ಹಿಂದೆ ಇಂತಹ ಚಿತ್ರಗಳು ಜನಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಭೂಮಿಯ ಉಪಗ್ರಹ ಚಿತ್ರಣ ನೀಡುವ ಒಂದೆರಡು ತಂತ್ರಾಂಶಗಳು ತೊಂಬತ್ತರ ದಶಕದಲ್ಲಿ ಹೊರಬಂದವಾದರೂ ಅವು ಅಷ್ಟೇನೂ ಜನಪ್ರಿಯವಾಗಲಿಲ್ಲ.

ಅಂತರಜಾಲ, ವಿಶ್ವವ್ಯಾಪಿ ಜಾಲಗಳು ವ್ಯಾಪಕ ಬಳಕೆಗೆ ಬಂದ ಮೇಲೆ ಈ ಪರಿಸ್ಥಿತಿ ಬಹುಬೇಗ ಬದಲಾಯಿತು. ೨೦೦೪ರಲ್ಲಿ ನಾಸಾ ಹೊರತಂದ ವರ್ಲ್ಡ್ ವಿಂಡ್ ಹಾಗೂ ೨೦೦೫ರಲ್ಲಿ ಗೂಗಲ್ ಪರಿಚಯಿಸಿದ ಗೂಗಲ್ ಅರ್ಥ್ ತಂತ್ರಾಂಶಗಳಿಂದಾಗಿ ನಮ್ಮ ಕಣ್ಣಮುಂದೆಯೇ ವಿಶ್ವರೂಪದರ್ಶನವಾಯಿತು! ಗೂಗಲ್ ಸಹಕಾರದಿಂದ ಸಿದ್ಧವಾದ ವಿಕಿಮ್ಯಾಪಿಯಾ ಯಾವುದೇ ತಂತ್ರಾಂಶ ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆಯೇ ಭೂಮಿಯ ಚಿತ್ರಗಳನ್ನು ನೋಡುವುದನ್ನು ಸಾಧ್ಯವಾಗಿಸಿತು.

ಈ ತಂತ್ರಾಂಶಗಳ ಸಾಲಿಗೆ ಇದೀಗ ’ಭುವನ್’ ಸೇರಿದೆ. ಇದು ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ನಮಗೆ ನೀಡಿರುವ ಕೊಡುಗೆ. ಹೆಸರಾಂತ ವಿಜ್ಞಾನಿ ವಿಕ್ರಂ ಸಾರಾಭಾಯಿಯವರ ತೊಂಬತ್ತನೇ ಜನ್ಮದಿನದಂದು ಭುವನ್ ಲೋಕಾರ್ಪಣೆಯಾದದ್ದು ವಿಶೇಷ.

ಗೂಗಲ್ ಅರ್ಥ್‌ಗೆ ಸಾಟಿಯಾಗಿ ನಿಲ್ಲಬಲ್ಲ ಭುವನ್ ತಂತ್ರಾಂಶವನ್ನು ನಿರ್ಮಿಸಿದವರು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ತಂತ್ರಜ್ಞರು. ಭಾರತೀಯ ಬಳಕೆದಾರರಿಗೆ ಹೆಚ್ಚು ಆಪ್ತವಾಗುವಂತಹ ವಿನ್ಯಾಸ ಹೊಂದಿರುವ ಭುವನ್ ಮೂಲಕ ಲಭ್ಯವಿರುವ ಚಿತ್ರಗಳೆಲ್ಲವನ್ನೂ ರಿಸೋರ್ಸ್‌ಸ್ಯಾಟ್, ಕಾರ್ಟೋಸ್ಯಾಟ್ ಮುಂತಾದ ನಮ್ಮದೇ ಉಪಗ್ರಹಗಳು ತೆಗೆದಿವೆ.

ರಕ್ಷಣಾ ದೃಷ್ಟಿಯಿಂದ ಸಂರಕ್ಷಿತ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳ ಚಿತ್ರಗಳು ಭುವನ್ ಮೂಲಕ ಲಭ್ಯವಿವೆ. ಗೂಗಲ್ ಅರ್ಥ್‌ನಲ್ಲಿ ಲಭ್ಯವಿರುವ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟವಾದ ಚಿತ್ರಗಳು ಭುವನ್‌ನಲ್ಲಿ ಸಿಗಲಿವೆಯಂತೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಮಾಹಿತಿಯ ಬಗ್ಗೆ ಗಮನ ಕೇಂದ್ರೀಕರಿಸಲಿರುವ ಭುವನ್ ನಮ್ಮ ದೇಶದ ಹವಾಮಾನ, ಭೂಮಿಯ ಮೇಲ್ಮೈ ಸ್ವರೂಪ, ನೈಸರ್ಗಿಕ ಪ್ರಕೋಪಗಳು ಮುಂತಾದ ವಿಷಯಗಳ ಕುರಿತು ಅಪಾರ ಮಾಹಿತಿ ಒದಗಿಸುವ ನಿರೀಕ್ಷೆಯಿದೆ.

www.bhuvan.nrsc.gov.in ತಾಣದಲ್ಲಿ ಲಭ್ಯವಿರುವ ’ಭುವನ್’ ಸದ್ಯಕ್ಕೆ ಪರೀಕ್ಷಾರ್ಥ ಆವೃತ್ತಿಯಲ್ಲಿದೆ. ಈ ಜಾಲತಾಣದಲ್ಲಿ ಹೆಸರು, ವಿಳಾಸ ಹಾಗೂ ಬಳಕೆಯ ಉದ್ದೇಶ ದಾಖಲಿಸಿ ನೋಂದಾಯಿಸಿಕೊಂಡ ಯಾರು ಬೇಕಿದ್ದರೂ ಇದನ್ನು ಉಚಿತವಾಗಿ ಬಳಸಬಹುದು.
ಆಗಸ್ಟ್ ೧೯, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ
badge