ಮಂಗಳವಾರ, ಮೇ 8, 2007

ಪೆಟ್ರೋಲ್ ಬರೋದು ಎಲ್ಲಿಂದ?

ಟಿ ಜಿ ಶ್ರೀನಿಧಿ

ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ - ಹೀಗೆ ಅನೇಕ ಬಗೆಯ ಇಂಧನಗಳನ್ನು ನಾವು ಪ್ರತಿದಿನವೂ ಒಂದಲ್ಲ ಒಂದು ಬಗೆಯಲ್ಲಿ ಬಳಸುತ್ತಿರುತ್ತೇವೆ. ಆದರೆ ಇವೆಲ್ಲ ಎಲ್ಲಿಂದ ಹೇಗೆ ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?
ಈ ತೈಲಗಳಿಗೆಲ್ಲ ಮೂಲ ಕಚ್ಚಾ ತೈಲ ಅಥವಾ ಕ್ರೂಡ್ ಆಯಿಲ್, ಭೂಮಿಯೊಳಗೆ ಅದೆಷ್ಟೋ ಆಳದಲ್ಲಿ ಅವಿತಿರುವ ಅತ್ಯಮೂಲ್ಯ ಸಂಪನ್ಮೂಲ.
ಈ ತೈಲವನ್ನು ಹೊರತೆಗೆಯಲೆಂದೇ ಬಹು ದೊಡ್ಡ ತೈಲಬಾವಿಗಳನ್ನು ಕೊರೆಯಲಾಗಿರುತ್ತದೆ. ಭೂಮಿಯ ಆಳದಿಂದ ಕಚ್ಚಾತೈಲವನ್ನು ಹೊರತೆಗೆದು ದೊಡ್ಡದೊಡ್ಡ ಕೊಳವೆಮಾರ್ಗಗಳಿಗೆ ಪೂರೈಸುವುದು ಈ ತೈಲಬಾವಿಗಳ ಕೆಲಸ. ಇದಕ್ಕಾಗಿ ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗುತ್ತದೆ.
ಸಮುದ್ರದ್ದೋ ಮರುಭೂಮಿಯದೋ ಮಧ್ಯದಲ್ಲಿರುವ ತೈಲಬಾವಿಗಳಿಂದ ಹೊರಬಂದ ಈ ಕಚ್ಚಾತೈಲ ತಮ್ಮ ಮುಂದಿನ ಗುರಿ ಸೇರಲು ಕೊಳವೆಮಾರ್ಗಗಳ ಮೂಲಕ ಪ್ರಯಾಣ ಸಾಗಿಸುತ್ತವೆ. ಸಾವಿರಾರು ಕಿಲೋಮೀಟರ್ ಉದ್ದದ ಈ ಕೊಳವೆಮಾರ್ಗಗಳ ಮೂಲಕ ಕಚ್ಚಾತೈಲ ಸಾಗಲು ಬೇಕಾದ ಒತ್ತಡ ಒದಗಿಸಲು ಕೊಳವೆಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಪಂಪಿಂಗ್ ಕೇಂದ್ರಗಳಿರುತ್ತವೆ. ಹಿಂದಿನ ಕೇಂದ್ರದಿಂದ ಬಂದ ಕಚ್ಚಾತೈಲವನ್ನು ಮುಂದಿನ ಕೇಂದ್ರದವರೆಗೂ ’ನೂಕುವುದು’ ಈ ಕೇಂದ್ರಗಳ ಕೆಲಸ.
ಹೀಗೆ ಕೊಳವೆಮಾರ್ಗದ ಕೊನೆಯ ತನಕ ಪ್ರಯಾಣಿಸುವ ಕಚ್ಚಾತೈಲ ತನ್ನ ಪ್ರಯಾಣದ ಕೊನೆಯಲ್ಲಿ ದೊಡ್ಡದೊಡ್ಡ ತೊಟ್ಟಿಗಳಲ್ಲಿ ಶೇಖರವಾಗುತ್ತದೆ. ಇಲ್ಲಿಂದ ಮುಂದಕ್ಕೆ ಕಚ್ಚಾತೈಲದ ಸಂಸ್ಕರಣೆ ಪ್ರಾರಂಭವಾಗುತ್ತದೆ.
ಕಚ್ಚಾತೈಲದ ಸಂಸ್ಕರಣೆ ನಡೆಯುವುದು ರಿಫೈನರಿ ಎಂಬ ಹೆಸರಿನ ಸಂಸ್ಕರಣಾ ಕೇಂದ್ರಗಳಲ್ಲಿ. ಇಲ್ಲಿ ಕಚ್ಚಾತೈಲವನ್ನು ಹೆಚ್ಚಿನ ತಾಪಮಾನಗಳಲ್ಲಿ ಬಿಸಿಮಾಡಲಾಗುತ್ತದೆ. ಹೀಗೆ ಬಿಸಿಮಾಡಿದಾಗ ಕಚ್ಚಾತೈಲ ವಿವಿಧ ವಸ್ತುಗಳಾಗಿ ವಿಭಜನೆಹೊಂದುತ್ತದೆ. ಹೆಚ್ಚಿನ ಭಾರದಿಂದಾಗಿ ತಳದಲ್ಲಿ ಶೇಖರವಾಗುವ ವಸ್ತು ನಮ್ಮ ರಸ್ತೆಗಳ ಡಾಂಬರೀಕರಣಕ್ಕಾಗಿ ಬಳಕೆಯಾಗುತ್ತದೆ. ಕೀಲೆಣ್ಣೆ, ಮಷೀನ್ ಆಯಿಲ್, ಮೇಣ ಮುಂತಾದವುಗಳು ದೊರೆತ ನಂತರ ಪೆಟ್ರೋಲ್ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಅಡುಗೆ ಅನಿಲ (ಎಲ್‍ಪಿಜಿ) ಕೂಡ ದೊರಕುತ್ತದೆ.
ಇಲ್ಲಿಂದ ಮುಂದೆ ಕೊಳವೆಮಾರ್ಗಗಳು, ರೈಲುಗಳು ಹಾಗೂ ಲಾರಿಗಳ ಮೂಲಕ ಪಯಣಿಸುವ ಪೆಟ್ರೋಲು ನಿಮ್ಮ ಊರಿನ ಪೆಟ್ರೋಲ್ ಬಂಕ್ ತಲುಪುತ್ತದೆ, ನಿಮ್ಮ ವಾಹನಕ್ಕೆ ಆಹಾರ ಒದಗಿಸುತ್ತದೆ!
_____________________
ಈ ಲೇಖನದಲ್ಲಿದ್ದ ಮಾಹಿತಿ ದೋಷವನ್ನು ಸರಿಪಡಿಸಲು ನೆರವಾದ ’ಬಾನಾಡಿ’ಗೆ ಧನ್ಯವಾದಗಳು!

2 ಕಾಮೆಂಟ್‌ಗಳು:

The Skylark (banadi) ಹೇಳಿದರು...

ನೀವು ಕೊನೆಯದಕ್ಕಿಂತ ಮೊದಲ ಪ್ಯಾರದ ಕೊನೆಗೆ ಹೇಳಿದಂತೆ ರಿಪೈನರಿಯಿಂದ ನೈಸರ್ಗಿಕ ಅನಿಲ ಸಿಗುವುದಿಲ್ಲ. ಅಲ್ಲಿಂದ ಬರುವುದು ಅಡುಗೆ ಅನಿಲ ಅಂದರೆ ದ್ರವೀಕರಿಸಿದ ಪೆಟ್ರೋಲ್ ಅನಿಲ ಅರ್ಥಾತ್ ಎಲ್.ಪಿ.ಜಿ. (Liquified Petroleum Gas). ನೈಸರ್ಗಿಕ ಅನಿಲ ದೊರಕುವುದು ಭೂಮಿ / ಸಾಗರದಾಳದಿಂದ. ಕಚ್ಚಾ ತೈಲವನ್ನು ತೆಗೆಯಲು ಕೊರೆಯುವ ಬಾವಿಯಂತೆ ನೈಸರ್ಗಿಕ ಅನಿಲವನ್ನು ಕೂಡಾ ತೆಗೆಯುತ್ತಾರೆ. ಅದನ್ನೂ ಕೊಳವೆ (pipelines) ಮೂಲಕ ದೂರದೂರಕ್ಕೆ ಸಾಗಿಸುತಾರೆ. ನೈಸರ್ಗಿಕ ಅನಿಲವನ್ನು ಸಾಗರದ ಮೂಲಕ ಹಡಗಿನಲ್ಲಿ (tanker) ಸಾಗಿಸಲು ಅದನ್ನು ದ್ರವೀಕರಿಸುತ್ತಾರೆ ಅದಕ್ಕೆ ಎಲ್.ಎನ್.ಜಿ. (liquified Natural gas) ಎಂದು ಹೆಸರು. ದ್ರವೀಕರಿಸಿದ ಅನಿಲವನ್ನು ಮತ್ತೆ ಕೊಳವೆಮೂಲಕ ಸಾಗಿಸಲು ಮತ್ತೆ ಅದನ್ನು ಅನಿಲ (regassification)ಮಾಡುತ್ತಾರೆ. ಅದೇ ಅನಿಲವನ್ನು compress ಮಾಡಿದಾಗ ಅದನ್ನು ಸಿ.ಎನ್.ಜಿ (compressed natural gas) ಎನ್ನುತ್ತಾರೆ. ವಾಹನಗಳಿಗೆ ಎಲ್.ಪಿ.ಜಿ. ಹಾಗೂ ಸಿ.ಎನ್.ಜಿ. ಉಪಯೋಗಿಸುತ್ತಾರೆ. ಅವೆರಡೂ ದ್ರವೀಕೃತ ಇಂದನಗಳಾದ ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ ಗಳಿಗಿಂತ ಕನಿಷ್ಟ ಮಾಲಿನ್ಯ ಮಾಡುತ್ತವೆ.

ಟಿ ಜಿ ಶ್ರೀನಿಧಿ ಹೇಳಿದರು...

ತಪ್ಪನ್ನು ಸರಿಪಡಿಸಿದ್ದೇನೆ. ಮಾಹಿತಿಗಾಗಿ ಧನ್ಯವಾದಗಳು.

badge