ಗುರುವಾರ, ಜುಲೈ 16, 2009

ಐ.ಸಿ.ಗೆ ಐವತ್ತು!

ಬೇಳೂರು ಸುದರ್ಶನ

ಇಂಟೆಗ್ರೇಟೆಡ್ ಸರ್ಕೂಟ್‌ಗೆ (ಐ ಸಿ) ೫೦ ವರ್ಷ ಆಯ್ತು. ಈಗ ಸಂಭ್ರಮಾಚರಣೆಯ ಸಮಯ!

ನಾನು, ನೀವು, ಜಗತ್ತಿನ ಕೋಟ್ಯಂತರ ಜನ ಬಳಸ್ತಾ ಇರೋ ಕಂಪ್ಯೂಟರುಗಳು ಕುಬ್ಜವಾಗಲು, ಮೊಬೈಲ್‌ಗಳ ಸರ್ಕೂಟ್‌ಗಳು ಮತ್ತಷ್ಟು ಚಪ್ಪಟೆಯಾಗಲು ಕಾರಣವಾದ ಈ ಇಂಟೆಗ್ರೇಟೆಡ್ ಸರ್ಕೂಟ್ ಪರಿಕಲ್ಪನೆ ಮೂಡಿ, ಅದು ಕಾರ್ಯಗತವಾಗಿ, ನಂಬಲಸಾಧ್ಯ ಪ್ರಕ್ರಿಯೆಗಳ ಮೂಲಕ ಕಣ್ಣಿಗೆ ಕಾಣಿಸುವ ಸಾಧನವಾದ ಕಥೆ ನಿಜಕ್ಕೂ ರೋಚಕ. ಥ್ರಿಲ್ಲರ್ ಸಿನೆಮಾ ಥರ!

ಈ ಐ ಸಿ ಸಂಶೋಧನೆಗೆ ಮೂಲ ಕಾರಣ ವಿಜ್ಞಾನರಂಗದಲ್ಲಿ ಅಷ್ಟ ದ್ರೋಹಿಗಳು ಎಂದೇ ಖ್ಯಾತರಾದ ಎಂಟು ವಿಜ್ಞಾನಿಗಳ ಬಂಡಾಯ!

೧೯೫೭ನೇ ಇಸವಿ. ಟ್ರಾನ್ಸಿಸ್ಟರ್‌ನ್ನು ಕಂಡು ಹಿಡಿದಿದ್ದಕ್ಕೆ ಹಿಂದಿನ ವರ್ಷವಷ್ಟೇ ನೋಬೆಲ್ ಪ್ರಶಸ್ತಿ ಬಂದಿತ್ತು. ಮೌಂಟನ್ ವ್ಯೂನಲ್ಲಿದ್ದದ ಶಾಕ್‌ಲೇ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಸಂಸ್ಥೆಯಲ್ಲಿದ್ದ ಎಂಟು ವಿಜ್ಞಾನಿಗಳು ರಾಜೀನಾಮೆ ಬಿಸಾಕಿ ಹೊರಬಂದರು. ಅವರೇ ಜ್ಯೂಲಿಯಸ್ ಬ್ಲಾಂಕ್, ವಿಕ್ಟರ್ ಗ್ರಿನಿಶ್, ಜೀನ್ ಹೋಯೆರ್ನಿ, ಯೂಜೀನ್ ಕ್ಲೈನರ್, ಜೇ ಲಾಸ್ಟ್, ಗೋರ್ಡೋನ್ ಮೂರ್, ರಾಬರ್ಟ್ ನಾಯ್ಸ್ ಮತ್ತು ಶೆಲ್ಡನ್ ರಾಬರ್ಟ್ಸ್.

ವಿಲಿಯಂ ಶಾಕ್‌ಲೇ ಏನೂ ಕಡಿಮೆ ಆಸಾಮಿಯಲ್ಲ; ಟ್ರಾನ್ಸಿಸ್ಟರ್ನ ಅಧಿಕೃತ ಸ್ವರೂಪವನ್ನು ಕಂಡು ಹಿಡಿದಾತ! ಈ ಸಂಶೋಧನೆಗೆಂದೇ ಅವನಿಗೆ ಜಾನ್ ಬಾರ್ಡೀನ್ ಮತ್ತು ವಾಲ್ಟರ್ ಹೌಸರ್ ಬ್ರಿಟ್ಟನ್ ಜೊತೆಸೇರಿ ನೋಬೆಲ್ ಬಂದಿದ್ದು.

ಈ ಎಂಟು ವಿಜ್ಞಾನಿಗಳು ಇಂಥ ಪ್ರಚಂಡ ವಿಜ್ಞಾನಿಯ ಸಂಸ್ಥೆಗೇ ಸೆಡ್ಡು ಹೊಡೆದು ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಕಾರ್ಪೋರೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಶಾಕ್‌ಲೇಯ ವಿಚಿತ್ರ ವರ್ತನೆಗಳೇ ಇವರ ಈ ಬಂಡಾಯಕ್ಕೆ ಕಾರಣ ಎಂದು ಇತಿಹಾಸ ಹೇಳುತ್ತದೆ.

ಏನೇ ಇರಲಿ, ಫೇರ್‌ಚೈಲ್ಡ್ ಸಂಸ್ಥೆಯಲ್ಲಿ ಸಂಶೋಧನೆಗಳು ಚಿಗುರಿದವು. ಸಿಲಿಕಾನ್ ಸರ್ಕೂಟ್‌ಗಳೇನೋ ಆಗ ಚಾಲ್ತಿಯಲ್ಲಿದ್ದವು. ಆಗ ಜೀನ್ ಹೋಯೆರ್ನಿಯನ್ನು ಉಳಿದವರು ಅಷ್ಟಾಗಿ ಪರಿಗಣಿಸಿರಲಿಲ್ಲ. ಆತ ಎಷ್ಟಂದ್ರೂ ಥಿಯರಿ ವಿಜ್ಞಾನಿ. ಪ್ರಾಯೋಗಿಕವಾಗಿ ಅಂಥದ್ದೇನನ್ನೂ ಮಾಡುತ್ತಿರಲಿಲ್ಲ. ಆದರೆ ಆತ ಒಂದು ಸಲ ಈ ಟ್ರಾನ್ಸಿಸ್ಟರ್‌ಗಳಲ್ಲಿ ಬಳಸುತ್ತಿದ್ದ ಸಿಲಿಕಾನ್ ಆಕ್ಸೈಡ್‌ನ್ನು ಒರೆಸಿಹಾಕದೇ ಹಾಗೇ ಉಳಿಸಿಕೊಂಡರೆ ಹ್ಯಾಗಿರುತ್ತೆ ಎಂದು ಮೂಸೆಯಲ್ಲಿ ಕಷ್ಟಪಡುತ್ತಿದ್ದ ಇತರೆ ವಿಜ್ಞಾನಿಗಳನ್ನು ಕೇಳಿದ್ದ. ಛೆ, ಛೆ, ಎಲ್ಲಾದ್ರೂ ಉಂಟೆ, ಅದನ್ನು ಕ್ಲೀನ್ ಮಾಡ್ಲೇಬೇಕು ಎಂದು ಅವನ ಸ್ನೇಹಿತರು ಹೇಳಿದ್ದರು. ಈ ಥರ ಸರ್ಕೂಟ್‌ಗಳನ್ನು ಪದರ ಪದರವಾಗಿ ಮಾಡೋದರ ಬಗ್ಗೆ ಪ್ರಬಂಧ ಬರೆದ ಹೋಯೆರ್ನಿ ಇದನ್ನು ಪ್ಲೇನಾರ್ ಪ್ರಕ್ರಿಯೆ ಅಂತ ಕರೆದ.

ಹೀಗೇ ಒಂದೂವರೆ ವರ್ಷ ಕಳೆದ ಮೇಲೆ ಒಂದು ದಿನ ಬಾಬ್ ನಾಯ್ಸ್‌ಗೆ ಹೋಯೆರ್ನಿಯ ಸಿದ್ಧಾಂತವನ್ನು ಕಾರ್ಯಗತ ಮಾಡುವ ಉಪಾಯ ಹೊಳೆದೇ ಬಿಟ್ಟಿತು. ಆಕ್ಸೈಡನ್ನು ಹಾಗೇ ಬಿಟ್ಟರೆ ವಿವಿಧ ಟ್ರಾನ್ಸಿಸ್ಟರ್‌ಗಳ ನಡುವೆ ಅಂತರ್ ಸಂಪರ್ಕ ಉಳಿದುಕೊಳ್ಳುತ್ತೆ; ಹಾಗೇ ಈ ಟ್ರಾನ್ಸಿಸ್ಟರ್‌ಗಳನ್ನು ಪ್ರತ್ಯೇಕವಾಗಿಯೂ ಇಟ್ಟುಕೊಳ್ಳಬಹುದು ಅನ್ನೋ ಸೂತ್ರವನ್ನು ರಾಬರ್ಟ್ ನಾಯ್ಸ್ ಕಾರ್ಯಗತಗೊಳಿಸಿದ. ಹೀಗೆ ಪದರ ಪದರವಾಗಿ ಟ್ರಾನ್ಸಿಸ್ಟರ್‌ಗಳನ್ನು ಒಳಗೊಂಡ, ಏಕೀಕೃತ ಸರ್ಕೂಟ್ ಜನ್ಮ ತಾಳಿತು. ಅದೇ ಇಂಟೆಗ್ರೇಟೆಡ್ ಸರ್ಕೂಟ್!

ಅದಕ್ಕೇ ನಾಯ್ಸ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿದ್ದ ಜಾಕ್ ಎಸ್ ಕಿಲ್ಬಿ (ಈತನಿಗೆ ೨೦೦೦ದಲ್ಲಿ ನೋಬೆಲ್ ಬಂತು) ಇಬ್ಬರನ್ನೂ ಇಂಟೆಗ್ರೇಟೆಡ್ ಸರ್ಕೂಟ್‌ನ ಜಂಟಿ ಸಂಶೋಧಕರು ಎಂದು ಕರೆಯುತ್ತಾರೆ. ಆದರೆ ಇದರಲ್ಲಿ ಹೋಯೆರ್ನಿನ ಪ್ಲೇನಾರ್ ಪ್ರೋಸೆಸ್ ಸಿದ್ಧಾಂತವೇ ಪ್ರಮುಖ ಪಾತ್ರ ವಹಿಸಿತು ಅನ್ನೋದನ್ನ ಮರೆಯಕ್ಕಾಗಲ್ಲ ಅಲ್ವೆ?

ಈ ಎಂಟು ಮಂದಿ ಜಾಣರಲ್ಲಿ ಗೋರ್ಡೋನ್ ಮೂರ್ ಮತ್ತು ರಾಬರ್ಟ್ ನಾಯ್ಸ್ ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯೇ ಇಂಟೆಲ್. ಇವತ್ತು ಜಗತ್ತಿನ ಅಗ್ರಮಾನ್ಯ ಐಸಿ ತಯಾರಿಕಾ ಸಂಸ್ಥೆ. ಅಷ್ಟೇ ಅಲ್ಲ, ಐಸಿಗಳ ಬಗ್ಗೆ ಮೂರ್‍ಸ್ ಲಾ ಅಂತ ಒಂದು ಸಿದ್ಧಾಂತ ಇದೆಯಲ್ಲ, ಅದನ್ನು ಮಂಡಿಸಿದವನೇ ಈ ರಾಬರ್ಟ್ ಮೂರ್.

ಹಾಗೆ ನೋಡಿದರೆ, ಸಿಲಿಕಾನ್ ಕಣಿವೆ ಅಂತ ಕರೀತಾರಲ್ಲ, ಈ ಕಣಿವೆಗೆ ಈ ಹೆಸರು ಬಂದಿದ್ದೇ ಈ ವಿಜ್ಞಾನಿಗಳ ಇಂಥ ಇತಿಹಾಸಪ್ರಸಿದ್ಧ ಗಲಾಟೆಯಿಂದ!

ಇಂಟೆಗ್ರೇಟೆಡ್ ಸರ್ಕೂಟ್‌ನ ಸಂಶೋಧನೆ ಮನುಕುಲದ ಅತ್ಯಂತ ಮುಖ್ಯ ಕ್ಷಣಗಳಲ್ಲೊಂದು ಅಂತ ನಮ್ಮ ಮಹಾನ್ ವಿಜ್ಞಾನ ಲೇಖಕ ಐಸಾಕ್ ಅಸಿಮೋವ್ ಹೇಳಿದ್ದಾನೆ. ಅದಕ್ಕೇ ಈ ವರ್ಷ ವಿಶ್ವದ ಎಲೆಕ್ಟ್ರಾನಿಕ್ ರಂಗದ ಸಂಸ್ಥೆ ಐ ಇ ಇ ಇ ಯಿಂದ ಜೀನ್ ಹೋಯೆರ್ನಿ ಮತ್ತು ರಾಬರ್ಟ್ ನಾಯ್ಸ್ ಇಬ್ಬರನ್ನೂ ಗೌರವಿಸಿದೆ. ಸಿದ್ಧಾಂತ ಬರೆದಾತ ಹೋಯೆರ್ನಿ; ಅದನ್ನು ವಾಸ್ತವರೂಪಕ್ಕೆ ತಂದಾತ ನಾಯ್ಸ್. ೧೯೫೯ರ ಜನವರಿ ೨೩ರಂದು ಹೋಯೆರ್ನಿ ಬರೆದ ದಿನಚರಿ ಟಿಪ್ಪಣಿ ಹೀಗಿದೆ:
"In many applications now it would be desirable to make multiple devices on a single piece of silicon in order to be able to make interconnections between devices as part of the manufacturing process, and thus reduce size, weight, etc., as well as cost per active element.”
ಈಗ, ಐವತ್ತು ವರ್ಷಗಳ ನಂತರ, ಐ ಸಿ ತಯಾರಿಕೆ ಅನ್ನೋದು ೨೦೦ ಬಿಲಿಯ ಡಾಲರ್‌ಗಳ ವ್ಯವಹಾರ! ಇಂಥ ಅತಿಬೇಡಿಕೆಯ ಸಾಧನವನ್ನು ರೂಪಿಸಿದ ಈ ಇಬ್ಬರು ಸಂಶೋಧಕರ ಬಗ್ಗೆ ಐ ಇ ಇ ಇ ಹೀಗೆ ಶ್ಲಾಘನಾ ಪತ್ರ ನೀಡಿದೆ.
SEMICONDUCTOR PLANAR PROCESS AND INTEGRATED CIRCUIT, 1959

The 1959 invention of the Planar Process by Jean A. Hoerni and the Integrated Circuit (IC) based on planar technology by Robert N. Noyce catapulted the semiconductor industry into the silicon IC era. This pair of pioneering inventions led to the present IC industry, which today supplies a wide and growing variety of advanced semiconductor products used throughout the world.

May 2009, INSTITUTE OF ELECTRICAL AND ELECTRONICS ENGINEERS
ವಿಕ್ಟರ್ ಗ್ರೀನಿಶ್ ಇಂಟ್ರೊಡಕ್ಷನ್ ಟಿ ಇಂಟೆಗ್ರೇಟೆಡ್ ಸರ್ಕೂಟ್ಸ್ ಅನ್ನೋ ಪುಸ್ತಕ ಬರೆದಿದ್ದಾನೆ. ಯೂಜೀನ್ ಕ್ಲೈನರ್ (೧೯೨೩ ೨೦೦೩) ನೇ ಈ ಎಂಟು ವಿಜ್ಞಾನಿಗಳ ಬಂಡಾಯದ ನಾಯಕ. ಈತ ಮುಂದೆ ಇಂಟೆಲ್‌ನಲ್ಲೂ ಬಂಡವಾಳ ಹೂಡುತ್ತಾನೆ. ೧೯೭೨ರಲ್ಲಿ ಈತ ಕ್ಲೈನರ್ ಪರ್ಕಿನ್ಸ್ ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಹುಟ್ಟುಹಾಕುತ್ತಾನೆ. ಜ್ಯೂಲಿಯಸ್ ಬ್ಲಾಂಕ್ ೧೯೭೮ರಲ್ಲಿ ಕ್ಸೈಕಾರ್ ಎಂಬ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಜೇ ಲಾಸ್ಟ್ ಕಲೆಯಲ್ಲೂ ಅಸಕ್ತಿ ಬೆಳೆಸಿಕೊಂಡವನು. ಆತ ಹಲವು ಕಲಾ ಪುಸ್ತಕಗಳನ್ನು ಬರೆದಿದ್ದಾನೆ. ಆರ್ಕಿಯಾಲಾಜಿಕಲ್ ಕನ್ಸರ್ವೆನ್ಸಿ ಎಂಬ ಸಂಸ್ಥೆಯ ಮೂಲಕ ಅಮೆರಿಕಾದ ೧೫೦ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ನೆರವಾಗಿದ್ದಾನೆ. ರಾಬರ್ಟ್ ನಾಯ್ಸ್‌ಗೆ ಸಿಲಿಕಾನ್ ಕಣಿವೆಯ ಮೇಯರ್ ಅನ್ನೋ ಬಿರುದೇ ಇದೆ! ಶೆಲ್ಡನ್ ರಾಬರ್ಟ್ಸ್ ಮುಂದೆ ಹೋಯೆರ್ನಿ ಮತ್ತು ಜೇ ಲಾಸ್ಟ್ ಜೊತೆಗೂಡಿ ಟೆಲೆಡೈನ್ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಗೋರ್ಡೋನ್ ಮೂರ್‌ಗೆ ಮಾರ್ಕೋನಿ ಸೊಸೈಟಿಯ ಜೀವಿತಾವಧಿ ಸಾಧನೆ ಪ್ರಶಸ್ತಿ ಬರುತ್ತೆ.

ಅಂದ್ರೆ ಈ ಎಂಟು ಮಂದಿಯಲ್ಲಿ ಒಬ್ಬರಿಗೂ ನೋಬೆಲ್ ಪ್ರಶಸ್ತಿ ಬರಲಿಲ್ಲ! ಪರವಾಗಿಲ್ಲ ಬಿಡಿ. ಸಿಲಿಕಾನ್ ಕಣಿವೆಯನ್ನೇ ಈಗ ಎಬ್ಬಿಸಿದ್ದಾರಲ್ಲ..... ಅದಕ್ಕಿಂತ ಇನ್ನೇನು ಸಾಧನೆ ಬೇಕು ಹೇಳಿ?
ಹೆಚ್ಚಿನ ಮಾಹಿತಿಗೆ:
ಹೋಯೆರ್ನಿಯ ಸಿದ್ಧಾಂತದ ವೈಜ್ಞಾನಿಕ ವಿವರಣೆ ಇಲ್ಲಿದೆ.
ಅಷ್ಟ ದ್ರೋಹಿಗಳ ಕಥೆಯನ್ನು ಗೋರ್ಡೋನ್ ಮೂರ್ ಇಲ್ಲಿ ಹೀಗೆ ಬಣ್ಣಿಸಿದ್ದಾರೆ.
ಮೂರ್‍ಸ್ ಲಾ ಬಗ್ಗೆ ತಿಳ್ಕೋಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ.
ಪ್ಲೇನಾರ್ ಪ್ರೋಸೆಸ್ ಬಗ್ಗೆ ಇನ್ನಷ್ಟು ತಿಳ್ಕೊಳ್ಳೋದಕ್ಕೆ ಇಲ್ಲಿಗೆ ಬನ್ನಿ.
ಮೇಲಿನ ಚಿತ್ರದ ಮೂಲ ಇದು.

1 ಕಾಮೆಂಟ್‌:

Dr U B Pavanaja ಹೇಳಿದರು...

ಉತ್ತಮ ಲೇಖನ. ಹಲವು ವಿಷಯಗಳನ್ನು ಉತ್ತಮವಾದ ನಿರೂಪಣೆ ಮತ್ತು ಒಂದು ಕ್ರಮಬದ್ಧವಾದ ಧಾಟಿಯಲ್ಲಿ ವಿವರಿಸುತ್ತದೆ. ಕನ್ನಡಕ್ಕೆ ಇಂತಹ ಲೇಖನಗಳು ಇನ್ನಷ್ಟು ಬೇಕು. ಇಂತಹ ಲೇಖನಗಳು ಪ್ರಮುಖ ಮುದ್ರಿತ ಪತ್ರಿಕೆಗಳಲ್ಲೂ ಬಂದರೆ ಒಳ್ಳೆಯದು. ಪತ್ರಿಕೆಗಳು ದರಿದ್ರ ರಾಜಕಾರಣಿಗಳ ಅಪಕ್ವ ಹೇಳಿಕೆ, ಪರಸ್ಪರ ದೋಷಾರೋಪಣೆಗಳಿಗೆ ನೀಡುವ ಸ್ಥಳಾವಕಾಶದ ಕಾಲಂಶವನ್ನು ಇಂತಹ ವಿಜ್ಞಾನ ಲೇಖನಗಳಿಗೆ ನೀಡುವಂತಿದ್ದರೆ ಎಷ್ಟು ಒಳ್ಳೆಯದಿತ್ತು?


-ಪವನಜ

badge